Friday, April 19, 2024

ಪ್ರತಿಭೆಗಳ ಬೆಳಗುವ ಸ್ಕೇಟಿಂಗ್‌ ಗುರು ರಾಘವೇಂದ್ರ!

ಸೋಮಶೇಖರ್‌ ಪಡುಕರೆ, ಬೆಂಗಳೂರು:

ಚಿಕ್ಕಂದಿನಲ್ಲೇ ಸ್ಕೇಟಿಂಗ್‌ ಕ್ರೀಡೆಯಲ್ಲಿ ತೊಡಗಿಕೊಂಡು, ಐಸ್‌ ಹಾಗೂ ರೋಲರ್‌ ಸ್ಕೇಟಿಂಗ್‌ನಲ್ಲಿ ಪ್ರಭುತ್ವ ಸಾಧಿಸಿ, ರಾಜ್ಯ, ರಾಷ್ಟ್ರ ಮತ್ತು ಅಂತಾರಾಷ್ಟ್ರೀಯ ಮಟ್ಟದಲ್ಲಿ ಮಿಂಚಿ ಈಗ ಯುವ ಪ್ರತಿಭೆಗಳಿಗೆ ತರಬೇತಿ ನೀಡಿ ಸ್ಕೇಟಿಂಗ್‌ ಕ್ರೀಡೆಯನ್ನು ಜನಪ್ರಿಯಗೊಳಿಸುತ್ತಿರುವ ರಾಘವೇಂದ್ರ ಸೋಮಯಾಜಿ ರಾಜ್ಯ ಕಂಡ ಶ್ರೇಷ್ಠ ಸ್ಕೇಟಿಂಗ್‌ ತರಬೇತುದಾರರಲ್ಲಿ ಒಬ್ಬರೆನಿಸಿದ್ದಾರೆ.

ಮೈಸೂರಿನ ಖ್ಯಾತ ಸ್ಕೇಟಿಂಗ್‌ ಗುರು ಶ್ರೀಕಾಂತ್‌ ರಾವ್‌ ಅವರಲ್ಲಿ ತರಬೇತಿ ಪಡೆದ ರಾಘವೇಂದ್ರ ಸೋಮಯಾಜಿ 34ನೇ ವರ್ಷದಲ್ಲೂ ಸ್ಪರ್ಧಾತ್ಮಕ ಸ್ಕೇಟಿಂಗ್‌ನಲ್ಲಿ ತಮ್ಮನ್ನು ತೊಡಗಿಸಿಕೊಂಡಿದ್ದಾರೆ. ರೋಲರ್‌ ಸ್ಕೇಟಿಂಗ್‌ನಲ್ಲಿ 8 ವರ್ಷ ಹಾಗೂ ಐಸ್‌ ಸ್ಕೇಟಿಂಗ್‌ನಲ್ಲಿ 8 ವರ್ಷ ರಾಷ್ಟ್ರೀಯ ಚಾಂಪಿಯನ್‌ ಎನಿಸಿರುವ ರಾಘವೇಂದ್ರ ಅವರು, ಇದುವರೆಗೂ 20ಕ್ಕೂ ಹೆಚ್ಚು ದೇಶಗಳಲ್ಲಿ ಭಾರತವನ್ನು ಪ್ರತಿನಿಧಿಸಿದ್ದಾರೆ.

ಬೆಂಗಳೂರಿನಲ್ಲಿ ಇದೇ ಬರುವ ಡಿಸೆಂಬರ್‌ ತಿಂಗಳಲ್ಲಿ 60ನೇ ರಾಷ್ಟ್ರೀಯ ರೋಲರ್‌ ಸ್ಕೇಟಿಂಗ್‌ ಚಾಂಪಿಯನ್‌ಷಿಪ್‌ಗೆ ಬೆಂಗಳೂರು ಸಜ್ಜಾಗುತ್ತಿದೆ. ಈ ಶುಭ ಸಂದರ್ಭದಲ್ಲಿ ಸ್ಕೇಟಿಂಗ್‌ ಕ್ರೀಡೆಯಲ್ಲಿ ರಾಜ್ಯಕ್ಕೆ ಕೀರ್ತಿ ತಂದ ಸಾಧಕರನ್ನು ಪರಿಚಯಿಸುವ ಪುಟ್ಟ ಪ್ರಯತ್ನ ಇದಾಗಿದೆ. ಈ ಸಂದರ್ಭದಲ್ಲಿ ರಾಘವೇಂದ್ರ ಸೋಮಯಾಜಿ ಅವರನ್ನು ಸಂಪರ್ಕಿಸಿದಾಗ ಸ್ಕೇಟಿಂಗ್‌ನಲ್ಲಿ ತಮ್ಮ ಸಾಧನೆಯ ಹಾದಿಯನ್ನೊಮ್ಮೆ ಹಿಂದಿರುಗಿ ನೋಡಿದ್ದಾರೆ.

ಮೂಲತಃ ಉಡುಪಿ ಜಿಲ್ಲೆಯ ಸಾಲಿಗ್ರಾಮದ ಗುಂಡ್ಮಿಯವರಾದ ರಾಘವೇಂದ್ರ ಸೋಮಯಾಜಿಯವರು ಹುಟ್ಟಿ ಬೆಳೆದದ್ದು ಮೈಸೂರಿನಲ್ಲಿ. ಮೈಸೂರು ಅತಿ ಹೆಚ್ಚು ಸ್ಕೇಟಿಂಗ್‌ ಪ್ರತಿಭೆಗಳನ್ನು ರಾಜ್ಯಕ್ಕೆ ನೀಡಿದ ಜಿಲ್ಲೆ. ರಾಘವೇಂದ್ರ ಅವರು ಚಿಕ್ಕಂದಿನಲ್ಲಿಯೇ ಶ್ರೀಕಾಂತ್‌ ಅವರಲ್ಲಿ ಪಳಗಿದವರು. ರಾಜ್ಯ ಮಟ್ಟದಲ್ಲಿ ಹಲವಾರು ಸ್ಪರ್ಧೆಗಳಲ್ಲಿ ಚಿನ್ನದ ಪದಕ ಗೆದ್ದು ನಂತರ ರಾಷ್ಟ್ರ ಮಟ್ಟದಲ್ಲಿ 8 ವರ್ಷಗಳ ಕಾಲ ರೋಲರ್‌ ಸ್ಕೇಟಿಂಗ್‌ ಹಾಗೂ 8 ವರ್ಷಗಳ ಕಾಲ ಐಸ್‌ ಸ್ಕೇಟಿಂಗ್‌ನಲ್ಲಿ ಚಾಂಪಿಯನ್‌ಷಿಪ್‌ ಪಟ್ಟ ಗೆದ್ದವರು. ಇವರ ಗುರು ಶ್ರೀಕಾಂತ್‌ ರಾವ್‌ ಕೂಡ ಉಡುಪಿಯವರಾಗಿದ್ದು ದಶಕ ಕಾಲ ರಾಷ್ಟ್ರೀಯ ಸ್ಕೇಟಿಂಗ್‌ನಲ್ಲಿ ಪ್ರಭುತ್ವ ಸಾಧಿಸಿದವರು. 20 ವರ್ಷಗಳ ಕಾಲ ಮೈಸೂರಿನಲ್ಲಿ ರೋಲರ್‌ ಸ್ಕೇಟಿಂಗ್‌ನಲ್ಲಿ ಪ್ರಭುತ್ವ ಸಾಧಿಸಿದ ರಾಘವೇಂದ್ರ, ಜರ್ಮನಿ, ತೈವಾನ್‌, ಬೆಲ್ಜಿಯಂ, ಚೀನಾ ಸೇರಿಂದಂತೆ ಸುಮಾರು 20 ಕ್ಕೂ ಹೆಚ್ಚು ರಾಷ್ಟ್ರಗಳಲ್ಲಿ ನಡೆದ ಅಂತಾರಾಷ್ಟ್ರೀಯ ಮಟ್ಟದ ಸ್ಪರ್ಧೆಗಳಲ್ಲಿ ಸ್ಪರ್ಧಿಸಿರುತ್ತಾರೆ. ನಂತರ 2010ರಲ್ಲಿ ಬೆಂಗಳೂರಿಗೆ ಬಂದು ನೆಲೆಸಿ, ಇಲ್ಲಿ ತರಬೇರಿ ನೀಡುತ್ತಿದ್ದಾರೆ.

ರಾಷ್ಟ್ರ ಮಟ್ಟದ ರೋಲರ್‌ ಸ್ಕೇಟಿಂಗ್‌ನಲ್ಲಿ 14 ಚಿನ್ನದ ಪದಕಗಳು, 5 ಬೆಳ್ಳಿ ಹಾಗೂ 1 ಕಂಚಿನ ಸಾಧನೆ ಮಾಡಿರುವ ರಾಘವೇಂದ್ರ ಅವರು ಐಸ್‌ ಸ್ಕೇಟಿಂಗ್‌ನಲ್ಲಿ 16 ಚಿನ್ನ ಹಾಗೂ 2 ಬೆಳ್ಳಿ ಗೆದ್ದಿದ್ದಾರೆ. ವೃತ್ತಿಪರ ಸ್ಪರ್ಧೆಯ ನಂತರ ಮಾಸ್ಟರ್ಸ್‌ನಲ್ಲಿಯೂ ಸ್ಪರ್ಧಿಸಿ ರಾಷ್ಟ್ರ ಮಟ್ಟದಲ್ಲಿ 4 ಚಿನ್ನದ ಸಾಧನೆ ಮಾಡಿದ್ದಾರೆ.

ರೋಲರ್‌ ಸ್ಕೇಟಿಂಗ್‌ನಿಂದ ಐಸ್‌ ಸ್ಕೇಟಿಂಗ್‌ಗೆ: ಕರ್ನಾಟಕದಲ್ಲಿ ರೋಲರ್‌ ಸ್ಕೇಟಿಂಗ್‌ಗೆ ಅಗತ್ಯವಾಗಿರುವ ರಿಂಕ್‌ ಇದೆ. ಆದರೆ ಐಸ್‌ ಸ್ಕೇಟಿಂಗ್‌ ತರಬೇತಿ ನಡೆಸಲು ಇಲ್ಲಿ ಸಿಮ್ಲಾ, ಗುಲ್ಮಾರ್ಗ್‌ ಅಥವಾ ಮಸ್ಸೋರಿಯಂಥ ಹಿಮಚ್ಛಾದಿತ ಪ್ರದೇಶಗಳಿಲ್ಲ. ಆದರೂ ನಮ್ಮವರು ಪದಕಗಳನ್ನು ಹೇಗೆ ಗೆಲ್ಲುತ್ತಾರೆ ಎಂಬ ಕುತೂಹಲ ಕಾಡುವುದು ಸಹಜ. ರಾಘವೇಂದ್ರ ಅವರು ಹೇಳುವ ಪ್ರಕಾರ, ಇಲ್ಲಿ ರೋಲರ್‌ ಸ್ಕೇಟಿಂಗ್‌ನಲ್ಲಿ ತರಬೇತಿ ಪಡೆದು, ನಂತರ ಒಂದು ವಾರಗಳ ಕಾಲ ಐಸ್‌ ಸ್ಕೇಟಿಂಗ್‌ಗೆ ಅನುಕೂಲವಾಗಿರುವ ಪ್ರದೇಶದಲ್ಲಿ ತರಬೇತಿ ಪಡೆದು ಬಳಿಕ ಸ್ಪರ್ಧೆಯಲ್ಲಿ ಪಾಲ್ಗೊಳ್ಳುತ್ತಾರೆ. ಕೋಲ್ಕೊತಾ, ಮುಂಬಯಿ ಮತ್ತು ಡೆಲ್ಲಿ ಇಲ್ಲ ಕೃತಕ ಐಸ್‌ ಸ್ಕೇಟಿಂಗ್‌ ವ್ಯವಸ್ಥೆ ಇದೆ, ಅಲ್ಲಿ ಸ್ಪರ್ಧೆಗಳು ನಡೆದಾಗ ಒಂದು ವಾರ ಮುಂಚಿತವಾಗಿ ಹೋಗಿ ತರಬೇತಿ ಪಡೆಯಲಾಗುತ್ತದೆ ಎಂದು ರಾಘವೇಂದ್ರ ಸೋಮಯಾಜಿ ತಿಳಿಸಿದರು.

16ನೇ ವಯಸ್ಸಿನಲ್ಲೇ ತರಬೇತಿ ಆರಂಭ: ರಾಷ್ಟ್ರ ಮತ್ತು ಅಂತಾರಾಷ್ಟ್ರೀಯ ಮಟ್ಟದ ಸ್ಪರ್ಧೆಗಳಲ್ಲಿ ಪಾಲ್ಗೊಳ್ಳುತ್ತಿರುವಾಗಲೇ ರಾಘವೇಂದ್ರ ಅವರಿಗೆ ಸ್ಕೇಟಿಂಗ್‌ ಪಾಠ ಹೇಳುವ ಅವಕಾಶ ಸಿಕ್ಕಿತ್ತು. ಶ್ರೀಕಾಂತ್‌ ರಾವ್‌ ಅವರ ಹಿರಿಯ ಸಹೋದರ ಅಕಾಲಿಕ ಮರಣವನ್ನಪ್ಪಿದಾಗ ಮಕ್ಕಳಿಗೆ ತರಬೇತಿ ನೀಡುವ ಅವಕಾಶ ರಾಘವೇಂದ್ರಗೆ ವಹಿಸಿದರು. ಇದರಿಂದ ತಾನು ಪಳಗುವುದರ ಜೊತೆಯಲ್ಲಿ ಇತರರಿಗೂ ಸ್ಕೇಟಿಂಗ್‌ ಪಾಠ ಹೇಳಿ ಕೋಚಿಂಗ್‌ ನೀಡುವ ಅನುಭವ ಪಡೆದರು. ಹಲವು ವರ್ಷ ಕಳೆದ ಬಳಿಕ ಬೆಂಗಳೂರಿಗೆ ಬಂದು ನೆಲೆಸಿದರು.

ಬೆಂಗಳೂರಿನ ರಾಜರಾಜೇಶ್ವರಿ ನಗರದಲ್ಲಿರುವ ಅರುಣಾಚಲಂ ಅವರ ಬೆಸ್ಟ್‌ ಸ್ಕೇಟಿಂಗ್‌ ಕ್ಲಬ್‌ನಲ್ಲಿ ತರಬೇತಿ ನೀಡುತ್ತಿರುವ ರಾಘವೇಂದ್ರ ಅವರಲ್ಲಿ ಪಳಗಿದ ಅನೇಕ ಸ್ಕೇಟರ್‌ಗಳು ರಾಷ್ಟ್ರ ಹಾಗೂ ಅಂತಾರಾಷ್ಟ್ರೀಯ ಮಟ್ಟದಲ್ಲಿ ಮಿಂಚಿದ್ದಾರೆ.  ರಾಘವೇಂದ್ರ ಶಿಷ್ಯೆ ಮಂಗಳೂರಿನ ಶಿಖಾ ರೈ ವಿಶ್ವ ಚಾಂಪಿಯನ್‌ಷಿಪ್‌ನಲ್ಲಿ 11ನೇ ಸ್ಥಾನ ಗಳಿಸಿರುವುದು ಗಮನಾರ್ಹ. ಅದೇ ರೀತಿ ಆಕಾಶ್‌ ರಾಜ್‌, ಪ್ರತೀಕ್‌ ಪ್ರಸಾದ್‌, ಅಖಿಲಾ ತೀರ್ಥ, ಪ್ರಥ್ವಿರಾಜ್‌ ಮೊದಲಾದ ಸ್ಕೇಟರ್‌ಗಳು ವಿಶ್ವ ಚಾಂಪಿಯನ್‌ಷಿಪ್‌ನಲ್ಲಿ ಭಾರತವನ್ನು ಪ್ರತಿನಿಧಿಸಿದ್ದಾರೆ. ಈಗ 150ಕ್ಕೂ ಹೆಚ್ಚು ಸ್ಕೇಟರ್‌ಗಳು ರಾಘವೇಂದ್ರ ಅವರಲ್ಲಿ ತರಬೇತಿ ಪಡೆಯುತ್ತಿದ್ದಾರೆ.

ಸ್ಕೇಟಿಂಗ್ ಕ್ರೀಡೆಯ ಪ್ರಯೋಜನ: ಸ್ಕೇಟಿಂಗ್‌ನಲ್ಲಿ ಪಾಲ್ಗೊಳ್ಳುತ್ತಿರುವ ಎಲ್ಲ ಮಕ್ಕಳೂ ಶಾಲೆಯಲ್ಲಿ ಉತ್ತಮ ಅಂಕ ಗಳಿಸುತ್ತಿದ್ದಾರೆಂದು ರಾಘವೇಂದ್ರ ಅವರು ತಿಳಿಸಿದಾಗ ನಿಜವಾಗಿಯೂ ಅಚ್ಚರಿ ಮತ್ತು ಖುಷಿಯಾಯಿತು. ಮನಸ್ಸಿನ ಏಕಾಗ್ರತೆಯನ್ನು ಹೆಚ್ಚಿಸುವುದರ ಜೊತೆಯಲ್ಲಿ ದೈಹಿಕ ಕ್ಷಮತೆಯನ್ನು ಕಾಯುವ ಕೆಲಸವನ್ನು ಈ ಕ್ರೀಡೆ ನಿರ್ವಹಿಸುತ್ತದೆ. ಸ್ಕೇಟಿಂಗ್‌ ರಿಂಕ್‌ನಲ್ಲಿ ತೋರುವ ಬ್ಯಾಲೆನ್ಸ್‌ನಿಂದ ದೇಹದ ಬ್ಯಾಲೆನ್ಸ್‌ಗೂ ನೆರವಾಗುತ್ತದೆ. ಚಿಕ್ಕ ಮಕ್ಕಳಿಂದ ಹಿಡಿದು 60 ವರ್ಷ ಪ್ರಾಯದವರೂ ಸ್ಕೇಟಿಂಗ್‌ನಲ್ಲಿ ತಮ್ಮನ್ನು ತೊಡಗಿಸಿಕೊಳ್ಳಬಹುದು, ದೇಹದ ಎಲ್ಲ ಭಾಗಗಳನ್ನೂ ಚಲನಶಿಲಗೊಳಿಸುವ ಜಾರ್ಯವನ್ನು ಸ್ಕೇಟಿಂಗ್‌ ಮಾಡುತ್ತದೆ. ಇದು ಅತ್ಯಂತ ಶ್ರಮದಾಯಕ ಕ್ರೀಡೆಯೂ ಹೌದು, ಬೊಜ್ಜು ಕರಗಿಸಿಕೊಳ್ಳುವವರು ಮೂರು ತಿಂಗಳ ಕಾಲ ಸ್ಕೇಟಿಂಗ್‌ ಮಾಡಿದರೆ ಸಹಜ ಸ್ಥಿತಿಗೆ ಬರಬಹುದು. ಆದ್ದರಿಂದ ಪದಕ ಗೆಲ್ಲುವವರು ಮಾತ್ರವಲ್ಲದೆ ಇತರರೂ ಈ ಕ್ರೀಡೆಯಲ್ಲಿ ತೊಡಗಿಕೊಳ್ಳಬಹುದು ಎನ್ನುತ್ತಾರೆ ರಾಘವೇಂದ್ರ ಸೋಮಯಾಜಿ.

ಗ್ರಾಮೀಣ ಪ್ರದೇಶಗಳಿಗೆ ಪಸರಿಸಬೇಕು: ಇದು ಎಲ್ಲರಿಗೂ ಯೋಗ್ಯವಾದ ಕ್ರೀಡೆ. ಇದು ಗ್ರಾಮೀಣ ಪ್ರದೇಶಗಳಿಗೂ ಹಬ್ಬಬೇಕು ಎನ್ನುತ್ತಾರೆ ರಾಘವೇಂದ್ರ ಸೋಮಯಾಜಿ. “ಕ್ರೀಡೆಯೆಂದರೆ ಬರೇ ಪದಕ ಗೆಲ್ಲುವಂಥದ್ದಲ್ಲ. ಎಲ್ಲರೂ ಪದಕಗೆಲ್ಲಲಾಗದು. ಆದರೆ ಉತ್ತಮ ಆರೋಗ್ಯಕ್ಕಾಗಿ ಯಾವುದಾದರೊಂದು ಕ್ರೀಡೆಯಲ್ಲಿ ತೊಡಗಿಕೊಂಡರೆ ಉತ್ತಮ, ಮಾಲ್ದೀವ್ಸ್‌ನಿಂದ ಬಂದ 60 ವರ್ಷದವರೊಬ್ಬರು ಇಲ್ಲಿ ಸ್ಕೇಟಿಂಗ್‌ ಕಲಿತು ಮರಳಿದ್ದಾರೆ, ಸ್ಕೇಟಿಂಗ್‌ ಕಲಿತ ನಂತರ ಅವರಲ್ಲಿಯ ಉತ್ಸಾಹ ಮತ್ತು ಚಟುವಟಿಕೆಯನ್ನು ನೋಡಿ  ಸ್ಕೇಟಿಂಗ್‌ ಕ್ರೀಡೆಗೆ ಇರುವ ಶಕ್ತಿ ಏನೆಂಬುದು ಸ್ಪಷ್ಟವಾಯಿತು,” ಎಂದು ರಾಘವೇಂದ್ರ ಸ್ಕೇಟಿಂಗ್‌ ಕ್ರೀಡೆಯ ಮಹತ್ವವನ್ನು ತಿಳಿಸಿದರು.

ಮಗಳೂ ಸ್ಕೇಟರ್‌!: ಎಂಬಿಎ ಪದವೀಧರರಾಗಿದ್ದರೂ ಕಾರ್ಪೋರೇಟ್‌ ಉದ್ಯೋಗಕ್ಕೆ ಹೋಗದೆ ಸರಳ ಬದುಕನ್ನು ಸಾಗಿಸುತ್ತಿರುವ ರಾಘವೇಂದ್ರ ಸೋಮಯಾಜಿ ಅವರ ಕ್ರೀಡಾ ಯಶಸ್ಸಿಗೆ ಪತ್ನಿ ಸ್ವಾತಿ ಉತ್ತಮ ರೀತಿಯಲ್ಲಿ ಪ್ರೋತ್ಸಾಹ ನೀಡುತ್ತಿದ್ದಾರೆ. ಮಗಳು ಸ್ವರ ಸೋಮಯಾಜಿ ಈಗಾಗಲೇ ಬೆಂಗಳೂರು ಜಿಲ್ಲಾ ಮಟ್ಟದ ರೋಲರ್‌ ಸ್ಕೇಟಿಂಗ್‌ನಲ್ಲಿ ಚಿನ್ನದ ಪದಕ ಗೆದ್ದು ರಾಜ್ಯ ಮಟ್ಟದಲ್ಲಿ ಬೆಳ್ಳಿಯ ಸಾಧನೆ ಮಾಡಿದ್ದಾರೆ. ಪುಟ್ಟ ಮಗ ವೇದ್‌ ಆರ್‌, ಸೋಮಯಾಜಿಯನ್ನೂ ಉತ್ತಮ ಸ್ಕೇಟರ್‌ನನ್ನಾಗಿ ಮಾಡುವೆ ಎನ್ನುತ್ತಾರೆ ರಾಘವೇಂದ್ರ ಸೋಮಯಾಜಿ.

Related Articles