ಎನ್‌ಎಫ್ಸಿ ಕಪ್ ರಾಷ್ಟ್ರೀಯ ಫುಟ್ಬಾಲ್: ರಾಜ್ಯ ತಂಡಕ್ಕೆ ಅಶ್ವಿತಾ ಶೆಟ್ಟಿ ನಾಯಕಿ
ಸ್ಪೋರ್ಟ್ಸ್ ಮೇಲ್ ವರದಿ
ಇದೇ ತಿಂಗಳ 18 ರಿಂದ ಅಕ್ಟೋಬರ್ 1 ರವರೆಗೆ ಒಡಿಶಾದ ಕಟಕ್‌ನಲ್ಲಿ ನಡೆಯಲಿರುವ 24 ನೇ ಸೀನಿಯರ್ ಮಹಿಳಾ ಎನ್ ಎಫ್ ಸಿ ಕಪ್ ಫುಟ್ಬಾಲ್ ಚಾಂಪಿಯನ್‌ಷಿಪ್‌ನಲ್ಲಿ ಕರ್ನಾಟಕ ಮಹಿಳಾ ತಂಡದ ನಾಯಕತ್ವವನ್ನು ಮಂಗಳೂರಿನ ಅಶ್ವಿತಾ ಶೆಟ್ಟಿ ವಹಿಸಲಿದ್ದಾರೆ.
ಚಿಕ್ಕಂದಿನಲ್ಲೇ ಫುಟ್ಬಾಲ್ ಕ್ರೀಡೆಯಲ್ಲಿ ತನ್ನನ್ನು ತೊಡಗಿಸಿಕೊಂಡ ಅಶ್ವಿತಾ ಶೆಟ್ಟಿ, ಭಾರತ ಹಿರಿಯರ ಕ್ಯಾಂಪ್‌ನಲ್ಲಿ ತರಬೇತಿ ಪಡೆದಿರುತ್ತಾರೆ. ಸುರತ್ಕಲ್‌ನ ಎನ್‌ಐಟಿಕೆಯಲ್ಲಿ ಉದ್ಯೋಗಿಯಾಗಿರುವ ದಾಮೋದರ ಶೆಟ್ಟಿ ಹಾಗೂ ಸುನಂದಾ ಶೆಟ್ಟಿ ಅವರ ಪುತ್ರಿಯಾಗಿರುವ ಅಶ್ವಿತಾ, ಐದಾರು ವರ್ಷಗಳ ಕಾಲ ಜೂನಿಯರ್ ತಂಡದಲ್ಲಿ ಮಿಂಚಿದ ಸ್ಟ್ರೈಕರ್. ಮೊದಲು ಹಾಕಿ ಆಟಗಾರ್ತಿಯಾಗಿದ್ದ ಅಶ್ವಿತಾ, ನಂತರ ದೈಹಿಕ ಶಿಕ್ಷಕರ ಸಲಹೆ ಮೇರೆಗೆ ಫುಟ್ಬಾಲ್‌ನಲ್ಲಿ ತಮ್ಮನ್ನು ತೊಡಗಿಸಿಕೊಂಡರು.
ಎ ಗುಂಪಿನಲ್ಲಿ ಆಡಲಿರುವ ಕರ್ನಾಟಕ ತಂಡ, ಹರಿಯಾಣ, ಉತ್ತರ ಪ್ರದೇಶ ತಂಡಗಳ ವಿರುದ್ಧ ಆರಂಭಿಕ ಪಂದ್ಯಗಳನ್ನು ಆಡಲಿದೆ. ಉಪನಾಯಕಿ ಆಗಿ ಹರ್ಷಿತಾ ಟಿ.ಆರ್. ಆಯ್ಕೆಯಾಗಿರುತ್ತಾರೆ.
ತಂಡದ ವಿವರ
ಅಶ್ವಿತಾ ಡಿ. ಶೆಟ್ಟಿ (ನಾಯಕಿ), ಹರ್ಷಿತಾ ಟಿ.ಆರ್. (ಉಪನಾಯಕಿ), ವಿನಯ ಶೇಷನ್, ಕ್ರಿಸ್ಟಲ್ ಪಿಂಟೋ, ಸುಶ್ಮಿತಾ ಮಾರಿಯಾ ಫೆರ್ನಾಂಡೀಸ್, ಇಶ್ವಿನಾ ಕೌರ್, ರೂಪಾ ಜಿ., ಪೂಜಾ ಎಸ್. ಸಂಜಿತಾ ಪಿ., ಜೇನ್ ನವೋಮಿ ಸ್ಪಡಿಗಂ, ಶಿಲ್ಪಾ, ಪ್ರಿಯಾಂಕ ರಜಪೂತ್, ರಸಿಗಾ ಎಂ., ಸಿ.ಶ್ರುತಿ, ಅಂಜಲಿ ಹಿಂಡಲ್ಗೇಕರ್, ಜಾನ್ಸಿಲ್ ತೆರೆಸಾ ಕುಟಿನ್ಹಾ, ಮಹಿರಾ ಪ್ರಕಾಶ್ ಅಲ್ವೆರಾ, ಬಿಂದು ಟಿ.ಬಿ, ಅಶ್ಮಿತಾ ಎನ್. ರೈ, ನಂದಿನಿ ಜಿ.
ಮ್ಯಾನೇಜರ್-ಸರಳ ಎನ್. ಸ್ವಾಮಿ, ಪ್ರಧಾನ ಕೋಚ್-ರವಿ ಬಾಬು, ಸಹಾಯಕ ಕೋಚ್-ಶಾಂತಿ ಎಸ್.