ಸ್ಪೋರ್ಟ್ಸ್ ಮೇಲ್ ವರದಿ
ಒಬ್ಬರನ್ನು ಮೆಚ್ಚಿಸುವ ಕೆಲಸ ಮಾಡಬೇಕು, ಆದರೆ ಈ ರೀತಿಯಲ್ಲಿ ಹೆಸರು ಬದಲಾವಣೆ ಮಾಡುವುದು ಸೂಕ್ತವೇ?, ದಸರಾ ಕ್ರೀಡಾಕೂಟ ಎಂದಾಗ ರಾಜ್ಯದ ಎಲ್ಲ ಕ್ರೀಡಾಪಟುಗಳು ತಮ್ಮಿಂದಾದ ಉತ್ತಮ ಪ್ರದರ್ಶನವನ್ನು ತೋರಿ ಪದಕಗಳನ್ನು ಗೆಲ್ಲುವುದು, ಇತ್ತೀಚಿಗೆ ನಗದು ಬಹುಮಾವನ್ನು ಗೆಲ್ಲುವುದು ಕೂಡ ಆಗಿದೆ. ಆದರೆ ಈ ಸಿಎಂ ಕಪ್ ಎಲ್ಲಿಂದ ಬಂತು?, why Dasara sports is called CM Cup?ಈ ಕ್ರೀಡಾ ಕೂಟಕ್ಕೆ ಮುಖ್ಯಮಂತ್ರಿಗಳ ಕಪ್ ಎಂದು ಹೆಸರಿಡುವುದು ಎಷ್ಟು ಸೂಕ್ತ ಎಂಬ ಪ್ರಶ್ನೆ ಉದ್ಭವಿಸುವುದು ಸಹಜ.
ಏಕೆಂದರೆ ಮುಖ್ಯಮಂತ್ರಿಗಳು ಈ ರಾಜ್ಯದ ಕ್ರೀಡಾಪಟುಗಳ ಯಶಸ್ಸಿಗಾಗಿ ಮಾಡಬೇಕಾದ ಕೆಲಸ ಇನ್ನೂ ಇದೆ. 2014ರಿಂದ ನಗದು ಬಹುಮಾನವನ್ನು ಕೊಟ್ಟಿಲ್ಲ. ಕಂತುಗಳಲ್ಲಿ ನೀಡುತ್ತೇವೆ ಎಂಬ ಸುದ್ದಿ ಕೇಳಿ ಬಂದಿದೆ. ಕಂಠೀರವ ಕ್ರೀಡಾಂಗಣವನ್ನು ಖಾಸಗಿಯವರಿಗೆ ಬಾಡಿಗೆಗೆ ಕೊಟ್ಟು ನಮ್ಮ ಅಥ್ಲೀಟ್‌ಗಳು ಸಂಕಷ್ಟು ಎದುರಿಸುವಂತಾಗಿದೆ. ಕ್ರೀಡಾಂಗಣ ಬಾಡಿಗೆ ನೀಡುವುದರಿಂದ ಹಣ ಬರುತ್ತದೆ ಎಂದಾದರೆ ಕ್ರೀಡಾ ಇಲಾಖೆ ಕ್ರೀಡಾಂಗಣವನ್ನು ತೆರವುಗೊಳಿಸಿ ಅಲ್ಲಿ ಉತ್ತಮ ವಾಣಿಜ್ಯ ಕಟ್ಟಡಗಳನ್ನು ನಿರ್ಮಿಸಿ ಬಾಡಿಗೆಗೆ ನೀಡುವುದೇ ಸೂಕ್ತ. ಅಥವಾ ಪಂಚತಾರ ಹೊಟೇಲನ್ನು ಸ್ಥಾಪಿಸಿ ಇನ್ನೂ ಹೆಚ್ಚಿನ ಹಣ ಗಳಿಸುವುದು ಉತ್ತಮ. ಏಕೆಂದರೆ ಈಗಾಗಲೇ ಕೋಣಾರ್ಕ್ ಎಂಬ ಹೊಟೇಲ್ ಕಂಠೀವ ಕ್ರೀಡಾಂಗಣದ ಒಳಗಡೆಯೇ ಕಾರ್ಯ ನಿರ್ವಹಿಸುತ್ತಿವೆ.
ಕಂಠೀರವ ಒಳಾಂಗಣ ಕ್ರೀಡಾಂಗಣದಲ್ಲಿ ಮಳೆ ಬಂದರೆ ನೀರು ತುಂಬಿಕೊಳ್ಳುತ್ತದೆ. ಅಲ್ಲಿ ಒಳಭಾಗದಲ್ಲಿ ಹಾಕಿದ ಮ್ಯಾಟ್ ಮೂರ್ನಾಲ್ಕು ಬಾರಿ ಮಳೆಯಿಂದಾಗಿ ಹಾನಿಯಾಗಿತ್ತು. ಈಗ ಮತ್ತೆ ಏಷ್ಯನ್ ಚಾಂಪಿಯನ್‌ಷಿಪ್‌ಗಾಗಿ ಹೊಸ ಮ್ಯಾಟ್ ಹಾಕಲಾಗುತ್ತದೆ. ಇಂಥ ಟೆಂಡರ್ ಕೆಲಸಗಳಿಗೆ ಸರಕಾರದಲ್ಲಿ ಬೇಗನೆ ಹಣ ಬೀಡುಗಡೆಯಾಗುತ್ತದೆ. ಆದರೆ ಗೆದ್ದವರ ಪಾಲಿಗೆ ನೀಡಬೇಕಾದ ನಗದು ಬಹುಮಾನದ ವಿಳಂಬವೇಕೆ?
ದಸರಾ ಕ್ರೀಡಾಕೂಟಕ್ಕೆ ಸಿ.ಎಂ. ಕಪ್ ಎಂದು ಹೆಸರಿಡುವುದು ಮುಖ್ಯಮಂತ್ರಿಗಳಿಗೆ ಹಿತವೆನಿಸಿದರೆ, ಮೇಲಿನ ಅವ್ಯವಸ್ಥೆಯೂ ಹಿತವೆನಿಸಬೇಕಾಗುತ್ತದೆ. ಮುಖ್ಯಮಂತ್ರಿಗಳನ್ನು ಖುಷಿ ಪಡಿಸುವ ತವಕದಲ್ಲಿ ಕೆಲವು ಅಧಿಕಾರಿಗಳು ಹಾಗೂ ಕ್ರೀಡಾ ಸಂಘಟನೆಗಳ ಯೋಜನೆಯೂ ಇದಾಗಿದ್ದರೆ ಅಚ್ಚರಿಪಡಬೇಕಾಗಿಲ್ಲ.
ಕೆಒಎ ಮೌನವೇಕೆ?
ರಾಜ್ಯದ ಕ್ರೀಡಾಭಿವೃದ್ಧಿಯ ಜವಾಬ್ದಾರಿ ಕರ್ನಾಟಕ ರಾಜ್ಯ ಒಲಿಂಪಿಕ್ಸ್‌ಗೂ ಇದೆ. ರಾಜ್ಯದ ಏಕೈಕ ಕ್ರೀಡಾಂಗಣವನ್ನು ಜೆಎಸ್‌ಡಬ್ಲ್ಯು ಅವರಿಗೆ ಸರಕಾರ ಬಾಡಿಗೆಗೆ ನೀಡಿದಾಗ ರಾಜ್ಯ ಒಲಿಂಪಿಕ್ಸ್ ಸಂಸ್ಥೆಯ ಆ ಬಗ್ಗೆ ಯಾವುದೇ ಚಕಾರ ಎತ್ತರಲಿಲ್ಲ. ಅದು ಅಥ್ಲೆಟಿಕ್ಸ್ ನಮಗ್ಯಾಕೆ, ನಮಗೆ ಬಾಸ್ಕೆಟ್‌ಬಾಲ್ ಹಾಗೂ ಇತರ ಕ್ರೀಡೆಗಳಿವೆ, ಎಂದು ಕೆಒಎ ಜಾಣ ಕುರುಡು ತೋರಿದೆ. ಅಥ್ಲೆಟಿಕ್ಸ್ ಬಗ್ಗೆ ರಾಜ್ಯ ಒಲಿಂಪಿಕ್ಸ್ ಸಂಸ್ಥೆಗೆ ಆಸಕ್ತಿ ಇಲ್ಲ ಎಂಬುದಕ್ಕೆ ಇತ್ತೀಚಿಗೆ ನಡೆದ ಬೆಳವಣಿಗೆಯನ್ನೇ ಗಮನಿಸಬಹುದು. ರಾಜ್ಯದಿಂದ ಈ ಬಾರಿ ಟೆನಿಸ್‌ನಲ್ಲಿ ರೋಹನ್ ಬೋಪಣ್ಣಗೆ ಅರ್ಜುನ ಪ್ರಶಸ್ತಿ ಸಿಕ್ಕಿದೆ. ಸಿ.ಎ. ಕುಟ್ಟಪ್ಪ ಹಾಗೂ ವಿ.ಆರ್. ಬೀಡು ಅವರಿಗೆ ದ್ರೋಣಾಚಾರ್ಯ ಗೌರವ ಸಿಕ್ಕಿದೆ. ರಾಜ್ಯ ಒಲಿಂಪಿಕ್ಸ್ ಸಂಸ್ಥೆ ಮಾಧ್ಯಮಗಳಿಗೆ ಅಭಿವನಂದನೆಯ ಪತ್ರ ಕಳುಹಿಸುವಾಗ ಕೇವಲ ರೋಹನ್ ಬೋಪಣ್ಣ ಅವರ ಹೆಸರನ್ನು ಮಾತ್ರ ಪ್ರಕಟಿಸಿರುವುದು ಬೇಸರದ ಸಂಗತಿ. ಇಂಥ ವಿಷಯಗಳ ಬಗ್ಗೆ ಸಿಎಂ ಗಮನ ಹರಿಸಬೇಕು. ಸಂಸ್ಥೆಯೊಂದರ ಪದಾಧಿಕಾರಿಗಳು ಸರಕಾರದ ಉನ್ನತ ಹುದ್ದೆಯಲ್ಲಿ ಇದ್ದಾರೆ ಎಂಬ ಕಾರಣಕ್ಕೆ ಅವರು ಹೇಳಿದ್ದೇ ಅಂತಿಮ ತೀರ್ಮಾನ ಆಗಬಾರದು.
ಸಿಎಂ ಕಪ್ ಅಥವಾ ಪಿಎಂ ಕಪ್ ಯಾವುದೇ ಇರಲಿ. ಆದರೆ ಅವರ ಹೆಸರನ್ನಿಟ್ಟು ತಮ್ಮ ಜವಾಬ್ದಾರಿಗಳನ್ನು ಮರೆ ಮಾಚಬಾರದು. ರಾಜ್ಯ ಪ್ರಶಸ್ತಿಗಳನ್ನು ನೀಡುವಾಗ ಕೇವಲ ಒಲಿಂಪಿಕ್ಸ್ ಕ್ರೀಡೆಗಳಿಗೆ ಮಾತ್ರ ನೀಡಿ ಎಂದು ಧ್ವನಿ ಎತ್ತುವ ಕ್ರೀಡಾ ಸಂಸ್ಥೆಗಳು, ದಸರಾ ಕ್ರೀಡಾಕೂಟಗಳಲ್ಲಿ ಸಾಂಪ್ರದಾಯಿಕ ಕ್ರೀಡೆಗೆ ಹೆಚ್ಚಿನ ಒತ್ತು ನೀಡಬೇಕು. ಒಲಿಂಪಿಕ್ಸ್‌ನಲ್ಲೇ ಇಲ್ಲದ, ಕೇವಲ ಕೆಲವು ರಾಷ್ಟ್ರಗಳಿಗೆ ಮಾತ್ರ ಸೀಮಿತವಾಗಿರುವ ಕ್ರಿಕೆಟ್‌ಗೆ ಪ್ರತಿಷ್ಠಿತ ರಾಜೀವ್ ಗಾಂಧೀ ಖೇಲ್ ರತ್ನ, ಅರ್ಜುನ ಹಾಗೂ ದ್ರೋಣಾಚಾರ್ಯ ಪ್ರಶಸ್ತಿಗಳನ್ನು ನೀಡಲಾಗುತ್ತಿದೆ. ಈ ಬಗ್ಗೆ ಒಲಿಂಪಿಕ್ಸ್ ಸಂಸ್ಥೆಗಳು ತಮ್ಮ ಅಭಿಪ್ರಾಯಗಳನ್ನು ಪ್ರಕಟಿಸಬೇಕು.