Friday, March 1, 2024

ನಾಳೆಯ ಚಾಂಪಿಯನ್ನರಿಗೆ ವೇದಿಕೆ, ಮಿನಿ ಒಲಿಂಪಿಕ್ಸ್‌

ಬೆಂಗಳೂರು: ಖೇಲೋ ಇಂಡಿಯಾ ಯೂನಿವರ್ಸಿಟಿ ಗೇಮ್ಸ್‌ ಆಯೋಜಿಸಿ ಯಶಸ್ಸು ಕಂಡಿರುವ ರಾಜ್ಯ ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆಯು  ರಾಜ್ಯ ಒಲಿಂಪಿಕ್ಸ್‌ ಸಂಸ್ಥೆಯ ಜೊತೆ ಸೇರಿ ಜಂಟಿಯಾಗಿ ಕರ್ನಾಟಕ ಮಿನಿ ಒಲಿಂಪಿಕ್ಸ್‌ ಕ್ರೀಡಾಕೂಟ ನಡೆಸಲು ಸಜ್ಜಾಗಿದೆ. ಕ್ರೀಡಾಕೂಟವು ಮೇ 16 ರಿಂದ ಮೇ 22ರವರೆಗೆ ನಡೆಯಲಿದೆ.

2020ರಲ್ಲಿ ಕರ್ನಾಟಕ ಮಿನಿ ಒಲಿಂಪಿಕ್ಸ್‌ ಆಯೋಜಿಸಿ ಯಶಸ್ಸು ಕಂಡಿರುವ ಕರ್ನಾಟಕ ಒಲಿಂಪಿಕ್ಸ್‌ ಸಂಸ್ಥೆ ಹಾಗೂ ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ ಈಗ ಎರಡನೇ ಮಿನಿ ಒಲಿಂಪಿಕ್ಸ್‌ನ ಯಶಸ್ಸಿಗಾಗಿ ಶ್ರಮಿಸುತ್ತಿವೆ.

ಕ್ರೀಡಾಕೂಟದಲ್ಲಿ 14 ವರ್ಷ ವಯೋಮಿತಿಯ ಐದು ಸಾವಿರ ಕ್ರೀಡಾಕೂಟಗಳು ಪಾಲ್ಗೊಳ್ಳಲಿದ್ದಾರೆ. ಒಂದು ವಾರದ ತನಕ ವಿವಿಧ ಕ್ರೀಡಾಂಗಣಗಳಲ್ಲಿ ನಡೆಯಲಿರುವ ಮಿನಿ ಒಲಿಂಪಿಕ್ಸ್‌ನಲ್ಲಿ 21 ಕ್ರೀಡಾ ಸ್ಪರ್ಧೆಗಳಿರುತ್ತವೆ ಎಂದು ಕರ್ನಾಟಕ ರಾಜ್ಯ ಒಲಿಂಪಿಕ್ಸ್‌ ಸಂಸ್ಥೆಯ ಅಧ್ಯಕ್ಷ ಡಾ. ಕೆ. ಗೋವಿಂದರಾಜ್‌ ಹೇಳಿದ್ದಾರೆ. ಪತ್ರಿಕಾಗೋಷ್ಠಿಯಲ್ಲಿ ಕರ್ನಾಟಕ ಸರಕಾರದ ಅಪರ ಮುಖ್ಯ ಕಾರ್ಯದರ್ಶಿಗಳು, ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ, ಯೋಜನೆ ಮತ್ತು ಕಾರ್ಯಕ್ರಮ ಸಂಯೋಜನೆ ಹಾಗೂ ಸಾಂಖ್ಯಿಕ ಇಲಾಖೆಯ ಡಾ. ಶಾಲಿನಿ ರಜನೀಶ್‌ ಹಾಜರಿದ್ದರು.

21 ಕ್ರೀಡಾ ಸ್ಪರ್ಧೆಗಳು: ಈ ಬಾರಿಯ ಮಿನಿ ಒಲಿಂಪಿಕ್ಸ್‌ನಲ್ಲಿ ಒಟ್ಟು 21 ಕ್ರೀಡಾ ಸ್ಪರ್ಧೆಗಳಿರುತ್ತವೆ. ಅಥ್ಲೆಟಿಕ್ಸ್‌, ಆರ್ಚರಿ, ಬ್ಯಾಡ್ಮಿಂಟನ್‌, ಬಾಸ್ಕೆಟ್‌ಬಾಲ್‌, ಬಾಕ್ಸಿಂಗ್‌, ಸೈಕ್ಲಿಂಗ್‌, ಫೆನ್ಸಿಂಗ್‌, ಫುಟ್ಬಾಲ್‌, ಜಿಮ್ನಾಸ್ಟಿಕ್‌, ಹ್ಯಾಂಡ್‌ಬಾಲ್‌, ಹ್ಯಾಂಡ್‌ಬಾಲ್‌, ಹಾಕಿ, ಜೂಡೋ, ಖೋ ಖೋ. ಲಾನ್‌ ಟೆನಿಸ್‌, ನೆಟ್‌ಬಾಲ್‌, ರೈಫಲ್‌ ಶೂಟಿಂಗ್‌, ಈಜು, ಟೇಬಲ್‌ ಟೆನಿಸ್‌, ಟೆಕ್ವಾಂಡೋ, ವೇಟ್‌ಲಿಫ್ಟಿಂಗ್‌ ಈ ಬಾರಿಯ ಮಿನಿ ಒಲಿಂಪಿಕ್ಸ್‌ನಲ್ಲಿರುವ ಪ್ರಮುಖ ಕ್ರೀಡೆಗಳು. ಕ್ರೀಡಾಕೂಟದಲ್ಲಿ ಮೊದಲ ಬಾರಿಗೆ ರೈಫಲ್‌ ಶೂಟಿಂಗ್‌ಗೆ ಅವಕಾಶ ನೀಡಲಾಗಿದೆ. ವಿವಿಧ ಕ್ರೀಡಾ ಸಂಸ್ಥೆಗಳಿಂದ ಅಗ್ರ 8 ರಾಂಕ್‌ನೊಳಗಿನ ಸ್ಪರ್ಧಿಗಳು ಪಾಲ್ಗೊಳ್ಳಲಿದ್ದಾರೆ.

ಎಲ್ಲೆಲ್ಲಿ ಸ್ಪರ್ಧೆಗಳು ನಡೆಯಲಿವೆ?:  ವಿದ್ಯಾನಗರಿಯಲ್ಲಿರುವ ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆಯ ಕ್ರೀಡಾಂಗಣದಲ್ಲಿ ಹ್ಯಾಂಡ್‌ಬಾಲ್‌, ನೆಟ್‌ಬಾಲ್‌ ಹಾಗೂ ಖೋ ಖೊ ಸ್ಪರ್ಧೆಗಳು ನಡೆಯಲಿವೆ. ರೈಫಲ್‌ ಶೂಟಿಂಗ್‌ ಸ್ಪರ್ಧೆಯು ಭಾರತೀಯ ಕ್ರೀಡಾ ಪ್ರಾಧಿಕಾರದ ಶೂಟಿಂಗ್‌ ರೇಂಜ್‌ನಲ್ಲಿ ನಡೆಯಲಿದೆ. ನೈಸ್‌ ರೋಡ್‌ನಲ್ಲಿ ಸೈಕ್ಲಿಂಗ್‌, ಕರ್ನಾಟಕ ರಾಜ್ಯ ಫುಟ್ಬಾಲ್‌ ಸಂಸ್ಥೆಯ ಕ್ರೀಡಾಂಗಣದಲ್ಲಿ ಫುಟ್ಬಾಲ್‌ ಪಂದ್ಯಗಳು, ಹೂಡೆಯಲ್ಲಿರುವ ಗೋಪಾಲನ್‌ ಸ್ಪೋರ್ಟ್ಸ್‌ ಕಾಂಪ್ಲೆಕ್ಸ್‌ನಲ್ಲಿ ಜಿಮ್ನಾಸ್ಟಿಕ್‌, ಬಸವನಗುಡಿ ಈಜು ಕೇಂದ್ರದಲ್ಲಿ ಈಜು ಸ್ಪರ್ಧೆಗಳು ನಡೆಯಲಿದ್ದು, ಉಳಿದ ಸ್ಪರ್ಧೆಗಳು ಶ್ರೀ ಕಂಠೀರವ ಕ್ರೀಡಾಂಗಣದಲ್ಲಿ ನಡೆಯಲಿವೆ.

ರಾಜ್ಯಪಾಲರಿಂದ ಉದ್ಘಾಟನೆ:  ಮೇ 16ರಂದು ಸಂಜೆ ನಡೆಯುವ ಕರ್ನಾಟಕ ರಾಜ್ಯೆರಡನೇ ಮಿನಿ ಒಲಿಂಪಿಕ್ಸ್‌ನ ಉದ್ಘಾಟನಾ ಸಮಾರಂಭದಲ್ಲಿ ಕರ್ನಾಟಕದ ಗೌರವಾನ್ವಿತ ರಾಜ್ಯಪಾಲರಾದ ಥಾವರ್‌ ಚಂದ್‌ ಗೆಹ್ಲೋಟ್‌, ಕರ್ನಾಟಕದ ಮಾನ್ಯ ಮುಖ್ಯಮಂತ್ರಿಗಳಾದ ಬಸವರಾಜ್‌ ಬೊಮ್ಮಾಯಿ ಮತ್ತು ರಾಜ್ಯ ರೇಷ್ಮೆ, ಯುವಸಬಲೀಕರಣ ಮತ್ತು ಕ್ರೀಡಾ ಸಚಿವರಾದ ಡಾ. ಕೆ.ಸಿ. ನಾರಾಯಣ ಗೌಡ ಅವರು ಪಾಲ್ಗೊಳ್ಳುವರು.

ಮೇ. 22 ರಂದು ಸಂಜೆ 5 ಗಂಟೆಗೆ ಶ್ರೀ ಕಂಠೀರವ ಒಳಾಂಗಣ ಕ್ರೀಡಾಂಗಣದಲ್ಲಿ ನಡೆಯುವ ಸಮಾರೋಪ ಸಮಾರಂಭದಲ್ಲಿ ಕರ್ನಾಟಕ ರಾಜ್ಯ ಸನ್ಮಾನ್ಯ ಪ್ರಾಥಮಿಕ ಹಾಗೂ ಪ್ರೌಢ ಶಿಕ್ಷಣ ಸಚಿವ ಬಿ.ಸಿ. ನಾಗೇಶ್‌ ಹಾಗೂ ರಾಜ್ಯ ರೇಷ್ಮೆ, ಯುವಸಬಲೀಕರಣ ಮತ್ತು ಕ್ರೀಡಾ ಸಚಿವರಾದ ಡಾ. ಕೆ.ಸಿ. ನಾರಾಯಣ ಗೌಡ ಅವರು ಪಾಲ್ಗೊಳ್ಳುವರು.

Related Articles