Saturday, February 24, 2024

ಬೆಂಗಳೂರು ಟಾರ್ಪೆಡೊಸ್‌ಗೆ ಜಯವೊಂದೇ ಮಂತ್ರ

ಸೋಮಶೇಖರ್‌ ಪಡುಕರೆ, sportsmail

ಹೈದರಾಬಾದ್‌ನ ಗಾಚಿಬೌಲಿ ಒಳಾಂಗಣ ಕ್ರೀಡಾಂಗಣದಲ್ಲಿ ಫೆ,5ರಿಂದ ಕ್ರೀಡಾ ಜಗತ್ತು ಬಹಳ ಕುತೂಹಲದಿಂದ ನಿರೀಕ್ಷಿಸುತ್ತಿರುವ ಪ್ರೈಮ್‌ ವಾಲಿಬಾಲ್‌ ಲೀಗ್‌ ಆರಂಭಗೊಳ್ಳಲಿದೆ. ಕರ್ನಾಟಕವನ್ನು ಪ್ರತಿನಿಧಿಸುತ್ತಿರುವ ಬೆಂಗಳೂರು ಟಾರ್ಪೆಡೊಸ್‌ ತಂಡ ಕಳೆದ ಹದಿನೈದು ದಿನಗಳಿಂದ ನಿರತಂತರ ಅಭ್ಯಾಸ ನಡೆಸುತ್ತಿದೆ. ಮಾಜಿ ಅಂತಾರಾಷ್ಟ್ರೀಯ ಆಟಗಾರ, ಕರ್ನಾಟಕ ತಂಡದ ಪ್ರಧಾನ ಕೋಚ್‌ ಕೆ.ಆರ್‌. ಲಕ್ಷ್ಮೀನಾರಾಯಣ ಅವರ ತರಬೇತಿಯಲ್ಲಿ ಪಳಗಿರುವ ಬೆಂಗಳೂರು ಟಾರ್ಪೆಡೊಸ್‌ ಜಯವನ್ನೇ ಗುರಿಯಾಗಿಸಿಕೊಂಡು ಅಂಗಣಕ್ಕಿಳಿಯಲಿದೆ. ಲೀಗ್‌ ಆರಂಭವಾಗುವುದಕ್ಕೆ ಮುನ್ನ ಟಾರ್ಪೆಡೊಸ್‌ನ ಪ್ರಧಾನ ಕೋಚ್‌ ಲಕ್ಷ್ಮೀನಾರಾಯಣ ಅವರೊಂದಿಗೆ ನಡೆಸಿದ ಮಾತುಕತೆಯ ಪ್ರಮುಖ ಅಂಶ ಇಲ್ಲಿದೆ.

ಉತ್ತಮ ಹೊಂದಾಣಿಕೆ:

ಇದೇ ಮೊದಲ ಬಾರಿಗೆ ಪ್ರತಿಯೊಂದು ತಂಡದಲ್ಲೂ ಇಬ್ಬರು ವಿದೇಶಿ ಆಟಗಾರರು ಆಡುತ್ತಿದ್ದಾರೆ. ಭಾರತದ ಆಟಗಾರರೊಂದಿಗೆ ಅವರ ಹೊಂದಾಣಿಕೆಯ ಬಗ್ಗೆ ಮಾತನಾಡಿದ ಲಕ್ಷ್ಮೀನಾರಾಯಣ, “ಕಳೆದ ಹದಿನೈದು ದಿನಗಳಿಂದ ನಿರಂತರವಾಗಿ ಅಭ್ಯಾಸ ನಡೆಸುತ್ತಿದ್ದೇವೆ, ಅಮೆರಿಕ ನೋಹ ಟೈಟಾನೋ ಹಾಗೂ ಕೆಯ್ಲ್‌ ಫ್ರೆಂಡ್‌ ತಂಡದಲ್ಲಿದ್ದಾರೆ. ವಾಲಿಬಾಲ್‌ನಲ್ಲಿ ಅಪಾರ ಅನುಭವ ಹೊಂದಿರುವ ಈ ಆಟಗಾರರು ಹೇಳಿದ ಸಲಹೆಗಳನ್ನು ಚಾಚೂ ತಪ್ಪದೆ ಅನುಸರಿಸುತ್ತಾರೆ. ಅವರಲ್ಲಿ ಶಿಸ್ತು ಮನೆ ಮಾಡಿದೆ, ನಮ್ಮ ಆಟಗಾರರೊಂದಿಗೆ ಉತ್ತಮ ರೀತಿಯಲ್ಲಿ ಹೊಂದಿಕೊಂಡಿದ್ದಾರೆ. ಅವರ ಆಟವನ್ನು ನಮ್ಮ ಆಟಗಾರರು ಅನುಸರಿಸುತ್ತಿದ್ದಾರೆ. ಇದು ತಂಡದ ಪ್ರತಿಯೊಬ್ಬರಲ್ಲೂ ಆತ್ಮವಿಶ್ವಾಸ ಮೂಡಿಸುವಂತೆ ಮಾಡಿದೆ,” ಎಂದರು.

ಯಾರು ಬಲಿಷ್ಠರು?

ಸಾಮಾನ್ಯವಾಗಿ ತಂಡಗಳ ಆಟಗಾರರನ್ನು ಆಧರಿಸಿ ಬಲಿಷ್ಠ ತಂಡ ಯಾವುದೆಂದು ಮೇಲ್ನೋಟಕ್ಕೆ ಹೇಳಬಹುದು, ಆದರೆ ದೇಶದ ಪ್ರಮುಖ ಆಟಗಾರರು ಮತ್ತು ವಿದೇಶಿ ಆಟಗಾರರು ಸಮಾನವಾಗಿ ಹಂಚಿಕೆಯಾಗಿರುವ ಪ್ರೈಮ್‌ ವಾಲಿಬಾಲ್‌ ಲೀಗ್‌ನಲ್ಲಿ ಸದ್ಯ ಬಲಿಷ್ಠ ಮತ್ತು ದುರ್ಬಲ ತಂಡಗಳನ್ನು ಗುರುತಿಸುವುದು ಕಷ್ಟ ಎಂದು ಲಕ್ಕಿ ಕೋಚ್‌ ಲಕ್ಷ್ಮೀನಾರಾಯಣ ಹೇಳಿದ್ದಾರೆ. “ಎಲ್ಲ ಏಳೂ ತಂಡಗಳಲ್ಲೂ ಉತ್ತಮ ಆಟಗಾರರಿದ್ದಾರೆ. ಇಲ್ಲಿ ಬಲಿಷ್ಠ ಮತ್ತು ದುರ್ಬಲ ತಂಡವೆಂದು ಯಾರನ್ನೂ ಗುರುತಿಸಲಾಗದು. ಪಂದ್ಯದ ದಿನ ಯಾರು ಉತ್ತಮವಾಗಿ ಆಡುತ್ತಾರೋ ಅವರೇ ಬಲಿಷ್ಠರೆನಿಸಿಕೊಳ್ಳುತ್ತಾರೆ,” ಎಂದರು.

ಅನುಭವಿ ನಾಯಕ:

ಭಾರತ ತಂಡದ ನಾಯಕ, ಅಪಾರ ಅನುಭವ ಹೊಂದಿರುವ ರಂಜಿತ್‌ ಸಿಂಗ್‌ ಬೆಂಗಳೂರು ಟಾರ್ಪೆಡೊಸ್‌ ತಂಡವನ್ನು ಮುನ್ನಡೆಸುತ್ತಿದ್ದಾರೆ, ನಾಯಕನ ಬಗ್ಗೆ ಮಾತನಾಡಿದ ಲಕ್ಷ್ಮೀನಾರಾಯಣ, “ಅನುಭವಿ ಆಟಗಾರ ಮತ್ತು ಹಲವಾರು ಅಂತಾರಾಷ್ಟ್ರೀಯ ಪಂದ್ಯಗಳನ್ನು ಆಡಿರುವ, ಭಾರತಕ್ಕೆ ಯಶಸ್ಸು ತಂದ ರಂಜಿತ್‌ ಸಿಂಗ್‌ ಅವರು ನಮ್ಮ ತಂಡಕ್ಕೆ ನಾಯಕರಾಗಿ ಸಿಕ್ಕಿರುವುದು ನಮ್ಮ ಅದೃಷ್ಟ. ಅತ್ಯಂತ ತಾಳ್ಮೆಯಿಂದ ವರ್ತಿಸುವ ಸಿಂಗ್‌, ತಂಡವನ್ನು ಉತ್ತಮ ರೀತಿಯಲ್ಲಿ ಮುನ್ನಡೆಸಬಲ್ಲರು, ವಿದೇಶಿ ಆಟಗಾರರು ಕೂಡ ಅವರ ಸಲಹೆ, ಸೂಚನೆಗಳಿಗೆ ಉತ್ತಮ ರೀತಿಯಲ್ಲಿ ಸ್ಪಂದಿಸುತ್ತಿದ್ದಾರೆ,” ಎಂದು ಹೇಳಿದರು.

 

ಎಲ್ಲರಿಗೂ ಆಡುವ ಅವಕಾಶ?

ಪ್ರತಿಯೊಂದು ತಂಡದಲ್ಲೂ 14 ಆಟಗಾರರಿರುತ್ತಾರೆ. ಆರು ಮಂದಿ ಅಂಗಣಕ್ಕಿಳಿಯುತ್ತಾರೆ. ಈ ಬಾರಿಯ ಲೀಗ್‌ನಲ್ಲಿ ಎಲ್ಲರಿಗೂ ಆಡುವ ಅಕವಾಶ ನೀಡುವ ಬಗ್ಗೆ ಮಾತನಾಡಿದ ಕೋಚ್‌, “ತರಬೇತಿಯ ವೇಳೆ ಪ್ರತಿಯೊಬ್ಬ ಆಟಗಾರರನ್ನು ಗಮನಿಸಿದ್ದೇವೆ, ಅವರ ಪ್ಲಸ್‌ ಮತ್ತು ಮೈನಸ್‌ ಅಂಶಗಳನ್ನು ಗುರುತಿಸಿ ಸಲಹೆ ನೀಡಿದ್ದೇವೆ, ಎಲ್ಲರಿಗೂ ಪ್ರತಿಯೊಂದು ಪಂದ್ಯದಲ್ಲೂ ಮಿಂಚಲು ಆಗುವುದಿಲ್ಲ. ರೊಟೇಷನ್‌ ಕ್ರಮದಲ್ಲಿ ಹೆಚ್ಚಿನವರಿಗೆ ಅವಕಾಶ ನೀಡಲು ಯತ್ನಿಸುತ್ತೇವೆ. ಸಾಕಷ್ಟು ಯುವ ಆಟಗಾರರಿದ್ದಾರೆ, ಅವರನ್ನೂ ಗಮನದಲ್ಲಿರಿಸಿಕೊಂಡಿದ್ದೇವೆ,” ಎಂದರು.

 

ಲೀಗ್‌ 5 ರಿಂದ ಆರಂಭಗೊಂಡರೂ ಬೆಂಗಳೂರು ಟಾರ್ಪೆಡೊಸ್‌ ಪಂದ್ಯಗಳು ಮೂರು ದಿನಗಳ ನಂತರ ಆರಂಭಗೊಳ್ಳುವುದರಿಂದ ಇತರ ತಂಡಗಳ ಆಟವನ್ನು ಗಮನಿಸಿ ಅದಕ್ಕೆ ಪೂರಕವಾದ ರಣತಂತ್ರವನ್ನು ರೂಪಿಸಬಹದು ಎಂದಿದ್ದಾರೆ ಲಕ್ಷ್ಮೀನಾರಾಯಣ.

Related Articles