Saturday, October 5, 2024

ಜಿಆರ್‌ವಿ ಇಲ್ಲದ ಹಾಲ್‌ ಆಫ್‌ ಫೇಮ್‌ ಅದು ಆಲ್‌ ಆಫ್‌ ಶೇಮ್‌!

ಕ್ರಿಕೆಟ್‌ ಆಡುವುದರ ಜೊತೆಯಲ್ಲಿ ಕ್ರೀಡಾ ಸ್ಫೂರ್ತಿಯನ್ನು ಮೆರೆದ ಜಗತ್ತಿನ ಮೊದಲ ಕ್ರಿಕೆಟಿಗ ಕನ್ನಡಿಗ ಜಿ.ಆರ್.‌ ವಿಶ್ವನಾಥ್‌ ಅವರನ್ನು ಈ ಬಾರಿಯೂ ಅಂತಾರಾಷ್ಟ್ರೀಯ ಕ್ರಿಕೆಟ್‌ ಸಮಿತಿ ತನ್ನ ಹಾಲ್‌ ಆಫ್‌ ಫೇಮ್‌ ICC Hall of Fame ಪಟ್ಟಿಯಲ್ಲಿ ಸೇರಿಸದೇ ಇದ್ದುದು ನಿಜವಾಗಿಯೂ ನೈಜ ಕ್ರಿಕೆಟ್‌ ಅಭಿಮಾನಿಗಳಿಗೆ ಬೇಸರವನ್ನುಂಟು ಮಾಡಿದೆ. ICC you are ignored our legend G R Vishwanath, he born before you born and hit the century.

ಜಿಆರ್‌ವಿ ಒಬ್ಬ ಕ್ರಿಕೆಟಿಗ ಮಾತ್ರವಲ್ಲ ಬ್ಯಾಟಿಂಗ್‌ನಲ್ಲಿ ಕಲಾವಿದ. ಸ್ಪಿನ್‌ ಹಾಗೂ ವೇಗದ ಬೌಲಿಂಗ್‌ಗೆ ಹೇಗೆ ಆಡಬೇಕೆಂಬುದನ್ನು ತನ್ನ ಕಲಾತ್ಮಕ ಬ್ಯಾಟಿಂಗ್‌ ಮೂಲಕ ಜಗತ್ತಿಗೆ ತೋರಿಸಿಕೊಟ್ಟ ಆಟಗಾರ. ಜಿಆರ್‌ವಿ ಬ್ಯಾಟಿಂಗ್‌ ನೋಡಿ ಕಲಿತವರು ಇಂದು ಹಾಲ್‌ ಆಫ್‌ ಫೇಮ್‌ ಪಟ್ಟಿಯಲ್ಲಿದ್ದಾರೆ. ಬದುಕಿನ ಇಳಿ ವಯಸ್ಸಿನಲ್ಲಿರುವ ಜಿಆರ್‌ವಿಗೆ ನಾವೇನು ಕೊಟ್ಟಿದ್ದೇವೆ ಎಂದು ನಮ್ಮನ್ನು ನಾವು ಪ್ರಶ್ನಿಸಿಕೊಂಡಾಗ ಆಕಾಶ ನೋಡಬೇಕು.

1979-80ರಲ್ಲಿ ನಡೆದ ಗೋಲ್ಡನ್‌ ಜ್ಯುಬಿಲಿ ಟೆಸ್ಟ್‌ ಪಂದ್ಯದಲ್ಲಿ ಇಂಗ್ಲೆಂಡ್‌ನ ಬಾಬ್‌ ಟೇಲರ್‌ ಔಟ್‌ ಎಂದು ಅಂಪೈರ್‌ ತೀರ್ಪು ನೀಡಿದ್ದರು. ಆದರೆ ಜಿಆರ್‌ವಿ ದೃಷ್ಟಿಯಲ್ಲಿ ಅದು ನಾಔಟ್‌ ಆಗಿತ್ತು. ಅವರನ್ನು ಪುನಃ ಆಡಲು ಅವಕಾಶ ಮಾಡಿಕೊಟ್ಟರು. ಭಾರತ ಆ ಟೆಸ್ಟ್‌ ಪಂದ್ಯದಲ್ಲಿ ಸೋಲನುಭವಿಸಿತು. ಆದರೆ ವಿಶಿ ಅವರ ಈ ಕ್ರೀಡಾ ಸ್ಫೂರ್ತಿಯನ್ನು ಜಗತ್ತೇ ಕೊಂಡಾಡಿತು. ಇದು ಹಾಲ್‌ ಆಫ್‌ ಫೇಮ್‌. 92 ಟೆಸ್ಟ್‌ ಪಂದ್ಯಗಳನ್ನು ಆಡಿರುವ ವಿಶಿ ಮೊದಲ ಟೆಸ್ಟ್‌ ಪಂದ್ಯದಲ್ಲೇ ಶತಕ ಸಿಡಿಸಿದ್ದನ್ನು ಮರೆಯುವಂತಿಲ್ಲ. ಅವರು ಟೆಸ್ಟ್‌ ಕ್ರಿಕೆಟ್‌ನಲ್ಲಿ ಗಳಿಸಿದ 14 ಶತಕಗಳು ಇಂದಿನ ಆಧುನಿಕ ಕ್ರಿಕೆಟಿಗರಿಗೆ ಪಾಠವಿದ್ದಂತೆ. ಪುಟಿದೇಳುವ ಪಿಚ್‌ನಲ್ಲಿ ವೆಸ್ಟ್‌ ಇಂಡೀಸ್‌ನ ಬೌಲರ್‌ಗಳನ್ನು ಎದುರಿಸಿ 124 ರನ್‌ ಸಿಡಿಸಿದ್ದು ಈಗ ಹಾಲ್‌ ಆಫ್‌ ಫೇಮ್‌ ಆಯ್ಕೆ ಮಾಡುವವರು ಕಂಡಿರಲಿಕ್ಕಿಲ್ಲ.

ನಿಜ ಈಗ ಗುರುತಿಸಿಕೊಂಡರೆ ಬೆಲೆ, ಇಲ್ಲವೆಂದರೆ ಮಾಜಿ ಕ್ರಿಕೆಟಿಗ ಅಷ್ಟೆ. ಜಿಆರ್‌ವಿ ಎಲ್ಲಿಯೂ ಬಿಸಿಸಿಐ ಅಥವಾ ಇನ್ನಾವುದೇ ಶ್ರೇಷ್ಠ ಸಂಸ್ಥೆಗಳಲ್ಲಿ ವಿವಿಧ ಹುದ್ದೆಗಾಗಿ ಬಕೆಟ್‌ ಹಿಡಿದವರಲ್ಲ. ಯಾರದ್ದೋ ಪ್ರಭಾವ ಬೀರಿ ಉನ್ನತ ಸ್ಥಾನಕ್ಕಾಗಿ ಹಾತೊರೆದವರಲ್ಲ. ಪಂದ್ಯ ನಡೆಯುವಾಗ ವೀಕ್ಷವಿವರಣೆಯಲ್ಲಿ ಕಾಣಿಸಿಕೊಳ್ಳುವುದು, ಕ್ಯಾಮೆರಾಗಳ ಮುಂದೆ ಕಾಣಿಸಿಕೊಳ್ಳುವುದು, ಸುಮ್ಮನೆ ಹೋಗಿ ಆಟಗಾರರನ್ನು ಮಾತನಾಡಿಸಿ ಗಮನ ಸೆಳೆಯುವ ಕೆಲಸಗಳನ್ನು ಅವರು ಮಾಡಿದವರಲ್ಲ. ಐಸಿಸಿ ನಿಮ್ಮ ಹಾಲ್‌ ಆಫ್‌ ಫೇಮ್‌ ಇಲ್ಲದಿದ್ದರೇನಂತೆ ಜಿಆರ್‌ವಿ ಆಲ್‌ ಆಫ್‌ ಫೇಮ್‌, ನಮ್ಮೆಲ್ಲರ ಹೆಮ್ಮೆ. ಐಸಿಸಿ ಇದುವರೆಗೂ 122 ಕ್ರಿಕೆಟಿಗರಿಗೆ ಹಾಲ್‌ ಆಫ್‌ ಫೇಮ್‌ ಗೌರವ ನೀಡಿದೆ. ಅದರಲ್ಲಿ 9 ಮಂದಿ ಭಾರತೀಯರು. ರಾಹುಲ್‌ ದ್ರಾವಿಡ್‌ ಹಾಗೂ ಅನಿಲ್‌ ಕುಂಬ್ಳೆ ಸ್ಥಾನ ಪಡೆದ ಕನ್ನಡಿಗರು. ಅದು ಖುಷಿಯ ವಿಚಾರ. ಇಂಗ್ಲೆಂಡ್‌ನ 32 ಆಟಗಾರರು ಪಟ್ಟಿಯಲ್ಲಿ ಸ್ಥಾನ ಪಡೆದಿದ್ದಾರೆ. ಆಸ್ಟ್ರೇಲಿಯಾದ 29 ಆಟಗಾರರು ಪಟ್ಟಿಯಲ್ಲಿದ್ದಾರೆ.  

Related Articles