Friday, March 29, 2024

ಸಮಬಲ ಸಾಧಿಸಿದ ಡೆಲ್ಲಿ -ಪುಣೆ

ಹೊಸದಿಲ್ಲಿ:

ಆತಿಥೇಯರ ಪರ 44ನೇ ನಿಮಿಷದಲ್ಲಿ ರಾಣಾ ಘರ್ಮಾನಿ ಹಾಗೂ ಪ್ರವಾಸಿ ತಂಡದ ಪರ 88ನೇ ನಿಮಿಷದಲ್ಲಿ ಬದಲಿ ಆಟಗಾರ ಡಿಯಾಗೋ ಕಾರ್ಲೋಸ್ ಗೋಲು ಗಳಿಸುವುದರೊಂದಿಗೆ ಡೆಲ್ಲಿ ಡೈನಮೋಸ್ ಹಾಗೂ ಎಫ್ ಸಿ ಪುಣೆ ಸಿಟಿ ನಡುವಿನ ಇಂಡಿಯನ್ ಸೂಪರ್ ಲೀಗ್ ಪಂದ್ಯ 1-1 ಗೋಲಿನಿಂದ ಡ್ರಾ ಗೊಂಡಿದೆ. ಇಂದರೊಂದಿಗೆ ಪುಣೆ ತಂಡಕ್ಕೆ ಡೆಲ್ಲಿಯನ್ನು ಈ ಬಾರಿಯೂ ಸೋಲಿಸಲಾಗಲಿಲ್ಲ.

ಅದ್ಭುತ ಗೋಲ್..ಡೆಲ್ಲಿ ಮುನ್ನಡೆ

ರಾಣಾ ಘರ್ಮಾನಿ 44ನೇ ನಿಮಿಷದಲ್ಲಿ ಗಳಿಸಿದ ಅದ್ಭುತ ಗೋಲಿನ ನೆರವಿನಿಂದ ಡೆಲ್ಲಿ ಡೈನಮೋಸ್ ತಂಡ ಇಂಡಿಯನ್ ಸೂಪರ್ ಲೀಗ್‌ಲ್ಲಿ ದಿಟ್ಟ ಹೆಜ್ಜೆ ಇಟ್ಟಿತು. ನೋಡ ನೋಡುತ್ತಿದ್ದಂತೆ ದಾಖಲಾದ ಈ ಗೋಲು ಪ್ರೇಕ್ಷಕರನ್ನು ಸಂಭ್ರಮಿಸಿದ್ದು,ಮಾತ್ರವಲ್ಲದೆ ಪುಣೆ ತಂಡದ ಆಟಗಾರರನ್ನು ಅಚ್ಚರಿಗೊಳಿಸಿತ್ತು. ಗೋಲ್‌ಬಾಕ್ಸ್‌ನಿಂದ ಸುಮಾರು 35 ಅಡಿಗಳ ದೂರದಲ್ಲಿ ನಿಯಂತ್ರಣಕ್ಕೆ ಸಿಕ್ಕ ಚೆಂಡನ್ನು ರಾಣಾ ನೇರವಾಗಿ ಗೋಲ್‌ಬಾಕ್ಸ್‌ಗೆ ಗುರಿ ಇಟ್ಟು ತುಳಿದರು. ಪುಣೆಯ ಗೋಲ್‌ಕೀಪರ್ ವಿಶಾಲ್ ಕೈಥ್ ಚೆಂಡನ್ನು ತಡೆಯಲು ಸಜ್ಜಾಗುತ್ತಿರುವಂತೆಯೇ ಚೆಂಡು ತಿರುವು ಪಡೆದು ನೇರವಾಗಿ ಗೋಲ್‌ಬಾಕ್ಸ್ ಸೇರಿತು. ಇದರೊಂದಿಗೆ ಡೆಲ್ಲಿ ಪ್ರಥಮಾರ್ಧದಲ್ಲಿ 1-0 ಮುನ್ನಡೆ ಕಂಡಿತು.

ಡೆಲ್ಲಿಯ ಉತ್ತಮ ಆಟ

ಡೆಲ್ಲಿ ಡೈನಮೋಸ್ ತಂಡ  ಆರಂಭದಿಂದಲೂ ಅತ್ಯಂತ ಹೊಂದಾಣಿಕೆಯ ಆಟವಾಡಿತ್ತು. ಹಿಂದಿನ ಸೋಲುಗಳಿಂದ ಪಾಠ ಕಲಿತಂತೆ ತಂಡ ಉತ್ತಮ ರೀತಿಯಲ್ಲಿ ಚೆಂಡಿನ ಮೇಲೆ ನಿಯಂತ್ರಣ ಕಂಡಿತು. 20ನೇ ನಿಮಿಷದಲ್ಲಿ ಲಾಲ್‌ಲಿಯಾನ್ಜುವಾಲಾ ಚಾಂಗ್ಟೆಗೆ ಗೋಲು ಗಳಿಸುವ ಅವಕಾಶ ಉತ್ತಮವಾಗಿತ್ತು. ಆಂಡ್ರೆಜಾ ಕಲುಜೆರೋವಿಕ್, ಜೊನಾಥನ್ ವಿಲಾ ಅವರು ಚೆಂಡನ್ನು ಉತ್ತಮ ರೀತಿಯಲ್ಲಿ ನಿಯಂತ್ರಿಸಿರುತ್ತಿದ್ದರೆ ಡೆಲ್ಲಿ ಸುಲಭವಾಗಿ ಖಾತೆ ತೆರೆಯುತ್ತಿತ್ತು. ಚೆಂಡು ನಂದಕುಮಾರ್ ಶೇಖರ್ ಅವರ ಕಡೆ ಸಾಗಿತು. ಆರಂಭದಲ್ಲೇ ಗುರಿ ಇಟ್ಟಿರುತ್ತಿದ್ದರೆ ಅದು ಸುಲಭದ ಗೋಲಾಗುತ್ತಿತ್ತು. ನಂದಕುಮಾರ್ ತುಳಿದ ಚೆಂಡು ಗೋಲ್‌ಬಾಕ್ಸ್‌ನ ಮೇಲ್ಭಾಗದ ಅಂಚಿನಿಂದ ಮೇಲೆ ಸಾಗಿತು. ಇದಕ್ಕೂ ಮುನ್ನ 16ನೇ ನಿಮಿಷದಲ್ಲೂ ನಾರಾಯಣ ದಾಸ್ ಗೋಲ್ ಬಾಕ್ಸ್‌ಗೆ ಗುರಿ ಇಟ್ಟರೂ ಯಾವುದೇ ಪ್ರಯೋಜನವಾಗಲಿಲ್ಲ

Related Articles