ಭುವನೇಶ್ವರ:
ಬೆಲ್ಜಿಯಂ ತಂಡದ ಅಮೋಘ ಪ್ರದರ್ಶನದಿಂದ 14ನೇ ಆವೃತ್ತಿಯ ಹಾಕಿ ವಿಶ್ವಕಪ್‌ನ ಕ್ವಾರ್ಟರ್‌ಫೈನಲ್‌ನಲ್ಲಿ ಜರ್ಮನಿ ಎದುರು 2-1 ಗೋಲುಗಲಿಂದ ರೋಚಕ ಜಯ ಸಾಧಿಸಿತು.
ಇಲ್ಲಿನ ಕಳಿಂಗ ಕ್ರೀಡಾಂಗಣದಲ್ಲಿ ನಡೆದ ಎಂಟರ ಘಟ್ಟದ ಪಂದ್ಯದಲ್ಲಿ ಎರಡು ತಂಡಗಳು ಉತ್ತಮ ಆಟವಾಡಿದರೂ ಕೊನೆಗೆ ಬೆಲ್ಜಿಯಂ ಒಂದು ಗೋಲಿನಿಂದ ಗೆಲುವಿನ ನಗೆ ಬೀರಿತು. ಪಂದ್ಯ ಆರಂಭದ 14ನೇ ನಿಮಿಷದಲ್ಲಿ ಜರ್ಮನಿಯ ಡೈಟರ್ ಲಿಗ್ಕೊಗೆಲ್ ಅವರು ಗೋಲು ಬಾರಿಸುವಲ್ಲಿ ಸಫಲರಾದರು. ಇದಾದ ನಾಲ್ಕನೇ ನಿಮಿಷಕ್ಕೆೆ ಬೆಲ್ಜಿಯಂನ ಅಲೆಗ್ಸಾಂಡರ್ ಹೆಂಡ್ರಿಕ್ಸ್ ತಂಡಕ್ಕೆೆ ಮೊದಲ ಗೋಲಿನ ಕಾಣಿಕೆ ನೀಡುವ ಮೂಲಕ ಉಭಯ ತಂಡಗಳು 1-1 ಸಮಬಲ ಸಾಧಿಸಿದವು.
ಪಂದ್ಯದ ಎರಡನೇ ಕ್ವಾರ್ಟರ್‌ನಲ್ಲಿ ಎರಡು ತಂಡಗಳ ಆಟಗಾರರು ಗೋಲು ಗಳಿಸಲು ಸಾಕಷ್ಟು ಪ್ರಯತ್ನಪಟ್ಟವು. ಆದರೆ ಮೂರನೇ ಕ್ವಾರ್ಟರ್‌ನಲ್ಲಿ ಬೆಲ್ಜಿಯಂ ಆಟಗಾರರು ತಮ್ಮ ಲಯ ಮುಂದುವರಿಸುವಲ್ಲಿ ಯಶಸ್ವಿಯಾಗುವ ಮೂಲಕ 50ನೇ ನಿಮಿಷದಲ್ಲಿ ಟಾಮ್ ಬೋನ್ ಅವರು ತಂಡಕ್ಕೆೆ ಎರಡನೇ ಗೋಲನ್ನು ನೀಡಿದರು. ಈ ಮೂಲಕ ಬೆಲ್ಜಿಯಂ 2-1 ಮುನ್ನಡೆಯಾಯಿತು. ಜರ್ಮನಿ ಆಟಗಾರರಿಗೆ ಮೂರು ಹಾಗೂ ನಾಲ್ಕನೇ ಕ್ವಾರ್ಟರ್‌ಗಳಲ್ಲಿ ಗೋಲು ಗಳಿಸಲು ಸಿಕ್ಕ ಅವಕಾಶವನ್ನು ಸದುಪಯೋಗ ಪಡಿಸಿಕೊಳ್ಳುವಲ್ಲಿ ವಿಫಲವಾಗಿ ಕೇವಲ ಒಂದು ಗೋಲಿನಿಂದ ಪರಾಭವಗೊಂಡು ಟೂರ್ನಿಯಿಂದ ಹೊರನಡೆದರು. ಬೆಲ್ಜಿಯಂ ಮತ್ತು ಜರ್ಮನಿ ವಿಶ್ವಕಪ್‌ನಲ್ಲಿ ಒಟ್ಟಾರೆ ನಾಲ್ಕು ಬಾರಿ ಮುಖಾಮುಖಿಗಳಾಗಿವೆ. ಎರಡು ತಂಡಗಳು 2-2 ಬಾರಿ ಜಯ ಸಾಧಿಸಿವೆ.