ಸೋಮಶೇಖರ್ ಪಡುಕರೆ, ಬೆಂಗಳೂರು
ಗಾಲ್ಫ್ ಶಾಲೆ ತೆರೆದು ಸುಮಾರು ಐದು ಸಾವಿರ ಜನರಿಗೆ ಗಾಲ್ಫ್ ತರಬೇತಿ ನೀಡಿದರು. ಗಾಲ್ಫ್ ಶ್ರೀಮಂತರ ಕ್ರೀಡೆಯಲ್ಲ ಅದನ್ನು ಬಡವರೂ ಆಡಬಹುದು ಎಂಬುದನ್ನು ತೋರಿಸಿಕೊಟ್ಟರು, ಸರಕಾರಿ ಕನ್ನಡ ಶಾಲಾ ಮಕ್ಕಳಿಗೆ ಗಾಲ್ಫ್ ತರಬೇತಿ ನೀಡಿದರು, ಕರ್ನಾಟಕ ಗಾಲ್ಫ್ ಸಂಸ್ಥೆಯ ಅಧ್ಯಕ್ಷರಾದರು, ಕಲ್ಮಶ ನೀರನ್ನು ಶುದ್ಧೀಕರಿಸಿ ಗಾಲ್ಫ್ ಕೋರ್ಸ್‌ಗೆ ಬಳಸುವ ಮೂಲಕ ಗಾಲ್ಫ್ ಕೋರ್ಸನ್ನು ಪರಿಸರ ಸ್ನೇಹಿ ಮಾಡಿದರು…. ಈಗ ಗಾಲ್ಫ್ ಕರ್ನಾಟಕ ಎಂಬ ಸಂಸ್ಥೆಯನ್ನು ಹುಟ್ಟು ಹಾಕಿ ಆ ಮೂಲಕ ಕರ್ನಾಟಕವನ್ನು ದೇಶದ ಗಾಲ್ಫ್ ರಾಜ್ಯವನ್ನಾಗಿ ಮಾಡಲು ಹೊರಟಿದ್ದಾರೆ ಬೆಂಗಳೂರಲ್ಲಿ ನೆಲೆಸಿರುವ ಉಡುಪಿ ಮೂಲದ ಕ್ರೀಡಾಭಿಮಾನಿ ಡಾಕ್ಟರ್ ರೋಹಿತ್ ಶೆಟ್ಟಿ.
ಗಾಲ್ಫ್ ಕೋರ್ಸ್ ನೋಡಿದ ಕೂಡಲೇ, “ಈ ಆಟವಾಡಲು ಎಷ್ಟು ಜಾಗ ವೇಸ್ಟ್ ಆಗುತ್ತಿದೆ,” ಎಂದು ಹೇಳುವವರಿದ್ದಾರೆ, ಆದರೆ ಪ್ರವಾಸೋದ್ಯಮದ ಮೂಲಕ ಆದಾಯ ತರುವಲ್ಲಿ ಗಾಲ್ಫ್ ಅಗ್ರ ಸ್ಥಾನದಲ್ಲಿದೆ ಎಂಬುದನ್ನು ಮರೆಯುವಂತಿಲ್ಲ. ಬೆಂಗಳೂರಿನಲ್ಲಿರುವ ಬೆಂಗಳೂರು ಗಾಲ್ಫ್ ಕೋರ್ಸ್ ಭಾರತದ ಅತ್ಯಂತ ಪುರಾತನ ಗಾಲ್ಫ್ ಕೋರ್ಸ್ ಆಗಿದೆ. ಅದೇ ರೀತಿ ಕರ್ನಾಟಕ ಗಾಲ್ಫ್ ಕೋರ್ಸ್ ದೇಶದ ಅತ್ಯಂತ ಉತ್ತಮ ಗಾಲ್ಫ್ ಕೋರ್ಸ್ ಎನಿಸಿದೆ. ರಾಜ್ಯದಲ್ಲಿ ಒಟ್ಟು 27 ಗಾಲ್ಫ್ ಕೋರ್ಸ್‌ಗಳಿದ್ದು, ಅವುಗಳಲ್ಲಿ ಮೂರು ಗಾಲ್ಫ್ ಕೋರ್ಸ್‌ಗಳು ಕಾರ್ಯನಿರ್ವಹಿಸುತ್ತಿಲ್ಲ. ಈ ಎಲ್ಲ ಗಾಲ್ಫ್ ಕೋರ್ಸ್‌ಗಳಿಗೆ ವೇದಿಕೆಯಾಗಿ ಹುಟ್ಟಿಕೊಂಡಿದ್ದೇ ಗಾಲ್ಫ್ ಕರ್ನಾಟಕ. ಡಾ, ರೋಹಿತ್ ಶೆಟ್ಟಿ ಅಧ್ಯಕ್ಷರಾಗಿದ್ದು, ಹರೀಶ್ ಕುಮಾರ್ ಉಪಾಧ್ಯಕ್ಷರಾಗಿದ್ದಾರೆ. ಶ್ರೀನಿವಾಸ್ ಮೂರ್ತಿ ಖಜಾಂಚಿಯಾಗಿ ಕಾರ್ಯನಿರ್ವಹಿಸುತ್ತಿದ್ದಾರೆ.
ಗಾಲ್ಫ್ ಕರ್ನಾಟಕದ ಉದ್ದೇಶ:
ಬೆಂಗಳೂರಿನಲ್ಲಿರುವ ಎರಡು ಗಾಲ್ಫ್ ಕೋರ್ಸ್‌ಗಳಲ್ಲಿ ನೀವು ಸದಸ್ಯತ್ವ ಪಡೆಯಬೇಕಾದರೆ ಇಂದು ಹಣಕಟ್ಟಿದರೆ ಮುಂದಿನ 30 ವರ್ಷಗಳ ನಂತರ ಸದಸ್ಯತ್ವ ಸಿಗುತ್ತದೆ. ಅಷ್ಟು ಆಕಾಂಕ್ಷಿಗಳು ಸರದಿಯಲ್ಲಿದ್ದಾರೆ. ಆದ್ದರಿಂದ ಪ್ರತಿಯೊಬ್ಬ ಆಸಕ್ತರಿಗೂ ಗಾಲ್ಫ್ ಕ್ರೀಡೆಯಲ್ಲಿ ಪಾಲ್ಗೊಳ್ಳುವ ಅವಕಾಶ ಕಲ್ಪಿಸುವ ಉದ್ದೇಶದಿಂದ ಡಾ. ರೋಹಿತ್ ಶೆಟ್ಟಿ ಗಾಲ್ಫ್ ಕರ್ನಾಟಕವನ್ನು ಸ್ಥಾಪಿಸಿದ್ದಾರೆ.
ಕರ್ನಾಟಕದಾದ್ಯಂತ ಗಾಲ್ಫ್ ಕ್ರೀಡೆಯನ್ನು ಜನಪ್ರಿಯಗೊಳಿಸುವುದು ಮತ್ತು ವಿಸ್ತರಿಸುವುದು ಸಂಸ್ಥೆಯ ಮುಖ್ಯ ಉದ್ದೇಶವಾಗಿದೆ. ಇದಕ್ಕೆ ಶ್ರೀಂತರ ಕ್ರೀಡೆ ಎಂಬ ಹೆಸರು ಅಂಟಿಕೊಂಡಿದೆ, ಆದರೆ ಈ ಕ್ರೀಡೆಯನ್ನು ಬಡವರು ಕೂಡ ಆಡಬಹುದು ಎಂಬುದನ್ನು ಸಾಧ್ಯಗೊಳಿಸುವುದು.
ಉನ್ನತ ವರ್ಗದವರಿಗೆ ಮಾತ್ರ ಸೀಮತವಾದ ಕ್ರೀಡೆ ಎಂಬ ಹಣೆಪಟ್ಟಿಯನ್ನು ತೆಗೆದುಹಾಕುವುದು. ಗಾಲ್ಫ್ ಕೋರ್ಸ್‌ನಲ್ಲಿ ಜನರಿಗೆ ತರಬೇತಿ ನೀಡುವುದು, ಕೋರ್ಸ್‌ಗಳನ್ನು ನಿರ್ವಹಣೆ ಮಾಡುವುದು, ನಿಯಮಗಳ ಬಗ್ಗೆ ಅರಿವು ಮೂಡಿಸುವುದು ಮತ್ತು ಗಾಲ್ಫ್ ಮಾರ್ಕೆಟಿಂಗ್ ಮಾಡುವುದು ಸಂಸ್ಥೆಯ ಮುಖ್ಯ ಉದ್ದೇಶಗಳಲ್ಲಿ ಸೇರಿದೆ,
ಸಲಕರಣೆಗಳ ನಿರ್ವಹಣೆ, ಸಣ್ಣ ಕೋರ್ಸ್‌ಗಳು ಈ ದುಬಾರಿ ಉಕರಣಗಳನ್ನು ಬಳಸುವುದು ಮತ್ತು ಅವುಗಳಿಗೆ ಬಾಡಿಗೆಗೆ ನೀಡುವುದು.
ರಾಜ್ಯದ ವಿವಿಧ ಜಿಲ್ಲೆಗಳಲ್ಲಿ ಗಾಲ್ಫ್ ಡ್ರೈವಿಂಗ್ ರೇಂಜ್‌ಗಳನ್ನು ಸ್ಥಾಪಿಸಿ ಯುವಕರಿಗೆ ತರಬೇತಿ ನೀಡುವುದು. ಮತ್ತು ಹೆಚ್ಚಿನ ಸಂಖ್ಯೆಯಲ್ಲಿ ಜನರು ಪಾಲ್ಗೊಳ್ಳುವಂತೆ ಉತ್ತೇಜ ನೀಡುವುದು.
ಕರ್ನಾಟಕವನ್ನು ಗಾಲ್ಫ್ ರಾಜ್ಯವನ್ನಾಗಿ ಜನಪ್ರಿಯಗೊಳಿಸುವುದು. ಪ್ರವಾಸಿಗಳಿಗಾಗಿ ಗಾಲ್ಫ್ ಸರ್ಕುಟ್‌ಗಳನ್ನು ಸ್ಥಾಪಿಸಿ ಪ್ರವಾಸೋದ್ಯಮಕ್ಕೂ ಉತ್ತೇಜನ ನೀಡುವುದು.
ಟೂರ್ನಿಗಳನ್ನು ಆಯೋಜಿಸಿ ಆಟಗಾರರ ನಡುವೆ ಸೌಹಾರ್ದತೆಯನ್ನು ಹೆಚ್ಚಿಸುವುದು. ಈ ಎಲ್ಲ ಗುರಿಗಳು ಈಡೇರಬೇಕಾದರೆ ಆರ್ಥಿಕ ಶಕ್ತಿಯ ಅಗತ್ಯವಿರುತ್ತದೆ. ಇದಕ್ಕಾಗಿ ನಿಧಿ ಸಂಗ್ರಹ ಕಾರ್ಯವನ್ನು ನಡೆಸುವುದು. ಹೀಗೆ ಗಾಲ್ಫ್ ಕರ್ನಾಟಕ ಉತ್ತಮ ಉದ್ದೇಶಗಳೊಂದಿಗೆ ರಾಜ್ಯದಲ್ಲಿ ತಲೆ ಎತ್ತಿದೆ.
ಕರ್ನಾಟಕ ಗಾಲ್ಫ್ ರಾಜ್ಯ ಎಂದು ಘೋಷಿಸಲಿ:
ದೇಶದಲ್ಲೇ ಅತಿ ಹೆಚ್ಚು ಗಾಲ್ಫ್ ಕೋರ್ಸ್‌ಗಳು ಇರುವ ರಾಜ್ಯವೆಂದರೆ ಅದು ಕರ್ನಾಟಕ. ಇಲ್ಲಿಯ ಗಾಲ್ಫ್ ಆಟಗಾರರು ರಾಷ್ಟ್ರೀಯ ಮತ್ತು ಅಂತಾರಾಷ್ಟ್ರೀಯ ಮಟ್ಟದಲ್ಲಿ ದೇಶಕ್ಕೆ ಕೀರ್ತಿ ತಂದಿದ್ದಾರೆ. ಪ್ರವಾಸೋದ್ಯಮ ಅಭಿವೃದ್ಧಿಯಲ್ಲಿ ಇಲ್ಲಿಯ ಗಾಲ್ಫ್ ಕೋರ್ಸ್‌ಗಳು ಪ್ರಮುಖ ಪಾತ್ರವಹಿಸಿವೆ. ಟೋಕಿಯೋ ಒಲಿಂಪಿಕ್ಸ್‌ನಲ್ಲಿ ಭಾರತವನ್ನು ಪ್ರತಿನಿಧಿಸಿದ ಇಬ್ಬರು ಗಾಲ್ಫರ್‌ಗಳು ಕರ್ನಾಟಕದವರು. ಅನಿರ್ಬಾನ್ ಲಾಹಿರಿ ಹಾಗೂ ಅದಿತಿ ಅಶೋಕ್. ಅಲ್ಲದೆ ಉಯನ್ ಮಾನೆ, ಚಿಕ್ಕರಂಗಪ್ಪ ಮೊದಲಾದ ಶ್ರೇಷ್ಠ ಆಟಗಾರರಿಗೆ ಬದುಕು ನೀಡಿದ ತಾಣ ಕರ್ನಾಟಕ. ರಾಜ್ಯದಲ್ಲಿ ಒಟ್ಟು 24 ಗಾಲ್ಫ್ ಕೋರ್ಸ್‌ಗಳಿವೆ. ಕರ್ನಾಟಕ ರಾಜ್ಯವನ್ನು ಗಾಲ್ಫ್ ರಾಜ್ಯವೆಂದು ಘೋಷಣೆ ಮಾಡುವಂತೆ ಮುಖ್ಯಮಂತ್ರಿಗಳಲ್ಲಿ ಗಾಲ್ಫ್ ಕರ್ನಾಟಕ ವಿನಂತಿ ಮಾಡಿಕೊಂಡಿದೆ.
ಕರ್ನಾಟಕದಲ್ಲಿರುವ ಪ್ರಮುಖ ಗಾಲ್ಫ್ ಕೋರ್ಸ್‌ಗಳು: 1. ಕರ್ನಾಟಕ ಗಾಲ್ಫ್ ಅಸೋಸಿಯೇಷನ್ ( ಕೆಜಿಎ), 2. ಬೆಂಗಳೂರು ಗಾಲ್ಫ್ ಕ್ಲಬ್, 3. ಪ್ರೆಸ್ಟೀಜ್ ಗಾಲ್ಫ್‌ಶೈರ್, ನಂದಿ ಹಿಲ್ಸ್ ರೋಡ್, 4. ಎಎಸ್‌ಸಿ ಕೋರ್ಸ್ ಬೆಂಗಳೂರು, 5. ಎಂಇಜಿ ಗಾಲ್ಫ್ ಕೋರ್ಸ್ ಬೆಂಗಳೂರು, 6. ಟ್ರೈನಿಂಗ್ ಕಮಾಂಡೋ ಗಾಲ್ಫ್ ಕೋರ್ಸ್, ಬೆಂಗಳೂರು, 7. ಈಗಲ್ಟನ್ ಗಾಲ್ಫ್ ಬಿಡದಿ, 8. ಪ್ರೆಸ್ಟೀಜ್ ಅಗಸ್ಟಾ ಗಾಲ್ಫ್ ಕೋರ್ಸ್, 9. ಜೆಡಬ್ಲ್ಯುಜಿಸಿ ಮೈಸೂರು, 10. ಈಗಲ್‌ಬರ್ಗ್ ಗಾಲ್ಫ್ ಕೋರ್ಸ್ ಮೈಸೂರು, 11. ಕೂರ್ಗ್ ಗಾಲ್ಫ್ ಲಿಂಕ್ಸ್ (ಸಿಜಿಎಲ್), .12. ಬೇಲೂರು ಗಾಲ್ಫ್ ಕ್ಲಬ್, ಕೂರ್ಗ್, 13. ಮರ್ಕೆರಾ ಡೌನ್ಸ್ ಗಾಲ್ಫ್ ಕ್ಲಬ್ ಕೊಡಗು, 14. ಟಾಟಾ ಕಾಫಿ ಗಾಲ್ಫ್ ಕ್ಲಬ್, ಕೊಡಗು, 15. ಚಿಕ್ಕಮಗಳೂರು ಗಾಲ್ಫ್ ಕೋರ್ಸ್, 16. ಪಿಲಿಕುಳ ಗಾಲ್ಫ್ ಕೋರ್ಸ್, ಮಂಗಳೂರು, 17. ಬೆಳಗಾವಿ ಆರ್ಮಿ ಗಾಲ್ಫ್ ಕೋರ್ಸ್, 18. ಬೆಳಗಾವಿ ನ್ಯೂ ಗಾಲ್ಫ್ ಕೋರ್ಸ್, 19. ಆರ್‌ಎನ್‌ಶೆಟ್ಟಿ ಹುಬ್ಬಳ್ಳಿ ಗಾಲ್ಫ್ ಕೋರ್ಸ್, 20. ಹುಬ್ಬಳ್ಳಿ ರೈಲ್ವೇಸ್ ಕೋರ್ಸ್ 21. ಬಿಜಿಎಂಎಲ್ ಗಾಲ್ಫ್ ಕೋರ್ಸ್ ಕೋಲಾರ, 22. ಜಿಯಾನ್ ಹಿಲ್ಸ್ ಗಾಲ್ಫ್ ಕೋರ್ಸ್, ಕೋಲಾರ, 23. ಬಿಇಎಂಎಲ್ ಗಾಲ್ಫ್ ಕೋರ್ಸ್ ಕೋಲಾರ, 24. ಕಿಮ್ಮನೆ ಗಾಲ್ಫ್ ರಿಸಾರ್ಟ್, ಶಿವಮೊಗ್ಗ. ಮೂರು ಗಾಲ್ಫ್ ಕೋರ್ಸ್‌ಗಳು ಚಟುವಟಿಕೆಯಿಂದ ಕೂಡಿಲ್ಲ.
ಸರಕಾರದಿಂದ ಪ್ರೋತ್ಸಾಹ:
ಒಂದು ಗಾಲ್ಫ್ ಕೋರ್ಸ್ ಸ್ಥಾಪಿಸಲು 120-130 ಎಕರೆ ಭೂಮಿ ಬೇಕು. ಒಂದು ಡ್ರೈವಿಂಗ್ ರೇಂಜ್‌ಗೆ ಕನಿಷ್ಠ 10 ಎಕರೆ ಭೂಮಿ ಬೇಕು. ಗಾಲ್ಫ್ ಕರ್ನಾಟಕ ಶೈಕ್ಷಣಿಕವಾಗಿ ಅಭಿವೃದ್ಧಿ ಹೊಂದಿರುವ ಜಿಲ್ಲೆಗಳಲ್ಲಿ ಗಾಲ್ಫ್ ಡ್ರೈವಿಂಗ್ ರೇಂಜ್‌ಗಳನ್ನು ಸ್ಥಾಪಿಸಿ ಜನರಿಗೆ ತರಬೇತಿ ನೀಡುವ ಗುರಿ ಹೊಂದಿದೆ. ಈ ಬಗ್ಗೆ ಮಾತನಾಡಿರುವ ಡಾ. ರೋಹಿತ್ ಶೆಟ್ಟಿ, “ಈಗಾಗಲೇ ನಾವು ಮುಖ್ಯಮಂತ್ರಿಗಳೊಂದಿಗೆ ಮಾತುಕತೆ ನಡೆಸಿದ್ದೇವೆ. ಭೂಮಿಯನ್ನು ಗುರುತಿಸಿ ಅದು ಸೂಕ್ತವೆನಿಸಿದ್ದಲ್ಲಿ ಗಾಲ್ಫ್ ಕೋರ್ಸ್ ಸ್ಥಾಪಿಸಬಹುದು ಎಂದಿದ್ದಾರೆ. ನಾವು ದಾವಣಗೆರೆ, ಗುಲ್ಬರ್ಗಾ, ಹುಬ್ಬಳ್ಳಿ ಧಾರವಾಡ, ಉಡುಪಿ ಮತ್ತು ಮಂಗಳೂರು ನಡುವಿನ ಪ್ರದೇಶಗಳಲ್ಲಿ ಗಾಲ್ಫ್ ಡ್ರೈವಿಂಗ್ ರೇಂಜ್ ಸ್ಥಾಪಿಸುವ ಗುರಿ ಹೊಂದಿದ್ದೇವೆ, ಬರಡು ಭೂಮಿಯಾದರೂ ಸರಿ, ಅದನ್ನು ಅಭಿವೃದ್ಧಿಪಡಿಸಲಿದ್ದೇವೆ. ಕೆಜಿಎ ಗಾಲ್ಫ್ ಕೋರ್ಸ್ ನೋಡಿ ಮುಖ್ಯಮಂತ್ರಿಗಳಿಗೆ ಬಹಳ ಖುಷಿಯಾಗಿದೆ, ಸೂಕ್ತ ಭೂಮಿಯನ್ನು ಗುರುತಿಸುವಂತೆ ಹೇಳಿದ್ದಾರೆ,” ಎಂದು ಹೇಳಿದರು.
ಪರಿಸರ ಸ್ನೇಹಿ ಗಾಲ್ಫ್ ಕೋರ್ಸ್: ಡಾ. ರೋಹಿತ್ ಶೆಟ್ಟಿ ಅವರು 2004-05ರ ಅವಧಿಯಲ್ಲಿ ಕರ್ನಾಟಕ ಗಾಲ್ಫ್ ಅಸೋಸಿಯೇಷನ್‌ನ ಅಧ್ಯಕ್ಷರಾಗಿ ಕಾರ್ಯನಿರ್ವಹಿಸಿದ್ದರು. ಈ ಸಂದರ್ಭದಲ್ಲಿ ಗಾಲ್ಫ್ ಕೋರ್ಸನ್ನು ಪರಿಸರ ಸ್ನೇಹಿಯಾಗಿ ಪರಿವರ್ತಿಸಿದ ಕೀರ್ತಿ ಡಾ. ಶೆಟ್ಟಿ ಅವರಿಗೆ ಸಲ್ಲುತ್ತದೆ. ಬೆಂಗಳೂರು ಜಲ ಮಂಡಳಿಯಿಂದ ಕಲುಶಿತ ನೀರನ್ನು ಹಣಕೊಟ್ಟು ಖರೀದಿಸಿ ಅದನ್ನು, ಶುದ್ಧೀಕರಿಸಿ ಗಾಲ್ಫ್ ಕೋರ್ಸ್‌ಗೆ ಬಳಸಿದ್ದು ವಿಶೇಷವಾಗಿತ್ತು.
ಟುಷೆ ಗಾಲ್ಫ್ ಸ್ಕೂಲ್ ಸ್ಥಾಪನೆ: ಬೆಂಗಳೂರಿನ ಕೋಗಿಲು ಕ್ರಾಸ್ ಬಳಿ ಟುಷೆ ಗಾಲ್ಫ್ ಶಾಲೆ ಸ್ಥಾಪಿಸಿ ಸಹಸ್ರಾರು ಯುವಕರಿಗೆ ಗಾಲ್ಫ್ ತರಬೇತಿ ನೀಡಿದ್ದು ಮಾತ್ರವಲ್ಲದೆ, ಸರಕಾರಿ ಪ್ರಾಥಮಿಕ ಶಾಲಾ ಮಕ್ಕಳಿಗೆ ಗಾಲ್ಫ್ ಕಲಿಸಿದ ಕೀರ್ತಿ ಡಾ. ಶೆಟ್ಟಿ ಅವರಿಗೆ ಸಲ್ಲುತ್ತದೆ. “ಗಾಲ್ಫ್ ಶ್ರೀಮಂತರ ಕ್ರೀಡೆಯಲ್ಲ, ಅದನ್ನು ಯಾರು ಬೇಕಾದರೂ ಆಡಬಹುದು. ಅದು ಬಡವರಾಡಿದರೇ ಉತ್ತಮ ಏಕೆಂದರೆ ಬಡವರಲ್ಲಿ ಗೆಲ್ಲುವ ಛಲ ಹೆಚ್ಚಿರುತ್ತದೆ. ಆ ಉದ್ದೇಶದಿಂದಲೇ ನಾವು ಗಾಲ್ಫ್ ಶಾಲೆ ತೆರೆದಿದ್ದು, ಆದರೆ ಆ ಭೂಮಿಯನ್ನು ಲೀಸ್‌ಗೆ ತೆಗೆದುಕೊಂಡಿದ್ದರಿಂದ ಮಾಲೀಕರು ಅಲ್ಲಿ ಅಪಾರ್ಟ್‌ಮೆಂಟ್ ಕಟ್ಟಲು ಉದ್ದೇಶಿಸಿದ ಕಾರಣ ನಾವು ಆ ಗಾಲ್ಫ್ ಕೋರ್ಸನ್ನು ತೆರವುಗೊಳಿಸಬೇಕಾಯಿತು. ಭೂಮಿ ದೊರೆತರೆ ಗಾಲ್ಫ್ ಕರ್ನಾಟಕದ ವತಿಯಿಂದ ಬೆಂಗಳೂರಿನಲ್ಲಿ ಗಾಲ್ಫ್ ಕೋರ್ಸ್ ನಿರ್ಮಿಸಲಿದ್ದೇವೆ, ಬೆಂಗಳೂರಿನಲ್ಲಿ ಒಂದು ರೌಂಡ್ ಗಾಲ್ಫ್ ಆಡಲು 7 ಸಾವಿರ ರೂ. ಬೇಕಾಗುತ್ತದೆ. ಒಂದು ಗಾಲ್ಫ್ ಕೋರ್ಸ್ ನಿರ್ಮಿಸಲು ಭೂಮಿ ಹೊರತಾಗಿ 30 ಕೋಟಿ ರೂ. ಬೇಕಾಗುತ್ತದೆ. ಬಡ ಜನರನ್ನು ಗಮನದಲ್ಲಿರಿಸಿಕೊಂಡು ನಾವು ಗಾಲ್ಫ್ ಅಭಿವೃದ್ಧಿ ಮಾಡುತ್ತೇವೆ,” ಎಂದು ಡಾ. ರೋಹಿತ್ ಶೆಟ್ಟಿ ಹೇಳಿದರು.
ಹೆಚ್ಚು ಹಣ ಗಳಿಸಬಹುದಾದ ವೈಯಕ್ತಿಕ ಕ್ರೀಡೆ: ಗಾಲ್ಫ್ ಕ್ರೀಡೆ ಜಗತ್ತಿನಲ್ಲಿ ಅತಿ ಹೆಚ್ಚು ಆದಾಯ ತರುವ ವೈಯಕ್ತಿಕ ಕ್ರೀಡೆಗಳಲ್ಲಿ ಒಂದು. ಜಗತ್ತಿನ ಶ್ರೀಮಂತ ಕ್ರೀಡಾಪಟುಗಳ ಪಟ್ಟಿಯಲ್ಲಿ ಜಗತ್ತಿನ ಶ್ರೇಷ್ಠ ಗಾಲ್ಫರ್ ಟೈಗರ್‌ವುಡ್ಸ್ ಇರುವುದು ಗಮನಾರ್ಹ. ಈ ಕ್ರೀಡೆ ಜನಸಾಮಾನ್ಯರ ಕೈ ಸೇರಬೇಕು ಮತ್ತು ಜನಪ್ರಿಯಗೊಳ್ಳಬೇಕು. “ಗಾಲ್ಫ್ ಕೋರ್ಸ್‌ಗಳಲ್ಲಿ ಸದಸ್ಯತ್ವಕ್ಕಾಗಿ 30 ವರ್ಷ ಕಾಯುವುದನ್ನು ಕ್ರೀಡಾ ಬೇಡಿಕೆ ಎಂದು ಹೇಳಲಾಗದು, ಅದು ಜನ ಸಾಮಾನ್ಯರ ಕೈ ತಲುಪಬೇಕು. ಅದಕ್ಕೆ ಪೂರಕವಾದ ಮೂಲಭೂತ ಸೌಕರ್ಯಗಳನ್ನು ನಿರ್ಮಿಸಬೇಕು,” ಎನ್ನುತ್ತಾರೆ ಗಾಲ್ಫ್ ಕರ್ನಾಟಕದ ಅಧ್ಯಕ್ಷ ಡಾ. ರೋಹಿತ್ ಶೆಟ್ಟಿ.
ಉಡುಪಿ ಜಿಲ್ಲೆಯ ಬ್ರಹ್ಮಾವರದ ಮಾಜಿ ಶಾಸಕ ಬಿ. ಬಾಲಕೃಷ್ಣ ಶೆಟ್ಟಿ ಅವರ ಪುತ್ರರಾಗಿರುವ ಡಾ. ರೋಹಿತ್ ಶೆಟ್ಟಿ ಹಲವು ದಶಕಗಳಿಂದ ಗಾಲ್ಫ್ ಅಭಿವೃದ್ಧಿಯಲ್ಲಿ ತಮ್ಮನ್ನು ತೊಡಗಿಸಿಕೊಂಡಿದ್ದು, ಅವರ ಗಾಲ್ಫ್ ಕರ್ನಾಟಕ ಯೋಜನೆ ದೇಶಕ್ಕೆ ಮಾದರಿ ಎನಿಸಲಿದೆ.