Thursday, October 10, 2024

ಕಷ್ಟಗಳ ಹೊತ್ತು ಜಿಗಿಯುವ ಕುಂದಾಪುರದ ಜಂಪಿಂಗ್‌ ಸ್ಟಾರ್‌ ಗೌತಮ್‌

Sportsmail Desk: ಕುಂದಾಪುರದ ಗಾಂಧೀ ಮೈದಾನದಲ್ಲಿ ಜಂಪಿಂಗ್‌ ಮಾಡುತ್ತಿದ್ದ ಯುವಕನ ವೀಡಿಯೋ ವೈರಲ್‌ ಆಗಿತ್ತು. ಈತ ಯಾವುದೋ ಜಿಮ್ನಾಸ್ಕಿಕ್‌ ಶಾಲೆಯ ವಿದ್ಯಾರ್ಥಿ ಇರಬಹುದೆಂದು ತಿಳಿದು ಖುಷಿಯೂ ಆಯಿತು. ಗುರುವಾರ ಗೆಳೆಯ ಕುಂದಾಪುರದ ಜಾಯ್‌ ಕರ್ವಾಲೋ ಅವರೊಂದಿಗೆ ಆ ಹುಡುಗನನ್ನು ಪತ್ತೆ ಹಚ್ಚಿ ಮಾತನಾಡಿಸಲು ಪ್ರಯತ್ನಿಸಿದೆವು. ನಾನಾ ಸಾಹೇಬ್‌ ರಸ್ತೆಯಲ್ಲಿರುವ ಅಂಗಡಿಯೊಂದರಲ್ಲಿ ವಿಚಾರಿಸಿದಾಗ ಮನೆಯ ಕಡೆಯ ರಸ್ತೆ ತೋರಿಸಿದರು. ಮನೆಗೆ ಹೋದಾಗ ಅತ್ಯಂತ ಮುಜುಗರದ ಯುವಕ ಗೌತಮನ ಪರಿಚಯವಾಯಿತು. Flips expert jumping star of Kundapura need support.

ನಾವು ಮಾತನಾಡಿಸಲು ಹೋದದ್ದು ಗೌತಮನ ಜಂಪ್‌ ಬಗ್ಗೆ. ಆದರೆ ಆತನ ಮನೆಯಲ್ಲಿರುವ ಕಷ್ಟ ನೋಡಿದಾಗ ಮನಸ್ಸಿಗೆ ಬಹಳ ನೋವಾಯಿತು. ಕುಂದಾಪುರದ ಗುಜ್ಜಿತೋಟದಲ್ಲಿರುವ ಪುಟ್ಟ ಮನೆ, ಅದು ಬಡ ದಲಿತ ಕುಟುಂಬ. ಗೌತಮ ಚಿಕ್ಕಂದಿನಲ್ಲಿಯೇ ಹೆತ್ತವರನ್ನು ಕಳೆದುಕೊಂಡು ಅನಾಥನಾದ. ಹುಟ್ಟಿದ ಎರಡು ತಿಂಗಳಲ್ಲೇ ತಾಯಿ ಗಿರಿಜ ಸಾವನ್ನಪ್ಪಿದರೆ, ಒಂದೆರಡು ವರ್ಷಗಳಲ್ಲಿ ತಂದೆ ಗೋಪಾಲ ಹೃದಯಾಘಾತದಿಂದ ನಿಧನರಾದರು. ಗೌತಮನ ಚಿಕ್ಕಮ್ಮ ಸುಜಾತ ಅವರು ಈ ಎರಡೂ ಮಕ್ಕಳನ್ನು ಆರೈಕೆ ಮಾಡುತ್ತಾರೆ. ಅಣ್ಣ ಗೌರವ್‌ಗೆ ಕುಂದಾಪುರದ ಪೆಟ್ರೋಲ್‌ ಬಂಕ್‌ನಲ್ಲಿ ಕೆಲಸ. ಸುಜಾತ ಅವರು ಮದುವೆಯಾದರೆ ಈ ಮಕ್ಕಳು ಅನಾಥರಾಗುತ್ತಾರೆಂದು ತಿಳಿದು ನಲವತ್ತು ವರ್ಷವಾದರೂ ಮದುವೆಯಾಗದೆ ಈ ಇಬ್ಬರು ಮಕ್ಕಳಿಗೆ ಆಶ್ರಯವಾಗಿದ್ದಾರೆ. ಕುಂದಾಪುರದಲ್ಲಿ ಕೆಲಸ ಮಾಡಿಕೊಂಡು ಬದುಕು ಸಾಗಿಸುತ್ತಿದ್ದಾರೆ.

ಚಿಕ್ಕಂದಿನಿಂದಲೇ ಜಂಪಿಂಗ್‌: ಯುವ ಕ್ರೀಡಾಪಟುವಿಗೆ ಇರಬೇಕಾದ ಮೈಕಟ್ಟು ಗೌತಮ್‌ನಲ್ಲಿದೆ. ಬೆಳಿಗ್ಗೆ ಮತ್ತು ಸಂಜೆ ಕುಂದಾಪುರದ ಗಾಂಧೀ ಮೈದಾನದಲ್ಲಿ ಜಿಮ್ನಾಸ್ಟ್‌ ರೀತಿಯಲ್ಲಿ ಜಂಪ್‌ ಮಾಡುವ ಗೌತಮ್‌ಗೆ ಇದು ಚಿಕ್ಕಂದಿನಿಂದಲೂ ಅಭ್ಯಾಸ. ಹತ್ತನೇ ತರಗತಿಯಲ್ಲಿ ಅನುತ್ತೀರ್ಣನಾದ ಗೌತಮ್‌ಗೆ ಈಗ ಶಾಲೆಗೆ ಹೋಗಲು ಆಸಕ್ತಿ ಇಲ್ಲ. ಈ ನೆಗೆಯುವ, ಜಿಗಿಯುವ ಕ್ರೀಡೆಯಲ್ಲೇ ತನ್ನನ್ನು ತೊಡಗಿಸಿಕೊಳ್ಳಬೇಕೆಂಬ ಹಂಬಲ. ಆದರೆ ಅದಕ್ಕೆ ಸಮರ್ಪಕ ಕೋಚ್‌ ಮತ್ತು ಕ್ರೀಡಾಭಿಮಾನಿಗಳ ಪ್ರೋತ್ಸಾಹದ ಅಗತ್ಯವಿದೆ.

ಹುಲಿವೇಷವೇ ಪ್ರೇರಣೆ:  ಇದನ್ನೆಲ್ಲ ಯಾಕೆ ಮಾಡುತ್ತೀರಿ, ಇದರಿಂದ ಏನು ಪ್ರಯೋಜನವಿದೆ? ಎಂದು ಕೇಳಿದಾಗ “ಹುಲಿವೇಷದಲ್ಲಿ ನನ್ನ ಕಸರತ್ತು ಎಲ್ಲರಿಗೂ ಇಷ್ಟವಾಗಿದೆ. ಮಂಗಳೂರು, ಉಡುಪಿ ಮೊದಲಾದ ಕಡೆಗಳಿಂದ ನನ್ನ ಜಿಗಿತಕ್ಕೆ ಬೆರಗಾಗಿ ಆಹ್ವಾನ ನೀಡುತ್ತಾರೆ. ಹೋಗಿ ಕುಣಿದು ಬಂದರೆ ಸ್ವಲ್ಪ ಹಣ ಕೊಡುತ್ತಾರೆ,” ಎನ್ನುತ್ತಾನೆ ಗೌತಮ್‌.

ಬ್ಯಾಕ್‌ ಫ್ಲಿಪ್‌ ಮತ್ತು ಫ್ರಂಟ್‌ ಫ್ಲಿಪ್‌ನಲ್ಲಿ ನಿಪುಣನಾಗಿರುವ ಗೌತಮ್‌ ಹಿಮ್ಮುಖ ಮತ್ತು ಮುಮ್ಮಖವಾಗಿ ಜಿಗಿಯಬಲ್ಲರು. ಆದರೆ ತಾನು ಜಿಮ್ನಾಸ್ಟಿಕ್‌ನ ತಂತ್ರಗಳನ್ನು ಕಲಿತಿದ್ದೇನೆ ಎಂದು ಗೌತಮ್‌ಗೆ ಅರಿವಿಲ್ಲ. ತನಗೇನು ಬರುತ್ತದೆಯೋ ಅದನ್ನು ಚೆನ್ನಾಗಿ ಮಾಡಿ ಅದರಲ್ಲೇ ಸುಧಾರಿತ ಪ್ರಯೋಗಗಳನ್ನು ಮಾಡುತ್ತಿದ್ದಾನೆ.ಕರಾವಳಿಯಲ್ಲಿ ಹುಲಿವೇಷ ಕುಣಿಯುವುದು ಎಷ್ಟು ಕುತೂಹಲವೋ ಅದೇ ರೀತಿ ಕೆಲವು ಹುಲಿವೇಷಧಾರಿಗಳು ಜಿಗಿಯುವುದು ಕೂಡ ರೋಚಾಂಚನ. ಕೆಲವೊಮ್ಮೆ ಜಿಮ್ನಾಟ್ಸ್‌ಗಳನ್ನೂ ನಾಚಿಸುವ ರೀತಿಯಲ್ಲಿ ಅವರು ಫ್ಲಿಪ್‌ಗಳನ್ನು ಮಾಡುತ್ತಾರೆ. ಉತ್ತಮ ಜಿಮ್ನಾಸ್ಟಿಕ್‌ ಕೋಚ್‌ನಲ್ಲಿ ತರಬೇತಿ ಸಿಕ್ಕರೆ ಗೌತಮ್‌ ಭವಿಷ್ಯ ಉಜ್ವಲವಾಗುವುದು ಖಚಿತ.

ಪ್ರೋತ್ಸಾಹ ಸಿಕ್ಕರೆ ಜಿಮ್ನಾಸ್ಟ್‌ ಆಗುವೆ: ಗೌತಮ್‌ಗೆ ಜಿಮ್ನಾಸ್ಟಿಕ್‌ ಎಂದರೆ ಏನೆಂದೂ ಗೊತ್ತಿಲ್ಲ. ಆದರೆ ಆತನ ದೇಹ ಜಿಮ್ನಾಸ್ಟಿಕ್‌ಗೆ ಸೂಕ್ತವಾಗಿದೆ. ಬಡವರ ಮನೆಯ ಹುಡುಗನಾದರೂ ಆತನ ದೇಹದ ಮೈಕಟ್ಟು ಉತ್ತಮ ಕ್ರೀಡಾಪಟುವಿನ ಮೈಕಟ್ಟಿನಂತಿದೆ. “ನನಗೆ ಜಿಮ್ನಾಸ್ಟಿಕ್‌ ಬಗ್ಗೆ ಗೊತ್ತಿಲ್ಲ. ಹುಲಿವೇಷ ಹಾಕಿ ಕುಣಿಯುತ್ತಿರುವೆ. ಅಲ್ಲಿ ಈ ರೀತಿಯ ಫ್ಲಿಪ್‌ ಮಾಡುತ್ತಿರುವೆ. ಜನ ಖುಷಿಯಿಂದ ಪ್ರೋತ್ಸಾಹ ನೀಡುತ್ತಿದ್ದರು. ಪ್ರತಿವರ್ಷವೂ ಏನಾದರೂ ಹೊಸತು ಮಾಡಬೇಕು. ಗೊತ್ತಿರುವುದನ್ನು ಇನ್ನೂ ಉತ್ತಮವಾಗಿ ಮಾಡಬೇಕು ಎಂಬುದೇ ಹಂಬಲ. ಯಾರಾದರೂ ಪ್ರೋತ್ಸಾಹ ನೀಡಿದರೆ ಕ್ರೀಡೆಯಲ್ಲಿ ಪಾಲ್ಗೊಳ್ಳುವೆ,” ಎನ್ನುತ್ತಾರೆ ಗೌತಮ್‌.

ರಾಜ್ಯಾದ್ಯಂತ ಮೆಚ್ಚುಗೆ: ಸೋಷಿಯಲ್‌ ಮೀಡಿಯಾದಲ್ಲಿ ಗೌತಮ್‌ ಬಗ್ಗೆ ಬರೆದಾಗ ಆತನ ವೀಡಿಯೋ ನೋಡಿ ರಾಜ್ಯಾದ್ಯಂತ ಅನೇಕ ಕ್ರೀಡಾಭಿಮಾನಿಗಳು ಮೆಚ್ಚುಗೆ ವ್ಯಕ್ತಪಡಿಸಿದ್ದು, ಪ್ರೋತ್ಸಾಹ ನೀಡುವುದಾಗಿ ತಿಳಿಸಿದ್ದಾರೆ. ಕುಂದಾಪುರ ಬಿಟ್ಟು ಬೆಂಗಳೂರನ್ನು ಸೇರಿಕೊಂಡರೆ ಅಲ್ಲಿ ಜಿಮ್ನಾಸ್ಟಿಕ್‌ನಲ್ಲಿ ತರಬೇತಿ ಪಡೆಯಲು ಉತ್ತಮ ಅವಕಾಶವಿದೆ. ಹತ್ತನೇ ತರಗತಿ ಪಾಸಾಗಿದ್ದಲ್ಲಿ ರಾಜ್ಯ ಯುವಸಬಲೀಕರಣ ಮತ್ತು ಕ್ರೀಡಾ ಇಲಾಖೆಯ ಹಾಸ್ಟೆಲ್‌ನಲ್ಲಿದ್ದು ಜಿಮ್ನಾಸ್ಟಿಕ್‌ನಲ್ಲಿ ತರಬೇತಿ ಪಡೆಯಬಹುದು.

Related Articles