Saturday, April 20, 2024

ಭೂಷಣ್‌, ಭಾಸ್ಕರ್‌, ಬಲರಾಮ್‌: ಬೆಂಗಳೂರಿನಲ್ಲೊಂದು ಅಪೂರ್ವ ಈಜು ಕುಟುಂಬ!

ಸೋಮಶೇಖರ್‌ ಪಡುಕರೆ, ಬೆಂಗಳೂರು

ಆ ಮನೆಯಲ್ಲಿ ತಂದೆ, ಮಕ್ಕಳು, ಮೊಮ್ಮಕ್ಕಳು ಎಲ್ಲರೂ  ಈಜುಗಾರರೇ. ಈ ಕಾರಣಕ್ಕಾಗಿಯೇ ಅದು ಅಕ್ವೆಟಿಕ್‌ ಫ್ಯಾಮಿಲಿ!

ಈ ರಾಜ್ಯದ ಶ್ರೇಷ್ಠ ಈಜು ಸಹೋದರರಾದ ಎಂ.ಎಸ್‌. ಭೂಷಣ್‌, ಎಂ.ಎಸ್.‌ ಭಾಸ್ಕರ್‌ ಮತ್ತು ಎಂ.ಎಸ್‌. ಬಲರಾಮ್‌ ಅವರ ಬದುಕಿನ ಕತೆಯನ್ನು ಕೇಳಿದಾಗ ನಿಜವಾಗಿಯೂ ಅಚ್ಚರಿಯಾಗುತ್ತದೆ. ಇದು ದೇಶದ ಕ್ರೀಡಾ ಕ್ಷೇತ್ರದಲ್ಲಿ ನಮಗೆ ಕಾಣ ಸಿಕ್ಕ ಅಪೂರ್ವ ಕುಟುಂಬ. ಈ ದೇಶದಲ್ಲಿ ಚೆಸ್‌ ಕುಟುಂಬವಿದೆ, ಸ್ನೂಕರ್‌ ಕುಟುಂಬವಿದೆ, ಕ್ರಿಕೆಟ್‌ ಕುಟುಂಬವಿದೆ ಆದರೆ ಈಜು ಕುಟುಂಬವಿದೆ ಎಂಬುದು ನಮಗೆ ಹೊಸತು.

ಸುಧಾಮ ಮೂರ್ತಿ ಮತ್ತು ಪಾರ್ವತಿ ಬಾಯಿಗೆ ಮೂವರು ಗಂಡು ಮಕ್ಕಳು. ಭೂಷಣ್‌, ಭಾಸ್ಕರ್‌ ಹಾಗೂ ಬಲರಾಮ್‌. ಸುಧಾಮ ಅವರು ವೃತ್ತಿಯಲ್ಲಿ ಟೈಲರ್‌. ದುಡಿದ ಹಣದಲ್ಲಿ ಸೈಟ್‌ ತೆಗೆದುಕೊಂಡು ಬದುಕುವ ಕನಸು ಕಂಡವರಲ್ಲ. ಬದಲಾಗಿ ತಮ್ಮ ಮಕ್ಕಳು ಉತ್ತಮ ಕ್ರೀಡಾಪಟುಗಳಾಗಿ, ಆರೋಗ್ಯವಂತರಾಗಿ ಇತರರನ್ನೂ ಉತ್ತಮ ಕ್ರೀಡಾಪಟುಗಳನ್ನಾಗಿ ಮಾಡಲಿ ಎಂಬ ಕನಸು ಕಂಡವರು.

ಟೈಲರಿಂಗ್‌ ವೃತ್ತಿಯ ನಡುವೆ ಮಕ್ಕಳನ್ನು ಈಜುಕೊಳಕ್ಕೆ ಕೊಂಡೊಯ್ದರು. ತಾವು ಈಜಿ ಮಕ್ಕಳಿಗೆ ತರಬೇತಿ ನೀಡಿದರು. ಭೂಷಣ್‌, ಭಾಸ್ಕರ್‌ ಹಾಗೂ ಬಲರಾಮ್‌ ವಿವಿಧ ಹಂತದಲ್ಲಿ ಈಜಿ ಕರ್ನಾಟಕವನ್ನು ಪ್ರತಿನಿಧಿಸಿದರು. ಮಕ್ಕಳು ವೃತ್ತಿಪರ ಈಜುಗಾರರಾದರು, ಆದರೆ ಸುಧಾಮ ಮೂರ್ತಿ ಮಾತ್ರ ಈಜುವುದನ್ನು ನಿಲ್ಲಿಸಲಿಲ್ಲ. ತಮ್ಮ 77ನೇ ವಯಸ್ಸಿನಲ್ಲಿ ಸಾಯುವುದಕ್ಕೆ ಮುಂಚಿನ ದಿನವೂ ಈಜುಕೊಳದಲ್ಲಿ ಈಜಿದವರು.

3B ಅಕ್ವೆಟಿಕ್‌ ಫ್ಯಾಮಿಲಿ: ಬೆಂಗಳೂರಿನಲ್ಲಿ ಅಕ್ವೆಟಿಕ್‌ ಫ್ಯಾಮಿಲಿ ಎಂದೇ ಜನಪ್ರಿಯಗೊಂಡಿರುವ ಸುದಾಮ ಮೂರ್ತಿ ಅವರ ಮಕ್ಕಳು ಈಜಿನ ಪ್ರತಿಯೊಂದು ವಿಭಾಗದಲ್ಲೂ ನಿಸ್ಸೀಮರು. ಸುಧಾಮ ಮೂರ್ತಿ ಅವರ ಹಿರಿಯ ಮಗ ಭೂಷಣ್‌ ಈಜುಗಾರ, ಎರಡನೇ ಮಗ ಭಾಸ್ಕರ್‌ ವಾಟರ್‌ ಪೋಲೋ ತಜ್ಞ ಮತ್ತು ಕಿರಿಯ ಮಗ ಬಲರಾಮ್‌ ಡೈವರ್. ಬಲರಾಮ್‌ ಒಂದು ರೀತಿಯಲ್ಲಿ ಈಜಿನಲ್ಲಿ ಪ್ರಾಥಮಿಕ ಹಾಗೂ ಹೈಸ್ಕೂಲು ಇದ್ದ ಹಾಗೆ, ಅಂದರೆ ಚಿಕ್ಕ ಮಕ್ಕಳಿಗೆ ಈಜು ಕಲಿಸುವ ವೇದಿಕೆಯನ್ನು ಕಲ್ಪಿಸಿ ಅವರನ್ನು ಮುಂದಿನ ಹಂತಕ್ಕೆ ಸಜ್ಜುಗೊಳಿಸುತ್ತಾರೆ. ಭಾಸ್ಕರ್‌ ಒಂದು ರೀತಿಯಲ್ಲಿ ಜೂನಿಯರ್‌ ಕಾಲೇಜು ಕಾಲೇಜು ಇದ್ದ ಹಾಗೆ, ಸ್ಪರ್ಧೆಗೆ ಈಜುಗಾರರನ್ನು ಸಿದ್ಧಗೊಳಿಸುತ್ತಾರೆ. ಭೂಷಣ್‌ ಅವರು ಒಂದು ರೀತಿಯಲ್ಲಿ ವಿಶ್ವವಿದ್ಯಾನಿಲಯವಿದ್ದಂತೆ, ಅಂತಾರಾಷ್ಟ್ರೀಯ ಗುಣಮಟ್ಟದ ತರಬೇತಿ ನೀಡುವ ಸಾಮರ್ಥ್ಯ ಹೊಂದಿದರುವ ಗುರು. ಭಾರತದ ಉತ್ತಮ ಈಜು ತರಬೇತುದಾರರಲ್ಲಿ ಒಬ್ಬರು. ಮತ್ತು ಭಾರತ ಈಜು ತಂಡದ ಕೋಚ್‌ ಕೂಡ. ಭಾರತ ಈಜು ತಂಡವು ಯಾವುದೇ ಅಂತಾರಾಷ್ಟ್ರೀಯ ಮಟ್ಟದಲ್ಲಿ ಸ್ಪರ್ಧೆ ಮಾಡಲು ಹೊರಟಾಗ ತಂಡದೊಂದಿಗೆ ತೆರಳಲು ಭಾರತೀಯ ಈಜು ಸಂಸ್ಥೆಯಿಂದ ಭೂಷಣ್‌ಗೆ ಆಹ್ವಾನ ಬರುತ್ತದೆ. ಕಳೆದ ಹದಿನೈದು ವರ್ಷಗಳಿಂದ ಇದು ನಡೆಯುತ್ತಿದೆ. ಭೂಷಣ್‌ ಅವರು ಭಾರತದಾತ್ಯಂತ ಜನಪ್ರಿಯ ಕೋಚ್‌ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ.

ಭೂಷಣ್‌ ಅವರ ಮಗ ಆಕಾಶ್‌ ಕರ್ನಾಟಕ ರಾಜ್ಯವನ್ನು ಪ್ರತಿನಿಧಿಸಿದ್ದು, ಈಗ ಜರ್ಮನಿಯಲ್ಲಿ ಉದ್ಯೋಗಿಯಾಗಿದ್ದಾರೆ, ಭಾಸ್ಕರ್‌ ಅವರ  ಮಗಳು ಸಾಕ್ಷಿ ಕೂಡ ಈಜುಪಟು, ಬಲರಾಮ್‌ ಅವರ ಮಗಳು ತ್ರಿಶಾ ತಂದೆಯಂತೆ ಈಜುಗಾರ್ತಿ.

ಭೂಷಣ್‌ ಹಾಗೂ ಭಾಸ್ಕರ್‌ ಗ್ಲೆನ್‌ಮಾರ್ಕ್‌ ಈಜು ಫೌಂಡೇಷನ್‌ನ ಆಧಾರ ಸ್ತಂಭ, ಇಬ್ಬರೂ ಪ್ರಧಾನ ಕೋಚ್‌ ಆಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಬಲರಾಮ್‌ ಜೆ.ಪಿ. ನಗರದಲ್ಲಿರುವ ವಿ ಫಿಟ್ನೆಸ್‌ ಕೇಂದ್ರದಲ್ಲಿ ಈಜು ತರಬೇತುದಾರರು.

ಎಎಸ್‌ಸಿಎ ತರಬೇತಿ: ಈ ಮೂವರು ಸಹೋದರರು ಅಮೆರಿಕನ್‌ ಸ್ಮಿಂಗ್‌ ಕೋಚಸ್‌ ಅಸೋಸಿಯೇಷನ್‌ (ಎಎಸ್‌ಸಿಎ) ನಡೆಸುವ ಐದು ಹಂತದ ತರಬೇತಿಯನ್ನು ಹೊಂದಿದ್ದಾರೆ. ಹಿರಿಯವರಾದ ಭೂಷಣ್‌ ಎಎಸ್‌ಸಿಎ ನಡೆಸುವ ಐದು ಹಂತದ ತರಬೇತಿಯನ್ನು ಪೂರ್ಣಗೊಳಿಸಿದ್ದಾರೆ. ಭಾಸ್ಕರ್‌ ನಾಲ್ಕನೇ ಹಂತದ ತರಬೇತಿಯನ್ನು ಪೂರ್ಣಗೊಳಸಿದ್ದು, ಬಲರಾಮ್‌ ಮೂರನೇ ಹಂತದ ಕೋರ್ಸ್‌ ಮಾಡಿದ್ದಾರೆ. ಅಲ್ಲದೆ ಕರ್ನಾಟಕ ರಾಜ್ಯ ಈಜು ಸಂಸ್ಥೆ ನಡೆಸುವ ತರಬೇತಿಯನ್ನೂ ಪೂರ್ಣಗೊಳಿಸಿರುತ್ತಾರೆ.

ಕರ್ನಾಟಕದಲ್ಲಿರುವ ಮರಾಠಿ ಸಮುದಾಯ ಅಂದರೆ, ಸೋಮವಂಶ ಸಹಸ್ರಾರ್ಜುನ ಕ್ಷತ್ರಿಯ ಸಮುದಾಯದಲ್ಲಿ ಈಜುವುದನ್ನು ಬದುಕಾಗಿಸಿಕೊಂಡಿರುವ ಅಪೂರ್ವ ಕುಟುಂಬ ಇವರದ್ದು. ಸಾಮಾನ್ಯವಾಗಿ ಬಟ್ಟೆ ಉದ್ಯಮ ನಮ್ಮದು, ಜೊತೆಯಲ್ಲಿ ಬೇರೆ ಉದ್ಯೋಗ, ಉದ್ದಿಮೆಯಲ್ಲಿ ತೊಡಗಿದವರಿದ್ದಾರೆ. ಆದರೆ ಈ ಮೂವರು ಸಹೋದರರು ಈಜನ್ನು ಬದುಕು, ಉಸಿರಾಗಿಸಿಕೊಂಡಿದ್ದು ವಿಶೇಷ, ಇದು ಕನ್ನಡ ನಾಡಿವ ವಿಶೇಷ.

ಸ್ಪರ್ಧೆಯಲ್ಲಿ ಪಾಲ್ಗೊಂಡವರು ಮಾತ್ರ ಈಜುಗಾರರಲ್ಲ: “ನಮ್ಮ ತಂದೆ ಒಲಿಂಪಿಕ್ಸ್‌ನಲ್ಲಿ ಪಾಲ್ಗೊಳ್ಳಿ ಎಂದು ನಮಗೆ ಈಜು ಕಲಿಸಲಿಲ್ಲ. ಉತ್ತಮ ಆರೋಗ್ಯದಿಂದಿರಿ, ಉತ್ತಮ ಬದುಕನ್ನು ಕಟ್ಟಿಕೊಳ್ಳಿ, ಎಂದು ಈಜು ಕಲಿಸಿ, ನಮ್ಮೊಂದಿಗೇ ಈಜಿದರು. ನಮ್ಮಲ್ಲಿಗೆ ತರಬೇತಿ ಬರುವವರಲ್ಲಿ ಅನೇಕರು ವಿವಿಧ ಹಂತಗಳಲ್ಲಿ ರಾಜ್ಯವನ್ನು ಪ್ರತಿನಿಧಿಸಿದ್ದಾರೆ, ಉತ್ತಮ ಆರೋಗ್ಯಕ್ಕಾಗಿ ಈಜುವವರೂ ಬರುತ್ತಾರೆ. ಕಾರ್ಪೊರೋಟ್‌ ವಲಯದಿಂದಲೂ ಬರುತ್ತಾರೆ, ಇದುವರೆಗೂ ಲಕ್ಷಂತಾರ ಜನ ಈಜಿನಲ್ಲಿ ತಮ್ಮನ್ನು ತೊಡಗಿಸಿಕೊಂಡಿದ್ದಾರೆ,” ಎಂದು B3 (ಭೂಷಣ್‌, ಭಾಸ್ಕರ್‌, ಬಲರಾಮ್‌)ಯ ಕಿರಿಯವರಾದ ಬಲರಾಮ್‌ ಹೇಳಿದ್ದಾರೆ.

ಮೂವರು ಸೇರಿ 100 ವರ್ಷಗಳು!!!: ಈ ಮೂವರು ಸಹೋದರರು ತರಬೇತಿ ನೀಡಿದ ವರ್ಷಗಳನ್ನು ಲೆಕ್ಕ ಹಾಕಿದರೆ ಬರೋಬ್ಬರಿ ನೂರು ವರ್ಷಗಳು. ಭೂಷಣ್‌ ಕಳೆದ 35 ವರ್ಷಗಳಿಂದ ತರಬೇತಿ ನೀಡುತ್ತಿದ್ದಾರೆ, ಭಾಸ್ಕರ್‌ 33 ವರ್ಷಗಳಿಂದ ತರಬೇತಿ ನೀಡುತ್ತಿದ್ದಾರೆ, ಕಿರಿಯವರಾದ ಬಲರಾಮ್‌ 32 ವರ್ಷಗಳಿಂದ ಈಜು ತರಬೇತಿಯಲ್ಲಿ ತಮ್ಮನ್ನು ತೊಡಗಿಸಿಕೊಂಡಿದ್ದಾರೆ.  ಮೂವರು ಸೇರಿ ತರಬೇತಿ ನೀಡಿದ ವರ್ಷಗಳನ್ನು ನೋಡಿದರೆ ಅದು ನೂರು ವರ್ಷಗಳು!. ಈ ಮೂವರಲ್ಲಿ ತರಬೇತಿ ಪಡೆದ ಈಜುಗಾರರ ಸಂಖ್ಯೆ ಲಕ್ಷ ದಾಟಿರುವುದು ಸಹಜ.

ಸಾಹಸಲ್ಲಿ ಅಭಿಷೇಕ್‌ ಬಚ್ಚನ್‌ಗೆ ಡ್ಯೂಪ್‌!

ಬಾಲಿವುಡ್‌ನ ಹಿರಿಯ ನಟ ಅಮಿತಾಬ್‌ ಬಚ್ಚನ್‌ ಅವರ ಪುತ್ರ ಅಭಿಷೇಕ್‌ ಬಚ್ಚನ್‌ ಅವರ “ರಾವಣ್‌” ಚಿತ್ರದ ಚಿತ್ರೀಕರಣ ಹೊಗೇನಕಲ್‌ ಜಲಪಾತದಲ್ಲಿ ನಡೆಯುತ್ತಿತ್ತು. 90 ಅಡಿಗಳ ಎತ್ತರದಿಂದ ನೀರಿಗೆ ಜಿಗಿಯುವ ದೃಶ್ಯವೊಂದಿತ್ತು. ಎಲ್ಲರೂ ಅಭಿಷೇಕ್‌ ಬಚ್ಚನ್‌ ಅಲ್ಲಿಂದ ಜಿಗಿದಿದ್ದು ಅಂದುಕೊಂಡಿರಬಹುದು. ಆದರೆ ಆ ಅದ್ಭುತ ಡೈವಿಂಗ್‌ ಮಾಡಿದ್ದು ಬೇರೆ ಯಾರೂ ಅಲ್ಲ, ಕರ್ನಾಟಕದ ಶ್ರೇಷ್ಠ ಡೈವರ್‌ ಬಲರಾಮ್‌. ಕುತೂಹಲದ ಸಂಗತಿಯೆಂದರೆ ಲಂಡನ್‌ನಲ್ಲಿ ನಡೆದ ರಾವಣ್‌ ಪ್ರೀಮಿಯರ್‌ ಶೋ ನೋಡಿ ಹೊರಬಂದ ಅಭಿಷೇಕ್‌ ಬಚ್ಚನ್‌ಗೆ ಮಾಧ್ಯಮದವರು ಅದೇ ಡೈವ್‌ನ ಅನುಭವ ಕೇಳಿದರು, “ಅದೊಂದು ಅದ್ಭುತ ಅನುಭವ” ಎಂದು ಅಭಿಷೇಕ್‌ ಮುನ್ನಡೆದರು.

ಬದುಕ ಹೊಲಿದ ದರ್ಜಿ ಸುಧಾಮ ಮೂರ್ತಿ:

ಸುಧಾಮ ಮೂರ್ತಿ ವೃತ್ತಿಯಲ್ಲಿ ಒಬ್ಬ ಟೈಲರ್‌. ಆದರೆ ಅವರು ಹೊಲಿದಿದ್ದು ಬರೇ ಬಟ್ಟೆಯನ್ನಲ್ಲ. ಬದುಕಿನ ಬಟ್ಟೆಯನ್ನೇ ಹೊಲಿದಿದ್ದಾರೆ. ತಮ್ಮ ಮಕ್ಕಳ ಬದುಕಿಗೆ ಹರಿದು ಹೋಗದ ಅಂಗಿಯನ್ನು ತೊಡಿಸಿದ್ದಾರೆ. ಬೆಂಗಳೂರಿನಲ್ಲಿದ್ದು ಅವರು ಜಾಗ ಖರೀದಿಸುವ ಕನಸು ಕಾಣಲಿಲ್ಲ. ಆದರೆ ಉತ್ತಮ ಈಜುಗಾರರನ್ನು, ಆರೋಗ್ಯವಂಥವರನ್ನು, ಉತ್ತಮ ಪ್ರಜೆಯನ್ನು ನೀಡುವ ಕನಸು ಕಂಡು. ಅದರಲ್ಲೇ ಯಶಸ್ಸು ಕಂಡರು. ಬದುಕೆಂಬ ಬಟ್ಟೆಗೆ ಸರಿಹೊಂದುವ ನೂಲನ್ನು ಪೋಣಿಸಿದರು.  ತಂದೆಯ ಹಾದಿಯಲ್ಲೇ ನಡೆದ ಮೂವರೂ ಉತ್ತಮ ಈಜುಗಾರರಾದರು, ತರಬೇತುದಾರರಾದರು. ತಮ್ಮ ಜ್ಞಾನವನ್ನು ಇತರರಿಗೆ ನೀಡಿದರು. ಇದುವೇ ಸಾರ್ಥಕ ಬದುಕು.

Related Articles