Saturday, October 5, 2024

Kodava Hockey Festival: ಕೊಡವ ಹಾಕಿ ಉತ್ಸವ; ಕುಪ್ಪಂಡ ತಂಡಕ್ಕೆ ಚೊಚ್ಚಲ ಚಾಂಪಿಯನ್‌ ಪಟ್ಟ

ಮಡಿಕೇರಿ: ಜಾಗತಿಕ ಕ್ರೀಡಾ ಇತಿಹಾಸದಲ್ಲಿ ದಾಖಲೆ ಬರೆದಿರುವ ಕೊಡವ ಹಾಕಿ (Kodava Hockey Festival) ಉತ್ಸವದ 23ನೇ ವರ್ಷದ ಸಂಭ್ರಮ ತೆರೆ ಕಂಡಿದೆ. ಫೈನಲ್‌ ಪಂದ್ಯದಲ್ಲಿ ಜಯ ಗಳಿಸಿದ ಕುಪ್ಪಂಡ (ಕೈಕೇರಿ) ತಂಡ ಮೊದಲ ಬಾರಿ ಚಾಂಪಿಯನ್‌ ಪಟ್ಟ ಗೆದ್ದು ಸಂಭ್ರಮಿಸಿತು. ಮೂರು ಬಾರಿ ಚಾಂಪಿಯನ್‌ ಪಟ್ಟ ಗೆದ್ದಿದ್ದ ಮಾಜಿ ಚಾಂಪಿಯನ್‌ ಕುಲ್ಲೇಟಿರ ತಂಡ ರನ್ನರ್‌ ಅಪ್‌ ಸ್ಥಾನಕ್ಕೆ ತೃಪ್ತಿಪಟ್ಟಿತು.

ಸುಮಾರು 20,000ಕ್ಕೂ ಅಧಿಕ ಅಭಿಮಾನಿಗಳಿಂದ ಆಕರ್ಷಿತಗೊಂಡ ಕೊಡವ ಕೌಟುಂಬಿಕ ಹಾಕಿ ಉತ್ಸವದ (Kodava Hockey Festival) ಕೊಡಗಿನ ನಾಪೋಕ್ಲುವಿನ ಜನರಲ್‌ ತಿಮ್ಮಯ್ಯ ಮೈದಾನದಲ್ಲಿ 23 ದಿನಗಳ ಕಾಲ ನಡೆಯಿತು. ಆತಿಥೇಯ ಅಪ್ಪಚೆಟ್ಟೋಳಂಡ ಹಾಕಿ ಫೈನಲ್‌ ಪಂದ್ಯದಲ್ಲಿ ಕುಪ್ಪಂಡ ಹಾಗೂ ಕುಲ್ಲೇಟಿರ ತಂಡಗಳ ಪರ ಸೋಮಯ್ಯ ಹಾಗೂ ಅವನೀಶ್‌ ಮಂದಪ್ಪ ಗೋಲು ಗಳಿಸುವ ಮೂಲ ಪಂದ್ಯ 1-1 ರಲ್ಲಿ ಸಮಬಲಗೊಂಡಿತು. ನಂತರ ಶೂಟೌಟ್‌ನಲ್ಲಿ ಕುಪ್ಪಂಡ ತಂಡ 4-2 ಗೋಲುಗಳ ಅಂತರದಲ್ಲಿ ಜಯ ಗಳಿಸಿ ಪ್ರತಿಷ್ಠಿತ ಪ್ರಶಸ್ತಿ ಗೆದ್ದುಕೊಂಡಿತು. ಚಾಂಪಿಯನ್‌ ಕುಪ್ಪಂಡ ತಂಡ 3 ಲಕ್ಷ ರೂ ಹಾಗೂ ರನ್ನರ್ಸ್‌ ಅಪ್‌ ಕುಲ್ಲೇಟಿರ ತಂಡ 2 ಲಕ್ಷ ರೂ. ನಗದು ಬಹುಮಾನ ಗೆದ್ದುಕೊಂಡಿತು. 

ಮೂರನೇ ಸ್ಥಾನಕ್ಕಾಗಿ ಮಾಜಿ ಚಾಂಪಿಯನ್ನರ ಹೋರಾಟ:

ಭಾನುವಾರ ಬೆಳಿಗ್ಗೆ ಮೂರನೇ ಸ್ಥಾನಕ್ಕಾಗಿ ಮಾಜಿ ಚಾಂಪಿಯನ್‌ ತಂಡಗಳ ನಡುವೆ ಹೋರಾಟ ನಡೆಯಿತು. ನೆಲ್ಲಮಕ್ಕಡ ಹಾಗೂ ಪಳಗಂಡ ತಂಡಗಳ ನಡುವೆ ತೀವ್ರ ಪೈಪೋಟಿ ನಡೆಯಿತು. ನೆಲ್ಲಮಕ್ಕಡ ತಂಡ ಪಳಗಂಡ ತಂಡವನ್ನು 1-0 ಗೋಲಿನಿಂದ ಮಣಿಸಿ 1 ಲಕ್ಷ ರೂ, ನಗದು ಬಹುಮಾನ ಗಳಿಸಿತು. ಪಳಗಂಡ ತಂಡ 50 ಸಾವಿರ ರೂ. ನಗದು ಬಹುಮಾನ ಮತ್ತು ಆಕರ್ಷಕ ಪ್ರಶಸ್ತಿ ಗಳಿಸಿತು.

ಸಾಂಪ್ರದಾಯಿಕ ಉದ್ಘಾಟನೆ: ಕೊಡವ ಹಾಕಿ ಅಕಾಡೆಮಿ ಅಧ್ಯಕ್ಷ ಪಾಂಡಂಡ ಕೆ. ಬೋಪಣ್ಣ ಬೆಳ್ಳಿ ಹಾಕಿ ಸ್ಟಿಕ್‌ ಮೂಲಕ ಬೆಳ್ಳಿಯ ಚೆಂಡನ್ನು ತಳ್ಳುವ ಮೂಲಕ ಫೈನಲ್‌ ಪಂದ್ಯಕ್ಕೆ ಸಾಂಪ್ರದಾಯಿಕ ಚಾಲನೆ ನೀಡಿದರು. ಮುಖ್ಯ ಅತಿಥಿಗಳಾಗಿ ಆಗಮಿಸಿದ್ದ ಭಾರತ ಹಾಕಿ ತಂಡದ ಮಾಜಿ ನಾಯಕ ಧನರಾಜ ಪಿಳ್ಳೈ ಅವರು ಮಾತನಾಡಿ, “ಕೊಡಗು ಜಿಲ್ಲೆ ಎಂ ಎಂ ಸೋಮಯ್ಯ, ಎಂಪಿ ಗಣೇಶ್‌ ಎ ಬಿ ಸುಬ್ಬಯ್ಯ ಅವರಂಥ ಶ್ರೇಷ್ಠ ಆಟಗಾರರನ್ನು ಭಾರತ ತಂಡಕ್ಕೆ ನೀಡಿದೆ. ಮುಂದಿನ ದಿನಗಳಲ್ಲಿ ಇನ್ನೂ ಹೆಚ್ಚಿನ ಆಟಗಾರರನ್ನು ನೀಡುವಂತಾಗಬೇಕು,” ಎಂದು ಹೇಳಿದರು.

ಇದನ್ನೂ ಓದಿ: ಕಷ್ಟಗಳನ್ನು ಸಿಕ್ಸರ್ಗೆ ಅಟ್ಟುತ್ತ ಬದುಕನ್ನು ಕಟ್ಟಿಕೊಂಡ ರಿಂಕು ಸಿಂಗ್

ಮುಂದಿನ ವರ್ಷ ಕುಡ್ಯೋಳಂಡ ಹಾಕಿ ಉತ್ಸವ: 

2024 ಕೊಡವ ಕೌಟುಂಬಿಕ ಹಾಕಿ ಉತ್ಸವದ ಆತಿಥ್ಯವನ್ನು ನಾಪೊಕ್ಲುವಿನ ಕೊಳಕೇರಿ ಗ್ರಾಮದ ಕುಡ್ಯೋಳಂಡ ಕುಟುಂಬ ವಹಿಸಲಿದೆ. ಪ್ರಶಸ್ತಿ ಪ್ರದಾನ ಮಾಡಿದ ನಂತರ ಕೊಡವ ಹಾಕಿ ಅಕಾಡೆಮಿಯಿಂದ ಹಾಕಿ ಉತ್ಸವದ ಧ್ವಜವನ್ನು 24ನೇ ವರ್ಷದ ಆಯೋಜಕರಾದ ಕುಡ್ಯೋಳಂಡ ಕುಂಟುಬಕ್ಕೆ ಹಸ್ತಾಂತರಿಸಲಾಯಿತು. 

Related Articles