Saturday, July 20, 2024

ಪಿವಿಎಲ್‌: ಬೆಂಗಳೂರು ಟಾರ್ಪೆಡೊಸ್‌ ತಂಡಕ್ಕೆ ರಂಜಿತ್‌ ನಾಯಕ

Sportsmail:

ಹೈದರಾಬಾದ್‌ನ ಗಾಚಿಬೌಲಿ ಕ್ರೀಡಾಂಗಣದಲ್ಲಿ ಫೆಬ್ರವರಿ 5ರಿಂದ ಆರಂಭಗೊಳ್ಳಲಿರುವ ಮೊದಲ ಆವೃತ್ತಿಯ ಪ್ರೈಮ್‌ ವಾಲಿಬಾಲ್‌ ಲೀಗ್‌ ನಲ್ಲಿ ಸ್ಪರ್ಧಿಸುತ್ತಿರುವ ಬೆಂಗಳೂರು ಟಾರ್ಪೆಡೊಸ್‌ ತಂಡದ ನಾಯಕತ್ವವನ್ನು ಹಿರಿಯ ಆಟಗಾರ ರಂಜಿತ್‌ ಸಿಂಗ್‌ ವಹಿಸಲಿದ್ದಾರೆ.

ಹೊಸ ಜವಾಬ್ದಾರಿ ಸಿಕ್ಕಿರುವುದಕ್ಕೆ ಪ್ರತಿಕ್ರಿಯೆ ನೀಡಿರುವ ರಂಜಿತ್‌ ಸಿಂಗ್‌, “ನನ್ನ ಮೇಲೆ ಫ್ರಾಂಚೈಸಿ ಮಾಲೀಕರು ನಂಬಿಕೆ ಇಟ್ಟಿರುವುದಕ್ಕೆ ನಾನು ಚಿರಋಣಿಯಾಗಿದ್ದೇನೆ. ಬೆಂಗಳೂರು ಟಾರ್ಪೆಡೊಸ್‌ ತಂಡವನ್ನು ಮುನ್ನಡೆಸುವುದು ಹೆಮ್ಮೆಯ ಸಂಗತಿ. ತಂಡದ ಕೋಚ್‌ಗಳು, ಸಹಾಯಕ ಸಿಬ್ಬಂದಿ ಹಾಗೂ ಮಾಲೀಕರಿಗೆ ಧನ್ಯವಾದಗಳು. ನನ್ನಿಂದ ಉತ್ತಮವಾದ ಪ್ರದರ್ಶನ ನೀಡಲು ಮತ್ತು ಇತರ ಆಟಗಾರರನ್ನು ಜತೆಯಲ್ಲಿ ಮುನ್ನಡೆಸಿ ತಂಡದ ಯಶಸ್ಸಿಗಾಗಿ ಶ್ರಮಿಸುವೆ,” ಎಂದರು.

“ಕಳೆದ ಎರಡು ವಾರಗಳ ಕಾಲ ಮೈಸೂರಿನಲ್ಲಿ ನಡೆದ ತರಬೇತಿಯಲ್ಲಿ ತಂಡದ ಆಟಗಾರರ ನಡುವೆ ಉತ್ತಮ ರೀತಿಯ ಬಂಧ ಬೆಳೆದಿದೆ. ಒಬ್ಬರನ್ನೊಬ್ಬರು ಅರ್ಥೈಸಿಕೊಂಡಿದ್ದಾರೆ. ಈ ಋತುವನ್ನು ನಮ್ಮ ತಂಡದ ಅವಿಸ್ಮರಣೀಯ ಋತುವನ್ನಾಗಿಸಲು ನಾವೆಲ್ಲರೂ ಒಂದಾಗಿ ಹೋರಾಡಲಿದ್ದೇವೆ,” ಎಂದರು.

ಬೆಂಗಳೂರು ಟಾರ್ಪೆಡೊಸ್‌ ಮಾಲೀಕ, ಅಂಕಿತ್‌ ನಗೋರಿ ಮಾತನಾಡಿ, “ರಂಜಿತ್‌ ನಮ್ಮ ನಿಸ್ಸಂಶಯವಾದ ಆಯ್ಕೆಯಾಗಿದೆ, ನಮ್ಮ ತಂಡದಲ್ಲಿ ಅವರನ್ನು ಆಯ್ಕೆಮಾಡಿರುವುದು ಅದೃಷ್ಟದ ಸಂಗತಿ, ಭಾರತ ತಂಡವನ್ನು ಪ್ರತಿನಿಧಿಸಿ, ನಾಯಕರಾಗಿ, ಹಲವಾರು ಅಂತಾರಾಷ್ಟ್ರೀಯ ಟೂರ್ನಿಗಳಲ್ಲಿ ತಂಡವನ್ನು ಮುನ್ನಡೆಸಿರುವ ರಂಜಿತ್‌ ಅಪಾರ ಅನುಭವವನ್ನು ಹೊಂದಿದ್ದು, ಅವರ ಅನುಭವ ನಮ್ಮ ತಂಡಕ್ಕೆ ನೆರವಾಗಲಿದೆ,” ಎಂದರು.

ಪಂಜಾಬ್‌ ಮೂಲದವರಾದ ರಂಜಿತ್‌ ಅವರು ಈಗಾಗಲೇ ಭಾರತ ತಂಡದಲ್ಲಿ 50ಕ್ಕೂ ಹೆಚ್ಚು ಪಂದ್ಯಗಳನ್ನು ಆಡಿದವರು. ಯುವ ಭಾರತ ತಂಡದಲ್ಲಿ ಆಡುವ ಮೂಲಕ ರಂಜಿತ್‌ 17ನೇ ವಯಸ್ಸಿನಲ್ಲೇ ಅಂತಾರಾಷ್ಟ್ರೀಯ ವಾಲಿಬಾಲ್‌ಗೆ ಕಾಲಿಟ್ಟವರು.

ಯೂತ್‌ ವಿಶ್ವ ಚಾಂಪಿಯನ್ಷಿಪ್‌ ಹಾಗೂ ವಿಶ್ವ ಯುನಿವರ್ಸಿಟಿ ಟೂರ್ನಿಗಳನ್ನು ಆಡಿದ ನಂತರ 22ನೇ ವಯಸ್ಸಿನಲ್ಲಿ ಭಾರತ ಹಿರಿಯರ ತಂಡಕ್ಕೆ ಕಾಲಿಟ್ಟರು. 2014ರಲ್ಲಿ ಏಷ್ಯನ್‌ ಕಪ್‌ನಲ್ಲಿ ಭಾರತ ತಂಡದ ನಾಯಕತ್ವವನ್ನು ವಹಿಸಿದ್ದ ರಂಜಿತ್‌, ತಂಡ ಬೆಳ್ಳಿ ಪದಕ ಗೆಲ್ಲುವಲ್ಲಿ ಪ್ರಮುಖ ಪಾತ್ರವಹಿಸಿದ್ದರು.  2014ರ ಏಷ್ಯನ್‌ ಗೇಮ್ಸ್‌ನಲ್ಲೂ ಭಾರತ ತಂಡದ ನಾಯಕತ್ವವಹಿಸಿದ್ದರು.

 

Related Articles