Saturday, October 12, 2024

ಸ್ಕೀಯಿಂಗ್‌ ಸಾಧಕಿ ಭವಾನಿಗೆ ಕ್ರೀಡಾ ಸಚಿವರಿಂದ ಸನ್ಮಾನ

ಬೆಂಗಳೂರು: ಅಂತಾರಾಷ್ಟ್ರೀಯ ಸ್ಕೀಯಿಂಗ್‌ ಚಾಂಪಿಯನ್‌ಷಿಪ್‌ನಲ್ಲಿ ಭಾರತವನ್ನು ಪ್ರತಿನಿಧಿಸಿರುವ ಮತ್ತು ರಾಷ್ಟ್ರೀಯ ಮಟ್ಟದಲ್ಲಿ ಪದಕ ಗೆದ್ದಿರುವ ದಕ್ಷಿಣ ಭಾರತದ ಮೊದಲ ಸ್ಕೀಯಿಂಗ್‌ ಪಟು ಎಂಬ ಹೆಗ್ಗಳಿಕೆಗೆ ಪಾತ್ರರಾಗಿರುವ ಕರ್ನಾಟಕದ ಕೊಡಗಿನ ಸಾಧಕಿ ಭವಾನಿ ತೆಕ್ಕಡ ನಂಜುಂಡ ಅವರನ್ನು ಕರ್ನಾಟಕ ರಾಜ್ಯ ರೇಷ್ಮೆ, ಯುವ ಸಬಲೀಕರಣ ಮತ್ತು ಕ್ರೀಡಾ ಸಚಿವರಾದ ಡಾ. ಕೆ.ಸಿ. ನಾರಾಯಣ ಗೌಡ ಅವರು ಸನ್ಮಾನಿಸಿದರು.

ಒಂದು ಚಿನ್ನದ ಪದಕ, ಐದು ಬೆಳ್ಳಿ ಹಾಗೂ ಒಂದು ಕಂಚಿನ ಪದಕ ಗೆದ್ದಿರುವ ಭವಾನಿ ಈಗ ದಕ್ಷಿಣ ಭಾರತದ ಉದಯೋನ್ಮುಖ ಸ್ಕೀಯಿಂಗ್‌ ತಾರೆ ಎನಿಸಿದ್ದಾರೆ.

ಗುರುವಾರ ನಡೆದ ಸನ್ಮಾನ ಕಾರ್ಯಕ್ರಮದಲ್ಲಿ ಕಾರ್ಮಿಕ ಸಚಿವ ಶಿವರಾಮ್‌ ಹೆಬ್ಬಾರ್‌, ಯುವಸಬಲೀಕರಣ ಮತ್ತು ಕ್ರೀಡಾ ಇಲಾಖೆಯ ಅಪರ ಕಾರ್ಯದರ್ಶಿ ಡಾ. ಶಾಲಿನಿ ರಜನೀಶ್‌, ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆಯ ಆಯುಕ್ತರಾದ ಡಾ. ಎಚ್‌.ಎನ್‌. ಗೋಪಾಲಕೃಷ್ಣ ಮೊದಲಾದ ಪ್ರಮುಖರು ಹಾಜರಿದ್ದರು.

ಭವಾನಿ ಅವರು ರಾಷ್ಟ್ರೀಯ ಕ್ರಾಸ್‌ಕಂಟ್ರಿ ಚಾಂಪಿಯನ್‌ಷಿಪ್‌ನಲ್ಲಿ ಪದಕ ಗೆದ್ದ ದಕ್ಷಿಣ ಭಾರತದ ಮೊದಲ ಸ್ಕೀಯರ್‌ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ.  ಜನವರಿಯಲ್ಲಿ ಐಸ್ಲೆಂಡ್‌ನಲ್ಲಿ ನಡೆದ ಅಂತಾರಾಷ್ಟ್ರೀಯ ಎಫ್‌ಐಎಸ್‌ ಸ್ಕೀಯಿಂಗ್‌ ಕ್ರಾಸ್‌ ಕಂಟ್ರಿ ಚಾಂಪಿಯನ್‌ಷಿಪ್‌ನಲ್ಲಿ ಭಾರತವನ್ನು ಪ್ರತಿನಿಧಿಸಿದ್ದರು, ನಂತರ ಮಾರ್ಚ್‌ನಲ್ಲಿ  ರಾಷ್ಟ್ರೀಯ ಕ್ರಾಸ್‌ ಕಂಟ್ರಿ ಮತ್ತು ವಿಂಟರ್‌ ಬಯಾಥ್ಲಾನ್‌ ಚಾಂಪಿಯನ್‌ಷಿಪ್‌ನಲ್ಲಿ ಪ್ರತಿನಿಧಿಸಿದ್ದ ದಕ್ಷಿಣ ಭಾರತದ ಮೊದಲ ಸ್ಪರ್ಧಿ ಎನಿಸಿದ್ದರು.

ಜಮ್ಮು ಕಾಶ್ಮೀರದ ಗುಲ್ಮಾರ್ಗ್‌ನಲ್ಲಿ ನಡೆದ ರಾಷ್ಟ್ರೀಯ ಕ್ರಾಸ್‌ಕಂಟ್ರಿ ಸ್ಕೀಯಿಂಗ್‌ ಚಾಂಪಿಯನ್‌ಷಿಪ್‌ನಲ್ಲಿ ಭವಾನಿ, ಒಂದು ಚಿನ್ನ ಹಾಗೂ ಎರಡು ಬೆಳ್ಳಿ ಪದಕ ಗೆದ್ದಿದ್ದರು. ರಾಷ್ಟ್ರೀಯ ಬಯಥ್ಲಾನ್‌ ಚಾಂಪಿಯನ್‌ಷಿಪ್‌ನಲ್ಲಿ ಭವಾನಿ, 10 ಮತ್ತು 5 ಕಿಮೀ ರೇಸ್‌ನಲ್ಲಿ ಎರಡು ಬೆಳ್ಳಿಯ ಪದಕ ಗೆದ್ದಿರುತ್ತಾರೆ. ಇತ್ತೀಚಿಗೆ ಹಿಮಾಚಲ ಪ್ರದೇಶದಲ್ಲಿ ನಡೆದ ಆಲ್‌ ಇಂಡಿಯಾ ಓಪನ್‌ ಸ್ಕೀ ಮತ್ತು ಸ್ನೋ ಬೋರ್ಡ್‌ ಚಾಂಪಿಯನ್‌ಷಿಪ್‌ನಲ್ಲಿ ಬೆಳ್ಳಿ ಮತ್ತು ಕಂಚಿನ ಪದಕ ಗೆದ್ದಿರುತ್ತಾರೆ.

Related Articles