Thursday, October 10, 2024

ಒಲಿಂಪಿಕ್ಸ್‌ ಬದಲು ಚುನಾವಣಾ ಸ್ಪರ್ಧೆಗಿಳಿದ ಫೋಗತ್‌

ಉಡುಪಿ: ಪ್ಯಾರಿಸ್‌ ಒಲಿಂಪಿಕ್ಸ್‌ನಲ್ಲಿ 57ಕೆಜಿ ವಿಭಾಗದ ಕುಸ್ತಿಯಲ್ಲಿ ಚಿನ್ನದ ಪದಕ ಗೆದ್ದ ಜಪಾನಿನ ಕುಸ್ತಿ ಪಟು ರೀ ಹಿಗುಚಿ 2020ರ ಟೋಕಿಯೋ ಒಲಿಂಪಿಕ್ಸ್‌ನಲ್ಲಿ ದೇಹದ ತೂಕ ಕೇವಲ 50 ಗ್ರಾಂ ಹೆಚ್ಚಾದ ಹಿನ್ನೆಲೆಯಲ್ಲಿ ಸ್ಪರ್ಧೆಯಿಂದ ಅನರ್ಹಗೊಂಡಿದ್ದರು. ಆದರೆ ಛಲ ಬಿಡದೆ ಪ್ಯಾರಿಸ್‌ನಲ್ಲಿ ಚಿನ್ನ ಗೆದ್ದರು. ದೇಹದ ತೂಕ 100 ಗ್ರಾಂ ಹೆಚ್ಚಿದ್ದ ಕಾರಣ ಸ್ಪರ್ಧೆಯಿಂದ ಅನರ್ಹಗೊಂಡಿದ್ದ ಭಾರತದ ವಿನೇಶ್‌ ಫೋಗತ್‌ಗೆ ತಿಳಿಹೇಳಿ ನಿರ್ಧಾರದಿಂದ ಹಿಂದೆ ಸರಿದು ಸ್ಪರ್ಧೆಯಲ್ಲಿ ಮುಂದುವರಿಯಿರಿ ಎಂದಿದ್ದರು. ಆದರೆ ಯಾವುದೂ ಫಲಿಸಲಿಲ್ಲ. ವಿನೇಶ್‌ ಫೋಗತ್‌ ರಾಜಕೀಯ ಸೇರುವುದಕ್ಕೆ ಮುನ್ನ ಮತ್ತೊಮ್ಮೆ ಯೋಚಿಸಬೇಕಾಗಿತ್ತು. ಏಕೆಂದರೆ ಆಕೆಗಿನ್ನೂ 30 ವರ್ಷ, ಸಾಧನೆಗೆ ಇನ್ನೂ ಅವಕಾಶ ಇದ್ದಿತ್ತು. ಲಾಸ್‌ಏಂಜಲೀಸ್‌ ಒಲಿಂಪಿಕ್ಸ್‌ ಬದಲು ಚುನಾವಣೆ ಅಂಗಣಕ್ಕಿಳಿದಿದ್ದು ಬೇಸರದ ಸಂಗತಿ. Instead of Los Angeles Vinesh Phogat entered politics.

ವಿನೇಶ್‌ ಫೋಗತ್‌ ನಿವೃತ್ತಿಯ ನಿರ್ಧಾರದಿಂದ ಹಿಂದೆ ಸರಿದು ಲಾಸ್‌ ಏಂಜಲೀಸ್‌ ಸ್ಪರ್ಧೆಯಲ್ಲಿ ಸ್ಪರ್ಧಿಸಿ ಪದಕ ಗೆಲ್ಲುವ ಸಾಹಸ ಮಾಡುತ್ತಿದ್ದರೆ ಅವರನ್ನು ನೈಜ ಕ್ರೀಡಾಪಟು ಎಂದು ಜಗತ್ತು ಒಪ್ಪಿರುತ್ತಿತ್ತು. ಆದರೆ ಅವರು ನಿವೃತ್ತಿ ಘೋಷಿಸಿದ್ದು ಮಾತ್ರವಲ್ಲ ರಾಜಕೀಯವನ್ನು ಸೇರಿ ಈಗ ಚುನಾವಣೆಯ ಕಣಕ್ಕಿಳಿದಿದ್ದಾರೆ. ವಿನೇಶ್‌ ಫೋಗತ್‌ ಅವರಿಗೆ ಫೆಡರೇಷನ್‌ನಿಂದ ಅನ್ಯಾಯವಾಗಿರುವುದು ನಿಜ. ಅದರ ವಿರುದ್ಧ ಸೇಡು ತೀರಿಸಿಕೊಳ್ಳಬೇಕೆಂಬ ಅವರ ಮನದ ತುಡಿತವೂ ಒಪ್ಪುವಂಥದ್ದು, ಆದರೆ ಅದಕ್ಕೆ ರಾಜಕೀಯವೇ ದಾರಿಯಲ್ಲದೆ ಬೇರೆ ಮಾರ್ಗ ಇಲ್ಲವೆಂಬುದನ್ನು ಅವರು ಮುಂಬರುವ ಕ್ರೀಡಾಪಟುಗಳಿಗೆ ತೋರಿಸಿಕೊಟ್ಟಂತಾಗಿದೆ.

ಏಷ್ಯ, ವಿಶ್ವ ಹಾಗೂ ಒಲಿಂಪಿಕ್‌ ಚಾಂಪಿಯನ್‌ 28 ವರ್ಷದ ಹಿಗುಚಿ ಮನೆಯಂಗಣದಲ್ಲೇ ನಡೆದ ಒಲಿಂಪಿಕ್ಸ್‌ನಲ್ಲಿ 50 ಗ್ರಾಂ ತೂಕ ಹೆಚ್ಚಿದ್ದ ಹಿನ್ನೆಲೆಯಲ್ಲಿ ಅನರ್ಹಗೊಂಡಾಗ ಯಾವುದೇ ಪ್ರತಿಭಟನೆ ವ್ಯಕ್ತಪಡಿಸದೆ ಮನೆಯ ಹಾದಿ ಹಿಡಿದರು. ಇದು ಜಪಾನಿನ ಪ್ರಜೆಗಳಲ್ಲಿರುವ ಉತ್ತಮ ಗುಣ. ಇದರ ವಿರುದ್ಧ ಪ್ರತಿಭಟನೆ ನಡೆಸಿದರೆ ಪ್ರಯೋಜನವಿಲ್ಲ ಎಂಬುದು ಹಿಗುಚಿಗೆ ಗೊತ್ತಿತ್ತು. ಒಲಿಂಪಿಕ್ಸ್‌ ಇರುವುದೇ ಶಿಸ್ತನ್ನು ಪಾಲಿಸಲಿಕ್ಕೆ. ಇಲ್ಲಿ ಬರುವವರೆಲ್ಲರೂ ಆ ದೇಶದ ಚಾಂಪಿಯನ್ನರೇ ಆಗಿರುತ್ತಾರೆ, ಆದರೆ ಇವುಗಳ ನಡುವೆ ಒಲಿಂಪಿಕ್ಸ್‌ ನಿಯಮಗಳನ್ನು ಪಾಲಿಸುವುದೂ ಪದಕ ಗೆದ್ದಷ್ಟೇ ಶ್ರೇಷ್ಠ. ರಾಜಕೀಯ ಎಂದಾಕ್ಷಣ ಅಲ್ಲಿ ಪರ ಮತ್ತು ವಿರೋಧ ಇದ್ದೇ ಇರುತ್ತದೆ, ಸ್ಪರ್ಧಿಸುವ ಪಕ್ಷದವರು ಸ್ಪರ್ಧಿಯನ್ನು ಸಮರ್ಥಿಸಿಕೊಂಡರೆ, ವಿರೋಧ ಪಕ್ಷದವರು ತಪ್ಪುಗಳನ್ನು ಎತ್ತಿತೋರಿಸುತ್ತಾರೆ.

ಹಿಗುಚಿ 2016ರ ರಿಯೋ ಒಲಿಂಪಿಕ್ಸ್‌ನಲ್ಲಿ ಬೆಳ್ಳಿ ಗೆದ್ದ ಕುಸ್ತಿಪಟು, ಟೋಕಿಯೋದಲ್ಲಿ ಪದಕ ಗೆದ್ದೇ ಗೆಲ್ಲುತ್ತೇನೆಂಬ ಹಂಬಲ ಆತನಿಗಿದ್ದಿತ್ತು. ಆದರೆ ಬರೇ 50 ಗ್ರಾಂ ಆತನ ಪದಕವನ್ನೇ ಕಸಿದುಕೊಂಡಿತು. ನಿರಂತರ ಪ್ರಯತ್ನ ಮತ್ತೆ ಆತನಿಗೆ ಒಲಿಂಪಿಕ್ಸ್‌ ಹಾಗೂ ವಿಶ್ವ ಚಾಂಪಿಯನ್‌ಷಿಪ್‌ ಹಾದಿ ತೋರಿಸಿತು. ವಿನೇಶ್‌ ಫೋಗತ್‌ ಅದೇ ಹಾದಿ ಹಿಡಿದಿರುತ್ತಿದ್ದರೆ ಆಕೆಗೆ ಲಾಸ್‌ ಏಂಜಲೀಸ್‌ನಲ್ಲಿ ಪದಕ ಸಿಗುತ್ತಿತ್ತೇನೋ. ಆದರೆ ಈಗ ಕಾಲ ಮಿಂಚಿದೆ, ವಿನೇಶ್‌ ಚುನಾವಣೆಯ ಕಣಕ್ಕೆ ಇಳಿದಾಗಿದೆ, ಈಗ ಹಿಗುಚಿಯ ಹಿತನುಡಿ ಇತರರಿಗೆ ಮಾದರಿಯಾಗಿ ಉಳಿಯಲಿದೆ. ಜಗತ್ತಿಗೆ ಜಪಾನ್‌ ದೇಶ ಮಾದರಿಯಾಗಿರುವುದು ಇಂಥಹ ಆದರ್ಶಗಳಿಗೆ.

Related Articles