ಮಂಗಳೂರು: ಬೆಂಗಳೂರಿನಲ್ಲಿ ನೆಲೆಸಿರುವ ಮಂಗಳೂರಿನ ದೇಹದಾರ್ಢ್ಯ ಪಟು ಶೋಧನ್ ರೈ ಅವರು ಅಮೆರಿಕದ ಲಾಸ್ ಏಂಜಲೀಸ್‌ನಲ್ಲಿ ನಡೆದ ವಿಶ್ವಕಪ್ ದೇಹದಾರ್ಢ್ಯ ಸ್ಪರ್ಧೆಯಲ್ಲಿ ಸಮಗ್ರ ವಿಜೇತರ (ಅಥ್ಲೆಟಿಕ್ಸ್) ವಿಭಾಗದಲ್ಲಿ ಚಿನ್ನದ ಪದಕ ಗೆದ್ದಿದ್ದಾರೆ. Indian Body Builder Karnataka’s Shodhan Rai won the Gold Medal at America’s World Cup.
ಈ ಪ್ರತಿಷ್ಠಿತ ಚಾಂಪಿಯನ್‌ಷಿಪ್‌ನಲ್ಲಿ ಶೋಧನ್ ರೈ ಹಾಗೂ ಶೆಲ್ಲಿ ಅರೋರ ಭಾರತವನ್ನು ಪ್ರತಿನಿಧಿಸಿದ್ದರು. ಶೋಧನ್ ದೇಹದಾರ್ಡ್ಯ (ಅಥ್ಲೆಟಿಕ್ಸ್) ವಿಭಾಗದಲ್ಲಿ ಸಮಗ್ರ ಚಾಂಪಿಯನ್ ಆಗಿ ಚಿನ್ನ ಗೆದ್ದಿರುವುದು ಮಾತ್ರವಲ್ಲ 35+ ವಿಭಾಗದಲ್ಲಿ ಬೆಳ್ಳಿ ಪದಕ ಹಾಗೂ ದೇಹದಾರ್ಢ್ಯ 40+ ವಿಭಾಗದಲ್ಲೂ ಬೆಳ್ಳಿಯ ಸಾಧನೆ ಮಾಡಿದ್ದಾರೆ.
ಶೆಲ್ಲಿ ಅರೋರ ಅವರು ಸ್ಪೋರ್ಟ್ಸ್ ಮಾಡೆಲ್ ವಿಭಾಗದಲ್ಲಿ ಬೆಳ್ಳಿಯ ಸಾಧನೆ ಮಾಡಿದ್ದಾರೆ. ಈ ಚಾಂಪಿಯನ್‌ಷಿಪ್‌ನಲ್ಲಿ 20 ರಾಷ್ಟ್ರಗಳಿಂದ ಸುಮಾರು 300ಕ್ಕೂ ಹೆಚ್ಚು ಸ್ಪರ್ಧಿಗಳು ಪಾಲ್ಗೊಂಡಿರುತ್ತಾರೆ. ಅಮೆರಿಕದ ಲಾಸ್ ವೇಗಾಸ್‌ನಲ್ಲಿ ನಡೆದ ನ್ಯಾಚುರಲ್ ಒಲಿಂಪಿಯಾದಲ್ಲಿ ಭಾರತವನ್ನು ಪ್ರತಿನಿಧಿಸಿದ್ದ ಶೋಧನ್ ರೈ ಒಂದು ವಿಭಾಗದಲ್ಲಿ ಕಂಚಿನ ಪದಕ ಗೆದ್ದರೆ ಇನ್ನೊಂದು ವಿಭಾಗದಲ್ಲಿ ನಾಲ್ಕನೇ ಸ್ಥಾನ ಗಳಿಸಿರುತ್ತಾರೆ. ಈ ಚಾಂಪಿಯನ್‌ಷಿಪ್‌ನಲ್ಲಿ 38 ರಾಷ್ಟ್ರಗಳಿಂದ 500ಕ್ಕೂ ಹೆಚ್ಚು ಸ್ಪರ್ಧಿಗಳು ಪಾಲ್ಗೊಂಡಿರುತ್ತಾರೆ. ಈ ಎರಡೂ ಚಾಂಪಿಯನ್‌ಷಿಪ್‌ಗಳಲ್ಲಿ ಭಾರತವನ್ನು ಪ್ರತಿನಿಧಿಸಿರುವ ಶೋಧನ್ ರೈ ವಿವಿಧ ವಯೋಮಿತಿಗಳಲ್ಲಿ ಸ್ಪರ್ಧಿಸಿರುತ್ತಾರೆ. ಬಾಡಿ ಬಿಲ್ಡಿಂಗ್ ಹಾಗೂ ಅಥ್ಲೆಟಿಕ್ ವಿಭಾಗದ ಪ್ರತಿಯೊಂದು ಸ್ಪರ್ಧೆಯಲ್ಲಿಯೂ 8-10 ಸ್ಪರ್ಧಿಗಳು ಭಾಗವಹಿಸಿರುತ್ತಾರೆ.
ಆಗಸ್ಟ್ ತಿಂಗಳಲ್ಲಿ ನ್ಯೂಜಿಲೆಂಡ್‌ನಲ್ಲಿ ನಡೆದ ಜಾಗತಿಕ ಮಟ್ಟದ ಚಾಂಪಿಯನ್‌ಷಿಪ್‌ನಲ್ಲಿ ಶೋಧನ್ ರೈ 4 ಚಿನ್ನ ಮತ್ತು 1 ಬೆಳ್ಳಿಯ ಸಾಧನೆ ಮಾಡಿದ್ದರು. INBA ಐಎನ್‌ಬಿಎ ( ಅಂತಾರಾಷ್ಟ್ರೀಯ ನ್ಯಾಚುರಲ್ ಬಾಡಿ ಬಿಲ್ಡಿಂಗ್ ಅಸೋಸಿಯೇಷನ್) ಜಗತ್ತಿನ ಅತ್ಯಂತ ಪುರಾತನ ನ್ಯಾಚುರಲ್ ಬಾಡಿಬಿಲ್ಡಿಂಗ್ ಸಂಸ್ಥೆಗಳಲ್ಲಿ ಒಂದಾಗಿದ್ದು ಕಳೆದ 30 ವರ್ಷಗಳಿಂದ WADA ಸಂಸ್ಥೆಯೊಂದಿಗೆ ಕ್ರಮಬದ್ಧವಾಗಿ ಕಾರ್ಯನಿರ್ವಹಿಸುತ್ತಿದೆ.
ಶೋಧನ್ ರೈ ಅವರ ಪ್ರಮುಖ ಸಾಧನೆಗಳು:
- ರೈ ಅವರಿಗೆ ಕರ್ನಾಟಕ ಸರಕಾರ 2014ರಲ್ಲಿ ಪ್ರತಿಷ್ಠಿತ ಏಕಲವ್ಯ ಪ್ರಶಸ್ತಿಯನ್ನು ನೀಡಿ ಗೌರವಿಸಿದೆ.
- ಅಮೆರಿಕದಲ್ಲಿರುವ ವಿಶ್ವ ನ್ಯಾಚುರಲ್ ಬಾಡಿ ಬಿಲ್ಡಿಂಗ್ ಸಂಸ್ಥೆ ಶೋಧನ್ ರೈ ಅವರ ಸಾಧನೆಯನ್ನು ಗುರುತಿಸಿ 2024ರ “ಹಾಲ್ ಆಫ್ ಫೇಮ್” ಗೌರವ ನೀಡಿದೆ.
- ಲಾಸ್ ವೇಗಾಸ್‌ನಲ್ಲಿ ನಡೆದ 2024ರ ನ್ಯಾಚುರಲ್ ಬಾಡಿಬಿಲ್ಡಿಂಗ್ ಚಾಂಪಿಯನ್‌ಷಿಪ್‌ನಲ್ಲಿ ಕಂಚಿನ ಪದಕ.
- ಲಾಸ್ ಏಂಜಲೀಸ್ (2024) ಬಾಡಿ ಬಿಲ್ಡಿಂಗ್ ವಿಶ್ವಕಪ್‌ನಲ್ಲಿ 1 ಚಿನ್ನ, 2 ಬೆಳ್ಳಿ ಹಾಗೂ 1 ಕಂಚಿನ ಪದಕ.
- 2024ರ ಆಗಸ್ಟ್‌ನಲ್ಲಿ ನ್ಯೂಜಿಲೆಂಡ್ ಅಕ್ಲಂಡ್‌ನಲ್ಲಿ ನಡೆದ ಅಂತಾರಾಷ್ಟ್ರೀಯ ಬಾಡಿಬಿಲ್ಡಿಂಗ್ ಚಾಂಪಿಯನ್‌ಷಿಪ್‌ನಲ್ಲಿ 4 ಚಿನ್ನ, 1 ಬೆಳ್ಳಿಯ ಸಾಧನೆ ಮಾಡಿದ್ದಾರೆ.
- 2023ರಲ್ಲಿ ಅಮೆರಿಕದ ಲಾಸ್ ವೇಗಾಸ್‌ನಲ್ಲಿ ನಡೆದ ನ್ಯಾಚುರಲ್ ಬಾಡಿ ಬಿಲ್ಡಿಂಗ್ ಚಾಂಪಿಯನ್‌ಷಿಪ್‌ನಲ್ಲಿ ಕಂಚಿನ ಪದಕ.
- 2023ರಲ್ಲಿ ಅಮೆರಿಕದ ಲಾಸ್ ಏಂಜಲೀಸ್‌ನಲ್ಲಿ ನಡೆದ ನ್ಯಾಚುರಲ್ ವಿಶ್ವಕಪ್‌ನಲ್ಲಿ 2 ಚಿನ್ನ, 1 ಬೆಳ್ಳಿಯ ಪದಕ.
- ನ್ಯೂಜಿಲೆಂಡ್‌ನ ಅಕ್ಲಂಡ್‌ನಲ್ಲಿ 2023ರಲ್ಲಿ ನಡೆದ ಇಂಟರ್‌ನ್ಯಾಷನಲ್ ಪೆಸಿಫಿಕ್ ರಿಮ್‌ನಲ್ಲಿ 1 ಬೆಳ್ಳಿ, 1 ಕಂಚು ಹಾಗೂ 2 ನಾಲ್ಕನೇ ಸ್ಥಾನ ಗಳಿಸಿದ ಸಾಧನೆ.
- 2022ರಲ್ಲಿ ಅಮೆರಿಕದ ಲಾಸ್ ಏಂಜಲೀಸ್‌ನಲ್ಲಿ ನಡೆದ ನ್ಯಾಚುರಲ್ ವಿಶ್ವಕಪ್‌ನಲ್ಲಿ ಚಿನ್ನದ ಪದಕ.
- 2019ರಲ್ಲಿ ಅಮೆರಿಕದ ಲಾಸ್ ವೇಗಾಸ್‌ನಲ್ಲಿ ನಡೆದ ನ್ಯಾಚುರಲ್ ಒಲಂಪಿಯಾದಲ್ಲಿ ಕಂಚಿನ ಪದಕ.
- 2019ರಲ್ಲಿ ಅಮೆರಿಕದ ಲಾಸ್ ಏಂಜಲೀಸ್‌ನಲ್ಲಿ ನಡೆದ ನ್ಯಾಚುರಲ್ ಯೂನಿವರ್ಸ್‌ನಲ್ಲಿ ಬೆಳ್ಳಿಯ ಪದಕ.
- 2019ರಲ್ಲಿ ಆಸ್ಟ್ರೇಲಿಯಾದ ಸಿಡ್ನಿಯಲ್ಲಿ ನಡೆದ ನ್ಯಾಚುರಲ್ ವಿಶ್ವಕಪ್‌ನಲ್ಲಿ 2 ಚಿನ್ನ, 1 ಬೆಳ್ಳಿ ಜೊತೆಯಲ್ಲಿ ಬೆಸ್ಟ್ ಪೋಸರ್ ಪ್ರಶಸ್ತಿ.
- 2018ರಲ್ಲಿ ಅಮೆರಿದಕ ಲಾಸ್ ವೇಗಾಸ್‌ನಲ್ಲಿ ನಡೆದ ನ್ಯಾಚುರಲ್ ಒಲಂಪಿಯಾದಲ್ಲಿ ಕಂಚಿನ ಪದಕ.
- 2018ರಲ್ಲಿ ಆಸ್ಟ್ರೇಲಿಯಾದ ಬ್ರಿಸ್ಬೇನ್‌ನಲ್ಲಿ ನಡೆದ ನ್ಯಾಚುರಲ್ ಯುನಿವರ್ಸ್‌ನಲ್ಲಿ ಬೆಳ್ಳಿ ಪದಕ.
- 2017ರಲ್ಲಿ ಅಮೆರಿಕದ ಲಾಸ್‌ವೇಗಾಸ್‌ನಲ್ಲಿ ನಡೆದ ನ್ಯಾಚುರಲ್ ಒಲಿಂಪಿಯಾದಲ್ಲಿ ಕಂಚು ಹಾಗೂ ಲಾಸ್ ಏಂಜಲೀಸ್‌ನಲ್ಲಿ ನಡೆದ ನ್ಯಾಚುರಲ್ ವಿಶ್ವಕಪ್‌ನಲ್ಲಿ ಚಿನ್ನ. ಇದೇ ವರ್ಷ ನ್ಯೂಜಿಲೆಂಡ್‌ನ ಅಕ್ಲಂಡ್‌ನಲ್ಲಿ ನಡೆದ ನ್ಯಾಚುರಲ್ ಯೂನಿವರ್ಸ್‌ನಲ್ಲಿ ಚಿನ್ನದ ಪದಕ.
- 2016ರಲ್ಲಿ ಲಾಸ್‌ವೇಗಾಸ್‌ನಲ್ಲಿ ನಡೆದ ನ್ಯಾಚುರಲ್ ಒಲಂಪಿಯಾದಲ್ಲಿ ಬೆಳ್ಳಿ ಪದಕ.
- 2012ರಲ್ಲಿ ನ್ಯೂಜಿಲೆಂಡ್‌ನ ಅಕ್ಲಂಡ್‌ನಲ್ಲಿ ನಡೆದ ಏಷ್ಯಾ ಪೆಸಿಫಿಕ್‌ನಲ್ಲಿ ಬೆಳ್ಳಿ ಪದಕ.
- 2011ರಲ್ಲಿ ಜರ್ಮನಿಯ ಹ್ಯಾಂಬರ್ಗ್‌ನಲ್ಲಿ ನಡೆದ ಮಿಸ್ಟರ್ ಯೂನಿವರ್ಸ್‌ನಲ್ಲಿ 8 ನೇ ಸ್ಥಾನ.
- 2009 & 2010ರ ಏಷ್ಯಾ ಪೆಸಿಫಿಕ್ ನಲ್ಲಿ ಬೆಳ್ಳಿ ಪದಕ.
- 2001ರಲ್ಲಿ ಫ್ರಾನ್ಸ್‌ನ ಚೆರ್ನಿ ಲೆಸ್ ಮಕಾನ್‌ನಲ್ಲಿ ನಡೆದ 21 ವರ್ಷ ವಯೋಮಿತಿಯ ಮಿಸ್ಟರ್ ಯೂನಿವರ್ಸ್‌ನಲ್ಲಿ ಕಂಚಿನ ಪದಕ.
- ಇವುಗಳಲ್ಲದೆ ಮಿಸ್ಟರ್ ಇಂಡಿಯಾ, ಮಿಸ್ಟರ್ ಕರ್ನಾಟಕ, ಮಿಸ್ಟರ್ ಬೆಂಗಳೂರು ಹಾಗೂ ಎರಡು ಬಾರಿ ಮಿಸ್ಟರ್ ಬೆಂಗಳೂರು ಯೂನಿವರ್ಸಿಟಿ ಪ್ರಶಸ್ತಿ ಗೆದ್ದಿದ್ದಾರೆ.