Saturday, July 27, 2024

ವನಿತಾ ಲೋಕದ “ಸೈಕ್ಲಿಂಗ್‌ ತಾಯಿ” ಅನಿತಾ ನಿಂಬರಗಿ

ಸೋಮಶೇಖರ್‌ ಪಡುಕರೆ, ಬೆಂಗಳೂರು

“ಒಬ್ಬ ಮಹಿಳೆಗೆ ಶಿಕ್ಷಣ ನೀಡಿದರೆ, ಇಡೀ ದೇಶಕ್ಕೇ ಶಿಕ್ಷಣ ನೀಡಿದಂತೆ,” ಈ ನುಡಿ  ಬಾಗಲಕೋಟೆಯಲ್ಲಿರುವ ಯುವಸಬಲೀಕರಣ ಮತ್ತು ಕ್ರೀಡಾ ಇಲಾಖೆಯ ಹಾಸ್ಟೆಲ್‌ನಲ್ಲಿ ಸೈಕ್ಲಿಂಗ್‌ ಕೋಚ್‌ ಆಗಿ ಕಾರ್ಯನಿರ್ವಹಿಸುತ್ತಿರುವ ಅನಿತಾ ನಿಂಬರಗಿ ಅವರಿಗೆ ಆಪ್ತವಾಗುತ್ತದೆ. ಕಳೆದ ಎರಡು ತಿಂಗಳಲ್ಲಿ ಬಾಗಲಕೋಟೆಯ ಸೈಕ್ಲಿಸ್ಟ್‌ಗಳು ರಾಷ್ಟ್ರೀಯ ಮತ್ತು ಅಂತಾರಾಷ್ಟ್ರೀಯ ಮಟ್ಟದಲ್ಲಿ ಪದಕ ಗೆದ್ದು ಮಿಂಚಿದರು. ಒಬ್ಬ ಸೈಕ್ಲಿಸ್ಟ್‌ ಕಾಮನ್‌ವೆಲ್ತ್‌ ಕ್ರೀಡಾಕೂಟಕ್ಕೂ ಆಯ್ಕೆಯಾದ. ಇವರೊಂದಿಗೆ ಮಾತನಾಡುವಾಗ ಮೊದಲಿಗೆ ಬಂದ ಹೆಸರೇ ಅನಿತಾ ನಿಂಬರಗಿ. ಹೀಗೆ ಕಳೆದ 22 ವರ್ಷಗಳಿಂದ 500ಕ್ಕೂ ಹೆಚ್ಚು ಸೈಕ್ಲಿಸ್ಟ್‌ಗಳಿಗೆ ತರಬೇತಿ ನೀಡಿದ ಅನಿತಾ ನಿಂಬರಗಿ ಅವರ ಬದುಕಿನ ಹಾದಿಯನ್ನು ಗಮನಿಸಿದಾಗ ಒಬ್ಬ ಉತ್ತಮ ಗುರುವಿನಿಂದ ಉತ್ತಮ ಶಿಷ್ಯರು ಹುಟ್ಟಿಕೊಳ್ಳುತ್ತಾರೆಂಬುದು ಸ್ಪಷ್ಟವಾಗುತ್ತದೆ.

ಗುರುವಾಗಿ ತನ್ನ ಶಿಷ್ಯಂದಿರಿಗೆ ಸೈಕ್ಲಿಂಗ್‌ ತರಬೇತಿ ನೀಡುವ, ತಾಯಿಯಂತೆ ಅವರ ಭವಿಷ್ಯವನ್ನು ರೂಪಿಸುವ ಅನಿತಾ ನಿಂಬರಗಿ ಅವರ ಕ್ರೀಡಾ ಬದುಕಿನ ಹಾದಿ ಅಷ್ಟು ಸುಲಭವಾಗಿರಲಿಲ್ಲ.

ಆಡಿಕೊಳ್ಳುವ ಸಮಾಜಕ್ಕೆ ಪದಕದೊಂದಿಗೆ ಉತ್ತರ: ಮೂಲತಃ ಹೈದಬಾದ್‌ ಕರ್ನಾಟಕದ ಆಳಂದ ತಾಲೂಕಿನ ನಿಂಬರಗಿ ಗ್ರಾಮದಲ್ಲಿ ನೆಲೆಸಿದ್ದ ಮಲ್ಲಿಕಾರ್ಜುನ ನಿಂಬರಗಿ ಮತ್ತು ವಿಮಲ ನಿಂಬರಗಿ ದಂಪತಿಯ ಪೂರ್ವಜರು ರಜಾಕರ ಹಿಂಸೆಗೆ ಬೇಸತ್ತು ಆ ಊರನ್ನು ಬಿಟ್ಟು  ಬಿಜಾಪುರ ಜಿಲ್ಲೆಯ ಇಂಡಿ ತಾಲೂಕಿನ ಬೆನಕನ ಹಳ್ಳಿಯಲ್ಲಿ ಬಂದು ನೆಲೆಸಿದರು. ಮಲ್ಲಿಕಾರ್ಜುನ ಅವರು ನಂತರ ಕೃಷಿ ಅಧಿಕಾರಿಯಾಗಿ ಬಾಗಲಕೋಟೆ ಜಿಲ್ಲೆಯ ಬೀಳಗಿ ತಾಲೂಕಿನಲ್ಲಿ ಕಾರ್ಯನಿರ್ವಹಿಸಿದರು. ಮಲ್ಲಿಕಾರ್ಜುನ ದಂಪತಿಗೆ ಐವರು ಹೆಣ್ಣು ಮಕ್ಕಳು. ಅವರನ್ನು ಕ್ರೀಡಾಪಟುಗಳನ್ನಾಗಿ ಮಾಡಬೇಕೆಂಬುದು ಅವರ ಗುರಿಯಾಗಿತ್ತು. ಐವರಲ್ಲಿ ನಾಲ್ವರು ರಾಷ್ಟ್ರ ಮಟ್ಟದಲ್ಲಿ ಮಿಂಚಿದ ಕ್ರೀಡಾಪಟುಗಳಾದರು. “ಹೆಣ್ಣುಮಕ್ಕಳನ್ನು ಹೊರಗಡೆ ಆಡಲು ಬಿಟ್ಟು ಅದೇನ್‌ ಸಾಧನೆ ಆಮಡ್ತಾರೋ” ಎಂದು ಸುತ್ತಲಿನ ಜನ ಮಾತನಾಡತೊಡಗಿದರು. ಆದರೆ ಮಲ್ಲಿಕಾರ್ಜುನ ಅವರು ಅದಕ್ಕೆ ಸೊಪ್ಪು ಹಾಕಲಿಲ್ಲ. ಮಕ್ಕಳನ್ನು ಬೇರೆ ಬೇರೆ ಕ್ರೀಡೆಗಳಲ್ಲಿ ತೊಡಗಿಕೊಳ್ಳುವಂತೆ ಪ್ರೋತ್ಸಾಹಿಸಿದರು. ಕೃಷಿ ಅಧಿಕಾರಿಯಾದ ಮಲ್ಲಿಕಾರ್ಜುನ ಅವರಿಗೆ ಕ್ರೀಡೆಯ ಪ್ರಾಮುಖ್ಯತೆ ಗೊತ್ತಿತ್ತು. ಆದ್ದರಿಂದ ಆಡುವವರ ಮಾತಿಗೆ ಬೆಲೆ ಕೊಡದೆ ಮಕ್ಕಳಿಗೆ ಪ್ರೋತ್ಸಾಹ ನೀಡಿದರು.

ಸೈಕ್ಲಿಂಗ್‌ನಲ್ಲಿ ತೊಡಗಿಕೊಂಡ ಅನಿತಾ ನಿಂಬರಗಿ ರಾಷ್ಟ್ರೀಯ ಮಟ್ಟದ ಸೈಕ್ಲಿಂಗ್‌ನಲ್ಲಿ ರಾಜ್ಯಕ್ಕೆ ಚಿನ್ನದ ಪದಕ ತಂದುಕೊಟ್ಟು, ರಾಜ್ಯದ ಕೋಚ್‌ ಆಗಿ ಕಾರ್ಯನಿರ್ವಹಿಸುತ್ತಿದ್ದಾರೆ, ಹೈಜಂಪ್‌ನಲ್ಲಿ ಮಿಂಚಿದ ಸುನೀತಾ ನಿಂಬರಗಿ ಈಗ ಅರಣ್ಯ ಅಧಿಕಾರಿ, ಸೈಕ್ಲಿಂಗ್‌ನಲ್ಲಿ ರಾಜ್ಯಕ್ಕೆ ಕೀರ್ತಿ ತಂದ ಡಾ.ಶಾರದಾ ನಿಂಬರಗಿ ಈಗ ಕಾಲೇಜು ಶಿಕ್ಷಣ ಇಲಾಖೆಯಲ್ಲಿ ಪ್ರೊಫೆಸರ್‌ ಸೆಲೆಕ್ಷನ್‌ ಗ್ರೇಡ್‌ ಹುದ್ದೆಯಲ್ಲಿದ್ದಾರೆ. ಈಜಿನಲ್ಲಿ ಸಾಧನೆ ಮಾಡಿದ ರಾಜೇಶ್ವರಿ ನಿಂಬರಗಿ  ಬಾಗಲಕೋಟೆಯ ನಿರಾಣಿ ಆಯುರ್ವೇದಿಕ್‌ ಕಾಲೇಜಿನಲ್ಲಿ ಪ್ರಾಧ್ಯಾಪಕಿ, ನಾಲ್ವರಿಗೆ ಎಲ್ಲ ರೀತಿಯಲ್ಲೂ ಪ್ರೋತ್ಸಾಹ ನೀಡುತ್ತ ಸ್ಫೂರ್ತಿಯ ಚಿಲುಮೆಯಾಗಿ ನಿಂತಿದ್ದು ರೇಖಾ. ಮಲ್ಲಿಕಾರ್ಜುನ ಅವರು ಸಮಾಜದ ಟೀಕೆಗಳಿಗೆ ಹೆದರಿ ತಮ್ಮ ಮಕ್ಕಳನ್ನು ಮನೆಗೆ ಸೀಮಿತವಾಗಿರಿಸಿದ್ದರೆ ಇಂದು ಕರ್ನಾಟಕ ಅನಿತಾ ನಿಂಬರ್ಗಿ ಅವರಂಥ ಶ್ರೇಷ್ಠ ಸೈಕ್ಲಿಂಗ್‌ ಗುರುವನ್ನು ಕಾಣಲು ಸಾಧ್ಯವಿರುತ್ತಿರಲಿಲ್ಲ.

ತಂದೆಯೇ ಕೋಚ್:‌ ಅನಿತಾ ನಿಂಬರಗಿ ಅವರು ಸೈಕ್ಲಿಂಗ್‌ ಕಲಿಯುವಾಗ ಉತ್ತಮ ಸೈಕಲ್‌ ಇರಲಿಲ್ಲ. ಊರಿನಲ್ಲಿ ಸಿಗುತ್ತಿರುವ ಸಾಮಾನ್ಯ ಸೈಕಲ್‌ನಲ್ಲೇ ರಾಷ್ಟ್ರೀಯ ಮಟ್ಟದಲ್ಲಿ ಪದಕ ಗೆದ್ದರು. ಟ್ರ್ಯಾಕ್‌ ಸ್ಯೂಟ್‌ ಇಲ್ಲದಿದ್ದರೂ ಇರುವ ಬಟ್ಟೆಯಲ್ಲೇ ಸೈಕ್ಲಿಂಗ್‌ನಲ್ಲಿ ಯಶಸ್ಸು ಕಂಡರು. ಮನೆಯಲ್ಲಿ ಹಣಕಾಸಿನ ಸಮಸ್ಯೆ ಇರುವ ಕಾರಣ ಬೇರೆಯವರೊಂದಿಗೆ ಹೋಲಿಕೆ ಮಾಡಿಕೊಂಡು ನಾಲ್ವರೂ ಮನೆಯಲ್ಲಿ ಎಂದೂ ಒತ್ತಡ ಹೇರಲಿಲ್ಲ. ಇದ್ದ ಮೂಲಭೂತ ಸೌಕರ್ಯದಲ್ಲೇ ಯಶಸ್ಸಿನ ಹಾದಿ ತುಳಿದರು.

ಸೈಕ್ಲಿಂಗ್‌ ಗುರುವಾಗಿ ಅನಿತಾ: ರಾಜ್ಯ ಮತ್ತು ರಾಷ್ಟ್ರ ಮಟ್ಟದಲ್ಲಿ ಪದಕ ಗೆದ್ದ ಅನಿತಾ ನಿಂಬರಗಿ ಅವರಿಗೆ ಅಂತಾರಾಷ್ಟ್ರೀಯ ಮಟ್ಟದಲ್ಲಿ ಪಾಲ್ಗೊಳ್ಳಲು ಆರ್ಥಿಕ ಸಮಸ್ಯೆ ಎದುರಾಯಿತು. ಆದರೆ ತನ್ನಿಂದ ಸಾಧಿಸಲಾಗದಿರುವುದನ್ನು ತನ್ನ ಊರಿನ ಮಕ್ಕಳು ಸಾಧಿಸುವಂತೆ ಮಾಡಬೇಕೆಂದು ಪಟಿಯಾಲದಲ್ಲಿರುವ ರಾಷ್ಟ್ರೀಯ ಕ್ರೀಡಾ ಶಿಕ್ಷಣ ಕೇಂದ್ರದಲ್ಲಿ ಕೋಚಿಂಗ್‌ ತರಬೇತಿ ಪಡೆದರು. ತರಬೇತಿಯ ನಂತರ ಕ್ರೀಡಾ ಇಲಾಖೆಯಲ್ಲಿ ಸೈಕ್ಲಿಂಗ್‌ ಕೋಚ್‌ ಆಗಿ ನೇಮಕಗೊಂಡರು. ಆರಂಭದಲ್ಲಿ ಬಿಜಾಪುರ ಕ್ರೀಡಾ ಶಾಲೆಯಲ್ಲಿ ಕಾರ್ಯನಿರ್ವಹಿಸಿದ್ದ ಅನಿತಾ ನಿಂಬರ್ಗಿ ಅವರು ಈಗ ಬಾಗಲಕೋಟೆಯಲ್ಲಿ ಕಾರ್ಯನಿರ್ವಹಿಸುತ್ತಿದ್ದಾರೆ.

ಬದುಕು ನೀಡಿದ ಸೈಕ್ಲಿಂಗ್:‌ ಬಾಗಲಕೋಟೆಯಲ್ಲಿ ಎಲ್ಲರ ಮನೆಯಲ್ಲೂ ಇರುವ ವಾಹನವೆಂದರೆ ಅದು ಸೈಕಲ್.‌ ಹೀಗಾಗಿ ಇಲ್ಲಿ ಸೈಕ್ಲಿಂಗ್‌ ಕ್ರೀಡೆ ಹೆಚ್ಚು ಜನಪ್ರಿಯಗೊಂಡಿದೆ. ಅನಿತಾ ನಿಂಬರಗಿ ಅವರಲ್ಲಿ ತರಬೇತಿ ಪಡೆದವರು ರಾಜ್ಯ, ರಾಷ್ಟ್ರ ಮತ್ತು ಅಂತಾರಾಷ್ಟ್ರೀಯ ಮಟ್ಟದಲ್ಲಿ ಮಿಂಚಿ ವಿವಿಧ ಇಲಾಖೆಗಳಲ್ಲಿ ಉದ್ಯೋಗದಲ್ಲಿದ್ದಾರೆ. ರೈಲ್ವೆ, ಸೇನೆ, ಪೊಲೀಸ್‌ ಹಾಗೂ ಇತರ ಇಲಾಖೆಗಳಲ್ಲಿ ಅನಿತಾ ಅವರ ವಿದ್ಯಾರ್ಥಿಗಳು ಸೈಕ್ಲಿಂಗ್‌ನಿಂದಾಗಿ ಉದ್ಯೋಗ ಪಡೆದು ಬದುಕು ಕಟ್ಟಿಕೊಂಡಿದ್ದಾರೆ, ಮಾತ್ರವಲ್ಲ ತಮ್ಮ ಬದುಕಿಗೆ ನೆರವಾದ ಗುರುವನ್ನು ಸ್ಮರಿಸುತ್ತಿದ್ದಾರೆ. ಇಂಗ್ಲೆಂಡ್‌ನಲ್ಲಿ ಬರುವ ತಿಂಗಳು ನಡೆಯಲಿರುವ ಕಾಮನ್‌ವೆಲ್ತ್‌ ಕ್ರೀಡಾಕೂಟದಲ್ಲಿ ಭಾರತವನ್ನು ಪ್ರತಿನಿಧಿಸುತ್ತಿರುವ ಕರ್ನಾಟಕದ ಏಕೈಕ ಸೈಕ್ಲಿಸ್ಟ್‌ ಕೆಂಗಲಗುತ್ತಿ ವೆಂಕಪ್ಪ ತಾನು ಅನಿತಾ ನಿಂಬರ್ಗಿ ಅವರ ಶಿಷ್ಯ ಎಂದು ಹೆಮ್ಮೆಯಿಂದ ಹೇಳಿಕೊಂಡಿದ್ದಾರೆ. ಅಂದು ವೆಂಕಪ್ಪ ಅವರನ್ನು ಕ್ರೀಡಾ ಶಾಲೆಗೆ ಸೇರುವಂತೆ ಅನಿತಾ ನಿಂಬರಗಿ ಒತ್ತಾಯ ಮಾಡದೇ ಇರುತ್ತಿದ್ದರೆ ಇಂದು ಅವರು ಕಾಮನ್‌ವೆಲ್ತ್‌ನಲ್ಲಿ ಸೈಕ್ಲಿಂಗ್‌ನಲ್ಲಿ ಸ್ಪರ್ಧಿಸುತ್ತಿರಲಿಲ್ಲ.

ಸಾಧಕರ ಕುಟುಂಬ: ರಾಜ್ಯ ಸರಕಾರ ತರಬೇತುದಾರರಿಗೆ ನೀಡು ಜೀವನಶ್ರೇಷ್ಠ ಸಾಧನೆಗೆ ಕ್ರೀಡಾ ಇಲಾಖೆಯಲ್ಲೇ ಇರುವ ಸಾಧಕರನ್ನು ಆಯ್ಕೆ ಮಾಡುವುದು ವಿರಳ. ಆದರೆ 2013ರಲ್ಲಿ ಅನಿತಾ ನಿಂಬರಗಿ ಅವರನ್ನು ರಾಜ್ಯ ಸರಕಾರ ಜೀವಮಾನ ಪ್ರಶಸ್ತಿ ನೀಡಿ ಗೌರವಿಸಿತು. ಇದಕ್ಕೂ ಮುನ್ನ 1994ರಲ್ಲಿ ಬಾಗಲಕೋಟೆ ಜಿಲ್ಲೆಯ ಉತ್ತಮ ಕ್ರೀಡಾಪಟು ಮತ್ತು 2010ರಲ್ಲಿ ಜಿಲ್ಲೆಯ ಉತ್ತಮ ಕೋಚ್‌ ಪ್ರಶಸ್ತಿಗೂ ಅನಿತಾ ನಿಂಬರ್ಗಿ ಪಾತ್ರರಾಗಿದ್ದಾರೆ. 2014ರಲ್ಲಿ ಡಾ. ಶಾರದಾ ನಿಂಬರಗಿ ಅವರಿಗೆ ರಾಷ್ಟ್ರಮಟ್ಟದ ಡಾ. ರಾಧಾಕೃಷ್ಣ ಶಿಕ್ಷಣ ರತ್ನ ಪ್ರಶಸ್ತಿ. 2017ರಲ್ಲಿ ಸುನೀತಾ ನಿಂಬರಗಿ ಅವರಿಗೆ ಮುಖ್ಯಮಂತ್ರಿಗಳ ಪದಕ, ಅನಿತಾ ನಿಂಬರಗಿ ಅವರ ಚಿಕ್ಕಪ್ಪನ ಮಗ ಲಕ್ಷ್ಮಣ ನಿಂಬರಗಿ ಅವರು ಕೂಡ ಅಂತಾರಾಷ್ಟ್ರೀಯ ಮಟ್ಟದ ವಾಲಿಬಾಲ್‌ ಆಟಗಾರ, ಉನ್ನತ ಪೊಲೀಸ್‌ ಅಧಿಕಾರಿಯಾಗಿರುವ ಲಕ್ಷ್ಮಣ ನಿಂಬರಗಿ ಅವರಿಗೂ 2019ರಲ್ಲಿ ಮುಖ್ಯಮಂತ್ರಿಗಳ ಪದಕ ನೀಡಿ ಗೌರವಿಸಲಾಗಿತ್ತು.

ಸೈಕ್ಲಿಸ್ಟ್‌ಗಳನ್ನು ತನ್ನ ಮಕ್ಕಳಂತೆ ನೋಡಿಕೊಳ್ಳುವ ಅನಿತಾ ನಿಂಬರಗಿ ಅವರಲ್ಲಿ ತರಬೇತಿ ಪಡೆದ ಹಲವಾರು ಸೈಕ್ಲಿಸ್ಟ್‌ಗಳು ಯುವ ಸಬಲಕೀಕರಣ ಮತ್ತು ಕ್ರೀಡಾ ಇಲಾಖೆ ನೀಡುವ ಏಕಲವ್ಯ ಪ್ರಶಸ್ತಿಗೆ ಭಾಜನರಾಗಿದ್ದಾರೆ. ರಾಜ್ಯ ಒಲಿಂಪಿಕ್ಸ್‌ ಸಂಸ್ಥೆ ನೀಡುವ ಕೆಒಎ ಪ್ರಶಸ್ತಿಯನ್ನೂ ಗಳಿಸಿರುತ್ತಾರೆ. ಬಾಗಲಕೋಟೆಯಲ್ಲಿ ನೂತವಾಗಿ ಸ್ಥಾಪನೆಯಾಗಿರುವ ಖೇಲೋ ಇಂಡಿಯಾ ಕೇಂದ್ರದಲ್ಲಿ ಸೈಕ್ಲಿಂಗ್‌ ಕೋಚ್‌ ಆಗಿ ಕಾರ್ಯನಿರ್ವಹಿಸುತ್ತಿರುವ ರೇಣುಕಾ ದಂಡಿನ್‌ ಕೂಡ ಅನಿತಾ ಅವರ ವಿದ್ಯಾರ್ಥಿನಿ.

“ಯಾವುದೇ ಸ್ಪರ್ಧೆ ಇರಲಿ, ಉದ್ಯೋಗದಲ್ಲಿರಲಿ ನನ್ನ ವಿದ್ಯಾರ್ಥಿಗಳು ಊರಿಗೆ ಬಂದಾಗ ಮನೆಗೆ ಹೋಗುವುದಕ್ಕೆ ಮುನ್ನ ಕ್ರೀಡಾ ಹಾಸ್ಟೆಲ್‌ಗೆ ಭೇಟಿ ನೀಡುತ್ತಾರೆ, ಇದು ನನ್ನ ಭಾಗ್ಯ,” ಎನ್ನುತ್ತಾರೆ ಅನಿತಾ ನಿಂಬರಗಿ.

“ಕ್ರೀಡೆ ನಮ್ಮ ಬದುಕಿಗೆ ಹೊಸ ರೂಪು ನೀಡಿದೆ. ಹಾಗಾಗಿ ನಮ್ಮ ಊರಿನ ಮಕ್ಕಳಲ್ಲಿ ಸೈಕ್ಲಿಂಗ್‌ ಸೇರಿದಂತೆ ಯಾವುದಾರೂ ಕ್ರೀಡೆಯಲ್ಲಿ ತೊಡಗಿಸಿಕೊಳ್ಳುವಂತೆ ಸಲಹೆ ನೀಡುತ್ತೇನೆ. ಆರೋಗ್ಯದ ಜೊತೆಯಲ್ಲಿ ಬದುಕನ್ನು ನೀಡುವ ಕ್ರೀಡೆ ಇಂದಿನ ಯುವ ಜನತೆಗೆ ಅಗತ್ಯವಾಗಿ ಬೇಕು. ಈ ಜಿಲ್ಲೆಯಲ್ಲಿ ಕಲಿಯುತ್ತಿರುವ ಮಕ್ಕಳಲ್ಲಿ ಬಡವರೇ ಹೆಚ್ಚು, ಆದರೆ ಕ್ರೀಡೆ ಅವರನ್ನು ಶ್ರೀಮಂತರನ್ನಾಗಿಸಿದೆ. ಆರ್ಥಿಕವಾಗಿ ಮತ್ತು ಆರೋಗ್ಯವಂತರನ್ನಾಗಿ,” ಎಂದು ಹೇಳು ಅನಿತಾ ನಿಂಬರಗಿ ಅವರ ಮಾತಿನಲ್ಲಿ ಒಬ್ಬ ಗುರುವಿನ ಜವಾಬ್ದಾರಿ ಸ್ಪಷ್ಟವಾಗುತ್ತದೆ.

ಪತಿಯೂ ಚಾಂಪಿಯನ್‌: ಅನಿತಾ ನಿಂಬರಗಿ ಅವರ ಪತಿ ಭೀಮಣ್ಣ ಚಿಮ್ಮಲಗಿ ರಾಷ್ಟ್ರೀಯ ಸೈಕ್ಲಿಂಗ್‌ ಚಾಂಪಿಯನ್‌. ಕರ್ನಾಟಕ ಸರಕಾರದಲ್ಲಿ ಉನ್ನತ ಹುದ್ದೆಯಲ್ಲಿದ್ದಾರೆ ತಾಯಿ-ತಂದೆ ಇಬ್ಬರೂ ಕ್ರೀಡಾಪಟುಗಳಾದರೆ ಮಕ್ಕಳು ಕ್ರೀಡಾಪಟುಗಳಾಗಿ ಯಶಸ್ಸು ಕಾಣುತ್ತಾರೆ. ಕೆಲವೊಂದು ಬಾರಿ ಇದು ವ್ಯತಿರಿಕ್ತವಾಗಿರುತ್ತದೆ. ಕ್ರೀಡಾಪಟುಗಳ ಮಕ್ಕಳು ಕ್ರೀಡಾಪಟುಗಳಾಗಿರುವುದಿಲ್ಲ. ಅನಿತಾ ಹಾಗೂ ಭೀಮಣ್ಣ ಅವರ ಮಗ ಆಕರ್ಷ್‌ ಬ್ಯಾಡ್ಮಿಂಟನ್‌ನಲ್ಲಿ ತನ್ನನ್ನು ತೊಡಗಿಸಿಕೊಂಡಿದ್ದು, ಮಗಳು ಪಾವನಿಯನ್ನೂ ಕ್ರೀಡಾಪಟುವನ್ನಾಗಿ ಮಾಡಬೇಕೆಂಬುದು ಅವರ ಆಶಯ.

ಹೆತ್ತವರ ತ್ಯಾಗ: “ನಮ್ಮ ಅಪ್ಪ ಅಮ್ಮ ಅಂದು ಹೆಣ್ಣು ಮಕ್ಕಳೆಂದು ಬರೇ ನಮ್ಮ ಮದುವೆಯ ಬಗ್ಗೆ ಯೋಚನೆ ಮಾಡಿರುತ್ತಿದ್ದರೆ ಇಂದು ನಾವು ಯಶಸ್ಸಿನ ಹಾದಿ ತುಳಿಯಲಾಗುತ್ತಿರಲಿಲ್ಲ. ಇಂಥ ಚಾಂಪಿಯನ್ನರನ್ನು ನಿರ್ಮಿಸಲು ಸಾಧ್ಯವಾಗುತ್ತಿರಲಿಲ್ಲ. ಆದರೆ ಊರವರು ಏನೇ ಹೇಳಿದರೂ ಆ ಬಗ್ಗೆ ಯೋಚಿಸದೆ ನಮ್ಮನ್ನು ಕ್ರೀಡಾಪಟುಗಳನ್ನಾಗಿ ಮಾಡಿ, ಶಿಕ್ಷಣ ನೀಡಿದ ನಮ್ಮ ಹೆತ್ತವರು ಈಗ ನಮ್ಮೊಂದಿಗೆ ಇಲ್ಲದಿದ್ದರೂ, ಅವರ ಆದರ್ಶಗಳು, ಶ್ರಮ ನಮ್ಮೊಂದಿಗಿದೆ. ಅದು ಸಮಾಜದೊಂದಿಗೆ ಮುಂದುವರಿಯಲಿ ಎಂಬುದೇ ಆಶಯ,” ಎಂದು ಅನಿತಾ ನಿಂಬರಗಿ ಹೇಳುವಾಗ ಶಿಕ್ಷಣ ಮತ್ತು ಕ್ರೀಡೆ ಬದುಕಿನಲ್ಲಿ ಎಷ್ಟು ಪ್ರಾಮುಖ್ಯ ಎಂಬುದು ಸ್ಪಷ್ಟವಾಗುತ್ತದೆ.

ಬದುಕಿನ ನೈಜ ಚಾಂಪಿಯನ್ನರು….. ಮಲ್ಲಿಕಾರ್ಜುನ ನಿಂಬರಗಿ ಮತ್ತು ವಿಮಲ ನಿಂಬರಗಿ ದಂಪತಿ

ಏರಿ ಬಂದ ಏಣಿ ಮರೆತಿಲ್ಲ: ಬದುಕಿನ ಹಾದಿಯಲ್ಲಿ ಹೆತ್ತವರ ಜತೆಯಲ್ಲೇ ಇನ್ನು ಅನೇಕರು ನೆರವು ನೀಡಿರುತ್ತಾರೆ. ಅನಿತಾ ನಿಂಬರಗಿ ಅವರನ್ನು ಈ ಸಂದರ್ಭದಲ್ಲಿ ಸ್ಮರಿಸುತ್ತಾರೆ. ತಾಯಿ ತಂದೆ, ಗುರುಗಳು, ನಿರಾಣಿ ಕುಟುಂಬ, ಬೀಳಗಿಯ ಆತ್ಮೀಯರ ನೆರವಿನಿಂದ ನಾವಿಂದು ಈ ಸಾಧನೆ ಮಾಡಲು ಸಾಧ್ಯವಾಯಿತು ಎನ್ನುತ್ತಾರೆ ಅನಿತಾ ನಿಂಬರಗಿ.

Related Articles