Friday, February 23, 2024

ಕುಣಿಗಲ್‌ನಲ್ಲಿ ಕ್ರೀಡೆಗೆ ಜೀವ ತುಂಬಿದ ಕೃಷಿಕ, ಕ್ರೀಡಾ ಗುರು ರಂಗನಾಥ

ಸೋಮಶೇಖರ್‌ ಪಡುಕರೆ, ಬೆಂಗಳೂರು:

ಕುಣಿಗಲ್‌ಗೆ ಕ್ರೀಡೆಯಲ್ಲಿ ಈಗ ರಂಗನಾಥನ ಕೃಪೆ. ಕ್ರಿಕೆಟಿಗನಾಗಿ ತಾನು ಹುಟ್ಟಿದ ಊರಿಗೆ ಕೀರ್ತಿ ತರಬೇಕೆಂದು ಬೆಂಗಳೂರು ಸೇರಿದ ಯುವಕನಿಗೆ ಅಲ್ಲಿ ಸಿಕ್ಕಿದ್ದು ಬರೇ ನಿರಾಸೆ. ನಗರದಲ್ಲಿ ಕೆಲಸ ಮಾಡುತ್ತ ಸಾಮಾನ್ಯನಾಗುವುದಕ್ಕಿಂತ ಹಳ್ಳಿಯಲ್ಲಿ ಮಕ್ಕಳಿಗೆ ಕ್ರೀಡಾ ತರಬೇತಿ ನೀಡಿದರೆ ನಾಳೆ ನಮ್ಮ ಹಳ್ಳಿಯಿಂದ ಒಂದು ಮಗು ಜಾಗತಿಕ ಮಟ್ಟದಲ್ಲಿ ಮಿಂಚಿದರೆ ಬದುಕು ಧನ್ಯ ಎಂದರಿತ ಆ ಯುವಕ ಬೆಂಗಳೂರನ್ನು ತೊರೆದು ಕುಣಿಗಲ್‌ನಲ್ಲಿ ಕ್ರೀಡಾ ಅಕಾಡೆಮಿ ಸ್ಥಾಪಿಸಿ, ಊರವರ ಪ್ರೀತಿಗೆ ಪಾತ್ರರಾಗಿದ್ದಾರೆ. ತುಮಕೂರು ಜಿಲ್ಲೆಯ ಕುಣಿಗಲ್‌ನಲ್ಲಿ ಕೃಷಿಯ ಜೊತೆಯಲ್ಲಿ ಕ್ರೀಡಾ ತರಬೇತಿ ನೀಡುತ್ತಿರುವ ರಂಗನಾಥ ಅವರ ಬದುಕಿನ  ಕತೆಯನ್ನು ಕೇಳಿದಾಗ ಆರಂಭದಲ್ಲಿ ಬೇಸರ ಎನಿಸಿದರೂ ಕೊನೆಯಲ್ಲಿ ಸುಖಾಂತ್ಯವಿದೆ. ಯಶಸ್ಸಿನ ಹಾದಿಯಲ್ಲಿ ಸ್ಪೂರ್ತಿಯ  ನಿಲ್ದಾಣವಿದೆ.

ಕುಣಿಗಲ್‌ ಪೇಟೆಯಿಂದ ಅನತಿ ದೂರದಲ್ಲೇ ಇರುವ ರಂಗನಾಥ ಸ್ಪೋರ್ಟ್ಸ್‌ ಅಕಾಡೆಮಿಯನ್ನು ಪ್ರವೇಶಿಸಿದಾಗ ಸಿಕ್ಕಿದ್ದು ಕ್ರೀಡಾ ಸ್ಫೂರ್ತಿಯ ಯುವಕ, ಪ್ರಧಾನ ಕೋಚ್‌ ರಂಗನಾಥ್‌. ಬ್ಯಾಡ್ಮಿಂಟನ್‌, ಈಜು, ಸ್ಕೇಟಿಂಗ್‌ ಹಾಗೂ ಕ್ರಿಕೆಟ್‌ ತರಬೇತಿ ನೀಡುತ್ತಿರುವ ರಂಗನಾಥ್‌ ಅವರಿಗೆ ಸಾಥ್‌ ನೀಡುತ್ತಿರುವುದು ಪತ್ನಿ, ಈಜು ತಾರೆ ಅಕ್ಷತಾ ರಂಗನಾಥ್‌.

ಬೆಂಗಳೂರಿನ ನಿರಾಸೆಯ ಕಡಲಲ್ಲಿ:

ರಂಗನಾಥ್‌ ಒಬ್ಬ ಉತ್ತಮ ಕ್ರಿಕೆಟಿಗ, ಬೆಂಗಳೂರು ವಿಶ್ವವಿದ್ಯಾನಿಯಲ ಮಟ್ಟದಲ್ಲಿ ಆಡಿದವರು. ಕುಣಿಗಲ್‌ನಲ್ಲಿ ಕಾಲೇಜು ಶಿಕ್ಷಣ ಮುಗಿಸಿ ಕ್ರಿಕೆಟಿಗನಾಗಬೇಕೆಂಬ ಕನಸಿನ ಕಿಟ್‌ ಹೊತ್ತು ಬೆಂಗಳೂರು ಸೇರಿದರು. ಅಲ್ಲಿ ಅವರಿಗೆ ಆಡಲು ಸಿಕ್ಕಿದ್ದು ನಿರಾಸೆಯ ಇನ್ನಿಂಗ್ಸ್‌. ಆದರೆ ಶಿಕ್ಷಣವನ್ನು ನಿಲ್ಲಿಸಲಿಲ್ಲ. ಅರ್ಥಶಾಸ್ತ್ರದಲ್ಲಿ ಸ್ನಾತಕೋತ್ತರ ಪದವಿ, ಬಿಎಡ್‌ ಪದವೀಧರ, ಬಿಪಿಎಡ್‌ ಪದವೀಧರ, ಭಾರತೀಯ ಕ್ರೀಡಾಪ್ರಾಧಿಕಾರದಿಂದ ಈಜಿನಲ್ಲಿ ಕೋಚ್‌ ತರಬೇತಿ ಹೀಗೆ ಉದ್ಯೋಗ ಪಡೆಯಲು ಎಲ್ಲ ಅರ್ಹತೆಗಳೂ ಇದ್ದವು. ಆದರೆ ನಿರೀಕ್ಷಿಸಿದ್ದು ಯಾವುದೂ ಸಿಗಲಿಲ್ಲ. ಕ್ರೀಡೆಯಲ್ಲಿ ಪಳಗಿದ್ದರಿಂದ ದೈಹಿಕ ಶಿಕ್ಷಕನಾಗಬೇಕೆಂದು ಶಾಲೆಯೊಂದಕ್ಕೆ ಸೇರಿದರು. ಅಲ್ಲಿ ಕ್ರೀಡೆಗೆ ಮಹತ್ವವೇ ಕೊಡುತ್ತಿರಲಿಲ್ಲ. “ಮಕ್ಕಳನ್ನು ಈಜುಪಟುಗಳನ್ನಾಗಿ ಮಾಡಿ ಅಂದರು, ಒಪ್ಪಿದೆ. ದಿನಕ್ಕೆ ಒಂದು ತರಗತಿಗೆ ಸಿಗುವುದು ಅರ್ಧ ಗಂಟೆ. ಈಜುಕೊಳಕ್ಕೆ ಹೋಗಲು ಐದು ನಿಮಿಷ, ಬರಲು ಐದು ನಿಮಿಷ, ಮಕ್ಕಳು ಡ್ರೆಸ್‌ ಬದಲಾಯಿಸಲು ಹತ್ತು ನಿಮಿಷ, ಮೂವತ್ತು ಮಕ್ಕಳಿಗೆ ಉಳಿದ ಹತ್ತು ನಿಮಿಷದಲ್ಲಿ ಈಜು ಕಲಿಸುವುದು ಹೇಗೆ?” ಎಂದು ಪ್ರಶ್ನಿಸುತ್ತಾರೆ ರಂಗನಾಥ್‌.

ಹೆತ್ತವರಲ್ಲಿ ಒಬ್ಬರು ಈ ಶಾಲೆಯ ಮಕ್ಕಳು ಈಜಿನಲ್ಲಿ ಚಾಂಪಿಯನ್‌ ಪಟ್ಟ ಗೆಲ್ಲುತ್ತಿಲ್ಲ ಎಂದು ಹೇಳಿದಾಗ ರಂಗನಾಥ್‌ಗೆ ಬೇಸರವಾಯಿತು. ಬೆಂಗಳೂರು ತೊರೆದು ಊರಗೆ ಬಂದು ಹಳ್ಳಿಗೆ ಬಂದು ಕೃಷಿ ಮಾಡಿಕೊಂಡು ಜೊತೆಯಲ್ಲಿ ಕ್ರೀಡಾ ತರಬೇತಿ ನೀಡುವ ಮನಸ್ಸು ಮಾಡಿದರು. 2009ರಿಂದ ಕುಣಿಗಲ್‌ಗೆ ಬಂದು ಇಲ್ಲಿನ ಸುತ್ತಮುತ್ತಲಿನ ಐದು ಶಾಲೆಗಳಲ್ಲಿ ಕ್ರೀಡಾ ತರಬೇತಿ ನೀಡುತ್ತಿದ್ದಾರೆ. ಸ್ಕೇಟಿಂಗ್‌, ಕ್ರಿಕೆಟ್‌, ಈಜಿನಲ್ಲಿ ಮಕ್ಕಳು ರಾಷ್ಟ್ರ ಮಟ್ಟದಲ್ಲಿ ಮಿಂಚುತ್ತಿದ್ದಾರೆ. ಕ್ರೀಡಾ ಕೃಷಿಯ ಜೊತೆಯಲ್ಲಿ ನೈಜ ಕೃಷಿಯೂ ಉತ್ತಮವಾಗಿ ಸಾಗಿದ್ದು, ಇತರರ ಮಕ್ಕಳಿಗೆ ತರಬೇತಿ ನೀಡುವುದರ ಜೊತೆಯಲ್ಲಿ ರಂಗನಾಥ್‌ ತಮ್ಮ ಮಗನನ್ನು ಚಾಂಪಿಯನ್‌ ಕ್ರೀಡಾಪಟುವನ್ನಾಗಿ ಮಾಡಿದ್ದಾರೆ.

ಕೆಲಸ ಕೊಡಿ ಎಂದು ಕೇಳಿಲ್ಲ:

ಬೆಂಗಳೂರಿನಿಂದ ಆಗಮಿಸಿ ರಂಗನಾಥ್‌ ಕುಣಿಗಲ್‌ ನಗರಕ್ಕೆ ತಾಗಿಕೊಂಡಿರುವ ಬಯಲು ರಂಗಮಂಟಪದಲ್ಲಿ ಸ್ಕೇಟಿಂಗ್‌ ತರಬೇತಿ ಆರಂಭಿಸಿದರು. ವಾರಾಂತ್ಯದಲ್ಲಿ ಕುಣಿಗಲ್‌ನ ರಂಗಸ್ವಾಮಿ ಬೆಟ್ಟದಲ್ಲಿ ಸ್ಕೇಟಿಂಗ್‌ ತರಬೇತಿ ನೀಡಲಾರಂಭಿಸಿದರು. ಇದು ಸುತ್ತಮುತ್ತಲಿನ ಶಾಲೆಗಳನ್ನು ಆಕರ್ಷಿಸುವಂತೆ ಮಾಡಿತು, ಹೆತ್ತವರು ಶಾಲೆಗಳಲ್ಲಿ ತಮ್ಮ ಮಕ್ಕಳಿಗೂ ತರಬೇತಿ ನೀಡುವಂತೆ ಮುಖ್ಯೋಪಾದ್ಯಾಯರಲ್ಲಿ ವಿನಂತಿಸಿಕೊಂಡರು. ಪರಿಣಾಮ ರಂಗನಾಥ್‌ ಮಾಗಡಿ, ಕುಣಿಗಲ್‌ಮ ಮದ್ದೂರು, ತುರುವೇಕೆರೆ ಶಾಲೆಗಳಲ್ಲಿ ಬಿಡುವಿಲ್ಲದೆ ತರಬೇತಿ ನೀಡುತ್ತಿದ್ದಾರೆ. ಆದರೆ ತಮ್ಮ ಉಸಿರಾದ ಕೃಷಿಗೆ ಮೊದಲ ಆದ್ಯತೆ ನೀಡುತ್ತಿದ್ದಾರೆ.

ದಸರಾ ಚಾಂಪಿಯನ್‌:

ರಂಗನಾಥ್‌ ಉತ್ತಮ ಈಜುಗಾರರು. ದಸರಾ ಚಾಂಪಿಯನ್‌ಷಿಪ್‌ನಲ್ಲಿ ಚಿನ್ನದ ಪದಕ ಗೆದ್ದ ಈಜುಪಟು. ತಾನು ಕಲಿತದ್ದನ್ನು ತನ್ನೂರ ಮಕ್ಕಳಿಗೆ ಕಲಿಸಬೇಕೆಂಬ ಉತ್ಕಟ ಹಂಬಲ ಹೊಂದಿದ್ದರು. ಆದರೆ ಕುಣಿಗಲ್‌ನಲ್ಲಿ ಈಜುಕೊಳ ಸ್ಥಾಪಿಸುವುದು ಕಷ್ಟಕರವಾಗಿತ್ತು. ಆದ್ದರಿಂದ ಬಾಡಿಗೆ ಈಜುಕೊಳದಲ್ಲಿ ತರಬೇತಿ ನೀಡುತ್ತಿದ್ದಾರೆ. ಪತ್ನಿ ಅಕ್ಷತಾ ಈಜು ತರಬೇತಿ ಮತ್ತು ಸ್ಕೇಟಿಂಗ್‌ ತರಬೇತಿಯಲ್ಲಿ ಪತಿಗೆ ನೆರವಾಗುತ್ತಿದ್ದಾರೆ.

ಖುಷಿಕೊಟ್ಟ ಸಾಧನೆ:

ರಂಗನಾಥ್‌ ಸ್ಪೋರ್ಟ್ಸ್‌ ಅಕಾಡೆಮಿಯಲ್ಲಿ ತರಬೇತಿ ಪಡೆದ 16 ಸ್ಕೇಟರ್‌ಗಳು ಸ್ಕೂಲ್‌ ಗೇಮ್ಸ್‌ ಫೆಡರೇಷನ್‌ ಆಫ್‌ ಇಂಡಿಯಾ ಆಯೋಜಿಸುವ ರಾಷ್ಟ್ರಮಟ್ಟದ ಸ್ಪರ್ಧೆಗಳಲ್ಲಿ ಭಾಗವಹಿಸಿ ಉತ್ತಮ ಸಾಧನೆ ಮಾಡಿದ್ದಾರೆ. ವಿದ್ಯಾರ್ಥಿಗಳಾದ ಸುಹಾಸ್‌ ಮತ್ತು ಚಂದನ್‌ ವಿವಿಧ ಹಂತದ ಈಜು ಸ್ಪರ್ಧೆಗಳಲ್ಲಿ ಭಾಗವಹಿಸಿರುತ್ತಾರೆ. ಈ ವರ್ಷದ ಜಿಲ್ಲಾ ಮಟ್ಟದ ಬ್ಯಾಡ್ಮಿಂಟನ್‌ ಸ್ಪರ್ಧೆಯಲ್ಲಿ ರಂಗನಾಥ ಸ್ಪೋರ್ಟ್ಸ್‌ ಅಕಾಡೆಮಿಯ ಸ್ಪರ್ಧಿಗಳು ಚಾಂಪಿಯನ್‌ ಪಟ್ಟ ಗೆದ್ದು ರಾಜ್ಯಮಟ್ಟಕ್ಕೆ ಆಯ್ಕೆಯಾಗಿರುತ್ತಾರೆ. ಕ್ರಿಕೆಟ್‌ನಲ್ಲಿ ಇಬ್ಬರು ಎಸ್‌ಜಿಎಫ್‌ಐ ಹಂತದಲ್ಲಿ ಆಡಿರುತ್ತಾರೆ. ಬ್ಯಾಡ್ಮಿಂಟನ್‌ಲ್ಲಿ 24 ಆಟಗಾರರು ತರಬೇತಿ ಪಡೆಯುತ್ತಿದ್ದಾರೆ, ಕ್ರಿಕೆಟ್‌ನಲ್ಲಿ 50ಕ್ಕೂ ಹೆಚ್ಚು ಯುವ ಕ್ರಿಕೆಟಿಗರಿದ್ದಾರೆ, ಅಕಾಡೆಮಿಯಲ್ಲಿ ಆಧುನಿಕ ಸೌಲಭ್ಯಗಳನ್ನು ಕಲ್ಪಿಸಲಾಗಿದೆ. “ಮಕ್ಕಳೊಂದಿಗೆ ಬೆರೆತು ತರಬೇತಿ ನೀಡುವ ಈ ಖುಷಿ ಯಾವುದೋ ಶಾಲೆಯಲ್ಲಿ ದೈಹಿಕ ಶಿಕ್ಷಕನಾಗಿರುತ್ತಿದ್ದರೆ ಸಿಗುತ್ತಿರಲಿಲ್ಲ. ಕ್ರೀಡೆಗೆ ಪ್ರೋತ್ಸಾಹ ನೀಡದ ಶಾಲೆಯಲ್ಲಿ ದೈಹಿಕ ಶಿಕ್ಷಕನಾಗಿ ಮಕ್ಕಳ ಶೂ ಸರಿ ಇದೆಯಾ, ಅಂಗಿ ಕಲೆಯಾಗಿದೆಯಾ ಎಂಬುದನ್ನು ನೋಡಿಕೊಳ್ಳುವುದಕ್ಕಿಂತ ಹಳ್ಳಿಗಳಲ್ಲಿ ಈ ರೀತಿಯ ಕೆಲಸ ಮಾಡಿದ್ದಕ್ಕೆ ತೃಪ್ತಿ ಇದೆ,” ಎನ್ನುತ್ತಾರೆ ರಂಗನಾಥ್‌.

ನನ್ನಿಂದಾಗದ ಸಾಧನೆ ನಮ್ಮೂರಿನ ಯುವಕರು ಮಾಡಲಿ:

ರಂಗನಾಥ್‌ ಅವರ ಕ್ರೀಡಾ ಅನುಭವ, ಕಲಿತ ವಿದ್ಯೆಗೆ ಎಲ್ಲಿಯಾದರೂ ಉತ್ತಮ ಉದ್ಯೋಗ ಸಿಕ್ಕಿರುತ್ತಿತ್ತು. ಆದರೆ ಕ್ರೀಡೆಯಲ್ಲಿ ಸಾಧನೆ ಮಾಡಬೇಕೆಂಬ ಅವರ ಛಲ ಕೋಚ್‌ ಆಗಿ ಮುಂದುವರಿಯಿತು. ಪರಿಣಾಮ ಇಂದು ರಾಜ್ಯ ಮಟ್ಟದಲ್ಲಿ ರಂಗನಾಥ್‌ ಸ್ಪೋರ್ಟ್ಸ್‌ ಕ್ಲಬ್‌ ಗಮನ ಸೆಳೆದಿದೆ, ಇದರ ಹಿಂದೆ ಇಬ್ಬರು ನೈಜ ಚಾಂಪಿಯನ್ನರು ಕಾರ್ಯನಿರ್ವಹಿಸುತ್ತಿದ್ದಾರೆ ಎಂಬುದು ಗಮನಾರ್ಹ. “ಹಳ್ಳಿಯ ಮಕ್ಕಳು ಉತ್ತಮ ಕನಸುಗಳನ್ನು ಕಾಣುತ್ತಾರೆ, ಆದರೆ ಅವರಿಗೆ ಕನಸು ನನಸಾಗಿಸುವಲ್ಲಿ ಉತ್ತಮ ಮಾರ್ಗದರ್ಶನ ಸಿಗುವುದಿಲ್ಲ. ಇದು ಎಲ್ಲ ಊರಿನ ಸಮಸ್ಯೆಯಲ್ಲ. ಕೆಲವೊಂದು ಊರುಗಳಲ್ಲಿ ಉತ್ತಮ ಸೌಲಭ್ಯ ಇದ್ದಿರಲೂ ಬಹುದು. ಒಬ್ಬ ಕ್ರೀಡಾಪಟುವಾಗಿ ನನಗೆ ಕುಣಿಗಲ್‌ಗೆ ಹೆಸರು ತರಲಾಗಲಿಲ್ಲ. ಕೋಚ್‌ ಆಗಿ ಆ ಕೆಲಸ ಮಾಡುತ್ತೇನೆಂಬ ಛಲವಿದೆ. ಆ ನಿಟ್ಟಿನಲ್ಲಿ ನಿರಂತರ ಶ್ರಮವಹಿಸುವೆ,” ಎನ್ನುತ್ತಾರೆ ರಂಗನಾಥ್‌.

“ನಮ್ಮ ಉದ್ದೇಶ ಸ್ಪಷ್ಟವಾಗಿದೆ. ನಾವು ತರಬೇತಿ ನೀಡುತ್ತಿರುವ ಕ್ರೀಡೆಗಳಲ್ಲಿ ಯುವಕರು ರಾಷ್ಟ್ರ ಮತ್ತು ಅಂತಾರಾಷ್ಟ್ರೀಯ ಮಟ್ಟದಲ್ಲಿ ಮಿಂಚಲಿ. ಕ್ರೀಡೆ ಎಂದರೆ ಕೇವಲ ಪದಕ ಗಳಿಕೆಯೊಂದೇ ಗುರಿಯಲ್ಲ. ಉತ್ತಮ ಆರೋಗ್ಯ, ದೈಹಿಕ ಕ್ಷಮತೆ ಇದು ಓದುವುದಕ್ಕೂ ನೆರವಾಗುತ್ತದೆ, ಕಠಿಣ ಸವಾಲುಗಳನ್ನು ಎದುರಿಸುವಲ್ಲಿಯೂ ಆತ್ಮವಿಶ್ವಾಸ ಹೆಚ್ಚಿಸುತ್ತದೆ. ಕೃಷಿಯೊಂದಿಗೆ ಕ್ರೀಡೆಯನ್ನು ಬೆಳೆಸುತ್ತಿದ್ದೇನೆ ಎಂಬ ಖುಷಿ ನಮ್ಮಿಬ್ಬರಿಗೂ ಇದೆ,” ಎನ್ನುವ ರಂಗನಾಥ್‌ ಅವರ ಮಾತಿನಲ್ಲಿ ಸಂತೃಪ್ತಿ ಮತ್ತು ಸಂತೋಷವಿದೆ.

ಈ ರೀತಿ ಕ್ರೀಡೆಗೆ ಪ್ರೋತ್ಸಾಹ ನೀಡುವ ಯುವ ಮನಸ್ಸುಗಳಿಗೆ ಸರಕಾರ ಪ್ರೋತ್ಸಾಹ ನೀಡಿದರೆ ಗ್ರಾಮೀಣ ಪ್ರದೇಶದಿಂದ ಇನ್ನೂ ಹೆಚ್ಚಿನ ಪ್ರತಿಭೆಗಳನ್ನು ರಾಷ್ಟ್ರ ಮಟ್ಟಕ್ಕೆ ಕೊಂಡೊಯ್ಯಬಹುದು,

Related Articles