Contact Information

1st floor, Murali Krishna Mansion, Near Krashi Kendra , Brahmavara - 576213 ,Udupi,Karnataka,India

We Are Available 24/ 7. Call Now.

ಸಾವನ್ನೇ ಗೆದ್ದ ಹರ್ಷಗೆ ಶಾರ್ಪ್‌ ಶೂಟರ್‌ ಆಗಿರುವುದೇ ಹರುಷ

ತುಮಕೂರು: ತುಮಕೂರು ಜಿಲ್ಲೆಯ ಕೊರಟಗೆರೆ ತಾಲೂಕಿನ ಅಮ್ಮನಹಳ್ಳಿಯ ಹರ್ಷ ಅವರ ಬದುಕಿನ ದುರಂತ ಕತೆಯನ್ನು ಕೇಳಿದಾಗ ಅವರ ಬಗ್ಗೆ ಅನುಕಂಪದ ಬದಲು ಹೆಮ್ಮೆ ಅನಿಸಿಸುತ್ತದೆ. ಎಂಜಿನಿಯರ್‌ ಆಗಿ ಯಾವುದಾದರೂ ಕಂಪೆನಿಯಲ್ಲಿ ಉದ್ಯೋಗದಲ್ಲಿರಬೇಕಾಗಿದ್ದ ಹರ್ಷ ಈಗ ಗಾಲಿಖುರ್ಚಿಯಲ್ಲಿ ಕುಳಿತು ಶಾರ್ಪ್‌ ಶೂಟರ್‌ ಆಗಿದ್ದಾರೆ. ಇತ್ತೀಚಿಗೆ ಅವರು ಶೂಟಿಂಗ್‌ ಚಾಂಪಿಯನ್‌ಷಿಪ್‌ನಲ್ಲಿ ಚಿನ್ನದ ಪದಕ ಗೆಲ್ಲುವ ಮೂಲಕ ಕ್ರೀಡಾ ಬದುಕಿಗೆ ಕಾಲಿಟ್ಟಿದ್ದಾರೆ. Harsha Ammanahalli, a Para Shooter from Tumkur who recently won a gold medal in shooting. Despite a broken spine, he is still performing in a wheelchair.

2011ರಲ್ಲಿ ಸಂಭವಿಸಿದ ರಸ್ತೆ ಅಪಘಾತದಲ್ಲಿ ಹರ್ಷ ಅವರು ಸಾವಿನ ಕದ ತಟ್ಟಿ ಬಂದಿದ್ದರು. ಅಪಘಾತದ ರಭಸಕ್ಕೆ ಕಾರಿನಿಂದ ಹೊರ ತಳ್ಳಲ್ಪಟ್ಟ ಹರ್ಷ ಅವರ ದೇಹದ ಅರ್ಧ ಭಾಗ ಕಾರಿನಲ್ಲೇ ಸಿಕ್ಕಿಕೊಂಡಿತ್ತು. ಇದರಿಂದಾಗಿ ಬೆನ್ನು ಮೂಳೆ ತುಂಡಾಗಿತ್ತು. ಬದುಕು ಗಾಲಿಕುರ್ಚಿಗೆ ಅಂಟಿಕೊಂಡಿತು. ಆದರೆ ಹರ್ಷ ಅವರಿಲ್ಲದ್ದ ಉತ್ಸಾಹ ಮುರಿದುಹೊಗಲಿಲ್ಲ. ಬದುಕಿನಲ್ಲಿ ಏನಾದರೂ ಸಾಧನೆ ಮಾಡಬೇಕು ಛಲ ಅವರಲ್ಲಿ ಮನೆ ಮಾಡಿತ್ತು.

ಉದ್ಘಾಟನೆ ದಿನವೇ ಅಪಘಾತ!

ಬೆಂಗಳೂನಿನಲ್ಲಿ ಖಾಸಗಿ ಕಂಪೆನಿಯೊಂದರಲ್ಲಿ ಕೆಲಸ ಮಾಡುತ್ತಿದ್ದ ಹರ್ಷ ಅವರಿಗೆ ತನ್ನೂರಿನಲ್ಲಿ ಏನಾದರೊಂದು ಸಂಸ್ಥೆಯನ್ನು ಆರಂಭಿಸಿ ಸ್ಥಳೀಯರಿಗೆ ನೆರವಾಗಬೇಕೆಂಬ ಹಂಬಲ. ಅದಕ್ಕಾಗಿ ಮದುಗಿರಿಯಲ್ಲಿ ಗಾರ್ಮೆಂಟ್ಸ್‌ನಲ್ಲಿ ಕೆಲಸ ಮಾಡುವವರಿಗಾಗಿ ತರಬೇತಿ ನೀಡುವ ಸಂಸ್ಥೆಯೊಂದನ್ನು ಸ್ಥಾಪಿಸಿದರು. ಆ ಸಂಸ್ಥೆಯ ಉದ್ಘಾನೆಯ ದಿನವೇ ರಸ್ತೆ ಅಪಘಾತದಲ್ಲಿ ಹರ್ಷ ಅವರ ಬೆನ್ನು ಮೂಳೆ ಮುರಿಯಿತು.

ಚೇತರಿಸಿಕೊಂಡ ನಂತರ ಮುಂದೇನು ಎಂದು ಯೋಚಿಸಿದಾಗ ಈ ಸಮಾಜ ಹರ್ಷಗೆ “ಅಂಗವಿಕಲ,” “ ವಿಕಲ ಚೇತನ” “ದಿವ್ಯಾಂಗ”, “ಸಿಸಿಕಲೀ ಚಾಲೆಂಜ್ಡ್‌ ಪರ್ಸನ್‌” ಎಂದೆಲ್ಲ ಕರೆಯಿತು ಹೊರತು ಮುಖ್ಯವಾಹಿನಿಗೆ ಬರುವ ದಾರಿ ತೋರಿಸಲಿಲ್ಲ.  ಹರ್ಷ ಶೂಟರ್‌ ಆಗುವುದಕ್ಕೆ ಮೊದಲು ಕೊರಟಗೆರೆಯಲ್ಲಿ ವಾಟರ್‌ ಪ್ಲಾಂಟ್‌ನಲ್ಲಿ ಡಿಸ್ಟ್ರಿಬ್ಯೂಟರ್‌ ಆಗಿ ಕೆಲಸ ಮಾಡಿದರು. ಮೂರು ವರ್ಷಗಳ ಬಳಿಕ ಗುತ್ತಿಗೆದಾರರ ಲೈಸನ್ಸ್‌ ಪಡೆದು ಗುತ್ತಿಗೆ ಕೆಲಸಗಳನ್ನು ಮಾಡತೊಡಗಿದರು. ಅಲ್ಲಿಯೂ ಸಂಕಷ್ಟಗಳೇ ಎದುರಾದವು. ಗಳಿಸಿದ ಹಣ ಹಂಚುವುದರಲ್ಲಿಯೇ ಮುಗಿಯುತ್ತಿತ್ತು. ಬಳಿಕ ಮನೆಯ ಹತ್ತಿರ ಪ್ರಾವಿಜನ್‌ ಸ್ಟೋರ್‌ ಹಾಕಿದರು. ಕೊರೋನಾ ಲಾಕ್‌ಡೌನ್‌ನಲ್ಲಿ ಅದು ಕೂಡ ಮುಚ್ಚಲ್ಪಟ್ಟಿತ್ತು.

ತುಮಕೂರಿನಲ್ಲಿ ಅನಿಲ್‌ ಎಂಬುವರು ವಿವೇಕಾನಂದ ಸ್ಪೋರ್ಟ್ಸ್‌ ಹಾಗೂ ಸಾಂಸ್ಕೃತಿಕ ಸಂಸ್ಥೆಯಲ್ಲಿ ಶೂಟಿಂಗ್‌ ತರಬೇತಿ ನೀಡುತ್ತಿದ್ದರು. ಬದುಕಿನಲ್ಲಿ ಮೂಲೆಗುಂಪಾಗಿರದೆ ಸದಾ ಚಟುವಟಿಕೆಯಿಂದ ಕೂಡಿರಬೇಕು, ಸೋಲನ್ನು ಒಪ್ಪಿಕೊಳ್ಳಬಾರದು ಎಂಬ ಛಲದೊಂದಿಗೆ ಹರ್ಷ ಶೂಟಿಂಗ್‌ ರೇಂಜ್‌ಗೆ ಕಾಲಿಟ್ಟರು. ಈ ನಡುವೆ ಬ್ಯಾಡ್ಮಿಂಟನ್‌ ಹಾಗೂ ಈಜಿನಲ್ಲೂ ಹರ್ಷ ತಮ್ಮನ್ನು ತೊಡಗಿಸಿಕೊಂಡುರು, ಆದರೆ ಶೂಟಿಂಗ್‌ ಹರ್ಷ ಅವರ ಕೈ ಹಿಡಿಯಿತು. ಒಲಿಂಪಿಯನ್‌ ಅವನಿ ಲೆಖಾರ ಅವರ ಬದುಕಿನ ಸಾಧನೆ ಹರ್ಷ ಅವರಿಗೆ ಸ್ಫೂರ್ತಿಯನ್ನುಂಟು ಮಾಡಿತು.

ಹರ್ಷ ಅವರ ಯಶಸ್ಸಿಗಾಗಿ ಅನೇಕರು ನೆರವು ನೀಡಿದ್ದಾರೆ. ಅವರ ನೆರವನ್ನು ಹರ್ಷ ಮರೆತಿಲ್ಲ, “ಶೂಟಿಂಗ್‌ ಯಶಸ್ಸಿನಲ್ಲಿ ಕೋಚ್‌ ಅನಿಲ್‌ ಅವರ ಪಾತ್ರ ಪ್ರಮುಖವಾದುದು. ಸಹೋದರಿ ಮಮತಾ ಹಾಗೂ ಭಾವ ರಮೇಶ್‌ ಎಲ್ಲಕ್ಕಿಂತ ಮುಖ್ಯವಾಗಿ ಕುಟುಂಬದ ಸದಸ್ಯರು ಹಾಗೂ ತಮ್ಮಂದಿರು, ಸ್ನೇಹಿತರು ಮಾಡಿದ ಸಹಾಯವನ್ನು ಮರೆಯುವಂತಿಲ್ಲ,” ಎನ್ನುತ್ತಾರೆ ಹರ್ಷ.

ದುಬಾರಿ ರೈಫಲ್‌: 10ಮೀ ಏರ್‌ ರೈಫಲ್‌ ಶೂಟಿಂಗ್‌ಗೆ ಬಳಸುವ ರೈಫಲ್‌ ಬಹಳ ದುಬಾರಿಯಾದುದು. ವಾಲ್ತರ್‌ ಬ್ರಾಂಡ್‌ನ ರೈಫಲ್‌ ಬಳಸಬೇಕಾದರೆ 3.20 ಲಕ್ಷ ರೂ. ವ್ಯಯ ಮಾಡಬೇಕಾಗುತ್ತದೆ. ಈ ರೀತಿ ಶೂಟಿಂಗ್‌ನಲ್ಲಿ ಯಶಸ್ಸು ಕಾಣಬೇಕಾದರೆ ಸರಕಾರ ಹಾಗೂ ಸಂಘ ಸಂಸ್ಥೆಗಳ ನೆರವು ಅಗತ್ಯವಿರುತ್ತದೆ. ಪ್ರಾಯೋಕರು ಮುಂದೆ ಬಂದರಲ್ಲಿ ಭವಿಷ್ಯದಲ್ಲಿ ಉತ್ತಮ ಪ್ರದರ್ಶನ ತೋರಿ ಪ್ಯಾರಾಲಿಂಪಿಕ್ಸ್‌ನಲ್ಲಿ ಭಾರತವನ್ನು ಪ್ರತಿನಿಧಿಸುವ ಹಂಬಲವನ್ನು ಹರ್ಷ ಹೊಂದಿದ್ದಾರೆ.

ದಿವ್ಯಾಂಗರಾಗಿ ದಿವ್ಯಾಂಗರಿಗೆ ನೆರವು: ತುಮಕೂರು ಜಿಲ್ಲೆಯ ಕೊರಟೆಗೆರೆ ತಾಲೂಕಿನ ಸೋಂಪುರದ ರವಿಕುಮಾರ್‌ ಹಾಗೂ ಅನುಸೂಯಮ್ಮ ಅವರ ಪುತ್ರ ಹರ್ಷ ಅವರು ಕಾರು ಅಪಘಾತದಲ್ಲಿ ಬೆನ್ನು ಮೂಳೆ ತುಂಡು ಮಾಡಿಕೊಂಡಿದ್ದರೂ, ಕಾರು ಚಲಾಯಿಸುವುದರಲ್ಲಿ ನಿಸ್ಸೀಮರು. ತಾವೇ ಕಾರು ಚಲಾಯಿಸಿಕೊಂಡು ಕೊರಟಗೆರೆಯಿಂದ ತಮಕೂರಿನ ಮಹಾತ್ಮಾಗಾಂಧೀ ಒಳಾಂಗಣ ಕ್ರೀಡಾಂಗಣಕ್ಕೆ ಬಂದು ಶೂಟಿಂಗ್‌ ಕಲಿಯುತ್ತಿದ್ದಾರೆ. ಜೊತೆಯಲ್ಲಿ ಹೊಸ ತೆರಿಗೆ ನೀತಿಯಿಂದಾಗಿ ಅಂಗವಿಕಲಿಗೆ ಜಿಎಸ್‌ಟಿ ರಹಿತ ಕಾರು ಸಿಗುತ್ತದೆ, ಇದರ ಬಗ್ಗೆ ಅಂಗವಿಕಲರಲ್ಲಿ ಅರಿವು ಮೂಡಿಸಿ ತಾವೇ ಮುತುವರ್ಜಿ ವಹಿಸಿ ತನ್ನಂತೆಯೇ ಇತರರಿಗೆ ಆ ಸರಕಾರದ ಯೋಜನೆಯಡಿ ಕಾರು ಪಡೆಯಲು ನೆರವಾಗುತ್ತಿದ್ದಾರೆ.


ಸೋಮಶೇಖರ್‌ ಪಡುಕರೆ, ಕರ್ನಾಟಕದ ಹಿರಿಯ ಕ್ರೀಡಾ ಪತ್ರಕರ್ತರು, ಕಳೆದ 32 ವರ್ಷಗಳಿಂದ ಕ್ರೀಡಾಪತ್ರಿಕೋದ್ಯಮದಲ್ಲಿ ಕಾರ್ಯನಿರ್ವಹಿಸುತಿದ್ದಾರೆ. ಕರ್ನಾಟಕದಲ್ಲಿರುವ ಕ್ರೀಡಾಪ್ರತಿಭೆಗಳನ್ನು ಪ್ರೋತ್ಸಾಹಿಸುವುದು ಮಾತ್ರವಲ್ಲದೆ ರಾಷ್ಟ್ರೀಯ ಹಾಗೂ ಅಂತಾರಾಷ್ಟ್ರೀಯ ಮಟ್ಟದ ಕ್ರೀಡಾಪಟುಗಳ ಸಾಧನೆಯನ್ನು ಕರ್ನಾಟಕದ ಓದುಗರಿಗೆ ಪರಿಚಯಿಸಿದ್ದಾರೆ. ಹಲವಾರು ದಿವ್ಯಾಂಗ ಕ್ರೀಡಾಪಟುಗಳನ್ನು ಗುರುತಿಸಿ ಅವರಿಗೆ ಸರಕಾರದ ನೆರವು ಸಿಗುವಂತೆ ಮಾಡಿದ್ದಾರೆ. ಕರ್ನಾಟಕದಲ್ಲಿರುವ ಕ್ರೀಡಾ ಸಾಧಕರಿಗೆ ನಗದು ಬಹುಮಾನ ಸಿಗುವಲ್ಲಿ ಇವರು ಬರೆದ ಲೇಖನಗಳು ಪ್ರಮುಖ ಪಾತ್ರವಹಿಸಿವೆ.