Friday, October 4, 2024

ಡಾ. ಖ್ಯಾತಿ ವಖಾರಿಯಾ…ಇವರು ಬರೇ ಡಾಕ್ಟರಲ್ಲ, ಪೋಲ್‌ವಾಲ್ಟ್ ಕ್ವೀನ್!

ಸೋಮಶೇಖರ್ ಪಡುಕರೆ ಬೆಂಗಳೂರು 

ಯಾವುದೋ ವಿಷಯದ ಬಗ್ಗೆ ಡಾಕ್ಟರೇಟ್ ಮಾಡಿದರೆ ಸಾಕು ಹೆಸರಿಗೆ ಮೊದಲು ಡಾ. ಹಾಕಿಕೊಂಡು ಜಗತ್ತನ್ನೇ ಮರೆಯುವವರಿದ್ದಾರೆ. ಎಂಬಿಬಿಎಸ್ ಮುಗಿದರೆ ಸಾಕು ಹೆಸರಿಗೆ ಮುನ್ನ ಡಾ. ಆತುಕೊಂಡ ಬಳಿಕ ಕೆಲವರು ತಮ್ಮದು ಬೇರೆಯೇ ಜಗತ್ತು ಎಂದು ವರ್ತಿಸುವವರಿದ್ದಾರೆ. ಆದರೆ ಇಲ್ಲೊಬ್ಬರು ನಿಜವಾದ ಡಾಕ್ಟರ್ ಇದ್ದಾರೆ.

ವೃತ್ತಿಯಲ್ಲಿ ಡಾಕ್ಟರ್ ಆಗಿದ್ದರೂ ರಾಷ್ಟ್ರೀಯ ಅಥ್ಲೆಟಿಕ್ಸ್‌ನ ಪೋಲ್‌ವಾಲ್ಟ್‌ನಲ್ಲಿ ಇದುವರೆಗೂ 18 ಪದಕಗಳನ್ನು ಗೆದ್ದು ಈಗಲೂ ಸ್ಪರ್ಧೆಯಲ್ಲಿ ಮುಂದುವರಿದ್ದಾರೆ.
ಬೆಂಗಳೂರು ಮೆಡಿಕಲ್ ಕಾಲೇಜಿನಲ್ಲಿ ಎಂಬಿಬಿಎಸ್ ಮುಗಿಸಿರುವ ಡಾ. ಖ್ಯಾತಿ ವಖಾರಿಯಾ , ರಾಜ್ಯ ಕಂಡ ಅದ್ಭುತ ಪೋಲ್‌ವಾಲ್ಟ್ ಪ್ರತಿಭೆ. ಎಂಬಿಬಿಎಸ್ ಮುಗಿಯುತ್ತಿದ್ದಂತೆ ವೈದ್ಯಕೀಯ ಸೇವೆಗಾಗಿ ಯಾವುದೋ ಆಸ್ಪತ್ರೆಯಲ್ಲಿ ಸೇವೆ ಸಲ್ಲಿಸುವುದು ಅಥವಾ ತಮ್ಮದೇ ಆದ ಕ್ಲಿನಿಕ್ ಹೊಂದುವುದು ಸಾಮಾನ್ಯವಾಗಿರುತ್ತದೆ. ಆದರೆ ಡಾ. ಖ್ಯಾತಿ ಅದಕ್ಕೆ ಮನಸ್ಸು ಮಾಡಲಿಲ್ಲ. ಸಾಮರ್ಥ್ಯ ಇರುವ ತನಕ ಪೋಲ್ ವಾಲ್ಟ್‌ನಲ್ಲಿ ರಾಜ್ಯ ಹಾಗೂ ರಾಷ್ಟ್ರವನ್ನು ಪ್ರತನಿಧಿಸುವುದು ಅವರ ಗುರಿ. ಯಾಕೆ ವೈದ್ಯಕೀಯ ಸೇವೆಯಲ್ಲಿ ಸಾಕಷ್ಟು ಹಣ ಮಾಡಿ ನೆಮ್ಮದಿಯಾಗಿ ಜೀವನ ನಡೆಸಬಹುದಲ್ಲಾ? ಎಂದು ಕೇಳಿದರೆ, ‘ಕ್ರೀಡೆಯಲ್ಲಿ ಸಾಧನೆ ಮಾಡುವುದು ನಾಳೆ ಮಾಡುವೆ ಎಂದರೆ ಆಗದು, ನಮ್ಮಲ್ಲಿ ಶಕ್ತಿ ಇರುವಾಗಲೇ ಆ ಸಾಧನೆ ಮಾಡಬೇಕು. ವೈದ್ಯಕೀಯ ಸೇವೆಯನ್ನು ಇನ್ನು ಕೆಲವು ವರ್ಷ ಕಳೆದರೂ ಮಾಡಬಹುದು. ಅಲ್ಲಿಯ ಹೊಸ ಅನ್ವೇಷಣೆ ಹಾಗೂ ಬೆಳವಣಿಗೆಗಳನ್ನು ಅರಿತುಕೊಂಡಿದ್ದರೆ ಸಾಕು. ಕ್ರೀಡೆಯ ಮೂಲಕ ಈ ದೇಶಕ್ಕಾಗಿ ಸಾಧನೆ ಮಾಡಬೇಕೆಂಬುದು ನನ್ನ ತುಡಿತ. ಅದಕ್ಕಾಗಿ ಹೆತ್ತವರು ಪ್ರೋತ್ಸಾಹ ನೀಡಿದ್ದಾರೆ,‘ ಎಂದರು.

ಗುರುವಿಲ್ಲದೆ ಸಾಧನೆ!

ನಿಮಗೆ ಪೋಲ್‌ವಾಲ್ಟ್ ತರಬೇತಿ ನೀಡುವವರು ಯಾರು? ಎಂದು ಕೇಳಿದ ಪ್ರಶ್ನೆಗೆ ಅವರು ನೀಡಿದ ಉತ್ತರ ಅಚ್ಚರಿಯಾಗಿತ್ತು. ‘ಗುರುವಿಲ್ಲದೆ ಕಲಿತೆ, ಆದರೆ ಈಗ ಭಾರತೀಯ ಕ್ರೀಡಾ ಪ್ರಾಧಿಕಾರದಲ್ಲಿ ತರಬೇತಿ ಪಡೆಯುತ್ತಿದ್ದೇನೆ. 4.10 ಮೀ. ನನ್ನ ವೈಯಕ್ತಿಕ ಉತ್ತಮ ಸಾಧನೆ. 10 ಸೆ.ಮೀ. ಅಂತರದಲ್ಲಿ ಏಷ್ಯನ್ ಗೇಮ್ಸ್‌ನಿಂದ ವಂಚಿತಳಾದೆ, ಆರಂಭದಲ್ಲೇ ಉತ್ತಮ ತರಬೇತಿ ಸಿಗುತ್ತಿದ್ದರೆ ಅಂತಾರಾಷ್ಟ್ರೀಯ ಮಟ್ಟದಲ್ಲಿ ಉತ್ತಮ ಸಾಧನೆ ಮಾಡುತ್ತಿದ್ದೆ.‘ ಎಂದರು,

ಬದುಕೆಂದರೆ ಬರೇ ಹಣ ಗಳಿಸುವುದಲ್ಲ!

ಡಾಕ್ಟರ್ ಆಗಿ ಉತ್ತಮ ರೀತಿಯಲ್ಲಿ ಹಣ ಗಳಿಸಿ, ನೆಮ್ಮದಿಯಾಗಿ ಇರಬಹುದಿತ್ತಲ್ಲ? ಎಂದರೆ ಡಾ.ಖ್ಯಾತಿ ನಗುತ್ತ ನೀಡಿದ ಉತ್ತರ ಹೀಗಿದೆ, ‘ಹಣ ಗಳಿಸಿ ಹೆಸರು ಮಾಡಿದವರು ಈ ಸಮಾಜದಲ್ಲಿ ಬಹಳ ಜನ ಸಿಗುತ್ತಾರೆ. ಅದು ಸಾಧನೆ ಎಂದು ಹೇಳಲಾಗದು. ಕ್ರೀಡಾ ಕ್ಷೇತ್ರದಲ್ಲಿ ಮಾಡಿದ ಸಾಧನೆ ಇತರರಿಗೆ ಮಾದರಿಯಾಗಿರುತ್ತದೆ. ಹಣ ಗಳಿಸುವುದು ಬದುಕಿನ ಒಂದು ಭಾಗ. ಪ್ರತಿಯೊಬ್ಬರ ಉದ್ದೇಶವಾಗಿರುತ್ತದೆ. ಉದ್ದೇಶವೇ ಸಾಧನೆ ಎನ್ನಲಾಗದು. ವೈದ್ಯಕೀಯ ಕ್ಷೇತ್ರದಲ್ಲೂ ಸಾಧನೆ ಮಾಡಿದವರಿದ್ದಾರೆ. ಡಾಕ್ಟರ್ ಆಗಿ ಎಲ್ಲರೊಳಗೆ ಒಬ್ಬರಂತೆ ಇರುವವರೂ ಇದ್ದಾರೆ. ಆದರೆ ನನ್ನ ಗುರಿ ಪೋಲ್‌ವಾಲ್ಟ್‌ನಲ್ಲಿ ಸಾಧನೆ ಮಾಡುವುದು. ಅದಕ್ಕಾಗಿ ತ್ಯಾಗ ಇದೆ. ಹೆತ್ತವರ ಶ್ರಮ ಇದೆ. ನಮ್ಮ ಹೆತ್ತವರ ತ್ಯಾಗ ಇಲ್ಲದೆ ಇರುತ್ತಿದ್ದರೆ ನಾನು ಈ ಸಾಧನೆ ಮಾಡಲು ಸಾಧ್ಯವಾಗುತ್ತಿರಲಿಲ್ಲ,‘ ಎಂದು ಖ್ಯಾತಿ ಅತ್ಯಂತ ಮಾರ್ಮಿಕವಾಗಿ ನುಡಿದರು.

Related Articles