Thursday, March 28, 2024

ಕೊಹ್ಲಿಗೆ ಖೇಲ್ ರತ್ನ, ಬೋಪಣ್ಣಗೆ ಅರ್ಜುನ

ಸ್ಪೋರ್ಟ್ಸ್ ಮೇಲ್ ವರದಿ

ಭಾರತ ಕ್ರಿಕೆಟ್ ತಂಡದ ನಾಯಕ ವಿರಾಟ್ ಕೊಹ್ಲಿ ಹಾಗೂ ವಿಶ್ವ ವೇಟ್‌ಲಿಫ್ಟಿಂಗ್ ಚಾಂಪಿಯನ್ ಮಿರಾಬಾಯಿ ಚಾನು ಅವರನ್ನು ಖೇಲ್‌ರತ್ನ ಗೌರವಕ್ಕೆ ಶಿಫಾರಸು ಮಾಡಲಾಗಿದೆ. ಕನ್ನಡಿಗ ರೋಹನ್ ಬೋಪಣ್ಣ ಅವರನ್ನು ಅರ್ಜುನ ಪ್ರಶಸ್ತಿಗೆ ಶಿಫಾರಸು ಮಾಡಲಾಗಿದೆ.

ಇಬ್ಬರಿಗೆ ಖೇಲ್‌ರತ್ನ ಹಾಗೂ 20 ಕ್ರೀಡಾ ಸಾಧಕರಿಗೆ ಅರ್ಜುನ ಪ್ರಶಸ್ತಿ ನೀಡಲಾಗುವುದು ಎಂದು ಕೇಂದ್ರ ಕ್ರೀಡಾ ಇಲಾಖೆ ತಿಳಿಸಿದೆ.
ಜಾವಲಿನ್ ಎಸೆತಗಾರ ನೀರಜ್ ಚೋಪ್ರಾ, ವಿಶ್ವ ಅಥ್ಲೆಟಿಕ್ಸ್‌ನಲ್ಲಿ ಚಿನ್ನ ಗೆದ್ದ ಹಿಮಾ ದಾಸ್, ಏಷ್ಯನ್ ಗೇಮ್ಸ್‌ನಲ್ಲಿ ಚಿನ್ನ ಗೆದ್ದ ದೂರದ ಓಟಗಾರ ಜಿನ್ಸನ್ ಜಾನ್ಸನ್, ಮಹಿಳಾ ಕ್ರಿಕೆಟ್ ತಾರೆ ಸ್ಮತಿ ಮಂಧಾನ, ಹಾಕಿ ಆಟಗಾರರಾದ ಮನ್‌ಪ್ರೀತ್ ಸಿಂಗ್, ಸವಿತಾ ಪೂನಿಯಾ, ಕಾಮನ್‌ವೆಲ್ತ್ ಗೇಮ್ಸ್ ಚಿನ್ನ ವಿಜೇತೆ ಮನಿಕಾ ಬಾತ್ರಾ, ಏಷ್ಯನ್ ಗೇಮ್ಸ್ ಚಿನ್ನ ವಿಜೇತ ರೋಹನ್ ಬೋಪಣ್ಣ ಅರ್ಜುನ ಪ್ರಶಸ್ತಿ ವಿಜೇತ ಕ್ರೀಡಾ ಸಾಧಕರು. ಕ್ರೀಡಾ ಸಚಿವ ರಾಜ್ಯವರ್ಧನ  ಸಿಂಗ್ ರಾಥೋಡ್ ಅವರು ಈ ಕ್ರೀಡಾ ಸಾಧಕರನ್ನು ಶಿಫಾರಸು ಮಾಡಿರುತ್ತಾರೆ. ರಾಷ್ಟ್ರಪತಿ ಭವನದಲ್ಲಿ ಸೆ. ೨೫ರಂದು ರಾಷ್ಟ್ರಪತಿ ರಾಮನಾಥ ಕೋವಿಂದ ಪ್ರದಾನ ಮಾಡಲಿದ್ದಾರೆ.
೧೯೯೭ರಲ್ಲಿ ಸಚಿನ್ ತೆಂಡೂಲ್ಕರ್, ೨೦೦೭ರಲ್ಲಿ ಮಹೇಂದ್ರ ಸಿಂಗ್ ಧೋನಿ ಅವರ ನಂತರ ಕ್ರಿಕೆಟ್‌ನಲ್ಲಿ ಖೇಲ್ ರತ್ನ ಗೌರವಕ್ಕೆ ಪಾತ್ರರಾದ ಮೂರನೇ ಆಟಗಾರರೆಂಬ ಹೆಗ್ಗಳಿಕೆಗೆ ಕೋಹ್ಲಿ ಪಾತ್ರರಾಗಿದ್ದಾರೆ. ಬಾಕ್ಸರ್ ಅಮಿತ್ ಪಂಘಾಲ್ ಅವರ ಹೆಸರು ಅರ್ಜುನ ಪ್ರಶಸ್ತಿಗಾಗಿ ಕೇಳಿ ಬಂದಿತ್ತು, ಆದರೆ ಡೋಪಿಂಗ್‌ನಲ್ಲಿ ಸಿಕ್ಕಿ ಬಿದ್ದ ಕಾರಣ ಅವರಿಗೆ ಪ್ರಶಸ್ತಿ ನೀಡಲು ನಿರಾಕರಿಸಲಾಯಿತು.
ಖೇಲ್ ರತ್ನ ಪ್ರಶಸ್ತಿಯು ೭.೫ ಲಕ್ಷ ರೂ. ಹಾಗೂ ಅರ್ಜುನ ಪ್ರಶಸ್ತಿಯು ೫ ಲಕ್ಷ ರೂ.ನಗದು ಬಹುಮಾನವನ್ನು ಒಳಗೊಂಡಿರುತ್ತದೆ.
ರಾಜೀವ್ ಗಾಂಧೀ ಖೇಲ್ ರತ್ನ- ವಿರಾಟ್ ಕೊಹ್ಲಿ (ಕ್ರಿಕೆಟ್), ಮೀರಾಬಾಯಿ ಚಾನು (ವೇಟ್‌ಲಿಫ್ಟಿಂಗ್)
ಅರ್ಜುನ ಪ್ರಶಸ್ತಿ- ಜಿನ್ಸನ್ ಜಾನ್ಸನ್ (ಅಥ್ಲೆಟಿಕ್ಸ್), ಹಿಮಾ ದಾಸ್ (ಅಥ್ಲೆಟಿಕ್ಸ್), ಎನ್. ಸಿಕ್ಕಿ ರೆಡ್ಡಿ (ಬ್ಯಾಡ್ಮಿಂಟನ್), ಸತೀಶ್ ಕುಮಾರ್ (ಬಾಕ್ಸಿಂಗ್), ಸ್ಮತಿ ಮಂಧಾನ (ಕ್ರಿಕೆಟ್), ಶುಭಾಕರ್ ಶರ್ಮಾ (ಗಾಲ್ಫ್), ಮನ್‌ಪ್ರೀತ್ ಸಿಂಗ್ (ಹಾಕಿ), ಸವೀತಾ (ಹಾಕಿ), ರವಿ ರಾಥೋಡ್ (ಪೋಲೋ), ರಾಹಿ ಸರ್ನೋಬತ್ (ಶೂಟಿಂಗ್), ಅಂಕುರ್ ಮಿತ್ತಲ್(ಶೂಟಿಂಗ್), ಶ್ರೇಯಸಿ ಸಿಂಗ್(ಶೂಟಿಂಗ್), ಮನಿಕಾ ಬಾತ್ರಾ (ಟೇಬಲ್ ಟೆನಿಸ್), ಜಿ. ಸತ್ಯನ್ (ಟೇಬಲ್ ಟೆನಿಸ್), ರೋಹನ್ ಬೋಪಣ್ಣ (ಟೆನಿಸ್), ಸುಮಿತ್ (ಕುಸ್ತಿ), ಪೂಜಾ ಕಾಡಿಯನ್(ವುಷು), ಅಂಕುರ್ ಧಾಮಾ(ಪ್ಯಾರಾ ಅಥ್ಲೀಟ್), ಮನೋಜ್ ಸರ್ಕಾರ್ (ಪ್ಯಾರಾ ಬ್ಯಾಡ್ಮಿಂಟನ್).

Related Articles