Saturday, February 24, 2024

ಕಿಕ್‌ ಬಾಕ್ಸಿಂಗ್‌: ನಿಖಿಲ್‌ ಸಾವಿಗೆ ಯಾರು ಹೊಣೆ?

ಸೋಮಶೇಖರ್‌ ಪಡುಕರೆ, ಬೆಂಗಳೂರು:

 ಬೆಂಗಳೂರಿನಲ್ಲಿ ಭಾನುವಾರ ನಡೆದ K1 ಕಿಕ್‌ ಬಾಕ್ಸಿಂಗ್‌ ಚಾಂಪಿಯನ್‌ಷಿಪ್‌ನಲ್ಲಿ ಗಂಭೀರವಾಗಿ ಗಾಯಗೊಂಡಿದ್ದ ಮೈಸೂರಿನ ಬಾಕ್ಸರ್‌ ಬುಧವಾರ ಸಾವನ್ನಪ್ಪಿದ್ದು, ಈ ಸಾವಿಗೆ ಯಾರು ಹೊಣೆ ಎಂಬ ಪ್ರಶ್ನೆ ಕ್ರೀಡಾ ವಲಯದಲ್ಲಿ ಉದ್ಭವವಾಗಿದೆ. 21 ವರ್ಷದ ಕ್ರೀಡಾಪಟುವಿನ ಕುಟುಂಬಕ್ಕೆ ನ್ಯಾಯ ದೊರಕಬೇಕಿದೆ. ಸಂಬಂಧಪಟ್ಟ ಕ್ರೀಡಾ ಸಂಘಟನೆಗಳು ಈ ಬಗ್ಗೆ ತನಿಖೆ ನಡೆಸಬೇಕಾದ ಅನಿವಾರ್ಯತೆ ಇದೆ.

ಕಿಕ್‌ ಬಾಕ್ಸಿಂಗ್‌ ಅಪಾಯಕಾರಿ ಮಾರ್ಷಲ್‌ ಆರ್ಟ್‌ ಎಂಬುದು ಸ್ಪಷ್ಟ. ಆದರೆ ಪ್ರತಿಯೊಂದು ಮಾರ್ಷಲ್‌ ಆರ್ಟ್‌ ಸ್ಪರ್ಧೆಯನ್ನು ಆಯೋಜಿಸುವಾಗ ಸಂಘಟಕರು ಮತ್ತು ಸ್ಪರ್ಧಿಸುವವರು ಒಂದಿಷ್ಟು ನಿಯಮಗಳನ್ನು ಪಾಲಿಸಬೇಕಾದ ಅನಿವಾರ್ಯತೆ ಇರುತ್ತದೆ. ಹಾಗೆ ನಿಯಮಗಳನ್ನು ಪಾಲಿಸಿಯೂ ಹೋರಾಟದಲ್ಲಿ ಸತ್ತವರ ಸಂಖ್ಯೆ ಜಗತ್ತಿನಲ್ಲಿ ಇದುವರೆಗೂ 950ರ ಗಡಿದಾಟಿದೆ. ಭಾರತದಲ್ಲಿ ಸತ್ತವರ ಸಂಖ್ಯೆ ಅತಿ ವಿರಳ. ಏಕೆಂದರೆ ಈ ಕ್ರೀಡೆ ಪಾಶ್ಚಿಮಾತ್ಯ ದೇಶಗಳಲ್ಲಿರುವಂತೆ ಹೆಚ್ಚು ಜನಪ್ರಿಯತೆಗೊಂಡಿಲ್ಲ.

ನಿಖಿಲ್‌ ಸಾವಿಗೆ ಯಾರು ಹೊಣೆ?: ನಿಖಿಲ್‌ ಅವರ ಮನೆಯಲ್ಲಿ ಆಕ್ರಂದನ ಮುಗಿಲು ಮುಟ್ಟಿದೆ. ಮೈಸೂರಿನ ಸಂಸದ ಪ್ರತಾಪ್‌ ಸಿಂಹ ಕೂಡ ಘಟನೆಯ ಸುದ್ದಿ ಕೇಳಿ ದಿಗ್ಭ್ರಮೆ ವ್ಯಕ್ತಪಡಿಸಿದ್ದಾರೆ. ದಿನ ಕಳೆದಂತೆ ಈ ನೋವು ಹೆತ್ತವರಲ್ಲಿ ಮಡುಗಟ್ಟುತ್ತದೆ. ನಿಖಲ್‌ ನೆನಪಿನಾಳದಲ್ಲಿ ಸೇರಿ ಹೋಗುತ್ತಾರೆ. ಇದು ಮನುಷ್ಯ ಸಹಜ. ಆದರೆ ಈ ಅನ್ಯಾಯವನ್ನು ತಡೆಯುವವರು ಯಾರು? ನಿಜವಾಗಿಯೂ ಕ್ರೀಡಾ ನಿಯಮಗಳನ್ನು ಪಾಲಿಸಿದ್ದಾರೆಯೇ? ಈ ಘಟನೆಯನ್ನು ನೋಡಿಕೊಂಡು ಸುಮ್ಮನಿರುವುದೇ? ನಾಳೆ ಇನ್ನೊಂದು ಜೀವ ಹೀಗೆಯೇ ಬಲಿಯಾದರೆ?, ಇದಕ್ಕೇನಾದರೂ ಪರಿಹಾರ ಕಂಡುಕೊಳ್ಳುವುದು ಬೇಡವೇ?

ನಿಯಮ ಏನು ಹೇಳುತ್ತದೆ? : ವಿಶ್ವ ಕಿಕ್‌ ಬಾಕ್ಸಿಂಗ್‌ ಸಂಸ್ಥೆಗಳ ಜಾಗತಿಕ ಸಂಘಟನೆ (World Association of Kickboxing Organisation) ಇದನ್ನು ಸಂಕ್ಷಿಪ್ತವಾಗಿ WAKO ಎಂದು ಕರೆಯುತ್ತಾರೆ. ಜಗತ್ತಿನ ಯಾವುದೇ ಮೂಲೆಯಲ್ಲೂ ಯಾವುದೇ ಪ್ರಮಾಣದ ಯಾವುದೇ ರೀತಿಯ “ಕಿಕ್‌ ಬಾಕ್ಸಿಂಗ್‌“ ಚಾಂಪಿಯನ್‌ಷಿಪ್‌ ನಡೆದರೂ ಈ ಸಂಸ್ಥೆ ಜಾರಿಗೆ ತಂದಿರುವ ನಿಯಮಗಳನ್ನು ಕಡ್ಡಾಯವಾಗಿ ಅನುಸರಿಸಬೇಕಾಗುತ್ತದೆ. ಪ್ರತಿಯೊಂದು ವಿಷಯದಲ್ಲೂ ಜಾಗತಿಕ ಸಂಸ್ಥೆ ಪ್ರತ್ಯೇಕ ಜಾರಿಗೆ ತಂದಿದೆ. ಅವುಗಳನ್ನು ಅನುಸರಿಸದೇ ನಡೆಸುವ ಯಾವುದೇ ಸ್ಪರ್ಧೆಗಳು ಸಿಂಧುವಲ್ಲ. 188 ಪುಟಗಳ ಈ ನಿಯಮಗಳ ಪಟ್ಟಿಯನ್ನು ಓದಿದಾಗ ನಿಖಿಲ್‌ ಸಾವಿಗೆ ಕಾರಣಗಳು ಸಿಗಬಹುದು. ನಿಖಿಲ್‌ ಸಾವಿಗೆ ಎದುರಾಳಿಯ ಹೊಡೆತ ಕಾರಣವಾಗಿರುವುದು ಸಾಮಾನ್ಯ.

  • ಚಾಂಪಿಯನ್‌ಷಿಪ್‌ವೊಂದರಲ್ಲಿ ಭಾಗಹಿಸುವ ಕಿಕ್‌ ಬಾಕ್ಸರ್‌, ಕೋಚ್‌, ರೆಫರಿ ಮತ್ತು ಇತರ ಅಧಿಕಾರಿಗಳು ಎಲ್ಲರೂ ಇಲ್ಲಿಯ ಯಶಸ್ಸು ಮತ್ತು ವೈಫಲ್ಯಕ್ಕೆ ಕಾರಣರಾಗಿರುತ್ತಾರೆ.
  • WAKO ದಿಂದ ಮಾನ್ಯತೆ ಪಡೆದ ರಾಷ್ಟ್ರೀಯ ಅಥವಾ ರಾಜ್ಯ ಫೆಡರೇಷನ್‌ಗಳು ಕಿಕ್‌ ಬಾಕ್ಸರ್‌ಗಳು ತಮ್ಮ ಹೆಸರನ್ನು ನೋಂದಾಯಿಸಿರಬೇಕು.
  • ನೋದಾಯಿಸಲ್ಪಟ್ಟ ಕಿಕ್‌ ಬಾಕ್ಸರ್‌ಗಳಿಗೆ ಮಾತ್ರ ಕಿಕ್‌ ಬಾಕ್ಸಿಂಗ್‌ ಚಾಂಪಿಯನ್‌ಷಿಪ್‌ಗಳಲ್ಲಿ ಭಾಗವಹಿಸುವ ಅವಕಾಶ ಇರುತ್ತದೆ.
  • ಯಾವುದೇ ಸ್ಪರ್ಧೆಯಲ್ಲಿ ಭಾಗವಹಿಸಬೇಕಾದರೆ ಈ ಕಿಕ್‌ ಬಾಕ್ಸರ್‌ “ಫಿಟ್‌ ಟು ಫೈಟ್‌” ಎಂದು ವೈದ್ಯಕೀಯ ಪ್ರಮಾಣ ಪತ್ರವನ್ನು ಹೊಂದಿರಬೇಕು. ಒಂದು ವರ್ಷದ ಬಳಿಕ ಈ ಪ್ರಮಾಣ ಪತ್ರವನ್ನು ನವೀಕರಿಸಬೇಕು.
  • ಲೈಸನ್ಸ್‌ ಹೊಂದಿರುವ ಕೋಚ್‌ಗಳು ಮಾತ್ರ ತರಬೇತಿ ನೀಡಬೇಕಾಗುತ್ತದೆ. ಭಾರತದಲ್ಲಿ ಎಷ್ಟು ಜನ ಪರವಾನಗಿ ಪಡದ ತರಬೇತುದಾರರಿದ್ದಾರೆ ಎಂಬುದು ಪ್ರಶ್ನೆ.
  • ತರಬೇತಿ ನೀಡಿದ ಕೋಚ್‌ ಇಲ್ಲದೆ ಕಿಕ್‌ ಬಾಕ್ಸರ್‌ ಸ್ಪರ್ಧೆಗೆ ಇಳಿಯುವಂತಿಲ್ಲ. ಒಂದು ವೇಳೆ ಯಾವುದೋ ಕಾರಣಕ್ಕೆ ರೆಫರಿ ಕೋಚನ್ನು ತೆಗೆದು ಹಾಕಿದರೂ ಬದಲಿ ಕೋಚನ್ನು ಕೂಡಲೇ ನಿಯೋಜಿಸತಕ್ಕದ್ದು.
  • ಒಂದು ವೇಳೆ ಸ್ಪರ್ಧಿ ಕೊನೆಯ ಕ್ಷಣದಲ್ಲಿ ನನ್ನಿಂದ ಫೈಟ್‌ ಮಾಡಲು ಆಗುತ್ತಿಲ್ಲ ಎಂದು ಹೇಳಿದರೆ ರೆಫರಿ ಸ್ಪರ್ಧೆಯನ್ನು ನಿಲ್ಲಿಸತಕ್ಕದ್ದು.
  • ಸ್ಪರ್ಧೆ ನಡೆಯುವಲ್ಲಿ ಒಬ್ಬ ನುರಿತ ಡಾಕ್ಟರನ್ನು ನಿಯೋಜಿಸಬೇಕು. ಪ್ರಥಮ ಚಿಕಿತ್ಸಾ ಸೌಲಭ್ಯ ಇರಬೇಕು. ಅಂಬ್ಯಲೆನ್ಸ್‌ ಸೌಲಭ್ಯ ಕಡ್ಡಾಯವಾಗಿ ಬೇಕೇ ಬೇಕು.
  • ಆರೋಗ್ಯ ಮತ್ತು ಸುರಕ್ಷತೆಯ ದೃಷ್ಟಿಯಿಂದ ಸೆಂಟ್ರಲ್‌ ರೆಫರಿ ಯಾವಾಗಬೇಕಾದರೂ ಸ್ಪರ್ಧೆಯನ್ನು ನಿಲ್ಲಿಸಬಹುದು.

ಹೀಗೆ ಹಲವಾರು ನಿಯಮಗಳನ್ನು ಯಾವುದೇ ಕಿಕ್‌ ಬಾಕ್ಸಿಂಗ್‌ ಚಾಂಪಿಯನ್‌ಷಿಪ್‌ ಆಯೋಜಿಸುವಾಗ ಪಾಲಿಸಬೇಕಾಗುತ್ತದೆ. ಬೆಂಗಳೂರಿನಲ್ಲಿ ನಡೆದ ಚಾಂಪಿಯನ್‌ಷಿಪ್‌ ವೇಳೆ ಮೇಲ್ಕಂಡ ನಿಯಮಗಳನ್ನು ಪಾಲಿಸಲಾಗಿದೆಯೇ ಎಂಬುದನ್ನು ಗಮನಿಸಬೇಕು.

ಭಾರತದಲ್ಲಿ ಎರಡು ಕಿಕ್‌ ಬಾಕ್ಸಿಂಗ್‌ ಫೆಡರೇಷನ್‌ಗಳು ಯಾಕೆ?

ಭಾರತದಲ್ಲಿ ವಾಕೋ ಇಂಡಿಯಾ ಕಿಕ್‌ ಬಾಕ್ಸಿಂಗ್‌ ಫೆಡರೇಷನ್‌ ಹಾಗೂ ಕಿಕ್‌ ಬಾಕ್ಸಿಂಗ್‌ ಫೆಡರೇಷನ್‌ ಆಫ್‌ ಇಂಡಿಯಾ ಎಂಬ ಎರಡು ಸಂಸ್ಥೆಗಳಿವೆ. ಎರಡೂ ಕಿಕ್‌ ಬಾಕ್ಸಿಂಗ್‌ ಕ್ರೀಡೆಯಲ್ಲಿಯೇ ತೊಡಗಿಕೊಂಡಿವೆ. ಎರಡಕ್ಕೂ ಕ್ರೀಡಾ ಇಲಾಖೆ ಮಾನ್ಯತೆ ನೀಡಿದೆ.

ಬೆಂಗಳೂರಿನಲ್ಲಿ ಕಿಕ್‌ ಬಾಕ್ಸಿಂಗ್:‌

ಬೆಂಗಳೂರಿನಲ್ಲಿ ಗಲ್ಲಿ ಗಲ್ಲಿಯಲ್ಲಿ ಕಿಕ್‌ ಬಾಕ್ಸಿಂಗ್‌ ತರಬೇತಿ ಕೇಂದ್ರಗಳಿಗೆ, ಖುಷಿಯ ವಿಚಾರ. ಆದರೆ ಅವರು ಯಾವ ರೀತಿಯಲ್ಲಿ ತರಬೇತಿ ನೀಡುತ್ತಿದ್ದಾರೆ?. ಅಲ್ಲಿರುವ ಕೋಚ್‌ಗಳಲ್ಲಿ ತರಬೇತಿ ನೀಡಲು ಅಧಿಕೃತ ಲೈಸನ್ಸ್‌ ಇದೆಯಾ? ಎಂದು ವಿಚಾರಿಸುವುದು ಈಗ ಅನಿವಾರ್ಯವಾಗಿದೆ. ಏಕೆಂದರೆ ಜೀವಕ್ಕೇ ಅಪಾಯ ತರುವ ಕ್ರೀಡೆಗಳಿಗೆ ತರಬೇತಿ ನೀಡುವಾಗ ಅದರಲ್ಲಿ ಪಳಗಿದವರು, ಮಾನ್ಯತೆ ಪಡೆದವರು ಇದ್ದರೆ ಕಲಿಯುವವರಿಗೆ ಅನುಕೂಲವಾಗುತ್ತದೆ.

ಎಂಎಂಎ, ಮುವಾಥಾಯ್‌, ಜಿಜುತ್ಸು, ಕಿಕ್‌ ಬಾಕ್ಸಿಂಗ್‌, ಕರಾಟೆ, ಟೆಕ್ವಾಂಡೋ, ಹೀಗೆ ಮಾರ್ಷಲ್‌ ಆರ್ಟ್‌ಗಳಲ್ಲಿ ಹಲವಾರು ಪ್ರಕಾರಗಳಿವೆ. ನಿಯಮವೂ ಭಿನ್ನವಾಗಿರುತ್ತದೆ. ಏನೇ ಇದ್ದರೂ ರಿಂಗ್‌ನ ಹೊರಗೂ ಒಳಗೂ ಸ್ಪರ್ಧಿಯ ಸುರಕ್ಷತೆಯ ಬಗ್ಗೆ ಸೂಕ್ತ ಕ್ರಮಗಳನ್ನು ಕೈಗೊಳ್ಳಬೇಕಾಗುತ್ತದೆ.

Related Articles