ಚೆನ್ನೈ ಮಾರ್ಚ್ 27: ಬೆಂಗಳೂರಿನ ಅರ್ಕಾ ಮೋಟಾರ್ ಸ್ಪೋರ್ಟ್ಸ್‌ನ ಕರ್ಣ ಕಡೂರ್ ಮತ್ತು ಸಹ ಚಾಲಕ ನಿಖಿಲ್ ಪೈ ಇಲ್ಲಿ ನಡೆದ 44ನೇ ದಕ್ಷಿಣ ಭಾರತ ರಾಲಿ ಚಾಂಪಿಯನ್‌ಷಿಪ್ ಪ್ರಶಸ್ತಿ ಗೆದ್ದುಕೊಂಡಿದ್ದಾರೆ. ಇದು ಎಫ್‌ಐಎ ಏಷ್ಯಾ-ಪೆಸಿಫಿಕ್ ರಾಲಿ ಚಾಂಪಿಯನ್‌ಷಿಪ್‌ನ ರೌಂಡ್ ಕೂಡ ಆಗಿದ್ದು ಇದರೊಂದಿಗೆ ಕರ್ಣ ಹಾಗೂ ನಿಖಿಲ್ ಏಷ್ಯಾ ಸುತ್ತಿನಲ್ಲೂ ಚಾಂಪಿಯನ್ ಪಟ್ಟ ಗೆದ್ದಂತಾಗಿದೆ. ಇದು ಎಫ್‌ಎಂಎಸ್‌ಸಿಐ ಭಾರತೀಯ ರಾಷ್ಟ್ರೀಯ ರಾಲಿ ಚಾಂಪಿಯನ್‌ಷಿಪ್‌ನ ಅಂತಿಮ ಸುತ್ತು ಕೂಡ ಆಗಿದೆ.
ಮೊದಲ ಬಾರಿಗೆ ಎಪಿಆರ್‌ಸಿಯಲ್ಲಿ ಸ್ಪರ್ಧಿಸುತ್ತಿರುವ ಕರ್ಣ ಮತ್ತು ನಿಖಿಲ್ ಭಾರತೀಯ ಹಂತದ ಏಷ್ಯಾ ಕಪ್ (ಭಾರತದ ಹಂತ) ರೌಂಡ್ ಚಾಂಪಿಯನ್ ಪಟ್ಟ ಗೆದ್ದುಕೊಂಡರೆ, ಚೆಟ್ಟಿನಾಡ್ ಸ್ಪೋರ್ಟಿಂಗ್‌ನ ಹಿಮಾಚಲ ಪ್ರದೇಶದ ಆದಿತ್ಯ ಠಾಕೂರ್ ಮತ್ತು ವಿರೇಂದರ್ ಕಶ್ಯಪ್ ಸಮಗ್ರ ರಾಷ್ಟ್ರೀಯ ಚಾಂಪಿಯನ್ ಪಟ್ಟ ತಮ್ಮದಾಗಿಸಿಕೊಂಡರು. ಇದು ಅವರ ಪಾಲಿಗೆ ಚೊಚ್ಚಲ ಪ್ರಶಸ್ತಿ ಎನಿಸಲಿದೆ. ಆದರೆ ವಿಚಾರಣೆಯೊಂದು ಬಾಕಿ ಇರುವುದರಿಂದ ಇವರ ಪ್ರಶಸ್ತಿಯು ತಡೆಯಲ್ಲಿದೆ.
ದಿನದ ಎರಡನೇ ಹಂತದ ರಾಲಿಯಲ್ಲಿ ಕರ್ಣ ಅವರು ಚಲಾಯಿಸುತ್ತಿದ್ದ ಕಾರಿನ ಲಗೇಜ್ ಬೂಟ್ ತೆರೆದುಕೊಂಡ ಕಾರಣ ಕೆಲವು ಕ್ಷಣ ಆತಂಕ ಮನೆ ಮಾಡಿತ್ತು. ಆದರೆ ಕನ್ನಡಿಗನ ಮೊದಲ ಅಂತಾರಾಷ್ಟ್ರೀಯ ಪ್ರಶಸ್ತಿಗೆ ಅದರಿಂದ ಯಾವುದೇ ಅಡ್ಡಿಯಾಗಲಿಲ್ಲ. ಏಷ್ಯಾ ಕಪ್ ಸ್ಪರ್ಧೆಯಲ್ಲಿದ್ದ ಇನ್ನೆರಡು ಜೋಡಿಗಳಾದ ಅಮಿತ್ರಾಜಿತ್ ಘೋಷ್ ಮತ್ತು ಅಶ್ವಿನ್ ನಾಯ್ಕ್ ಹಾಗೂ ಯೂನಸ್ ಇಲಿಯಾಸ್ ಮತ್ತು ಸನತ್ ಜಿ ತಾಂತ್ರಿಕ ಸಮಸ್ಯೆಯಿಂದಾಗಿ ಹಿಂದುಳಿಯಬೇಕಾಯಿತು.
ಇದೇ ವೇಳೆ ಮೂರು ಬಾರಿ ಎಪಿಆರ್‌ಸಿ ಚಾಂಪಿಯನ್ ಪಟ್ಟ ಗೆದ್ದಿದ್ದ ಗೌರವ ಗಿಲ್ ಹಾಗೂ ಮೂಸಾ ಶರೀಫ್ ಶನಿವಾರ ತಾಂತ್ರಿಕ ಸಮಸ್ಯೆಯಿಂದಾಗಿ ನಿವೃತ್ತಿ ಹೊಂದಿದ್ದರು, ಭಾನುವಾರ ಮತ್ತೆ ಸ್ಪರ್ಧೆಗಿಳಿದು ಎರಡನೇ ಸ್ಥಾನ ಗಳಿಸುವಲ್ಲಿ ಯಶಸ್ವಿಯಾದರು.
ಮದ್ರಾಸ್ ಮೋಟಾರ್ ಸ್ಪೋರ್ಟ್ಸ್ ಕ್ಲಬ್ ಆಯೋಜಿಸಿದ್ದ ದಕ್ಷಿಣ ಭಾರತ ರಾಲಿಯಲ್ಲಿ ಕಡೂರ್ ಸಮಗ್ರ ಚಾಂಪಿಯನ್ ಪಟ್ಟ ಗೆದ್ದುಕೊಂಡರು. ಡೀನ್ ಮಸ್ಕರೆನ್ಹಾಸ್ ಮತ್ತು ಗಗನ್ ಕರುಂಬಯ್ಯ ಎರಡನೇ ಸ್ಥಾನ ಗಳಿಸಿದರೆ, ರಾಷ್ಟ್ರೀಯ ಚಾಂಪಿಯನ್ ಪಟ್ಟ ಗೆಲ್ಲಲು ಠಕೂರ್‌ಗೆ ಮೂರನೇ ಸ್ಥಾನ ಸಾಕಾಗಿತ್ತು.
ಸೋಲಿನಿಂದ ಪಾಠ ಕಲಿತೆವು: ಕರ್ಣ
ಮೊದಲ ಬಾರಿಗೆ ಎಪಿಆರ್‌ಸಿಯಲ್ಲಿ ಜಯ ಗಳಿಸಿದ ನಂತರ ಮಾತನಾಡಿದ ಕರ್ಣ ಕಡೂರ್, “2018ರ ನಂತರ ಇದು ನನ್ನ ಮೊದಲ ಜಯ. ಎಲ್ಲ ಅಡೆತಡೆಗಳನ್ನು ದಾಟಿ ಜಯ ಗಳಿಸಿಸುರುವುದು ಖುಷಿಕೊಟ್ಟಿದೆ. ಇದು ಚೆನ್ನೈಯಲ್ಲಿ ನನ್ನ ಮೊದಲ ಜಯ ಹಾಗೂ ಎಪಿಆರ್‌ಸಿಯಲ್ಲು ಕೂಡ. ಇದಕ್ಕಿಂತ ಉತ್ತಮವಾದುದುನ್ನು ನಾನು ನಿರೀಕ್ಷಿಸುವುದಿಲ್ಲ. ಕೊನೆಯ ಕ್ಷಣದಲ್ಲಿ ಆದ ಗೊಂದಲಗಳ ನಡುವೆಯೂ ನಾವು ಯಶಸ್ಸು ಕಂಡಿದ್ದೇವೆ. ಹಿಂದಿನ ಎರಡು ರಾಲಿಗಳಲ್ಲಿ ನಾವು ಫಿನಿಶ್ ಮಾಡುವಲ್ಲಿ ವಿಫಲರಾಗಿದ್ದೆವು, ಅದರಿಂದ ಸಾಕಷ್ಟು ಪಾಠ ಕಲಿತೆವು,” ಎಂದು ಹೇಳಿದರು.
ಕರ್ಣ ಅವರು ಅರ್ಕಾ ಮೋಟರ್ ಸ್ಪೋರ್ಟ್ಸ ತಂಡಕ್ಕೆ ಧನ್ಯವಾದ ಹೇಳಿದ್ದಾರೆ ಮಾತ್ರವಲ್ಲದೆ, ಇದಕ್ಕೆ ಸಂಪೂರ್ಣ ಬೆಂಬಲ ನೀಡಿದ ಎನ್. ಲೀಲಾಧರನ್ ಅವರನ್ನೂ ಸ್ಮರಿಸಿದ್ದಾರೆ.
ಇನ್ನೊಂದು ಖುಷಿಯ ಸಂಗತಿಯೆಂದರೆ ಅರ್ಕಾ ಮೋಟರ್ ಸ್ಪೋರ್ಟ್ಸ್‌ನ ಪ್ರಗತಿ ಗೌಡ ಮತ್ತು ತ್ರಿಶಾ ಅಲೊನ್ಕರ್ ಅವರು ಐಎನ್‌ಆರ್‌ಸಿ ಜೂನಿಯರ್ ವಿಭಾಗದಲ್ಲಿ ಅಗ್ರ ಸ್ಥಾನ ಗಳಿಸಿದ್ದಾರೆ.