Contact Information

1st floor, Murali Krishna Mansion, Near Krashi Kendra , Brahmavara - 576213 ,Udupi,Karnataka,India

We Are Available 24/ 7. Call Now.

ಈಜುಕೊಳದ ಮದಕರಿ ಮಣಿಕಂಠಗೆ 8 ಚಿನ್ನ, ಕರ್ನಾಟಕ ಚಾಂಪಿಯನ್‌

ರಾಯ್‌ಪುರ: ಇಲ್ಲಿನ ಅಂತಾರಾಷ್ಟ್ರೀಯ ಈಜುಕೊಳದಲ್ಲಿ ನಡೆದ ಖೇಲೋ ಇಂಡಿಯಾ ಟ್ರೈಬಲ್‌ ಗೇಮ್ಸ್‌ನ ಈಜು ಚಾಂಪಿಯನ್‌ಷಿಪ್‌ನ ಕೊನೆಯ ದಿನದಲ್ಲಿ ಕರ್ನಾಟಕ ಪುರುಷರ ತಂಡ ಸಮಗ್ರ ಚಾಂಪಿಯನ್‌ ಪಟ್ಟ ಗೆದ್ದುಕೊಂಡಿದೆ. ವನಿತೆಯರ ವಿಭಾಗದಲ್ಲಿ ಕರ್ನಾಟಕ ರನ್ನರ್‌ ಅಪ್‌ ಸ್ಥಾನ ಗಳಿಸಿದೆ. Madakari ok Swimming pool Manikanta L won 8 Gold at Khelo India Tribal Games Karnataka men overall champions.

ಕರ್ನಾಟಕ ಈಜಿನಲ್ಲಿ ಒಟ್ಟು 15 ಚಿನ್ನ, 5 ಬೆಳ್ಳಿ ಹಾಗೂ 3 ಕಂಚಿನ ಪದಕ ಗೆದ್ದು ಒಟ್ಟು 123 ಅಂಕಗಳೊಂದಿಗೆ ಅಗ್ರ ಸ್ಥಾನ ಗಳಿಸಿ ಚಾಂಪಿಯನ್‌ ಪಟ್ಟ ಗೆದ್ದುಕೊಂಡಿತು. ಪುರುಷರ ವಿಭಾಗದಲ್ಲಿ 69 ಅಂಕಗಳನ್ನು ಗಳಿಸಿದ ಅಸ್ಸಾಂ ಮೊದಲ ರನ್ನರ್ಸ್‌ ಅಪ್‌ ಗೌರವಕ್ಕೆ ಪಾತ್ರವಾಯಿತು. 31 ಅಂಕ ಗಳಿಸಿದ ಒಡಿಶಾ ಎರಡನೇ ರನ್ನರ್ಸ್‌ಅಪ್‌ ಸ್ಥಾನ ಗಳಿಸಿತು.

ವನಿತೆಯರ ಈಜಿನಲ್ಲಿ 102 ಅಂಕಗಳನ್ನು ಗಳಿಸಿದ ಒಡಿಶಾ ಸಮಗ್ರ ಚಾಂಪಿಯನ್‌ ಪಟ್ಟ ಗೆದ್ದುಕೊಂಡಿತು. ಕರ್ನಾಟಕ 50 ಅಂಕಗಳನ್ನು ಗಳಿಸಿ ಮೊದಲ ರನ್ನರ್ಸ್‌ ಅಪ್‌ ಗೌರವಕ್ಕೆ ಪಾತ್ರವಾಯಿತು. ಆತಿಥೇಯ ಛತ್ತೀಸ್‌ಗಢ 38 ಅಂಕಗಳನ್ನು ಗಳಿಸಿ ಎರಡನೇ ರನ್ನರ್ಸ್‌ಅಪ್‌ ಸ್ಥಾನ ಗಳಿಸಿತು.

ಈಜುಕೊಳದ ಮದಕರಿ ಮಣಿಕಂಠಗೆ 8 ಚಿನ್ನ, 1 ಬೆಳ್ಳಿ:

ದಾವಣಗೆರೆಯ ಮಣಿಕಂಠ ಎಲ್‌. ಈಜುಕೊಳಕ್ಕಿಳಿದರೆ ಅಲ್ಲೊಂದು ಪದಕ ಕಟ್ಟಿಟ್ಟ ಬುತ್ತಿ. ಅದು ಚಿನ್ನವೇ ಆಗಿರುತ್ತದೆ, ಅಪೂರ್ವಕ್ಕೆ ಬೆಳ್ಳಿ. ಮಣಿಕಂಠ ಅವರನ್ನು ಪ್ರೀತಿಯಿಂದ ಈಜುಕೊಳದ ಮದಕರಿ ಎಂದು ಕರೆಯಲಾರಂಭಿಸಿದ್ದಾರೆ. ಚಿತ್ರದುರ್ಗದ ವೀರ ಮದಕರಿ ನಾಯಕ ಸಮುದಾಯಕ್ಕೆ ಸೇರಿದ್ದರಿಂದ ಈ ಹೆಸರು ಮಣಿಕಂಠಗೆ ಸೂಕ್ತವೆನಿಸಿದೆ. ಮಣಿಕಂಠ ಅವರ ಸಾಧನೆಯಲ್ಲಿ ತಂದೆ ಲಕ್ಷ್ಮಣ್‌ ಅವರ ಪಾತ್ರ ಪ್ರಮುಖವಾಗಿದೆ. ಮಗನ ಈಜು ತರಬೇತಿಗಾಗಿ ಈಜುಕೊಳವನ್ನೇ ಗುತ್ತಿಗೆ ಪಡೆದು ತರಬೇತಿ ನೀಡಿದ ಅಪೂರ್ವ ತಂದೆ ಲಕ್ಷ್ಮಣ್‌. ರಾಯ್ಪುರದ ಅಂತಾರಾಷ್ಟ್ರೀಯ ಈಜುಕೊಳದಲ್ಲಿ ಕಳೆದ ಮೂರು ದಿನಗಳಿಂದ ಮಣಿಕಂಠ ಅವರ ಹೆಸರು ಮಾರ್ಧನಿಗೊಳ್ಳುತ್ತಿತ್ತು.

ಮಣಿಕಂಠ ಚಿನ್ನದ ಹೆಜ್ಜೆ:  50 ಮೀ ಬಟರ್‌ಫ್ಲೈ, 100 ಮೀ ಬಟರ್‌ಫ್ಲೈ, 100 ಮೀ ಬ್ಯಾಕ್‌ಸ್ಟ್ರೋಕ್‌, 200 ಮೀ. ವೈಯಕ್ತಿಕ ಮೆಡ್ಲೆ, 50 ಮೀ. ಬ್ರೆಸ್ಟ್‌ಸ್ಟ್ರೋಕ್‌, 100 ಮೀ, ಬ್ರೆಸ್ಟ್‌ಸ್ಟ್ರೋಕ್‌, 4×100 ಮೀ ಫ್ರೀಸ್ಟೈಲ್‌ ರಿಲೇ, 4×100 ಮೆಡ್ಲೇ ರಿಲೇ ವಿಭಾಗಗಳಲ್ಲಿ ಮಣಿಕಂಠ ಚಿನ್ನ ಗೆದ್ದಿದ್ದಾರೆ. 50 ಮೀ. ಫ್ರೀಸ್ಟೈಲ್‌ ವಿಭಾಗದಲ್ಲಿ ಬೆಳ್ಳಿ ಗೆದ್ದರು. ಆದರೆ ಈ ವಿಭಾಗದಲ್ಲಿ ಕರ್ನಾಟಕದವರೇ ಆದ ಧೋನೀಶ್‌ ಎನ್‌. ಚಿನ್ನ ಗೆದ್ದಿದ್ದಾರೆ.

ಮಣಿಕಂಠ ಗೆದ್ದಿರುವ ಎಂಟು ಚಿನ್ನ ಹಾಗೂ ಒಂದು ಬೆಳ್ಳಿ ಪದಕ ಅವರನ್ನು ಕ್ರೀಡಾಕೂಟದ ಚಾಂಪಿಯನ್ನರನ್ನಾಗಿ ಮಾಡಿದೆ. ಕೊನೆಯ ದಿನದಲ್ಲಿ ಚಾಂಪಿಯನ್ನರ ಪ್ರಕಟವಾಗುತ್ತದೆ.

ಫೈವ್‌ ಸ್ಟಾರ್‌ ಧೋನೀಶ್‌ಗೆ 5 ಚಿನ್ನ, 1 ಬೆಳ್ಳಿ:

ಮೈಸೂರಿನ ಚಾಮರಾಜಗರ ಜಿಲ್ಲೆಯ ಈಜ ಪ್ರತಿಭೆ ಧೋನೀಶ್‌ ಈಜು ಕೊಳದಲ್ಲಿ ಕಂಡು ಬಂದ ಅದ್ಭುತ ಪ್ರತಿಭೆ. ಗ್ರಾಮೀಣ ಪ್ರದೇಶದಿಂದ ಬಂದರೂ ಈಜಿನಲ್ಲಿ ನಗರದ ಈಜುಗಾರರಿಗಿಂತ ಉತ್ತಮವಾಗಿ ಈಜಬಲ್ಲೆ ಎಂಬುದನ್ನು ತೋರಿಸಿಕೊಟ್ಟ ಈಜುಗಾರ. ಸ್ಪರ್ಧೆಯ ಕೊನೆಯ ದಿನದಲ್ಲಿ ಬೆನ್ನುನೋವಿನಿಂದ ಬಳಲುತ್ತಿದ್ದರೂ ರಿಲೇಯಲ್ಲಿ ಪಾಲ್ಗೊಂಡು ಉತ್ತಮ ಪೈಪೋಟಿ ನೀಡಿ ರಾಜ್ಯಕ್ಕೆ ಚಿನ್ನ ಗೆಲ್ಲಿಸಿಕೊಡುವಲ್ಲಿ ಧೋನೀಶ್‌ ಪಾತ್ರ ಪ್ರಮುಖವಾದುದು. ಉತ್ತಮವಾಗಿ ಈಜಿ ಮಧ್ಯಂತರದಲ್ಲಿ ಯಶಸ್ಸಿನ ಹಾದಿ ಸುಗಮವಾಗುವಂತೆ ಮಾಡಿದ್ದರು.

200 ಮೀ ಫ್ರೀಸ್ಟೈಲ್‌, 100 ಮೀ ಫ್ರೀಸ್ಟೈಲ್‌, 50 ಮೀ ಫ್ರೀಸ್ಟೈಲ್‌, 4×100 ಮೀ. ಮೆಡ್ಲೇ ರಿಲೇ, 4×100 ಮೀ. ಫ್ರೀಸ್ಟೈಲ್‌ ವಿಭಾಗಗಳಲ್ಲಿ ಧೋನೀಶ್‌ ಚಿನ್ನ ಗೆದ್ದಿದ್ದಾರೆ. 50 ಮೀ. ಬ್ಯಾಕ್‌ಸ್ಟ್ರೋಕ್‌ನಲ್ಲಿ ಬೆಳ್ಳಿಯ ಸಾಧನೆ ಮಾಡಿದ್ದಾರೆ.

ಚಿನ್ನದ ಮೇಘಾಂಜಲಿ:

ವನಿತೆಯರ ವಿಭಾಗದಲ್ಲಿ ರಾಜ್ಯದ ಹೆಮ್ಮೆಯ ಈಜು ತಾರೆ ಮೇಘಾಂಜಲಿ 4 ಚಿನ್ನ ಹಾಗೂ 2 ಕಂಚಿನ ಸಾಧನೆ ಮಾಡಿದ್ದಾರೆ. 100 ಮೀ ಬ್ರೆಸ್ಟ್‌ಸ್ಟ್ರೋಕ್‌, 50 ಮೀ ಬ್ರೆಸ್ಟ್‌ಸ್ಟ್ರೋಕ್‌, 50 ಮೀ. ಬಟರ್‌ಫ್ಲೈ, 50 ಮೀ. ಫ್ರೀಸ್ಟೈಲ್‌ ವಿಭಾಗಗಳಲ್ಲಿ ಸ್ವರ್ಣ ಗೆದ್ದಿರುವ ಮೇಘಾಂಜಲಿ 4×100 ಮೀ ಫ್ರೀಸ್ಟೈಲ್‌ ರಿಲೇ ಹಾಗೂ 50 ಮೀ ಬ್ಯಾಕ್‌ಸ್ಟ್ರೋಕ್‌ ವಿಭಾಗಗಳಲ್ಲಿ ಕಂಚಿನ ಪದಕ ಗೆದ್ದಿದ್ದಾರೆ.

ನೆಲದಲ್ಲಿ ಸೌಮ್ಯ, ನೀರಿಗಿಳಿದರೆ ಮಿಂಚುವ ಕೀರ್ತನ್‌ ಶರತ್‌

ತಂದೆ ಶರತ್‌ ವೃತ್ತಿಯಲ್ಲಿ ಎಂಜಿನಿಯರ್‌, ತಾಯಿ ಸೌಮ್ಯ ಸರಕಾರಿ ಅಡ್ವಕೇಟ್‌. ಇಬ್ಬರೂ ಕೆಲಸದಲ್ಲಿರುವುದರಿಂದ ಮಗ ಮೊಬೈಲ್‌ ಚಟಕ್ಕೆ ಬಲಿಯಾಗದೆ ಕ್ರೀಡೆಯಲ್ಲಿ ತೊಡಗಿಕೊಳ್ಳಲಿ ಎಂದು ಈಜು ತರಬೇತಿಗೆ ಸೇರಿಸಿದರು. ಕೀರ್ತನ್‌ ಮೊಬೈಲ್‌ ಕಡೆಗೆ ಗಮನ ಹರಿಸದೆ ಈಜಿನಲ್ಲಿ ತಲ್ಲೀನನಾದ. ಪರಿಣಾಮ 4×100 ಮೀ ಫ್ರೀಸ್ಟೈಲ್‌ ರಿಲೇಯಲ್ಲಿ ಚಿನ್ನ ಹಾಗೂ 4×100 ಐಎಂ ರಿಲೇಯಲ್ಲಿ  ಚಿನ್ನದ ಸಾಧನೆ ಮಾಡಿದರು. 200 ಮೀಟರ್‌ ಫ್ರೀ ಸ್ಟೈಲ್‌ನಲ್ಲಿ ಬೆಳ್ಳಿ, 100 ಮೀ ಫ್ರೀಸ್ಟೈಲ್‌ನಲ್ಲಿ ಕಂಚಿನ ಪದಕವನ್ನೂ ಕೀರ್ತನ್‌ ಗೆದ್ದಿದ್ದಾರೆ.

ಆದಿತ್ಯ ಅರವಿಂದ್‌ಗೆ ರಿಲೇಯಲ್ಲಿ ಚಿನ್ನ

ಕರ್ನಾಟಕದ ಉದಯೋನ್ಮುಖ ಈಜುತಾರೆ ಆದಿತ್ಯ ಅರವಿಂದ್‌ ಪುರುಷರ 4×100 ಮೀ ಮೆಡ್ಲೆ ರಿಲೇಯಲ್ಲಿ ಚಿನ್ನದ ಪದಕ ಗೆದ್ದ ಕರ್ನಾಕಟ ತಂಡದ ಈಜುಗಾರ. 50 ಮೀ. ಬಟರ್‌ ಫ್ಲೈನಲ್ಲಿ ಆದಿತ್ಯ ನಾಲ್ಕನೇ ಸ್ಥಾನ ಹಾಗೂ 200 ಮೀ ಮೆಡ್ಲೇಯಲ್ಲಿ ನಾಲ್ಕನೇ ಸ್ಥಾನ ಗಳಿಸಿದ್ದಾರೆ.

ಬೆಳ್ಳಿಯಲ್ಲಿ ಬೆಳಗಿದ ನಿಧಿ ಎಸ್‌.

ದಾವಣಗೆರೆಯ ನಿಧಿ 200 ಮೀ. ಫ್ರೀಸ್ಟೈಲ್‌ನಲ್ಲಿ ಬೆಳ್ಳಿ ಹಾಗೂ 100 ಮೀ ಬ್ಯಾಕ್‌ಸ್ಟ್ರೋಕ್‌ನಲ್ಲೂ ಬೆಳ್ಳಿ ಗೆದ್ದಿರುತ್ತಾರೆ. ಫುಡ್‌ ನ್ಯೂಟ್ರಿಷನ್‌ನಲ್ಲಿ ಎಂಎಸ್‌ಸಿ ಅಧ್ಯಯನ ಮಾಡುತ್ತಿರುವ ನಿಧಿ, 4×100 ಮೀ ರಿಲೇಯಲ್ಲಿ ಕರ್ನಾಟಕ ತಂಡ ಕಂಚಿನ ಪದಕ ಗೆಲ್ಲುವಲ್ಲಿ ಪ್ರಮುಖ ಪಾತ್ರವಹಿಸಿದ್ದಾರೆ.

ಕ್ರಿಕೆಟ್‌ ತೊರೆದ ಕೃಷ್ಣಗೆ ಈಜಿನಲ್ಲಿ ಚಿನ್ನ:

ಮೈಸೂರಿನ ಕೃಷ್ಣ ಇತ್ತೀಚಿಗೆ ಮಂಗಳೂರಿನಲ್ಲಿ ನಡೆದ ರಾಷ್ಟ್ರೀಯ ಈಜು ಚಾಂಪಿಯನ್‌ಷಿಪ್‌ನಲ್ಲಿ ಬೆಳ್ಳಿ ಗೆದ್ದಿದ್ದ ಪುಟ್ಟ ಈಜುಗಾರ. 9ನೇ ತರಗತಿಯಲ್ಲಿ ಓದುತ್ತಿರುವ ಕೃಷ್ಣ ಖೇಲೋ ಇಂಡಿಯಾ ಟ್ರೈಬಲ್‌ ಗೇಮ್ಸ್‌ನಲ್ಲಿ ಕರ್ನಾಟಕ ತಂಡ 4×100 ಮೀ ಫ್ರೀಸ್ಟೈಲ್‌ ರಿಲೇಯಲ್ಲಿ ಚಿನ್ನದ ಪದಕ ಗೆಲ್ಲುವಲ್ಲಿ ಪ್ರಮುಖ ಪಾತ್ರವಹಿಸಿದರು. ಕ್ರಿಕೆಟ್‌ ಆಡುತ್ತಿದ್ದ ಕೃಷ್ಣ ಒಂದು ದಿನ ಈಜು ಶಿಬಿದಲ್ಲಿ ಪಾಲ್ಗೊಂಡ ಬಳಿಕ ಮತ್ತೆ ಕ್ರಿಕೆಟ್‌ ಕಡೆ ಮುಖ ಮಾಡಲಿಲ್ಲ.

ಹುಮ್ನಾಬಾದ್‌ಗೆ ಕೀರ್ತಿ ತಂದ ಅಕ್ಷಿತಾ, ವೈಷ್ಣವಿ:

 ಬೀದರ್‌ ಜಿಲ್ಲೆಯ ಹುಮ್ನಾಬಾದ್‌ ತಾಲೂಕಿನ ಮಾಣಿಕ್‌ ಪಬ್ಲಿಕ್‌ ಸ್ಕೂಲ್‌ಲ ವಿದ್ಯಾರ್ಥಿಗಳಾದ ಅಕ್ಷಿತಾ ಹಾಗೂ ವೈಷ್ಣವಿ 4×100 ಮೀ, ರಿಲೇಯಲ್ಲಿ ಕಂಚಿನ ಪದಕ ಗೆದ್ದು ಕರ್ನಾಟಕಕ್ಕೆ ಕೀರ್ತಿ ತರುವುದರ ಜೊತೆಯಲ್ಲಿ ತಾವು ಕಲಿತ ಶಾಲೆಗೂ ಗೌರವ ತಂದಿದ್ದಾರೆ. ಮಾಣಿಕ್‌ ಪಬ್ಲಿಕ್‌ ಸ್ಕೂಲ್‌ನ ಈಜು ಕೋಚ್‌ ಶಂಕರ್‌ ಅವರು ಮುತುವರ್ಜಿ ವಹಿಸಿ ಮಕ್ಕಳ ಖರ್ಚು ವೆಚ್ಚಗಳನ್ನು ನೋಡಿಕೊಂಡು ಅವರನ್ನು ಸ್ಪರ್ಧೆಗೆ ಕರೆ ತಂದಿದ್ದಾರೆ. ಈಗ ಕಂಚಿನ ಪದಕ ಗೆದ್ದಿರುವುದು ಕೋಚ್‌ಗೆ ಖುಷಿ ಕೊಟ್ಟಿದೆ.


ಸೋಮಶೇಖರ್‌ ಪಡುಕರೆ, ಕರ್ನಾಟಕದ ಹಿರಿಯ ಕ್ರೀಡಾ ಪತ್ರಕರ್ತರು, ಕಳೆದ 32 ವರ್ಷಗಳಿಂದ ಕ್ರೀಡಾಪತ್ರಿಕೋದ್ಯಮದಲ್ಲಿ ಕಾರ್ಯನಿರ್ವಹಿಸುತಿದ್ದಾರೆ. ಕರ್ನಾಟಕದಲ್ಲಿರುವ ಕ್ರೀಡಾಪ್ರತಿಭೆಗಳನ್ನು ಪ್ರೋತ್ಸಾಹಿಸುವುದು ಮಾತ್ರವಲ್ಲದೆ ರಾಷ್ಟ್ರೀಯ ಹಾಗೂ ಅಂತಾರಾಷ್ಟ್ರೀಯ ಮಟ್ಟದ ಕ್ರೀಡಾಪಟುಗಳ ಸಾಧನೆಯನ್ನು ಕರ್ನಾಟಕದ ಓದುಗರಿಗೆ ಪರಿಚಯಿಸಿದ್ದಾರೆ. ಹಲವಾರು ದಿವ್ಯಾಂಗ ಕ್ರೀಡಾಪಟುಗಳನ್ನು ಗುರುತಿಸಿ ಅವರಿಗೆ ಸರಕಾರದ ನೆರವು ಸಿಗುವಂತೆ ಮಾಡಿದ್ದಾರೆ. ಕರ್ನಾಟಕದಲ್ಲಿರುವ ಕ್ರೀಡಾ ಸಾಧಕರಿಗೆ ನಗದು ಬಹುಮಾನ ಸಿಗುವಲ್ಲಿ ಇವರು ಬರೆದ ಲೇಖನಗಳು ಪ್ರಮುಖ ಪಾತ್ರವಹಿಸಿವೆ.