Thursday, October 10, 2024

ಇನ್‌ಸ್ಪೆಕ್ಟರ್‌ ಆಗಲು ಕ್ರೀಡೆಯೇ ಸ್ಫೂರ್ತಿ: ಶಿವರಾಜ್‌ ಬಿರಡೆ

ಸೋಮಶೇಖರ್‌ ಪಡುಕರೆ sportsmail

ಬೆಳಗಾವಿ ಜಿಲ್ಲೆಯ ನಿಪ್ಪಾಣಿಯ ಕೆಎಲ್‌ಇ ಶಿಕ್ಷಣ ಸಂಸ್ಥೆಯ ಜಿ.ಐ. ಬಾಗೇವಾಡಿ ಕಾಲೇಜಿನ ನೆಟ್‌ಬಾಲ್‌ ತಂಡದಲ್ಲಿ ಆಡಿ ನಂತರ ಯುನಿವರ್ಸಿಟಿ ಬ್ಲೂ ತಂಡದಲ್ಲಿ ಮಿಂಚಿದ ನಾಲ್ವರು ವಿದ್ಯಾರ್ಥಿಗಳು ಕೋಬ್ರಾ ಕಮಾಂಡೋ, ಸೇನಾ ಅಧಿಕಾರಿ, ಪೊಲೀಸ್‌ ಸಬ್‌ ಇನ್‌ಸ್ಪೆಕ್ಟರ್‌ ಹುದ್ದೆಯನ್ನು ಅಲಂಕರಿಸಿದ್ದಾರೆ. ಒಂದೇ ತಂಡದಲ್ಲಿ ಆಡಿದ ನಾಲ್ವರಲ್ಲಿ ಒಬ್ಬರನ್ನು ಮಾತನಾಡಿಸಿದಾಗ ನಾಲ್ವರು ಗೆಳೆಯರ ಕ್ರೀಡಾ ಸಾಧನೆ ಅನಾವರಣಗೊಂಡಿತು.

 

 

ರಾಕೇಶ್‌ ಪಾಟೀಲ್‌, ಶಿವರಾಜ್‌ ಬಿರಡೆ, ಕಿರಣ್‌ ಹಾಗೂ ಅಕ್ಷಯ್‌ ಇವರೇ ಒಂದೇ ತಂಡದ ಆಟಗಾರರು. ಸೇನೆಯಲ್ಲಿ ಕೋಬ್ರಾ ಕಮಾಂಡೋ ಆಗಿರುವ ಅಕ್ಷಯ್‌ ಪಾಟೀಲ್‌ ಅವರ ಸಾಧನೆಯ ಬಗ್ಗೆ ಈ ಹಿಂದೆ ಬರೆಯಲಾಗಿದೆ. ಈ ಬಾರಿ ಕರ್ನಾಟಕ ರಾಜ್ಯ ಸ್ಪೆಷಲ್‌ ರಿಸರ್ವ್‌ ಪೊಲೀಸ್‌ ವಿಭಾಗದಲ್ಲಿ ಸಬ್‌ ಇನ್‌ಸ್ಪೆಕ್ಟರ್‌ ಆಗಿರುವ ಶಿವರಾಜ್‌ ಬಿರಡೆ ಕಾಲೇಜು ಶಿಕ್ಷಣ ಮುಗಿದ ಕೂಡಲೇ ಸಬ್‌ಇನ್‌ಸ್ಪೆಕ್ಟರ್‌ ಹುದ್ದೆಗೇರಿದ ಸಾಧಕ. ಶಿವರಾಜ್‌ ಅವರು ಕ್ರೀಡೆಯಲ್ಲಿ ತೊಡಗಿಕೊಂಡಿದ್ದೆ ಈ ಹುದ್ದೆಗೆ ಬರಲು ಸುಲಭವಾಯಿತು ಎನ್ನುತ್ತಾರೆ.
ಸದ್ಯ ಬೆಳಗಾವಿಯಲ್ಲಿ ತರಬೇತಿ ಪಡೆಯುತ್ತಿರುವ ಶಿವರಾಜ್‌, sportsmail ಜತೆ ಮಾತನಾಡಿ, ಕ್ರೀಡೆ ಯಾವರೀತಿಯಲ್ಲಿ ವೃತ್ತಿಬದಕನ್ನು ರೂಪಿಸಿಕೊಳ್ಳಲು ನೆರವಾಯಿತೆಂದು ತಿಳಿಸಿದ್ದಾರೆ.

“ನೆಟ್‌ಬಾಲ್‌ ಒಂದು ಅಭಿವೃದ್ಧಿ ಹೊಂದುತ್ತಿರುವ ಕ್ರೀಡೆ, ಮಂಗಳೂರು ಇದರಲ್ಲಿ ಬಲಿಷ್ಠವಾಗಿದೆ. ರಾಷ್ಟ್ರಮಟ್ಟದಲ್ಲಿ ಹರಿಯಾಣ, ಪಂಜಾಬ್‌ ಮತ್ತು ಡೆಲ್ಲಿ ರಾಜ್ಯಗಳು ಪ್ರಭುತ್ವ ಸಾಧಿಸಿವೆ. ಆದರೆ ಕರ್ನಾಟಕ ರಾಷ್ಟ್ರಮಟ್ಟದಲ್ಲಿ ಮಿಂಚುತ್ತಿದ್ದು, ಬೆಳಗಾವಿಯಲ್ಲಿ ಈ ಕ್ರೀಡೆಯ ಕಡೆಗೆ ಯುವಕರು ಆಸಕ್ತಿ ತೋರುತ್ತಿದ್ದಾರೆ,” ಎಂದು ನೆಟ್‌ಬಾಲ್‌ನಲ್ಲಿ ಯುನಿವರ್ಸಿಟಿ ಬ್ಲೂಸ್‌ ಪರ ಆಡಿದ್ದ ಇನ್‌ಸ್ಪೆಕ್ಟರ್‌ ಶಿವರಾಜ್‌ ಹೇಳಿದರು.

 

“ಕಾಲೇಜಿನಲ್ಲಿ ಎರಡು ವರ್ಷಗಳ ಕಾಲ ತಂಡದಲ್ಲಿದ್ದೆ, ನಂತರ ಓದಿಗಾಗಿ ಒಂದು ವರ್ಷ ಆಡಿರಲಿಲ್ಲ. ಆರ್ಮಿಯಲ್ಲಿ ಕೋಬ್ರಾ ಕಮಾಂಡೋ ಆಗಿರುವ ರಾಕೇಶ್‌ ಅವರು ನಮ್ಮ ಸೀನಿಯರ್‌, ಅವರ ಆಟ ನೋಡಿ ನಾವು ನೆಟ್‌ಬಾಲ್‌ ಆಟಕ್ಕೆ ಸೇರಿಕೊಂಡಿವು. ನಮ್ಮ ತಂಡದಲ್ಲಿದ್ದವರು ಸೇನೆ, ಪೊಲೀಸ್‌ ಇಲಾಖೆಯಲ್ಲಿರುವುದು ಹೆಮ್ಮೆಯ ಸಂಗತಿ,” ಎಂದರು.

ಸೇನೆ ಮತ್ತು ಪೊಲೀಸ್‌ ಆಯ್ಕೆಗೆ ಕ್ರೀಡೆ ಮುಖ್ಯ:

ಪೊಲೀಸ್‌ ಆಯ್ಕೆಯಲ್ಲಿ ಕ್ರೀಡೆ ಯಾವ ರೀತಿಯಲ್ಲಿ ನೆರವಾಗುತ್ತದೆ? ಮತ್ತು ಶಾಲಾ, ಕಾಲೇಜುಗಳಲ್ಲಿ ಕ್ರೀಡೆಯನ್ನು ಯಾಕೆ ಗಂಭೀರವಾಗಿ ಪರಿಗಣಿಸಬೇಕು ಎಂಬುದರ ಬಗ್ಗೆ ಮಾತನಾಡಿದ ಶಿವರಾಜ್‌, “ಈಗ ಕರ್ನಾಟಕ ಸರಕಾರ ಹೊಸ ಮಸೂದೆಯನ್ನು ಜಾರಿಗೆ ತಂದಿದೆ. ಈಗ ಕ್ರೀಡೆಯಲ್ಲಿ ಸಾಧನೆ ಮಾಡಿದವರಿಗೆ ಉದ್ಯೋಗದಲ್ಲಿ ಮೀಸಲಾತಿ ನೀಡಬೇಕೆಂಬ ನಿಯಮ ಜಾರಿಗೆ ಬರಲಿದೆ. ರಾಷ್ಟ್ರೀಯ ಮತ್ತು ಅಂತಾರಾಷ್ಟ್ರೀಯ ಮಟ್ಟದಲ್ಲಿ ಸಾಧನೆ ಮಾಡಿದವರಿಗೆ ಉದ್ಯೋಗದಲ್ಲಿ ಶೇ,2ರಷ್ಟು ಮೀಸಲಾತಿ ಇರುತ್ತದೆ. ಕಾನ್‌ಸ್ಟೇಬಲ್‌, ಸಬ್‌ಇನ್‌ಸ್ಪೆಕ್ಟರ್‌ ಹಾಗೂ ಡಿವೈಎಸ್ಪಿ ಹುದ್ದೆವರೆಗೂ ನೇರವಾಗಿ ಆಯ್ಕೆಯಾಗುವ ಅವಕಾಶ ಇರುತ್ತದೆ. ನಾನು ನೆಟ್‌ಬಾಲ್‌ನಲ್ಲಿ ತೊಡಗಿಕೊಂಡಿದ್ದರಿಂದ ಇನ್‌ಸ್ಪೆಕ್ಟರ್‌ ಹುದ್ದೆ ಪಾಸಾಗಲು ಬಹಳ ಸುಲಭವಾಯಿತು.

 

ಕ್ಲಾಸಿನ ಒಳಗಡೆ ಕಲಿತದ್ದು ಲಿಖಿತ ಪರೀಕ್ಷೆಗೆ ನೆರವಾಯಿತು. ಅಂಗಣದಲ್ಲಿ ಕಲಿತದ್ದು ದೈಹಿಕ ಕ್ಷಮತೆ ಪರೀಕ್ಷೆ ಪಾಸಾಗಲು ನೆರವಾಯಿತು. ಕ್ರೀಡಾಪಟುಗಳಲ್ಲಿ  ಗೆಲ್ಲಲೇಬೇಕೆಂಬ ಛಲ ಇರುತ್ತದೆ. ಹಾಗಾಗಿ ಯಾವುದೇ ಸವಾಲನ್ನು ಎದುರಿಸುವಾಗ ನಮ್ಮಲ್ಲಿ ಗೆಲ್ಲಬೇಕೆಂಬ ಛಲ ಸಹಜವಾಗಿಯೇ ಇರುತ್ತದೆ. ನಮಗೆ 10 ನಿಮಿಷಗಳ ಒಳಗಾಗಿ 2 ಕಿಮೀ ದೂರವನ್ನು ಓಡಿ ತಲುಪಬೇಕಾಗಿತ್ತು.  ಕ್ರೀಡೆಯಲ್ಲಿ ತೊಡಗಿಸಿಕೊಂಡಿದ್ದರಿಂದ ಇದು ಸಾಧ್ಯವಾಯಿತು. ಹೈಜಂಪ್‌ ಮತ್ತು ಲಾಂಗ್‌ಜಂಪ್‌ ಕೂಡ ಇದ್ದಿತ್ತು, ನೆಟ್‌ಬಾಲ್‌ನಲ್ಲಿ ಈ ಎರಡೂ ಕ್ರೀಡೆಗೂ ನೆಟ್‌ಬಾಲ್‌ ಪೂರಕವಾಗಿದೆ, ನಮ್ಮ ನಿತ್ಯದ ಅಭ್ಯಾಸದಲ್ಲಿ ಪುಷ್‌ಅಪ್ಸ್‌ ಇದ್ದೇ ಇರುತ್ತದೆ. ಆದ್ದರಿಂದ ಪೊಲೀಸ್‌ ದೈಹಿಕ ಪರೀಕ್ಷೆಯಲ್ಲಿ ಕ್ರೀಡಾಪಟುಗಳಿಗೆ ಹೆಚ್ಚಿನ ಉಪಪಯೋಗವಿದೆ. ನನಗೆ 100ರಲ್ಲಿ 92 ಅಂಕ ಸಿಕ್ಕಿತು. ಇಲ್ಲಿಯೂ ಕ್ರೀಡಾ ಅಧಿಕಾರಿಯಾಗಿಯೂ ಮುಂದುವರಿಯಬಹುದು, ಮುಂದಿನ ಸಾಧನೆಗೂ ಅವಕಾಶವಿದೆ,” ಎಂದರು.

ಶಿಸ್ತು ಮತ್ತು ಮನಸ್ಸಿನ ಏಕಾಗ್ರತೆ:

ವಿದ್ಯಾರ್ಥಿ ಬದುಕಿನಲ್ಲಿ ಶಿಸ್ತು ಯಾಕೆ ಅಳವಡಿಸಿಕೊಳ್ಳಬೇಕೆಂದು ಗುರುಗಳು ಯಾವಾಗಲೂ ಹೇಳುತ್ತಿರುತ್ತಾರೆ. ಆದರೆ ಅವರು ಯಾಕೆ ಹೇಳುತ್ತಾರೆಂಬುದು ನಮಗೆ ಮನವರಿಕೆಯಾಗುವುದು ವೃತ್ತಿಬದುಕಿಗೆ ಬಂದಾಗ. “ಪೊಲೀಸ್‌ ಇಲಾಖೆಯಲ್ಲಿ ಯಾವುದೇ ಉದ್ಯೋಗದಲ್ಲಿದ್ದರೂ ಅಲ್ಲಿ ಶಿಸ್ತಿಗೆ ಮೊದಲ ಆದ್ಯತೆ. ಕ್ರೀಡೆಯಲ್ಲಿ ತೊಡಗಿಸಿಕೊಂಡಿದ್ದರಿಂದ ಶಿಸ್ತು ನನ್ನಲ್ಲಿ ಸಹಜವಾಗಿಯೇ ಮನೆ ಮಾಡಿತ್ತು. ಇಲ್ಲಿ ಮನಸ್ಸಿನ ಏಕಾಗ್ರತೆ ಪ್ರಮುಖ ಪಾತ್ರವಹಿಸುತ್ತದೆ. ಹಲವಾರು ಸವಾಲುಗಳನ್ನು ಎದುರಿಸಬೇಕಾಗುತ್ತದೆ. ಇದಕ್ಕೆ ಪೂರಕವಾದ ಮನಸ್ಸನ್ನು ಕ್ರೀಡೆ ನೀಡಿರುತ್ತದೆ. ಕ್ರೀಡಾಪಟು ಎನಿಸಿಕೊಂಡವನಿಗೆ ಯಾವಾಗಲೂ ಜಯ ಕಟ್ಟಿಟ್ಟ ಬುತ್ತಿಯಲ್ಲ. ಹೊಗಳಿಕೆ ನಿತ್ಯದ ಮಂತ್ರವಲ್ಲ. ಅಲ್ಲಿಯೂ ಟೀಕೆ, ತೆಗಳಿಕೆ, ಒತ್ತಡ ಎಲ್ಲವೂ ಎದುರಾಗುತ್ತದೆ. ಇವುಗಳನ್ನು ಎದುರಿಸಬೇಕು ಎಂಬುದನ್ನು ನಮಗೆ ಕ್ರೀಡೆ ಕಲಿಸುತ್ತದೆ. ಸಹನೆಯನ್ನೂ ಕ್ರೀಡೆ ಒದಗಿಸುತ್ತದೆ. ಆದ್ದರಿಂದ ಬದುಕಿನಲ್ಲಿ ನೀವು ಕ್ರೀಡಾಪಟುವಾಗಿ ಮುಂದುವರಿಯುತ್ತೀರೋ ಇಲ್ಲವೋ ಆದರೆ ಶಾಲಾ, ಕಾಲೇಜು ದಿನಗಳಲ್ಲಿ ಯಾವುದಾದರೂ ಕ್ರೀಡೆಯಲ್ಲಿ ತೊಡಗಿಸಿಕೊಂಡರೆ ಅದು ನಮ್ಮ ಬದುಕಿನಲ್ಲಿ ಮುಂದಕ್ಕೆ ನೆರವಿಗೆ ಬರುತ್ತದೆ.” ಎಂದು ಹೇಳಿದರು.

ಹೊಸ ಶಿಕ್ಷಣ ನೀತಿ:

ಕೇಂದ್ರ ಸರಕಾರ ಜಾರಿಗೆ ತಂದಿರುವ ನೂತನ ಶಿಕ್ಷಣ ನೀತಿಯಲ್ಲಿ ಕ್ರೀಡೆಗೆ ಹೆಚ್ಚಿನ ಒತ್ತು ನೀಡಲಾಗಿದೆ. ಯೋಗಕ್ಕೂ ಪ್ರಾಧಾನ್ಯತೆ ಇದೆ. ಇನ್ನು ಮುಂದೆ ಶಾಲೆಗಳಲ್ಲಿ ಪಾಠದಂತೆ ಪಠ್ಯವೂ ನಡೆಯಲಿದೆ. ಇದುವರೆಗೂ ಕ್ರೀಡೆ ಪಠ್ಯೇತರ ಚಟುವಟಿಕೆಯಾಗಿತ್ತು. ಅಗತ್ಯ ಇದ್ದರೆ ನಡೆಯುತ್ತಿತ್ತು ಇಲ್ಲದಿರೆ ಇಲ್ಲ, ಆದರೆ ಇನ್ನು ಮುಂದೆ ಕ್ರೀಡೆ ಕಡ್ಡಾಯವಾಗುತ್ತದೆ. ದೈಹಿಕ ಶಿಕ್ಷಕರು ಮಗುವಿನ ಆಸಕ್ತಿಯ ಕ್ರೀಡೆಯನ್ನು ಕಂಡು ಅವರಿಗೆ ತರಬೇತಿ ನೀಡಬೇಕಾಗುತ್ತದೆ, ಇದು ಪ್ರತಿಯೊಬ್ಬ ವಿದ್ಯಾರ್ಥಿಯ ದೈಹಿಕ, ಮಾನಸಿಕ ಹಾಗೂ ಶೈಕ್ಷಣಿಕ ದೃಷ್ಟಿಯಿಂದ ಉತ್ತಮವಾದುದು,” ಎಂದು ಶಿವರಾಜ್‌ ಹೇಳಿದರು.

ತರಬೇತಿ ಮುಗಿದ ತಕ್ಷಣ ಎಲ್ಲಿ ಕಾರ್ಯಕ್ಕೆ ಸೇರುತ್ತೇನೋ ಅಲ್ಲಿ ನೆಟ್‌ಬಾಲ್‌ ಕ್ರೀಡೆಯ ಅಭಿವೃದ್ಧಿಗಾಗಿ ವಾರದಲ್ಲಿ ಸ್ವಲ್ಪ ಸಮಯ ಮೀಸಲಾಗಿಡುವೆ. ಬೆಳಗಾವಿಯಲ್ಲಿ ನೆಟ್‌ಬಾಲ್‌ ಕ್ರೀಡಾಭಿವೃದ್ಧಿಗೆ ಶ್ರಮಿಸಬೇಕು. ಯುವಕರಲ್ಲಿ ಕ್ರೀಡೆಯ ಬಗ್ಗೆ ಅರಿವು ಮೂಡಿಸಬೇಕು. ಕ್ರೀಡೆಯಿಂದಾಗುವ ಪ್ರಯೋಜನಗಳ ಬಗ್ಗೆ ಗ್ರಾಮೀಣ ಯುವಕರಿಗೆ ತಿಳಿ ಹೇಳಬೇಕು ಎಂದು ಇನ್‌ಸ್ಪೆಕ್ಟರ್‌ ಶಿವರಾಜ್‌ ಬಿರಡೆ ಹೇಳಿದರು.

Related Articles