Saturday, July 27, 2024

ಬೆಂಗಳೂರು ಎಫ್‌ಸಿ ಡುರಾಂಡ್‌ ಕಪ್‌ ಚಾಂಪಿಯನ್‌

ಕೋಲ್ಕೊತಾ, ಸೆಪ್ಟಂಬರ್‌ 18: ಮುಂಬೈ ಸಿಟಿ ಎಫ್‌ಸಿ ತಂಡವನ್ನು 2-1 ಗೋಲುಗಳ ಅಂತರದಲ್ಲಿ ಮಣಿಸಿದ ಬೆಂಗಳೂರು ಎಫ್‌ಸಿ ತಂಡ ಮೊದಲ ಬಾರಿಗೆ ಡುರಾಂಡ್‌ ಕಪ್‌ ಫುಟ್ಬಾಲ್‌ ಚಾಂಪಿಯನ್‌ ಪಟ್ಟ ಗೆದ್ದುಕೊಂಡಿದೆ.

ಇಲ್ಲಿನ ಸಾಲ್ಟ್‌ ಲೇಕ್‌ ಅಂಗಣದಲ್ಲಿ ನಡೆದ ಫೈನಲ್‌ ಪಂದ್ಯದಲ್ಲಿ ಶಿವಶಕ್ತಿ ನಾರಾಯಣನ್‌ (11ನೇ ನಿಮಿಷ) ಆರಂಭದ ಗೋಲು ಗಳಿಸಿ ಮುನ್ನಡೆ ಕಲ್ಪಿಸಿದರೆ, ಮುಂಬೈ ಪರ ಅಪುಯಾ ರಾಲ್ಟೆ (30ನೇ ನಿಮಿಷ) ಸಮಬಲಗೊಳಿಸಿದರು, ಆದರೆ ಅಲ್‌ ಕೋಸ್ಟಾ (61ನೇ ನಿಮಿಷ) ಗಳಿಸಿದ ಗೋಲು ಬೆಂಗಳೂರಿಗೆ ಐತಿಹಾಸಿ ಟ್ರೋಫಿ ತಂದುಕೊಟ್ಟಿತು.

ಹೈದರಾಬಾದ್‌ ವಿರುದ್ಧದ ಸೆಮಿಫೈನಲ್‌ನಲ್ಲಿ ಆಡಿದ ತಂಡದಲ್ಲಿ ಕೋಚ್‌ ಗ್ಯಾರಿಸನ್‌ ಎರಡು ಬದಲಾವಣೆಗಳನ್ನು ಮಾಡಿದರು. ರೋಹಿತ್‌ ಕುಮಾರ್‌ ಬದಲಿಗೆ ಶಿವಶಕ್ತಿ ತಂಡದಲ್ಲಿ ಸ್ಥಾನ ಪಡೆದರು, ಪರಾಗ್‌ ಶ್ರೀವಾಸ್‌ ಸ್ಥಾನದಲ್ಲಿ ಅಲನ್‌ ಕೋಸ್ಟಾ ಅಂಗಣಕ್ಕಿಳಿದರು. ಗ್ಯಾರಿಸನ್‌ ಅವರು ಯಾವ ಆಟಗಾರರನ್ನು ಅಂಗಣಕ್ಕಿಳಿಸಿದರೋ ಅವರೇ ಗೋಲು ಗಳಿಸಿರುವುದು ವಿಶೇಷವಾಗಿತ್ತು.

ಎರಡು ಬಲಿಷ್ಠ ತಂಡಗಳು ಆರಂಭದಿಂದಲೇ ಆಕ್ರಮಣಕಾಗಿ ಆಟವಾಡಿದವು. ಕಾರ್ನರ್‌ನಿಂದ ಅಲನ್‌ ಕೋಸ್ಟಾ ಹೆಡರ್‌ ಮೂಲಕ ನೀಡಿದ ಪಾಸ್‌, ರಾಯ್‌ ಕೃಷ್ಣ ಅವರ ನಿಯಂತ್ರಣಕ್ಕೆ ಸಿಕ್ಕಿತು, ರಾಯ್‌ ಕೃಷ್ಣ ಚೆಂಡನ್ನು ಶಿವಶಕ್ತಿ ಕಡೆಗೆ ಕಳುಹಿಸಿದರು. ಶಿವಶಕ್ತಿ ಉತ್ತಮ ರೀತಿಯಲ್ಲಿ ತಂಡದ ಪರ ಮೊದಲ ಗೋಲು ಗಳಿಸಿದರು. ಅಪುಯಾ ರಾಲ್ಟೆ 31ನೇ ನಿಮಿಷದಲ್ಲಿ ಗಳಿಸಿದ ಗೋಲಿನಿಂದ ಮುಂಬೈ ಸಿಟಿ ಎಫ್‌ಸಿ ಸಮಬಲ ಸಾಧಿಸುವಲ್ಲಿ ಯಶಸ್ವಿಯಾಯಿತು. ಚೆಟ್ರಿ ನೀಡಿದ ಪಾಸ್‌ ಮೂಲಕ ಬ್ರೆಜಿಲ್‌ ಮೂಲದ ಡಿಫೆಂಡರ್‌ ಅಲ್ವಿನ್‌ ಕೋಸ್ಟಾ 61ನೇ ನಿಮಿಷದಲ್ಲಿ ತಂಡದ ಪರ ಎರಡನೇ ಗೋಲು ಗಳಿಸಿ ಚಾಂಪಿಯನ್‌ ಪಟ್ಟ ತಂದುಕೊಟ್ಟರು. ಹೆಚ್ಚುವರಿ ಸಮಯದಲ್ಲಿ ಮುಂಬೈ ತಂಡ ಉತ್ತಮ ರೀತಿಯಲ್ಲಿ ಪ್ರದರ್ಶನ ತೋರಿತ್ತು, ಗೋಲು ಗಳಿಸುವ ಅವಕಾಶ ಸಿಕ್ಕರೂ ಬೆಂಗಳೂರು ಅದಕ್ಕೆ ಆಸ್ಪದ ಕೊಡಲಿಲ್ಲ.

ಅಕೋಬರ್‌ 8 ರಂದು ಬೆಂಗಳೂರು ತಂಡ ಶ್ರೀ ಕಂಠೀರವ ಕ್ರೀಡಾಂಗಣದಲ್ಲಿ ಈ ಋತುವಿನ ಇಂಡಿಯನ್‌ ಸೂಪರ್‌ ಲೀಗ್‌ನ ಮೊದಲ ಪಂದ್ಯದಲ್ಲಿ ನಾರ್ಥ್‌ ಈಸ್ಟ್‌ ಯುನೈಟೆಡ್‌ ವಿರುದ್ಧ ಅಭಿಯಾನ ಆರಂಭಿಸಲಿದೆ.

Related Articles