Thursday, December 12, 2024

ರಣಜಿ: ಕೌಶಿಕ್‌ ದಾಳಿಗೆ ಉತ್ತರ ತತ್ತರ

ಲಖನೌ: ಉತ್ತರ ಪ್ರದೇಶ ವಿರುದ್ಧದ ರಣಜಿ ಪಂದ್ಯದಲ್ಲಿ ಕರ್ನಾಟಕದ ವೇಗದ ಬೌಲರ್‌ ಕೌಶಿಕ್‌ ವಾಸುಕಿ ಅವರು 20 ರನ್‌ಗೆ 5 ವಿಕೆಟ್‌ ಸಾಧನೆ ಮಾಡುವುದರೊಂದಿಗೆ ಆತಿಥೇಯ ತಂಡ ಮೊದಲ ಇನ್ನಿಂಗ್ಸ್‌ನಲ್ಲಿ ಕೇವಲ 89 ರನ್‌ಗೆ ಆಲೌಟ್‌ ಆಯಿತು. Koushik Vasuki 5 star, Uttara Pradesh all out for 89

ಟಾಸ್‌ ಗೆದ್ದು ಬ್ಯಾಟಿಂಗ್‌ ಆಯ್ದುಕೊಂಡ ಉತ್ತರ ಪ್ರದೇಶದ ಆಟಗಾರರು ಪೆವಿಲಿಯನ್‌ ಪರೇಡ್‌ ನಡೆಸಿದರು. ಸಮೀರ್‌ ರಿಜ್ವಿ (25)  ಅವರನ್ನು ಹೊರತುಪಡಿಸಿದರೆ ಇತರ ಆಟಗಾರರು ಕರ್ನಾಟಕದ ದಾಳಿಯನ್ನು ಎದುರಿಸುವಲ್ಲಿ ವಿಫಲರಾದರು. ಬೆಂಗಳೂರಿನಲ್ಲಿ ಬಂಗಾಳದ ವಿರುದ್ಧ 5 ವಿಕೆಟ್‌ ಸಾಧನೆ ಮಾಡಿದ್ದ ಕೌಶಿಕ್‌ ಮತ್ತೊಮ್ಮೆ 16 ಓವರ್‌ಗಳಲ್ಲಿ ಕೇವಲ 20 ರನ್‌ ನೀಡಿ 5 ವಿಕೆಟ್‌ ಸಾಧನೆ ಮಾಡಿದರು. ಇದುವರೆಗೂ ಆಡಿರುವ ನಾಲ್ಕು ಪಂದ್ಯಗಳಲ್ಲಿ ಕೌಶಿಕ್‌ ಒಟ್ಟು 16 ವಿಕೆಟ್‌ಗಳನ್ನು ಗಳಿಸಿದ್ದಾರೆ. ವಿದ್ಯಾಧರ್‌ ಪಾಟೀಲ್‌ 2 ಹಾಗೂ ಮೊಹ್ಸಿನ್‌ ಖಾನ್‌ ಮತ್ತು ಯಶೋವರ್ಧನ್‌ ಪರಾಂತಪ್‌ ತಲಾ 1 ವಿಕೆಟ್‌ ಗಳಿಸಿ ತಂಡಕ್ಕೆ ನೆರವಾದರು.

ಕರ್ನಾಟಕದ ಪ್ರಥಮ ಇನ್ನಿಂಗ್ಸ್‌ನ ಆರಂಭ ಉತ್ತಮವಾಗಿರಲಿಲ್ಲ, 5 ರನ್‌ ಗಳಿಸುವಷ್ಟರಲ್ಲಿ ತಂಡ 2 ವಿಕೆಟ್‌ ಕಳೆದುಕೊಂಡು ಸಂಕಷ್ಟಕ್ಕೆ ಸಿಲುಕಿತ್ತು. ಆದರೆ ಚೊಚ್ಚಲ ಪಂದ್ಯವನ್ನಾಡುತ್ತಿರುವ ಕೃಷ್ಣನ್‌ ಶ್ರೀಜಿತ್‌ ಅಜೇಯ 68 ರನ್‌ ಗಳಿಸಿ ಕುಸಿದ ತಂಡಕ್ಕೆ ನೆರವಾದರು. ಮೊದಲ ದಿನದಂತ್ಯಕ್ಕೆ ರಾಜ್ಯ ತಂಡ 127 ರನ್‌ಗೆ 5 ವಿಕೆಟ್‌ ಕಳೆದುಕೊಂಡು 38 ರನ್‌ ಮುನ್ನಡೆ ಕಂಡಿದೆ.ಅನುಭವಿ ಆಟಗಾರ ಶ್ರೇಯಸ್‌ ಗೋಪಾಲ್‌ ಅಜೇಯ 14 ರನ್‌ ಗಳಿಸಿ ತಾಳ್ಮೆಯ ಆಟವಾಡುತ್ತಿದ್ದಾರೆ.

Related Articles