Saturday, October 12, 2024

ಎಫ್‌ಸಿ ಬೆಂಗಳೂರು ಯುನೈಟೆಡ್‌ಗೆ 11-0 ಅಂತರದ ಜಯ

ಬೆಂಗಳೂರು, ಅಕ್ಟೋಬರ್‌ 5: ಎಡಿಇಎಫ್‌ಸಿ ವಿರುದ್ಧ 11-0 ಅಂತರದಲ್ಲಿ ಜಯ ಗಳಿಸಿದ ಎಫ್‌ಸಿ ಬೆಂಗಳೂರು ಯುನೈಟೆಡ್‌ ಬೆಂಗಳೂರು ಫುಟ್ಬಾಲ್‌ ಅಂಗಣದಲ್ಲಿ ನಡೆದ ಬಿಡಿಎಫ್‌ಎ ಸೂಪರ್‌ ಡಿವಿಜನ್‌ ಚಾಂಪಿಯನ್‌ಷಿಪ್‌ನಲ್ಲಿ ದಸರಾ ಹಬ್ಬವನ್ನು ಅತ್ಯಂತ ಸಂಭ್ರಮದಿಂದ ಆಚರಿಸಿತು.

ಲಾಲ್‌ರಾಮ್ಜುವಾ ಖಿಯಾಂಗ್ಟೆ (14ನೇ ನಿಮಿಷ), ಶಾಜನ್‌ ಫ್ರಾಂಕ್ಲಿನ್‌ (16ನೇ ನಿಮಿಷ), ಇರ್ಫಾನ್‌ ಯರ್ವಾಡ್‌ (33 ಮತ್ತು 55ನೇ ನಿಮಿಷ), ಬೆದಾಶ್ವೋರ್‌ ಸಿಂಗ್‌ (38 ಮತ್ತು 64ನೇ ನಿಮಿಷ), ಮೊಹಮ್ಮದ್‌ ಡೋಹ್‌ (59 ಮತ್ತು 81ನೇ ನಿಮಿಷ) ಮತ್ತು ಚೆಸ್ಟರ್ಪೌಲ್‌ ಲಿಂಗ್ಡೋ (73ನೇ ನಿಮಿಷ) ವಿಜೇತ ತಂಡದ ಪರ ಗೋಲು ಗಳಿಸಿದರೆ ಎರಡು ಗೋಲುಗಳನ್ನು ಎದುರಾಳಿ ತಂಡ ಉಡುಗೊರೆಯಾಗಿ ನೀಡಿತು.

ಎಫ್‌ಸಿ ಬೆಂಗಳೂರು ಯುನೈಟೆಡ್‌ ತನ್ನ ಎಂದಿನ ಶೈಲಿಯಂತೆ ಆರಂಭದಿಂದಲೂ ಪಂದ್ಯದ ಮೇಲೆ ಹಿಡಿತ ಸಾಧಿಸಿತು. ಗೋಲು ಗಳಿಸಲು ಹಲವಾರು ಅವಕಾಶಗಳನ್ನು ನಿರ್ಮಿಸಿದರೂ 11ನೇ ನಿಮಿಷದಲ್ಲಿ ಸ್ಕೋರ್‌ಬೋರ್ಡ್‌ನಲ್ಲಿ ಎಫ್‌ಸಿಬಿಯು ಗೋಲು ಗಳಿಸುವಲ್ಲಿ ಯಶಸ್ವಿಯಾಯಿತು. ಅಶೋಕ್‌ ಸಿಂಗ್‌ ನೀಡಿದ ಪಾಸನ್ನು ತಪ್ಪಾಗಿ ತುಳಿದ ಎಡಿಇ ಡಿಫೆಂಡರ್‌ ಎಫ್‌ಸಿಬಿಯುಗೆ ಉಡುಗೊರೆಯಾಗಿ ಮೊದಲ ಗೋಲು ನೀಡಿದರು. 14ನೇ ನಿಮಿಷದಲ್ಲಿ ಲಾಲ್‌ರಾಮ್ಜುವಾ ಖಿಯಾಂಗ್ಟೆ ಬಾಕ್ಸ್‌ನ ಹೊರಗಡೆಯಿಂದ ತುಳಿದ ಫ್ರೀ ಕಿಕ್‌ ಅನ್ನು ಎಡಿಇ ಗೋಲ್‌ಕೀಪರ್‌ ಸಮರ್ಪಕವಾಗಿ ಅರಿಯುವಲ್ಲಿ ವಿಫಲರಾಗಿ ಎರಡನೇ ಗೋಲು ದಾಖಲಾಯಿತು. ಎರಡು ನಿಮಿಷಗಳು ಕಳೆಯುತ್ತಿದ್ದಂತೆ ಸೆಲ್ವಿನ್‌ ಮಿರಾಂಡ ನೀಡಿದ ಪಾಸ್‌ ಮೂಲಕ ಶಾಜಾನ್‌ ಫ್ರಾಂಕ್ಲಿನ್‌ ತಂಡದ ಮೂರನೇ ಗೋಲು ದಾಖಲಿಸಿದರು.

ಎಫ್‌ಸಿಬಿಯು ನಿರಂತರವಾಗಿ ಅವಕಾಶಗಳನ್ನು ನಿರ್ಮಿಸುತ್ತ ಸಾಗಿತು. 33ನೇ ನಿಮಷದಲ್ಲಿ ತಂಡದ ನಾಲ್ಕನೇ ಗೋಲು ದಾಖಲಾಯಿತು. ಪೆನಾಲ್ಟಿ ಮೂಲಕ ಇರ್ಫಾನ್‌ ಯರ್ವಾಡ್‌ ನಾಲ್ಕನೇ ಗೋಲು ಗಳಿಸಿದರು. ಪಂದ್ಯದ ಮೇಲೆ ಹಿಡಿತ ಸಾಧಿಸುವಲ್ಲಿ ವಿಫಲವಾಗುತ್ತಿರುವ ಎಡಿಇ ಎರಡನೇ ಉಡುಗೊರೆ ಗೋಲು ನೀಡಿತು. ರಾಖೇಶ್‌ ಪ್ರಧಾನ್‌ ನೀಡಿದ ಪಾಸನ್ನು ಸುಲಭವಾಗಿ ನಿಯಂತ್ರಿಸುವಲ್ಲಿ ಎಡಿಇ ಡಿಫೆಂಎರ್‌ ಯತ್ನಿಸಿದರು, ಆದರೆ ಚೆಂಡು ಗೋಲ್‌ಬಾಕ್ಸ್‌ ಸೇರಿತ್ತು. ಇದರೊಂದಿಗೆ ಎಫ್‌ಸಿಬಿಯು 5-0 ಅಂತರದಲ್ಲಿ ಮುನ್ನಡೆ ಕಾಯ್ದುಕೊಂಡಿತು. ಕೆಲವು ನಿಮಿಷಗಳ ನಂತರ ಜೈರೋ ರಾಡ್ರಿಗಸ್‌ ನೀಡಿದ ಉತ್ತಮ ಪಾಸನ್ನು ಬೇದಾಶ್ವರ್‌ ಸಿಂಗ್‌ ಸುಲಭವಾಗಿ ಗೋಲ್‌ ಬಾಕ್ಸಿಗೆ ತಳ್ಳುವಲ್ಲಿ ಸಫಲರಾದರು. ತಂಡ 6-0 ಅಂತರದಲ್ಲಿ ಪ್ರಭುತ್ವ ಸಾಧಿಸಿತು.

ದ್ವಿತಿಯಾರ್ಧದಲ್ಲಿ ಯಾವುದೇ ಬದಲಾವಣೆ ಕಂಡು ಬಂದಿಲ್ಲ, ಎಫ್‌ಸಿಬಿಯು ತನ್ನ ನೈಜ ಆಟವನ್ನು ಮುಂದುವರಿಸಿತು. ರಾಖೇಶ್‌ ಪ್ರಧಾನ್‌ ಅವರ ನೆರವಿನಿಂದ ಇರ್ಪಾನ್‌ ಏಳನೇ ಗೋಲು ಗಳಿಸಿ ತಂಡಕ್ಕೆ 7-0 ಮುನ್ನಡೆ ನೀಡಿದರು. ಏಳನೇ ಗೋಲು 55ನೇ ನಿಮಿಷದಲ್ಲಿ ದಾಖಲಾಯಿತು. ಮೊಹಮ್ಮದ್‌ ಡೊಹ್ವ್‌ ತಂಡದ ಪರ ಎಂಟನೇ ಗೋಲು ಗಳಿಸಿದರು. ಬೆದಾಶ್ವರ್‌ ಸಿಂಗ್‌ ಈ ಗೋಲು ಗಳಿಸುವಲ್ಲಿ ನೆರವಾದರು. ನಂತರ ಎಫ್‌ಸಿ ಬೆಂಗಳೂರು ಯುನೈಟೆಡ್‌ ಸುಲಭವಾಗಿ 9, 10 ಮತ್ತು 11ನೇ ಗೋಲು ಗಳಿಸಿ ಅದ್ಭುತ ಜಯ ಗಳಿಸಿತು.

Related Articles