Thursday, October 10, 2024

CII ನ ಪಟ್ಟಿಯಲ್ಲೇ ಇಲ್ಲದ ಪ್ರಶಸ್ತಿಯನ್ನು ಜೇ ಶಾ ಗೆ ನೀಡಲಾಗಿದೆ!

ಕೆಲವೊಂದು ಪ್ರಶಸ್ತಿಗಳನ್ನು ಹಲವಾರು ವರ್ಷಗಳಿಂದ ನೀಡಲಾಗುತ್ತದೆ. ಇನ್ನು ಕೆಲವು ಪ್ರಶಸ್ತಿಗಳನ್ನು ಕೆಲವು ವ್ಯಕ್ತಿಗಳಿಗಾಗಿಯೇ ಸೃಷ್ಟಿ ಮಾಡಿ ನೀಡಲಾಗುತ್ತದೆ. ಇದಕ್ಕೆ ಉತ್ತಮ ಉದಾಹರಣೆ. Confederation of Indian Industries (CII) ಈ ಬಾರಿ ಬಿಸಿಸಿಐ ಕಾರ್ಯದರ್ಶಿ ಜೇ ಶಾ ಗೆ ನೀಡಿರುವ ಪ್ರಶಸ್ತಿ. How can Jay Shah get Sports Business Leader award 2023?

ಸಿಐಐ ವರ್ಷಕ್ಕೆ ಕೈಗಾರಿಕೋದ್ಯಮದಲ್ಲಿ ಸಾಧನೆ ಮಾಡಿದವರಿಗೆ 30ಕ್ಕೂ ಹೆಚ್ಚು ಪ್ರಶಸ್ತಿಗಳನ್ನು ನೀಡುತ್ತಿದೆ. ಆದರೆ ಕ್ರೀಡಾ ಉದ್ದಿಮೆಯಲ್ಲಿ ಪ್ರಶಸ್ತಿ ಕೊಡುತ್ತಿರುವುದು ಇದೇ ಮೊದಲು. ಅದೂ ಸಿಐಐ ಕ್ರಿಕೆಟ್‌ ಬಗ್ಗೆ ಏನೂ ಅರಿಯದ ಜೇ ಶಾಗೆ ಪ್ರಶಸ್ತಿ ಕೊಟ್ಟಿರುವುದು ಹಾಸ್ಯಾಸ್ಪದ.

ಶ್ರೀಲಂಕಾದಲ್ಲಿ ಏಷ್ಯಾಕಪ್‌ ಟೂರ್ನಿಯನ್ನು ಯಶಸ್ವಿಯಾಗಿ ನಡೆಸಿರುವುದಕ್ಕೆ ಪ್ರಶಸ್ತಿ ನೀಡಲಾಗಿದೆ ಎನ್ನಲಾಗುತ್ತಿದೆ. ಆದರೆ ಲಂಕೆಯಲ್ಲಿ ನಡೆದ ಏಷ್ಯಾಕಪ್‌ ಆ ಟೂರ್ನಿಯ ಇತಿಹಾಸದಲ್ಲೇ ಅತಿ ಹೆಚ್ಚು ವಿವಾದಗಳಿಗೆ ಎಡೆ ಮಾಡಿಕೊಟ್ಟ ಟೂರ್ನಿಯಾಗಿದೆ. ಟೂರ್ನಿ ಆರಂಭವಾಗುವುದಕ್ಕೆ ಮೊದಲು ರಿಸರ್ವ್‌ ಡೇ (ಕಾಯ್ದಿರಿಸಿದ ದಿನ) ಇರಲಿಲ್ಲ. ಆದರೆ ತಮ್ಮಿಷ್ಟ ಬಂದಂತೆ ಕಾಯ್ದಿರಿಸಿದ ದಿನವನ್ನು ಸೃಷ್ಟಿ ಮಾಡಿ ಫೈನಲ್‌ ನಡೆಸಿದ್ದಾರೆ. ಇದು ಅಂತಾರಾಷ್ಟ್ರೀಯ ಕ್ರಿಕೆಟ್‌ ನಿಯಮಕ್ಕೆ ವಿರುದ್ಧವಾದದು. ಇಂಥವರಿಗೆ ಪ್ರಶಸ್ತಿ ಕೊಡುವ ಸಿಐಐನ ಉದ್ದೇಶವಾದರೂ ಏನಿತ್ತು? ನೀತಾ ಅಂಬಾನಿಗೆ ಪ್ರಶಸ್ತಿ ಕೊಡುವುದು ಸೂಕ್ತ, ಒಬ್ಬ ಮಹಿಳೆಯಾಗಿ ಎರಡು ಮೂರು ಲೀಗ್‌ ತಂಡಗಳನ್ನು ನಿಭಾಯಿಸುತ್ತಿದ್ದಾರೆ. ಅಥ್ಲೆಟಿಕ್ಸ್‌ ಸೇರಿದಂತೆ ಹಲವು ಕ್ರೀಡೆಗಳಿಗೆ ಪ್ರೋತ್ಸಾಹ ನೀಡುತ್ತಿದ್ದಾರೆ. ಆದರೆ ಈ ಜೇ ಶಾ ಕ್ರಿಕೆಟ್‌ ಅಭಿವೃದ್ಧಿಗೆ ನೀಡಿದ ಕೊಡುಗೆಯಾದರೂ ಏನು? ಉತ್ತಮ ಬ್ರಾಂಡ್‌ಗಳು ಬಿಸಿಸಿಐಗೆ ಪ್ರಾಯೋಜಕತ್ವ ನೀಡುತ್ತಿದ್ದವು. ಅವುಗಳಿಗೆ ಮತ್ತೆ ಅವಕಾಶ ನೀಡದೆ ಜನರಲ್ಲಿ ಜೂಜಿನ ಹುಚ್ಚು ಉಂಟು ಮಾಡಿ, ಅವರು ಹಣ ಕಳೆದುಕೊಂಡು ಆತ್ಮಹತ್ಯೆಗೆ ಕಾರಣವಾಗುವ ಡ್ರೀಮ್‌ ಇಲೆವೆನ್‌, ಎಂಪಿಎಲ್‌ಗಳಂಐ ಬೆಟ್ಟಿಂಗ್‌ ಕಂಪೆನಿಗಳಿಗೆ ಪ್ರಾಯೋಜಕತ್ವ ನೀಡಲಾಯಿತು.

ಸುಂದರವಾದ ಮನೆಯ ಯಾವುದೋ ಒಂದು ಹಂಚಿಗೆ ಕಪ್ಪು ಬಣ್ಣ ಬಳಿದಂತೆ ಕ್ರಿಕೆಟಿಗರ ನಡುವೆ ಕುಳಿತುಕೊಳ್ಳುವ ಈ ಜೇ ಶಾ ಕ್ರಿಕೆಟಿಗಾಗಿ ಕೆಲಸ ಮಾಡಿದ್ದು ಏನೂ ಇಲ್ಲ. ಇಂಥವರನ್ನು ಸಾಧಕರು ಎಂದು ಗುರುತಿಸುವಾಗ ಸಿಐಐ ಹಲವು ಬಾರಿ ಯೋಚಿಸುವ ಅಗತ್ಯವಿದೆ. ರಾಜಕಾರಣಿಯ ಮಗ ಮತ್ತು ಆರ್ಥಿಕವಾಗಿ ಬಲಿಷ್ಠ ಎಂಬ ಕಾರಣಕ್ಕೆ ಕೊಟ್ಟಿರುವುದಾದರೆ ಆಯ್ಕೆ ಸರಿಯಾಗಿಯೇ ಇದೆ. ಆದರೆ ಗೊಂಬೆಯಾಟದಲ್ಲಿ ಗೊಂಬೆ ಆಡಿಸುವವಿಗೆ ಪ್ರಶಸ್ತಿ ಕೊಡುತ್ತಾರೆಯೇ ವಿನಃ ಗೊಂಬೆಗೆ ಕೊಡುವುದಿಲ್ಲ.

Related Articles