Thursday, September 12, 2024

ಬರಲಿದೆ ಅಂತಾರಾಷ್ಟ್ರೀಯ ಕಬಡ್ಡಿ ಲೀಗ್!

ಸ್ಪೋರ್ಟ್ಸ್ ಮೇಲ್ ವರದಿ 

ಪ್ರೊ ಕಬಡ್ಡಿ ಲೀಗ್‌ಗೆ ಪರ್ಯಾಯವಾಗಿ ಮತ್ತೊಂದು ಲೀಗ್ ಹುಟ್ಟಿಕೊಳ್ಳಲಿದೆ. ಅದು ಅಂತಾರಾಷ್ಟ್ರೀಯ ಕಬಡ್ಡಿ ಲೀಗ್. ಇದಕ್ಕಾಗಿ ಇಂಡಿಯನ್ ನ್ಯೂ ಕಬಡ್ಡಿ ಫೆಡರೇಷನ್ (NKFI) ಜತೆ ಸ್ಪೋರ್ಟ್ಸ್ ಪ್ರಸಾರಕ ಕಂಪೆನಿ ಡಿ ಸ್ಪೋರ್ಟ್ಸ್ ಕೈ ಜೋಡಿಸಿದೆ.

ಭಾರತೀಯ ಅಮೆಚೂರ್ ಕಬಡ್ಡಿ ಸಂಸ್ಥೆಯ ಆಡಳಿತ ದುರುಪಯೋಗಗೊಂಡ ಹಿನ್ನೆಲೆಯಲ್ಲಿ ಹೊಸ ಆಡಳಿತಾಧಿಕಾರಿಯನ್ನು ದಿಲ್ಲಿ ಹೈಕೋರ್ಟ್ ನೇಮಿಸಿದೆ. ಅಮೆಚೂರ್ ಕಬಡ್ಡಿ ಸಂಸ್ಥೆಯ ಅಧ್ಯಕ್ಷ ಜನಾರ್ಧನ  ಗೆಲೋಟ್ ಹಾಗೂ ಅವರ ಪತ್ನಿ ಮೃದುಲಾ ಮನೆ ಸೇರಿದ್ದಾರೆ. ಇದರಿಂದಾಗಿ ಎನ್‌ಕೆಎಪ್‌ಐ ಹಾಗೂ ಡಿ ಸ್ಪೋರ್ಟ್ಸ್ ಒಂದಾಗಿ ಅಂತಾರಾಷ್ಟ್ರೀಯ ಕಬಡ್ಡಿ ಲೀಗ್ ನಡೆಸಲು ಮುಂದಾಗಿವೆ.
ಕಳೆದ ವರ್ಷ ಹುಟ್ಟಿಕೊಂಡ ಇಂಡಿಯನ್ ನ್ಯೂ ಕಬಡ್ಡಿ ಫೆಡರೇಷನ್ ವಿಶ್ವ ಕಬಡ್ಡಿ ಸಂಸ್ಥೆಯಿಂದ ಮಾನ್ಯತೆ ಸಿಕ್ಕಿರುವುದಾಗಿ ಹೇಳಿಕೊಂಡಿದೆ. ಹೊಸದಾಗಿ ಹುಟ್ಟಿಕೊಂಡ ಸಂಸ್ಥೆಯ ಇಂಡೋ ಇಂಟರ್‌ನ್ಯಾಷನಲ್ ಕಬಡ್ಡಿ ಲೀಗ್ ನಡೆಸಲು ಮುಂದಾಗಿದೆ. ಅರ್ಜುನ ಪ್ರಶಸ್ತಿ ವಿಜೇತ ಮಾಜಿ ಅಂತಾರಾಷ್ಟ್ರೀಯ ಆಟಗಾರ ಡಾ. ಸಿ. ಹೊನ್ನಪ್ಪ ಗೌಡ, ಎರಡು ಬಾರಿ ಏಷ್ಯನ್ ಗೇಮ್ಸ್ ಚಿನ್ನದ ಪದಕ ವಿಜೇತ ಎಸ್.ರಾಜರತ್ನಂ, ವಿಶ್ವಕಪ್‌ನಲ್ಲಿ ಚಿನ್ನದ ಪದಕ, ಎರಡು ಬಾರಿ ಏಷ್ಯನ್ ಗೇಮ್ಸ್  ಪದಕ ಹಾಗೂ ಸ್ಯಾಫ್ ಗೇಮ್ಸ್ ಚಾಂಪಿಯನ್ ಸುರೇಶ್ ಕುಮಾರ್, ನಾಲ್ಕು ಬಾರಿ ರಾಷ್ಟ್ರೀಯ ಚಾಂಪಿಯನ್ ಹಾಗೂ ಫೆಡರೇಷನ್ ಕಪ್ ಚಾಂಪಿಯನ್ ಮುರುಗನಾಥನ್ ಹಾಗೂ ಮಲೇಷ್ಯನ್ ಚಾಂಪಿಯನ್ ಮದುಕರ್ ಯಾದವ್ ಅಲ್ಲದೆ ಕಬಡ್ಡಿ ಬಾಬು ಎಂದೇ ಖ್ಯಾತರಾಗಿರುವ ಎಂ. ವಿ. ಪ್ರಸಾದ್ ಬಾಬು ಈ ಹೊಸ ಲೀಗ್‌ಗೆ ಪ್ರೋತ್ಸಾಹ ನೀಡಿದ್ದಾರೆ.
8 ತಂಡಗಳು 62 ಪಂದ್ಯಗಳು
ಒಂದೂವರೆ ತಿಂಗಳ ಕಾಲ 8 ತಂಡಗಳು 62 ಪಂದ್ಯಗಳನ್ನಾಡಲಿವೆ. ಪ್ರತಿಯೊಂದು ತಂಡದಲ್ಲೂ 2-3 ವಿದೇಶಿ ಆಟಗಾರರಿರುತ್ತಾರೆ. ನ್ಯೂಜಿಲೆಂಡ್, ಪೋಲೆಂಡ್, ಅರ್ಜೆಂಟೀನಾ, ತಾನ್ಜೆನಿಯಾ, ಆಸ್ಟ್ರೇಲಿಯಾ, ನಾರ್ವೆ, ಇಂಗ್ಲೆಂಡ್, ಕೆನಡಾ. ಅಮೆರಿಕ, ಅಫಘಾನಿಸ್ತಾನ, ಪಾಕಿಸ್ತಾನ, ಇರಾನ್, ಬಾಂಗ್ಲಾದೇಶ, ಶ್ರೀಲಂಕಾ, ಮೆಕ್ಸಿಕೋ, ಮಾರಿಷಸ್, ಕೀನ್ಯಾ, ಇರಾಕ್, ಡೆನ್ಮಾರ್ಕ್ ಸೇರಿದಂತೆ ಜಗತ್ತಿನ ಅನೇಕ ರಾಷ್ಟ್ರಗಳ ಆಟಗಾರರು ಸೇರಿರುತ್ತಾರೆ.
ಎಲ್ಲ ಪಂದ್ಯಗಳು ಡಿ ಸ್ಪೋರ್ಟ್‌ನಲ್ಲಿ ನೇರಪ್ರಸಾರಗೊಳ್ಳಲಿದೆ. ದಿ ಡಿಸ್ಕವರಿ ಕಮ್ಯೂನಿಕೇಷನ್ಸ್ ಇಂಡಿಯಾ ಕಂಪೆನಿಯು ಈ ಚಾನೆಲ್‌ನ ಮಾಲೀಕತ್ವ ಹೊಂದಿದೆ.
ಇಂಡೋ ಇಂಟರ್‌ನ್ಯಾಷನಲ್ ಕಬಡ್ಡಿ ಲೀಗ್ ಭಾರತದಲ್ಲಿ ಆರಂಭಿಸುವುದಕ್ಕೆ ಹೆಮ್ಮೆ ಅನಿಸುತ್ತಿದೆ. ಜಗತ್ತಿನ ಆಟಗಾರರೊಂದಿಗೆ ಭಾರತದ ರಾಷ್ಟ್ರೀಯ ಹಾಗೂ ಅಂತಾರಾಷ್ಟ್ರೀಯ ಆಟಗಾರರು ಆಡಲಿದ್ದಾರೆ. ಇದಕ್ಕಾಗಿ ಡಿಸ್ಪೋರ್ಟ್ ಜತೆ ಒಪ್ಪಂದ ಮಾಡಿಕೊಂಡಿರುವುದು ಖುಷಿಕೊಟ್ಟಿದೆ. ಆಟಗಾರರಲ್ಲಿ ಹೊಸ ಉಲ್ಲಾಸ ತುಂಬುವಲ್ಲಿ ಈ ಲೀಗ್ ಹೆಚ್ಚಿನ ನೆರವಾಗಲಿದೆ ಎಂದು ಇಂಡಿಯನ್ ನ್ಯೂ ಕಬಡ್ಡಿ ಫೆಡರೇಷನ್‌ನ ಪ್ರಧಾನ ಕಾರ್ಯದರ್ಶಿ ಎಂ.ವಿ. ಪ್ರಸಾದ್ ಬಾಬು ಹೇಳಿದ್ದಾರೆ.

Related Articles