Friday, October 4, 2024

ಕರ್ನಾಟಕಕ್ಕೆ ಸೂಪರ್‌ ಜಯ

ಹೊಸದಿಲ್ಲಿ:

ನಾಯಕ ಮನೀಶ್‌ ಪಾಂಡೆ ಕೊನೆಯ ಓವರ್‌ನ ಕೊನೆಯ ಎಸೆತದಲ್ಲಿ ಆಕಾಶ್‌ ದೀಪ್‌ ಅವರನ್ನು ರನೌಟ್‌ ಮಾಡುವ ಮೂಲಕ ಸೂಪರ್‌ ಓವರ್‌ನಲ್ಲಿ ಬಂಗಾಳ ತಂಡವನ್ನು ಸೋಲಿಸಿದ ಕರ್ನಾಟಕ ತಂಡ ಸಯ್ಯದ್‌ ಮುಷ್ತಾಕ್‌ ಅಲಿ ಟಿ20 ಚಾಂಪಿಯನ್ಷಿಪ್‌ನ ಸೆಮಿಫೈನಲ್‌ ತಲುಪಿದೆ.

 

ಇತ್ತಂಡಗಳ ಸ್ಕೋರ್‌ 160ರಲ್ಲಿ ಸಮಬಲಗೊಂಡಾಗ ಪಂದ್ಯವನ್ನು ಸೂಪರ್‌ ಓವರ್‌ಗೆ ಅಳವಡಿಸಲಾಯಿತು. ಮೊದಲು ಬ್ಯಾಟಿಂಗ್‌ ಮಾಡಿದ ಬಂಗಾಳ ಕೇವಲ 5 ರನ್‌ ಗಳಿಸಿತು, ನಾಯಕ ಮನೀಶ್‌ ಪಾಂಡೆ ಎರಡು ಎಸೆತಗಳಲ್ಲಿ ಸತತ ಎರಡು ಬೌಂಡರಿ ಸಿಡಿಸಿ ತಂಡಕ್ಕೆ ಅವಿಸ್ಮರಣೀಯ ಜಯ ತಂದುಕೊಟ್ಟರು.

ಟಾಸ್‌ ಸೋತ ಕರ್ನಾಟಕ ಬ್ಯಾಟಿಂಗ್‌ಗೆ ಇಳಿಯಿತು. ಅನುಭವಿ ಆಟಗಾರ ಕರುಣ್‌ ನಾಯರ್‌ (55*) ಕೇವಲ 29 ಎಸೆತಗಳಲ್ಲಿ ಅರ್ಧ ಶತಕ ಸಿಡಿಸಿ ತಂಡಕ್ಕೆ ನೆರವಾದರು. ನಾಯಕ ಮನೀಶ್‌ ಪಾಂಡೆ (29) ಮತ್ತು ಆರಂಭಿಕ ಆಟಗಾರ ರೋಹನ್‌ ಕದಮ್‌ (30) ಉತ್ತಮ ಬ್ಯಾಟಿಂಗ್‌ ಪ್ರದರ್ಶಿಸಿದರು. ಬಂಗಾಳದ ಉತ್ತಮ ಬೌಲಿಂಗ್‌ ನಡುವೆಯೂ ಕರ್ನಾಟಕ 160 ರನ್‌ಗಳ ಸವಾಲಿನ ಮೊತ್ತವನ್ನು ದಾಖಲಿಸಿತು.

161 ರನ್‌ ಜಯದ ಗುರಿಹೊತ್ತ ಬಂಗಾಳದ ಪರ ರಿತ್ತಿಕ್‌ ಬಿಜಾಯ್‌ ಚಟರ್ಜಿ (51) ಮತ್ತು ರಿತ್ವಿಕ್‌ ರಾಯ್ (36*)‌ ಉತ್ತಮ ಬ್ಯಾಟಿಂಗ್‌ ಪ್ರದರ್ಶಿಸಿ ತಂಡವನ್ನು ಜಯದತ್ತ ಕೊಂಡೊಯ್ದಿದ್ದರು. ಕೊನೆಯ ಓವರ್‌ನಲ್ಲಿ ತಂಡಕ್ಕೆ ಜಯ ಗಳಿಸಲು 20 ರನ್‌ ಗಳಿಸಬೇಕಾಗಿತ್ತು. ಆದರೆ ಕೊನೆಯ ಎಸೆತದಲ್ಲಿ ರನ್‌ ಗಳಿಸಲು ಯತ್ನಿಸಿದ ಆಕಾಶ್‌ದೀಪ್‌ ಅವರನ್ನು ನಾಯಕ ಮನೀಶ್‌ ಪಾಂಡೆ ರನ್ನೌಟ್‌ ಮಾಡುವ ಮೂಲಕ ಪಂದ್ಯ ಸಮಬಲಗೊಂಡಿತು.

ಸೂಪರ್‌ ಓವರ್:‌

ಸೂಪರ್‌ ಓವರ್‌ನ ಮೊದಲ ಎಸೆತದಲ್ಲೇ ಕೆ,ಸಿ. ಕಾರಿಯಪ್ಪ ಅವರು ಕೈಫ್‌ ಅಹಮ್ಮದ್‌ ವಿಕೆಟ್‌ ಉರುಳಿಸಿದರು. ನಾಲ್ಕನೇ ಎಸೆತದಲ್ಲಿ ಶ್ರೀವತ್ಸ್‌ ಗೋಸ್ವಾಮಿ ರನ್ನೌಟ್.‌ ಇದರೊಂದಿಗೆ ಕೇವಲ 4 ಎಸೆತಗಳಲ್ಲಿ 5 ರನ್‌ ಗಳಿಸಿ ಬಂಗಾಳ ತನ್ನ ಸೂಪರ್‌ ಓವರ್‌ ಮುಗಿಸಿತು.

ಕರ್ನಾಟಕದ ಪರ ಮನೀಶ್‌ ಪಾಂಡೆ ಎರಡೇ ಎಸೆತಗಳಲ್ಲಿ ಜಯ ತಂದುಕೊಟ್ಟರು. ಸೆಮಿಫೈನಲ್‌ ಪಂದ್ಯದಲ್ಲಿ ಕರ್ನಾಟಕ ತಂಡ ವಿದರ್ಭ ವಿರುದ್ಧ ಸೆಣೆಸಲಿದೆ.

Related Articles