Wednesday, November 6, 2024

ಉಡುಗೊರೆ ಗೋಲು, ಡುರಾಂಡ್‌ ಕಪ್‌ ಫೈನಲ್‌ಗೆ ಬೆಂಗಳೂರು

ಕೋಲ್ಕೊತಾ, ಸೆಪ್ಟಂಬರ್‌ 15: ಉತ್ತಮ ಪೈಪೋಟಿಯಿಂದ ಕೂಡಿದ ಸೆಮಿಫೈನಲ್‌ ಪಂದ್ಯದಲ್ಲಿ ಹೈದರಾಬಾದ್‌ ಎಫ್‌ಸಿ ತಂಡದ ಆಟಗಾರ ಒಡೈ ಒನೈಂಡಿಯಾ (30ನೇ ನಿಮಿಷ) ನೀಡಿದ ಉಡುಗೊರೆ ಗೋಲಿನಿಂದ 1-0 ಅಂತರದಲ್ಲಿ ಜಯ ಗಳಿಸಿದ ಬೆಂಗಳೂರು ಎಫ್‌ಸಿ ತಂಡ ಐತಿಹಾಸಿಕ ಡುರಾಂಡ್‌ ಕಪ್‌ ಫುಟ್ಬಾಲ್‌ ಚಾಂಪಿಯನ್‌ಷಿಪ್‌ನಲ್ಲಿ ಮೊದಲ ಬಾರಿಗೆ ಫೈನಲ್‌ ತಲುಪಿದೆ. ಸೆ. 18ರಂದು ನಡೆಯಲಿರುವ ಫೈನಲ್‌ ಪಂದ್ಯದಲ್ಲಿ ಸೈಮನ್‌ ಗ್ರೇಸನ್‌ ಪಡೆ ಮುಂಬೈ ಸಿಟಿ ಎಫ್‌ಸಿ ತಂಡವನ್ನು ಎದುರಿಸಲಿದೆ.

ಒಡಿಶಾ ಎಫ್‌ಸಿ ವಿರುದ್ಧದ ಪಂದ್ಯದಲ್ಲಿ ಆಡಿದ್ದ ಜಾವಿ ಹೆರ್ನಾಂಡೀಸ್‌ ಅವರ ಸ್ಥಾನದಲ್ಲಿ ಜಯೇಶ್‌ ರಾಣೆ ಅಂಗಣಕ್ಕಿಳಿದರು. ಪಂದ್ಯ ಆರಂಭಗೊಂಡ 8ನೇ ನಿಮಿಷದಲ್ಲೇ ಒಗ್ಬಚೆ ಮೂಲಕ ಹೈದರಾಬಾದ್‌ ತಂಡಕ್ಕೆ ಗೋಲು ಗಳಿಸುವ ಅವಕಾಶ ಸಿಕ್ಕಿತ್ತು, ಆದರೆ ಬ್ಲೂ ತಂಡದ ಗೋಲ್‌ಕೀಪರ್‌ ಗುರ್‌ಪ್ರೀತ್‌ ಸಿಂಗ್‌ ಸಂದೂ ಅಷ್ಟೇ ಉತ್ತಮ ರೀತಿಯಲ್ಲಿ ತಡೆದು ಮುನ್ನಡೆಗೆ ಅಡ್ಡಿಯಾದರು. ಸ್ವಲ್ಪ ಹೊತ್ತಿನಲ್ಲೇ ಬೆಂಗಳೂರು ತಂಡದ ರಾಯ್‌ ಕೃಷ್ಣ ಅವರಿಗೆ ಗೋಲು ಗಳಿಸುವ ಅವಕಾಶವಿದ್ದಿತ್ತು, ಆದರೆ ಅನುಜ್‌ ಕುಮಾರ್‌ ಸುಲಭವಾಗಿ ತಡೆದರು.

30ನೇ ನಿಮಿಷದಲ್ಲಿ ಅದೃಷ್ಟ ಬೆಂಗಳೂರು ಪಾಲಾಯಿತು. ಜಯೇಶ್‌ ರಾಣೆ ಫಾರ್ವರ್ಡ್‌ ವಿಭಾಗದಲ್ಲಿ ಚೆಂಡನ್ನು ಮುನ್ನಡೆಸಿದರು. ಪ್ರಬೀರ್‌ ದಾಸ್‌ ಅವರನ್ನು ನಿಯಂತ್ರಿಸಿದ ಬೆಂಗಳೂರಿನ ಫುಲ್‌ಬ್ಯಾಕ್‌ ಆಟಗಾರ ಜಯೇಶ್‌ ಪಾಸನ್ನು ರಾಯ್‌ ಕೃಷ್ಣಗೆ ನೀಡಿದರು. ತಿರುವು ಪಡೆದ ಚೆಂಡು ಹೈದರಾಬಾದ್‌ನ ಡಿಫೆಂಡರ್‌ ಒನೈಂಡಿಯಾ ಮೂಲಕ ಗೋಲ್‌ಬಾಕ್ಸ್‌ ಸೇರಿತು. ಈ ಉಡುಗೊರೆ ಗೋಲೇ ಬೆಂಗಳೂರಿನ ಜಯಕ್ಕೆ ಕಾರಣವಾಯಿತು.

ದ್ವತಿಯಾರ್ಧದಲ್ಲಿ ಬೆಂಗಳೂರು ತಂಡ ಕೆಲವು ಬದಲಾವಣೆಯೊಂದಿಗೆ ಅಂಗಣಕ್ಕಿಳಿಯಿತು. ರೋಹಿತ್‌ ಕುಮಾರ್‌ ಸ್ಥಾನದಲ್ಲಿ ನಮಿಗಾಲ್‌ ಭುಟಿಯಾ ಅಂಗಣಕ್ಕಿಳಿದರು. ದ್ವಿತಿಯಾರ್ಧದ ಆರಂಭದಲ್ಲೇ ಓಗ್ಬಚೆ ಹೆಡರ್‌ ಮೂಲಕ ಗೋಲು ಗಳಿಸುವವರಿದ್ದರು, ಆದರೆ ಗುರ್‌ಪ್ರೀತ್‌ ಉತ್ತಮ ರೀತಿಯಲ್ಲಿ ಅದಕ್ಕೆ ತಡೆಯೊಡ್ಡಿದರು.

ಕೊನೆಯ ಹಂತದಲ್ಲಿ ಇತ್ತಂಡಗಳು ಹಲವಾರು ಬದಲಾವಣೆಯ ಪ್ರಯೋಗ ಮಾಡಿದರೂ ಯಾವುದೇ ಪ್ರಯೋಜವಾಗಲಿಲ್ಲ. ಬೆಂಗಳೂರು ಐತಿಹಾಸಿಕ ಫುಟ್ಬಾಲ್‌ ಚಾಂಪಿಯನ್‌ಷಿಪ್‌ನಲ್ಲಿ ಮೊದಲ ಬಾರಿಗೆ ಫೈನಲ್‌ ತಲುಪಿದ ಸಂಭ್ರಮವನ್ನು ಆಚರಿಸಿತು.

Related Articles