Friday, December 13, 2024

ಹಾಕಿ: ಕರ್ನಾಟಕ ತಂಡ ಚಾಂಪಿಯನ್

ಸ್ಪೋರ್ಟ್ಸ್ ಮೇಲ್ ವರದಿ

ಹಾಕಿ ಬೆಂಗಳೂರು ಆಶ್ರಯದಲ್ಲಿ ನಡೆದ ೩ನೇ  ಹಾಕಿ ಇಂಡಿಯಾ ೫ ಎ ಸೈಡ್ ಹಾಕಿ ಚಾಂಪಿಯನ್‌ಷಿಪ್‌ನ ಪುರುಷರ ವಿಭಾಗದಲ್ಲಿ ಕರ್ನಾಟಕ ತಂಡ ಚಾಂಪಿಯನ್‌ಪಟ್ಟ ಗೆದ್ದುಕೊಂಡರೆ, ವನಿತೆಯರ ವಿಭಾಗದಲ್ಲಿ  ಜಾರ್ಖಂಡ್ ಪ್ರಶಸ್ತಿ ಗೆದ್ದುಕೊಂಡಿತು.

ಹಾಕಿ ಹರಿಯಾಣ ತಂಡವನ್ನು  ೪-೩ ಗೋಲುಗಳ ಅಂತರದಲ್ಲಿ ಮಣಿಸಿದ  ಹಾಕಿ ಕರ್ನಾಟಕ ಪುರುಷರ ವಿಭಾಗದ ಪ್ರಶಸ್ತಿ ಗೆದ್ದುಕೊಂಡಿತು.  ತಂಡ ಪರ ಮೊಹಮ್ಮದ್ ರಾಹೀಲ್ ಮೌಸೀನ್ ಎಲ್ಲಾ ನಾಲ್ಕು ಗೋಲುಗಳನ್ನು ಗಳಿಸಿರುವುದು ವಿಶೇಷ. ಹರಿಯಾಣ ಪರ ಗಗನ್‌ದೀಪ್ ಸಿಂಗ್, ಮನ್‌ಪ್ರೀತ್  ಹಾಗೂ ಭರತ್ ಗೋಲು ಗಳಿಸಿದರು.
ವನಿತೆಯರ ವಿಭಾಗದ ಫೈನಲ್ ಪಂದ್ಯ ಶೂಟೌಟ್‌ನಲ್ಲಿ ಕೊನೆಗೊಂಡಿತು. ಇತ್ತಂಡಗಳು ನಿಗದಿತ ಅಧಿಯಲ್ಲಿ  ೪-೪ ಗೋಲುಗಳಿಂದ ಸಮಬಲ ಸಾಧಿಸಿದ್ದವು.
ಶೂಟೌಟ್‌ನಲ್ಲಿ  ಜಾರ್ಖಂಡ್ ೨-೧ ಗೋಲುಗಳಿಂದ ಜಯ ಗಳಿಸಿತು.
ಮಹಿಳಾ ಸೆಮಿಫೈನಲ್ ಪಂದ್ಯದಲ್ಲಿ  ಹಾಕಿ ಹರಿಯಾಣ ತಂಡ ಹಾಕಿ  ಪಂಜಾಬ್ ವಿರುದ್ಧ  ೬-೧ ಗೋಲುಗಳಿಂದ ಮಣಿಸಿತ್ತು.  ಎರಡನೇ ಸೆಮಿಫೈನಲ್‌ನಲ್ಲಿ  ಹಾಕಿ ಜಾರ್ಖಂಡ್ ತಂಡ ಹಾಕಿ ಮಹಾರಾಷ್ಟ್ರ ವಿರುದ್ಧ ೩-೨ ಗೋಲುಗಳಿಂದ ಜಯ ಗಳಿಸಿ ಫೈನಲ್ ಹಂತ ತಲುಪಿತ್ತು.
ಪುರುಷರ ವಿಭಾಗದ ಸೆಮಿಫೈನಲ್‌ನಲ್ಲಿ  ಹಾಕಿ ಕರ್ನಾಟಕ ಹಾಕಿ ಒಡಿಶಾ ವಿರುದ್ಧ ೧೧-೩ ಗೋಲುಗಳಿಂದ ಜಯ ಗಳಿಸಿತು. ಕರ್ನಾಟಕದ ಪರ ಮೊಹಮ್ಮದ್ ರಾಹೀಲ್  ನಾಲ್ಕು ಗೋಲುಗಳನ್ನು ಗಳಿಸಿ ಜಯದ ರೂವಾರಿ ಎನಿಸಿದರು.  ಆಭರಣ್ ಸುದೇವ್ ಎರಡು ಗೋಲುಗಳನ್ನು ಗಳಿಸಿದರು. ಲಿಖಿತ್, ಕೆ.ಟಿ. ಕಾರಿಯಪ್ಪ, ಪ್ರಥ್ವಿ ರಾಜ್, ರಥನ್ ಮುತ್ತಣ್ಣ ತಂಡದ ಜಯದಲ್ಲಿ ಪ್ರಮುಖ ಪಾತ್ರವಹಿಸಿದರು.
ಹಾಕಿ ಹರಿಯಾಣ ತಂಡ  ಹಾಕಿ ಮಹಾರಾಷ್ಟ್ರದ ವಿರುದ್ಧ  ೫-೦ ಗೋಲುಗಳ ಅಂತರದಲ್ಲಿ ಜಯ ಗಳಿಸಿ ಫೈನಲ್ ಪ್ರವೇಶಿಸಿತು.  ಹರಿಯಾಣ ತಂಡದ ಪರ ಪ್ರದೀಪ್ ಮೊರ್, ಜಗ್ವತ್ ಸಿಂಗ್,ಭರತ್, ಮನ್‌ಪ್ರೀತ್ ಹಾಗೂ ಗಗನ್‌ದೀಪ್ ಸಿಂಗ್ ಗೋಲು ಗಳಿಸಿ ಜಯದ ರೂವಾರಿ ಎನಿಸಿದರು.
ಮಹಿಳಾ ವಿಭಾಗದಲ್ಲಿ ಮೂರು ಹಾಗೂ ನಾಲ್ಕನೇ ಸ್ಥಾನಕ್ಕಾಗಿ ನಡೆದ ಪಂದ್ಯದಲ್ಲಿ  ಹಾಕಿ ಮಹಾರಾಷ್ಟ್ರ ತಂಡ ಹಾಕಿ ಮಹಾರಾಷ್ಟ್ರ ವಿರುದ್ಧ  ೪-೧ ಗೋಲುಗಳ ಅಂತರದಲ್ಲಿ ಜಯ ಗಳಿಸಿ ಮೂರನೇ ಸ್ಥಾನ ಗೆದ್ದುಕೊಂಡಿತು. ಪುರುಷರ ವಿಭಾಗದ ಮೂರು ಮತ್ತು ನಾಲ್ಕನೇ ಸ್ಥಾನಕ್ಕಾಗಿ ನಡೆದ ಹೋರಾಟದಲ್ಲಿ  ಹಾಕಿ ಮಹಾರಾಷ್ಟ್ರ ತಂಡ ೫-೪ ಗೋಲುಗಳ ಅಂತರದಲ್ಲಿ  ಹಾಕಿ ಒಡಿಶಾ ವಿರುದ್ಧ ಜಯ ಗಳಿಸಿ  ಮೂರನೇ ಸ್ಥಾನ ಗೆದ್ದುಕೊಂಡಿತು.

Related Articles