Thursday, December 12, 2024

ಗುವಾಹಟಿಯಲ್ಲಿ ಸಮಬಲದ ಹೋರಾಟ

ಗುವಾಹಟಿ, ಅಕ್ಟೋಬರ್ 25

ಬಾರ್ತಲೋಮ್ಯೊ ಒಗ್ಬಚೆ (20ನೇ ನಿಮಿಷ) ನಾರ್ತ್ ಈಸ್ಟ್ ಯುನೈಟೆಡ್ ಪರ ಗಳಿಸಿದ ಗೋಲು ಹಾಗೂ ಫಾರೂಕ್ ಚೌಧರಿ (49 ನಿಮಿಷ) ಜೆಮ್ಷೆಡ್ಪುರ ಗೋಲು ಗಳಿಸುವುದರೊಂದಿಗೆ ಇಂಡಿಯನ್ ಸೂಪರ್ ಲೀಗ್ ನ ಹದಿನೆಂಟನೇ ಪಂದ್ಯ 1-1  ಗೋಲಿನಿಂದ ಸಮಬಲಗೊಂಡಿತು.

ನಾರ್ತ್ ಈಸ್ಟ್ ಮುನ್ನಡೆ ಆದರೆ…

ಆರಂಭದಿಂದಲೂ ಆಕ್ರಮಣಕಾರಿ ಆಟವಾಡಿದ ನಾರ್ತಈಸ್ಟ್ ಯುನೈಟೆಡ್‌ಗೆ 20ನೇ ನಿಮಿಷದಲ್ಲಿ ಬಾರ್ತಲೋಮ್ಯೊ ಗಳಿಸಿದ ಗೋಲಿನಿಂದ ಮುನ್ನಡೆ. ಜೆಮ್ಷೆಡ್ಪುರ ತಂಡ ಸಿಕ್ಕ ಅವಕಾಶವನ್ನು ಸದುಪಯೋಗಪಡಿಸಿಕೊಳ್ಳುವಲ್ಲಿ ಯಶಸ್ಸು ಕಾಣಲಿಲ್ಲ. ಬಾರ್ತಲೋಮ್ಯೊಗೆ ಕೆಲವು ನಿಮಿಷಗಳಲ್ಲೇ ಮತ್ತೊಂದು ಅವಕಾಶ ಸಿಕ್ಕಿತು. ಆದರೆ ತುಳಿದ ಚೆಂಡು ಗೋಲ್‌ಬಾಕ್ಸ್‌ನ ಅಂಚಿಗೆ ತಗುಲಿ ಹೊರ ನಡೆಯಿತು. ಮುನ್ನಡೆ ಕಂಡರೂ ರೆಡ್ ಕಾರ್ಡ್‌ನಿಂದ ಒಬ್ಬ ಆಟಗಾರರನ್ನು ಕಳೆದುಕೊಂಡಿದ್ದು, ನಾರ್ತ್‌ಈಸ್ಟ್ ತಂಡಕ್ಕೆ ನಷ್ಟದ ಸಂಗತಿ. ಈಗ ತಂಡ ಹಿಂ‘ಭಾಗದಲ್ಲೇ ಹೆಚ್ಚಿನ ಸಮಯವನ್ನು ಕಳೆಯುವಂತಾಯಿತು.

ರೆಡ್ ಕಾರ್ಡ್

ಪ್ರಥಮಾರ್ಧ  ಮುಗಿಯುವುದಕ್ಕೆ ಇನ್ನೇನು ವಿಜಿಲ್ ಮೊಳಗುವುದೇ ಬಾಕಿ ಅಷ್ಟರಲ್ಲೇ ನಾರ್ತ್ ಈಸ್ಟ್ ಯುನೈಟೆಡ್‌ನ ಮಿಸ್ಲಾವ್ ಕೊಮೊರ್ಸಿಕಿ ಅವರಿಗೆ ರೆಡ್ ಕಾರ್ಡ್. ಕಾರ್ಲೋಸ್ ಕಾಲೋವ್‌ಗೆ ಕೈಯಿಂದ ನೇರವಾಗಿ ತಿವಿದು ನೆಲಕ್ಕುರುಳಿಸಿರುವುದನ್ನು ಲೈನ್ಸ್‌ಮನ್ ಗಮನಿಸಿದರು. ಕೂಡಲೇ ಸೂಚನೆಯ ಧ್ವಜನವನ್ನು ಎತ್ತಿದರು. ಸ್ವಲ್ಪ ಹೊತ್ತು ಚರ್ಚೆಯ ನಂತರ ರೆಡ್ ಕಾರ್ಡ್ ತೋರಿಸಲಾಯಿತು, ಜತೆಯಲ್ಲಿ ನಾರ್ತ್ ಈಸ್ಟ್ ಯುನೈಟೆಡ್‌ಗೆ ಫ್ರೀ ಕಿಕ್ ಅವಕಾಶ ಕಲ್ಪಿಸಲಾಯಿತು.

ಬಾರ್ತಲೋಮ್ಯೊ ಮಿಂಚು

ಈಗಾಗಲೇ ಹ್ಯಾಟ್ರಿಕ್ ಗೋಲು ಸೇರಿದಂತೆ ನಾಲ್ಕು ಗೋಲುಗಳನ್ನು ಗಳಿಸಿರುವ ನೈಜೀರಿಯಾದ ಆಟಗಾರ ಬಾರ್ತಲೋಮ್ಯೊ ಒಗ್ಬಚೆ ನಾರ್ತ್‌ಈಸ್ಟ್ ಯುನೈಟೆಡ್‌ಗೆ ಮತ್ತೊಮ್ಮೆ ಜೀವ ತುಂಬಿದರು. ಜೆಮ್ಷೆಡ್ಪುರ ವಿರುದ್ಧದ ಪಂದ್ಯದ 20ನೇ ನಿಮಿಷದಲ್ಲಿ ಒಗ್ಬಚೆ ಗಳಿಸಿದ ಗೋಲಿನಿಂದ ಪರ್ವತ ಪ್ರದೇಶದ ತಂಡ ಆರಂಭದಲ್ಲೇ ಮೇಲುಗೈ ಸಾಧಿಸಿತು. ಎಡಭಾಗದಿಂದ ನಿಕಿಲ್ ಕದಮ್ ನೀಡಿದ ಪಾಸ್, ಫೆಡ್ರಿಕೊ ಗೆಲ್ಲೆಗೋ ಅವರ ನಿಯಂತ್ರಣಕ್ಕೆ ಸಿಲುಕಿತು, ಅವರು ನೇರವಾಗಿ ಬಾರ್ತಲೋಮ್ಯೊ ಒಗ್ಬಚೆ ಕಡೆಗೆ ತಿರುಗಿಸಿದರು. ಅತ್ಯಂತ ಚಾಕಚಕ್ಯತೆಯಿಂದ ಚೆಂಡನ್ನು ಪೆನಾಲ್ಟಿ ವಲಯಕ್ಕೆ ಕೊಂಡೊಯ್ದ ಒಗ್ಬಚೆ ಐಎಸ್‌ಎಲ್‌ನಲ್ಲಿ ಐದನೇ ಗೋಲು ಗಳಿಸಿ ಸಂಭ್ರಮಿಸಿದರು.
ಕಳೆದ ಬಾರಿಯ ನಾರ್ತ್ ಈಸ್ಟ್ ಯುನೈಟೆಡ್ ತಂಡಕ್ಕೂ ಈ ಬಾರಿಯ ನಾರ್ತ್ ಈಸ್ಟ್ ಯುನೈಟೆಡ್ ತಂಡಕ್ಕೂ ಅಜಗಜಾಂತರ ವ್ಯತ್ಯಾಸವಿದೆ. ಇದು ಆ ತಂಡದ ಆಟ ಮತ್ತು ಯಶಸ್ಸುನ್ನು ಕಂಡಾಗ ಸ್ಪಷ್ಟವಾಗುತ್ತದೆ. 7 ಅಂಕಗಳನ್ನು ಗಳಿಸಿ ಅಂಕಪಟ್ಟಿಯಲ್ಲಿ ಅಗ್ರ ಸ್ಥಾನವನ್ನು ಹಂಚಿಕೊಂಡಿರುವ ಪರ್ವತ ಪ್ರದೇಶದ ತಂಡ ಅದೇ ಲಯವನ್ನು ಕಾಯ್ದುಕೊಳ್ಳುವ ಗುರಿ ಹೊಂದಿದೆ. ಎಲ್ಕೋ ಷಟೋರಿ ಅವರಲ್ಲಿ ಪಳಗಿರುವ ತಂಡ ಯಾವುದೇ ತಂಡವನ್ನು ಸಮರ್ಥವವಾಗಿ ಎದುರಿಸಿ ಅಂಕ ಗಳಿಸುವ ಆತ್ಮವಿಶ್ವಾಸವನ್ನು ಹೊಂದಿದೆ. ಹಾಲಿ ಚಾಂಪಿಯನ್ ಚೆನ್ನೆಯಿನ್ ತಂಡವನ್ನು ಮನೆಯಂಗಣದಲ್ಲಿ ಸೋಲಿಸಿರುವ ನಾರ್ತ್ ಈಸ್ಟ್ ಯುನೈಟೆಡ್ ಮನೆಯಂಗಣದಲ್ಲಿ ಮತ್ತೆ ಮೂರು ಅಂಕಗಳಿಸುವ ಗುರಿ ಹೊಂದಿದೆ. ಅದಕ್ಕಾಗಿ ಜೆಮ್ಷೆಡ್ಪುರ ತಂಡವನ್ನು ಎದುರಿಸಲು ಸಜ್ಜಾಯಿತು.
ಹ್ಯಾಟ್ರಿಕ್ ಸೇರಿದಂತೆ ನಾಲ್ಕು ಗೋಲುಗಳನ್ನು ಗಳಿಸಿರುವ ಬಾರ್ತಲೋಮ್ಯೊ ಒಗ್ಬಚೆ ನಿಜವಾಗಿಯೂ ಜೆಮ್ಷೆಡ್ಪುರ ತಂಡಕ್ಕೆ ಆತಂಕ ತರಲಿದ್ದಾರೆ. ಮನೆಯಂಗಣದಲ್ಲಿ ನಾರ್ತ್ ಈಸ್ಟ್ ತಂಡ ಅಟ್ಯಾಕ್ ವಿಭಾಗದಲ್ಲಿ ಉತ್ತಮ ಪ್ರದರ್ಶನ ತೋರುತ್ತಿದೆ, ಆದರೆ ಹಿಂಭಾಗದಲ್ಲಿ ತಂಡ ಗಮನ ಹರಿಸಬೇಕಾಗಿದೆ. ಡಿಫೆನ್ಸ್ ವಿಭಾಗ ಈಗಾಗಲೇ ಎದುರಾಳಿಗೆ ಐದು ಗೋಲುಗಳನ್ನು ಗಳಿಸಲು ಅವಕಾಶ ಕಲ್ಪಿಸಿದೆ.
ಜೆಮ್ಷೆಡ್ಪುರ ತಂಡ ಅಜೇಯದ ಹೆಜ್ಜೆ ಇಟ್ಟಿದೆ, ಆದರೆ ಗೆದ್ದಿರುವುದು ಒಂದು ಪಂದ್ಯದಲ್ಲಿ ಮಾತ್ರ. ಮುಂಬೈ ತಂಡದ ವಿರುದ್ಧ ಮೊದಲ ಪಂದ್ಯದಲ್ಲಿ ಜಯ ಗಳಿಸಿದ ನಂತರ ಸತತ ಎರಡು ಪಂದ್ಯಗಳಲ್ಲಿ ಡ್ರಾ ಕಂಡಿದೆ. ಫಾರ್ವರ್ಡ್ ವಿಭಾಗದಲ್ಲಿ ಟಾಟಾ ಪಡೆ ಇನ್ನೂ ಉತ್ತಮ ಪ್ರದರ್ಶನ ತೋರಬಹುದಾಗಿತ್ತು ಎಂಬುದು ಆ ತಂಡದ ಪ್ರದರ್ಶನವನ್ನು ಗಮನಿಸಿದಾಗ ಸ್ಪಷ್ಟವಾಗುತ್ತದೆ. ಸುಬ್ರತಾ ಪಾಲ್ ಮತ್ತೆ ತಂಡಕ್ಕೆ ಆಗಮಿಸಿರುವುದು ಟಾಟಾ ಪಡೆಯ ಶಕ್ತಿಯನ್ನು ಹೆಚ್ಚಿಸಿದೆ. ಎರಡು ಉತ್ಸಾಹಿ ತಂಡಗಳ ನಡುವಿನ ಪಂದ್ಯ ಕುತೂಹಲದ ಕ್ಷಣಗಳಿಗೆ ಸಾಕ್ಷಿಯಾಗುವುದು ಸ್ಪಷ್ಟ.

Related Articles