Thursday, October 10, 2024

ಮಹಾಲಿಂಗೇಶ್ವರನ ಸನ್ನಿಧಿಗೆ ಎವರೆಸ್ಟ್‌ ಹೀರೋ ಪ್ರಭಾಕರನ್‌

ಸೋಮಶೇಖರ್‌ ಪಡುಕರೆ, sportsmail

ಮೌಂಟ್‌ ಎವರೆಸ್ಟ್‌ ಏರಿದ ಭಾರತದ ಮೊದಲ ಅರಣ್ಯ ಅಧಿಕಾರಿ ಎಂಬ ಹೆಗ್ಗಳಿಕೆಗೆ ಪಾತ್ರರಾಗಿರುವ ಕರ್ನಾಟಕದ ಎಸ್.‌ ಪ್ರಭಾಕರನ್‌ ನಾಳೆ (ಜನವರಿ 1, 2022) ಉಡುಪಿ ಜಿಲ್ಲೆಯ, ಕುಂದಾಪುರ ತಾಲೂಕಿನ ಉಳ್ತೂರು ಮಹಾಲಿಂಗೇಶ್ವರ ದೇವಸ್ಥಾನದ ಹತ್ತಿರ ನಡೆಯಲಿರುವ ಆಹ್ವಾನಿತ ತಂಡಗಳ ವಾಲಿಬಾಲ್‌ ಚಾಂಪಿಯನ್ಷಿಪ್‌ನಲ್ಲಿ ಮುಖ್ಯ ಅತಿಥಿಗಳಾಗಿ ಆಗಮಿಸಲಿದ್ದಾರೆ.

2016ರಲ್ಲಿ ಕೊಪ್ಪಳ ಅರಣ್ಯ ಸಂರಕ್ಷಣಾ ಅಧಿಕಾರಿಯಾಗಿದ್ದಾಗ ಈ ಸಾಧನೆ ಮಾಡಿದ್ದ ಪ್ರಭಾಕರನ್‌, ಈಗ ಭದ್ರಾ ಹುಲಿ ಸಂರಕ್ಷಿತ ಪ್ರದೇಶದ ನಿರ್ದೇಶಕರಾಗಿದ್ದಾರೆ.

ಮೌಂಟ್‌ ಎವರೆಸ್ಟ್‌ ಏರಿದ ನಂತರ ಕಾರ್ಗಿಲ್‌ ಸಮೀಪವಿರುವ ಮೌಂಟ್‌ ನುನ್‌ ಎಂಬ ಶಿಖರವನ್ನು ಏರಲು ಪ್ರಭಾಕರನ್‌ ಪ್ರಯತ್ನಿಸಿದ್ದರು, ಆದರೆ ತಂಡದ ಇತರ ಸದಸ್ಯರ ಆರೋಗ್ಯ ಸ್ಥಿತಿ ಹದಗೆಟ್ಟ ಕಾರಣ, 6,500ಮೀ. ಏರಿದ ಬಳಿಕ ಹಿಂದೆ ಸರಿಯಬೇಕಾಯಿತು. ಹೊಸ ವರುಷದಲ್ಲಿ ಪ್ರಭಾಕರನ್‌ ಪಕ್ಕದಲ್ಲೇ ಇರುವ ಮೌಂಟ್‌ ಕುನ್‌ ಶಿಖರವನ್ನು ಏರುವ ಗುರಿ ಹೊಂದಿದ್ದಾರೆ.

 

ಪರ್ವತಾರೋಹಣದ ಬಗ್ಗೆ ಹಿಮಾಲಯನ್‌ ಮೌಂಟನೇರಿಂಗ್‌ ಕೋರ್ಸ್‌ ಮಾಡಿರುವ ಪ್ರಭಾಕರನ್‌, ಚಿಕ್ಕಂದಿನಿಂದಲೂ ಸಾಹಸ ಕ್ರೀಡೆಗಳಲ್ಲಿ ತಮ್ಮನ್ನು ತೊಡಗಿಸಿಕೊಂಡವರು. “ಕಾಲೇಜು ದಿನಗಳಲ್ಲೇ ಟ್ರಕ್ಕಿಂಗ್‌ನಲ್ಲಿ ಪಾಲ್ಗೊಳ್ಳುತ್ತಿದ್ದೆ, ಆಗಿನಿಂದಲೂ ಮೌಂಟ್‌ ಎವರೆಸ್ಟ್‌ ಏರಬೇಕೆಂಬ ಹಂಬಲ ಮನದಲ್ಲಿ ಮೂಡಿತ್ತು. ಇತರರ ಸಾಧನೆಗಳು ನನಗೆ ಪ್ರೇರಣೆಯಾಯಿತು. 2015ರಲ್ಲಿ ಒಮ್ಮೆ ಪ್ರಯತ್ನ ಮಾಡಿದ್ದೆ ಆದರೆ ಹಿಮಪಾತದ ಕಾರಣ ಪೂರ್ಣಗೊಳಿಸಲಾಗಲಿಲ್ಲ. ಮುಂದಿನ ದಿನಗಳಲ್ಲಿ ಬೇರೆ ಬೇರೆ ಶಿಖರಗಳನ್ನು ಏರಬೇಕೆಂಬ ಗುರಿ ಇದೆ,” ಎಂದು ಪ್ರಭಾಕರನ್‌ ತಿಳಿಸಿದರು.

ಆಕ್ಸಿಂಜನ್‌ ನೆರವಿಲ್ಲದೆ ಒಂಟಿಯಾಗಿ ಮೌಂಟ್‌ ಎವರೆಸ್ಟ್‌ ಮತ್ತು ಸಮುದ್ರ ಮಟ್ಟದಿಂದ 26,000 ಅಡಿ ಎತ್ತರದಲ್ಲಿರುವ ಜಗತ್ತಿನ 14 ಪರ್ವತಗಳನ್ನು ಏರಿದ ಇಟಲಿಯ ರೆನಾಲ್ಡ್‌ ಮೆಸ್ನರ್‌ ಅವರನ್ನು ಆದರ್ಶವಾಗಿರಿಸಿಕೊಂಡಿರುವ, ಪ್ರಭಾಕರನ್‌ ಭಾರತ ಕಂಡ ಉತ್ತಮ, ದಕ್ಷ ಅರಣ್ಯಾಧಿಕಾರಿ. ತಮಿಳುನಾಡಿನ ತಿರುವಣ್ಣಾಮಲೈ ಮೂಲದವರಾಗಿದ್ದರೂ ಅವರು ಆಡುವ ಕನ್ನಡ ಮಾತಿನಲ್ಲಿ ಎಲ್ಲಿಯೂ ಅವರು ತಮಿಳುನಾಡು ಮೂಲದವರು ಎಂದು ಅನಿಸುವುದೇ ಇಲ್ಲ.

ಅರಣ್ಯ ಇಲಾಖೆಯಲ್ಲಿ ಕೆಲಸ ಮಾಡುವುದೆಂದರೆ ಅದು ಕಠಿಣ ಪರಿಸ್ಥಿತಿಯದ್ದಾಗಿರುತ್ತದೆ. ಈ ರೀತಿಯಲ್ಲಿ ಸಾಹಸ ಕ್ರೀಡೆಗಳಲ್ಲಿ ತೊಡಗಿಕೊಳ್ಳುವುದರಿಂದ ನಮ್ಮ ವೃತ್ತಿಗೂ ನೆರವಾಗುತ್ತದೆ ಎನ್ನುತ್ತಾರೆ ಪ್ರಭಾಕರನ್.‌ ಮೌಂಟ್‌ ಎವರೆಸ್ಟ್‌ ಏರಿದ ನಂತರ ಕರ್ನಾಟಕದ ಅರಣ್ಯ ಪ್ರದೇಶದಲ್ಲಿರುವ ಯಾವುದೇ ಪರ್ವತವನ್ನೂ ನಾವು ಸುಲಭವಾಗಿ, ಅತ್ಯಂತ ಆತ್ಮವಿಶ್ವಾಸದಲ್ಲಿ ಏರಿ, ಏನಾದರೂ ಸಮಸ್ಯೆ ಇದ್ದರೆ ಅದಕ್ಕೆ ಪರಿಹಾರವನ್ನು ಕಂಡುಕೊಳ್ಳಬಹುದು ಎನ್ನುತ್ತಾರೆ. ಪರ್ವತಾರೋಹಣವನ್ನು ತಂಡವಾಗಿ ಏರಿದ್ದರಿಂದ ಇಲ್ಲಿ ಯಾವುದಾದರೂ ಸಂದಿಗ್ಧ ಪರಿಸ್ಥಿತಿಯಲ್ಲಿ ತಂಡವನ್ನು ಕಟ್ಟುವುದು, ಪರಿಹಾರ ಕಾರ್ಯಗಳಲ್ಲಿ ಪಾಲ್ಗೊಳ್ಳಲು ಸುಲಭವಾಗುತ್ತದೆ ಎಂದರು.

ಅಸ್ತಮಾದ ನಡುವೆ ಉತ್ತಮ ಪರ್ವತಾರೋಹಿ:

ಮೌಂಟ್‌ ಎವರೆಸ್ಟ್‌ ಏರುವಾಗ ಪ್ರಭಾಕರನ್‌ ಅವರಲ್ಲಿ ಅಸ್ತಮಾ ಕಾಣಿಸಿಕೊಂಡಿತ್ತು. ಚಳಿಯ ವಾತಾವರಣದಲ್ಲಿ ಅಸ್ತಮಾ ಉಲ್ಬಣಿಸುವುದು ಹೆಚ್ಚು. ಆದರೆ ಉತ್ಸಾಹ, ಗುರಿ ತಲುಪಬೇಕೆಂಬ ಛಲ ಪ್ರಭಾಕರನ್‌ ಅವರ ಹಾದಿಯಲ್ಲಿ ಅಸ್ತಮಾ ಅಡ್ಡಬರಲಿಲ್ಲ. “ಅಸ್ತಮಾ ಲಕ್ಷಣ ಇದ್ದದ್ದು ನಿಜ, ಆದರೆ ಅಲ್ಲಿ ನಾನು ಅತ್ಯಂತ ತಾಳ್ಮೆಯಿಂದ ಪರ್ವತಾರೋಹಣ ಮಾಡಿದೆ, ಏಕೆಂದರೆ ಅಲ್ಲಿ ಸ್ಪರ್ಧೆ ಇರಲಿಲ್ಲ. ಗುರಿ ತಲಪುವುದು ಮುಖ್ಯವಾಗಿತ್ತು ಅಷ್ಟೆ, ನಾನು ಗುರಿ ತಲುಪಿದೆ,” ಎಂದು ಪ್ರಭಾಕರನ್‌ ನಗುತ್ತ ನುಡಿದರು.

ಅರಣ್ಯ ಇಲಾಖೆಯ ಸ್ಟಾರ್‌ ಸುದೀಪ್‌ ಶೆಟ್ಟಿ:

ವಾಲಿಬಾಲ್‌ ಕ್ರೀಡೆಯನ್ನೇ ಉಸಿರಾಗಿಸಿಕೊಂಡ, ಆ ಕ್ರೀಡೆಯಲ್ಲೇ ಬದುಕನ್ನು ರೂಪಿಸಿಕೊಂಡಿರುವ ರಾಜ್ಯದ ಶ್ರೇಷ್ಠ ಆಟಗಾರರಲ್ಲಿ ಒಬ್ಬರಾದ, ಅರಣ್ಯ ಇಲಾಖೆಯಲ್ಲಿ ಕಾರ್ಯನಿರ್ವಹಿಸುತ್ತಿರುವ ಮಲ್ಯಾಡಿಯ ಸುದೀಪ್‌ ಶೆಟ್ಟಿಯ ಬಗ್ಗೆ ಪ್ರಭಾಕರನ್‌ ಅವರು ಮೆಚ್ಚುಗೆಯ ಮಾತನಾಡಿದ್ದಾರೆ. “ಸುದೀಪ್‌ ಒಬ್ಬ ಉತ್ತಮ ಆಟಗಾರ, ನಮ್ಮ ಇಲಾಖೆಯ ಸ್ಟಾರ್‌ ಕ್ರೀಡಾಪಟು ಮತ್ತು ಉತ್ತಮ ಸಂಘಟಕ. ಆತ ಆಯೋಜಿಸುತ್ತಿರುವ ಚಾಂಪಿಯನ್‌ಷಿಪ್‌ನಲ್ಲಿ ಪಾಲ್ಗೊಳ್ಳಲು ಖುಷಿಯಾಗುತ್ತಿದೆ,” ಎಂದು ಹೇಳಿದರು.

Related Articles