Saturday, July 27, 2024

FIM MiniGP ವಿಶ್ವ ಸರಣಿಗೆ ಬೆಂಗಳೂರಿನ ಶ್ರೇಯಸ್‌

ಬೆಂಗಳೂರು: ಭಾರತದ ವಿವಿಧ ನಗರಗಳಲ್ಲಿ ನಡೆದ ಎಫ್‌ಐಎಂ ಮಿನಿಜಿಪಿ ವಿಶ್ವಸರಣಿಯಲ್ಲಿ ಅಗ್ರ ಸ್ಥಾನ ಪಡೆದ ಬೆಂಗಳೂರಿನ ಶ್ರೇಯಸ್‌ ಹರೀಶ್‌ ಹಾಗೂ ಕೋಲಾಪುರದ ಜಿನೇಂದ್ರ ಕಿರಣ್‌ ಸಾಂಗ್ವೆ ಅವರು ನವೆಂಬರ್‌ನಲ್ಲಿ ಸ್ಪೇನ್‌ನ ವೆಲೆನ್ಸಿಯಾದಲ್ಲಿ ನಡೆಯಲಿರುವ FIM MiniGP ಫೈನಲ್‌ನಲ್ಲಿ ಭಾರತವನ್ನು ಪ್ರತಿನಿಧಿಸಲು ಆಯ್ಕೆಯಾಗಿದ್ದಾರೆ.

ಶ್ರೇಯಸ್‌ (220 ಅಂಕಗಳು) ಮತ್ತು ಜಿನೇಂದ್ರ (213 ಅಂಕಗಳು) ಬೆಂಗಳೂರಿನ ಮಿಕೋ ಕಾರ್ಟೋಪಿಯಾದಲ್ಲಿ ನಡೆದ ಎಫ್‌ಐಎಂ ಮಿನಿಜಿಪಿ ವಿಶ್ವಸರಣಿ ಭಾರತ 2022ರಲ್ಲಿ ಅನುಕ್ರಮವಾಗಿ ಮೊದಲ ಹಾಗೂ ದ್ವಿತೀಯ ಸ್ಥಾನ ಗಳಿಸಿದರು. ಜಗತ್ತಿನ 15 ರಾಷ್ಟ್ರಗಳಲ್ಲಿ ನಡೆದ ಸ್ಪರ್ಧೆಗಳಲ್ಲಿ ಆಯ್ಕೆಯಾದ ಇತರ ಸ್ಪರ್ಧಿಗಳೊಂದಿಗೆ ಭಾರತದ ಈ ಜೋಡಿ ಸ್ಪರ್ಧಿಸಲಿದೆ.

ಮೆಕೋ ಮೋಟೋಸ್ಪೋರ್ಟ್ಸ್‌ ಭಾರತದಲ್ಲಿ ನಡೆಸಿದ ಐದು ಸುತ್ತಿನ 10 ರೇಸ್‌ಗಳಲ್ಲಿ 13ರ ಹರೆಯದ ಜಿನೇಂದ್ರ ಸತತ ಐದು ರೇಸ್‌ಗಳಲ್ಲಿ ಜಯ ಗಳಿಸಿ ಅಗ್ರ ಸ್ಥಾನದಲ್ಲಿದ್ದರು, ಆದರೆ 12ರ ಹರೆಯದ ಶ್ರೇಯಸ್‌ ನಂತರ ನಡೆದ ಐದು ರೇಸ್‌ಗಳಲ್ಲಿ ನಾಲ್ಕರಲ್ಲಿ ಅಗ್ರ ಸ್ಥಾನ ಗಳಿಸಿದರು. ಶನಿವಾರ ನಡೆದ ರೇಸ್‌ನ ನಾಲ್ಕನೇ ಸುತ್ತಿನಲ್ಲಿ ಎರಡು ಅಗ್ರ ಸ್ಥಾನ ಗಳಿಸಿ ಜಿನೇಂದ್ರನನ್ನು ಹಿಂದಿಕ್ಕಿ 220 ಅಂಕಗಳನ್ನು ಗಳಿಸಿದರು. 213 ಅಂಗಳನ್ನು ಗಳಿಸಿದ ಜಿನೇಂದ್ರ ಎರಡನೇ ಸ್ಥಾನದೊಂದಿಗೆ ವಿಶ್ವ ಸರಣಿ ಫೈನಲ್‌ಗೆ ಆಯ್ಕೆಯಾದರು. ಚೆನ್ನೈನ ನಂದನನ್‌ ಮಹೇಂದ್ರನ್‌ 153 ಅಂಕಗಳನ್ನು ಗಳಿಸಿ ಮೂರನೇ ಸ್ಥಾನ ಗಳಿಸಿದರು.

 

ಬಾಲಕಿಯರ ವಿಭಾಗದಲ್ಲಿ ಸ್ಪರ್ಧಿಸಿದ್ದ ನಾಲ್ವರಲ್ಲಿ ಬೆಂಗಳೂರಿನ ನಿಥಿಲಾ ದಾಸ್‌ 106 ಅಂಕಗಳನ್ನು ಗಳಿಸಿ ಸಮಗ್ರ ಐದನೇ ಸ್ಥಾನ ಗಳಿಸಿದರು. ಚೆನ್ನೈನ ರಕ್ಷಿತಾ ದಾವೆ 93 ಅಂಕಗಳೊಂದಿಗೆ ಏಳನೇ ಸ್ಥಾನ ಗಳಿಸಿದರು. ಬೆಂಗಳೂರಿನ ಅಲಿನಾ ಮನ್ಸೂರ್‌ ಶೇಖ್‌ ಮತ್ತು ಅನಸ್ತ್ಯ ಪಾಲ್‌ ಮೊದಲ ಸುತ್ತಿನಲ್ಲಿ ಮಾತ್ರ ಪಾಲ್ಗೊಂಡು 18 ಅಂಕಗಳನ್ನು ತಮ್ಮದಾಗಿಸಿಕೊಂಡರು.

Related Articles