ಕ್ರಾಸ್ ಕಂಟ್ರಿ: ಮಂಗಳೂರು ವಿವಿ ಸಮಗ್ರ ಚಾಂಪಿಯನ್

0
219
ಸ್ಪೋರ್ಟ್ಸ್ ಮೇಲ್ ವರದಿ

ಕಲಬುರ್ಗಿಯಲ್ಲಿ ನಡೆದ ಅಖಿಲ ಭಾರತ ಅಂತರ್ ವಿಶ್ವವಿದ್ಯಾನಿಲಯ ಕ್ರಾಸ್ ಕಂಟ್ರಿ ಚಾಂಪಿಯನ್‌ಷಿಪ್‌ನಲ್ಲಿ ಮಂಗಳೂರು ವಿಶ್ವವಿದ್ಯಾನಿಲಯವು ಸಮಗ್ರ ಚಾಂಪಿಯನ್ ಪಟ್ಟ ಗೆದ್ದುಕೊಂಡಿತು.

ಗುಲಬರ್ಗ ವಿಶ್ವವಿದ್ಯಾನಿಲಯ ಈ ಚಾಂಪಿಯನ್‌ಷಿಪ್‌ನ ಆತಿಥ್ಯ ವಹಿಸಿತ್ತು. ಮಂಗಳೂರು ವಿಶ್ವವಿದ್ಯಾನಿಲಯ ವನಿತೆಯರ ವಿಭಾಗದಲ್ಲಿ 50 ಹಾಗೂ ಪುರುಷರ ವಿಭಾಗದಲ್ಲಿ 15 ಅಂಕ ಗಳಿಸಿ ಸಮಗ್ರ ಚಾಂಪಿಯನ್ ಪಟ್ಟ ತನ್ನದಾಗಿಸಿಕೊಂಡಿತು.
ಪುರುಷರ ತಂಡ ವಿಭಾಗದಲ್ಲಿ ಮಂಗಳೂರು ವಿಶ್ವವಿದ್ಯಾನಿಲಯ ಪ್ರಥಮ ಹಾಗೂ ರೊಹ್ತಕ್‌ನ ಮಹರ್ಷಿ ದಯಾನಂದ ವಿಶ್ವವಿದ್ಯಾನಿಲಯ ದ್ವಿತೀಯ ಸ್ಥಾನ ಗಳಿಸಿತು. ಚಂಡೀಗಢದ ಪಂಜಾಬ್ ವಿಶ್ವವಿದ್ಯಾನಿಲಯ ಮೂರನೇ ಸ್ಥಾನ ತನ್ನದಾಗಿಸಿಕೊಂಡಿತು.
ಮಹಿಳೆಯರ ವಿಭಾಗದಲ್ಲಿ ಪಟಿಯಾಲದ ಪಂಜಾಬ್ ವಿಶ್ವವಿದ್ಯಾನಿಲಯ ಪ್ರಥಮ ಹಾಗೂ ಮಂಗಳೂರು ವಿಶ್ವವಿದ್ಯಾನಿಲಯ ದ್ವಿತೀಯ, ಗೋರಖ್‌ಪುರದ ದೀನ್ ದಯಾಳ್ ವಿಶ್ವವಿದ್ಯಾನಿಲಯ ತೃತೀಯ ಸ್ಥಾನ ಗಳಿಸಿತು. ಮಂಗಳೂರು ವಿಶ್ವವಿದ್ಯಾನಿಲಯ ಸತತ ಮೂರನೇ ಬಾರಿಗೆ ಸಮಗ್ರ ಚಾಂಪಿಯನ್ ಪಟ್ಟ ಗೆದ್ದುಕೊಂಡಿತು.
ರೋಹ್ತಕ್‌ನ ಮಹರ್ಷಿ ದಾಯನಂದ ವಿಶ್ವವಿದ್ಯಾನಿಲಯದ ಕಾರ್ತಿಕ್ ಕುಮಾರ್ ಪುರುಷರ ವಿಭಾಗದಲ್ಲಿ ವೈಯಕ್ತಿಕ ಚಾಂಪಿಯನ್ ಪಟ್ಟ ಗೆದ್ದುಕೊಂಡರೆ, ಆರ್‌ಟಿಎಂ ನಾಗ್ಪುರ ವಿಶ್ವವಿದ್ಯಾನಿಲಯದ ಪ್ರಜಕ್ತಾ ಗೋಢಬೋಲೆ ವನಿತೆಯರ ವಿಭಾಗದಲ್ಲಿ ವೈಯಕ್ತಿಕ ಚಾಂಪಿಯನ್ ಪಟ್ಟ ಗೆದ್ದುಕೊಂಡರು. ಕಾರ್ತಿಕ್ 30.40 ನಿಮಿಷಗಳಲ್ಲಿ ಗುರಿ ತಲುಪಿದರೆ, ಪ್ರಜಕ್ತಾ 35.55 ನಿಮಿಷಗಳಲ್ಲಿ ಗುರಿ ತಲುಪಿದರು. ಮಂಗಳೂರು ವಿಶ್ವವಿದ್ಯಾನಿಲಯದ ನರೇಂದ್ರ ಪ್ರತಾಪ್ ಸಿಂಗ್ 31.7 ನಿಮಿಷ, ದಿನೇಶ್ 31.11 ನಿಮಿಷ ಹಾಗೂ  ಅಬ್ದುಲ್ ಬ್ಯಾರಿ 31.15ನಿಮಿಷಗಳಲ್ಲಿ ಗುರಿ ತಲುಪಿ ಅನುಕ್ರಮವಾಗಿ ಎರಡು, ಮೂರು ಮತ್ತು ನಾಲ್ಕನೇ ಸ್ಥಾನ ತಮ್ಮದಾಗಿಸಿಕೊಂಡರು.
ದೇಶದ ಒಟ್ಟು ೧೮೧ ವಿಶ್ವವಿದ್ಯಾಲಯಗಳಿಂದ 1100 ಪುರುಷ ಹಾಗೂ 800 ಮಹಿಳಾ ಸ್ಪರ್ಧಿಗಳು ಪಾಲ್ಗೊಂಡಿದ್ದರು,