ಸೋಮಶೇಖರ್ ಪಡುಕರೆ, Sportsmail.net
ಶಾಲೆಯಲ್ಲಿ ಸೈಕಲ್ ತುಳಿದು ಮಕ್ಕಳು ತೂಂಟಾಟ ಮಾಡುತ್ತಿದ್ದಾರೆ, ಈ ಕಾರಣ ನಿಮ್ಮ ಮಕ್ಕಳನ್ನು ಅಮಾನತು ಮಾಡಲಾಗಿದೆ ಎಂಬ ಸುದ್ದಿ ಕೇಳಿದ ತಂದೆ, ಆ ತುಂಟಾಟವನ್ನೇ ಅಸ್ತ್ರವಾಗಿಸಿಕೊಂಡು ಸೈಕ್ಲಿಂಗ್‌ನಲ್ಲಿ ಅವರನ್ನು ರಾಷ್ಟ್ರೀಯ ಚಾಂಪಿಯನ್ನರನ್ನಾಗಿ ಮಾಡಿ, ಸೈಕಲ್ ಶೋ ರೂಮ್‌ಗಳನ್ನೇ ತೆರೆದು ಶಿಕ್ಷಕರಿಗೇ ಪಾಠಕಲಿಸಿದ ಮೈಸೂರಿನ ಸೈಕ್ಲಿಂಗ್ ಕೋಚ್, ಸೈಕಲ್ ಉದ್ಯಮಿ ನಾಗರಾಜ್ ಟಿ.ವಿ. ಅವರ ಬದುಕಿನ ಸ್ಫೂರ್ತಿಯ ಕತೆ ಇದು.
ನಾಗರಾಜ್ ಅವರ ಮಕ್ಕಳಾದ ಶಿವರಾಜ್ ಮತ್ತು ಕಮಲ್‌ರಾಜ್ ಮೈಸೂರಿನ ಪ್ರತಿಷ್ಠಿತ ಶಾಲೆಯೊಂದರಲ್ಲಿ 7 ಮತ್ತು 8ನೇ ತರಗತಿಯಲ್ಲಿ ಓದುತ್ತಿದ್ದರು. ಬಹಳ ತುಂಟ ಮಕ್ಕಳು. ಸೈಕಲ್‌ನಲ್ಲೇ ಇವರ ತುಂಟಾಟ. ತಂದೆ ನಾಗರಾಜ್ ಬಿಇ ಮೆಕ್ಯಾನಿಕ್ ಎಂಜಿನಿಯರ್ , ಐಎಲ್ & ಎಫ್‌ಸಿ ಕಂಪೆನಿಯಲ್ಲಿ ಕರ್ನಾಟಕದ ಪ್ರಧಾನ ಹುದ್ದೆಯಲ್ಲಿದ್ದರು. ಆದರೆ ಮಕ್ಕಳ ಸೈಕ್ಲಿಂಗ್ ತುಂಟಾಟ ಅವರ ಬದುಕಿನ ದಿಕ್ಕನ್ನೇ ಬದಲಾಯಿಸಿತು.
ಊದ್ಯೋಗ ತೊರೆದರು….
ನಿಮ್ಮ ಮಕ್ಕಳನ್ನು ಅಮಾನತು ಮಾಡಲಾಗಿದೆ, ಬಂದು ಶಾಲೆಯಲ್ಲಿ ಪ್ರಾಂಶುಪಾಲರನ್ನು ಸಂಪರ್ಕಿಸಿ ಎಂಬ ಸುದ್ದಿ ತಲಪುತ್ತಿದ್ದಂತೆ ನಾಗರಾಜ್, ಶಾಲಾ ಸಭೆಯೊಂದರಲ್ಲಿ ಪಾಲ್ಗೊಂಡರು. ತಮ್ಮ ಮಕ್ಕಳು ಹೈಪರ್ ಆಕ್ಟೀವ್ ಇದ್ದಾರೆಯೇ ಹೊರತು ಅವರು ಯಾವುದೇ ತಪ್ಪನ್ನು ಮಾಡಲಿಲ್ಲ, ಇದೊಂದು ಬಾರಿ ಕ್ಷಮಿಸಿ, ಮುಂದೆ ಇದೇ ರೀತಿಯಲ್ಲಿ ಮುಂದುವರಿದರೆ ಅವರ ವರ್ಗಾವಣೆ ಪತ್ರ ಕೊಂಡೊಯ್ಯುವೆ ಎಂದು ಪತ್ರದಲ್ಲಿ ಬರೆದು ಕೊಟ್ಟರು.
ಮಕ್ಕಳಲ್ಲಿರುವ ಈ ತುಂಟಾಟವನ್ನು ನಿಯಂತ್ರಿಸುವುದು ಹೇಗೆ ಎಂಬ ಚಿಂತೆ ನಾಗರಾಜ್ ಅವರನ್ನು ಕಾಡತೊಡಗಿತು. ಅವರು ಸೈಕ್ಲಿಂಗ್‌ನಲ್ಲಿ ಬಹಳ ಕಸರತ್ತುಗಳನ್ನು ಮಾಡುತ್ತಿದ್ದರು. ಅವರಿಗೆ ಸೈಕಲ್ ಮೂಲಕವೇ ಬದುಕನ್ನು ರೂಪಿಸಿಕೊಳ್ಳುವಂತೆ ಮಾಡಬೇಕು,. ಸೈಕಲ್‌ನಲ್ಲಿ ತರಬೇತಿ ನೀಡಬೇಕು ಎಂದು ಯೋಚಿಸಿ ವರ್ಷಕ್ಕೆ ಕೋಟಿ ರೂ, ವೇತನ ಗಳಿಸುತ್ತಿದ್ದ ನಾಗರಾಜ್ ಬಹುರಾಷ್ಟ್ರೀಯ ಕಂಪೆನಿಯ ಉದ್ಯೋಗ ತೊರೆದು ಮಕ್ಕಳ ಭವಿಷ್ಯಕ್ಕಾಗಿ ನಿಂತು ಸೈಕಲ್ ತರಬೇತಿ ನೀಡಲಾರಂಭಿಸಿದರು.
ಸೈಕಲ್‌ನಲ್ಲಿ ಕಸರತ್ತು ಮಾಡುತ್ತಿರುವ ಮಕ್ಕಳಿಗೆ ಅದರಲ್ಲೇ ಮುಂದುವರಿಯುವಂತೆ ಮಾಡಿದರು. ಅವರ ಕಸರತ್ತುಗಳನ್ನೇ ಪಾಠವಾಗಿ ರೂಪಿಸಿದರು. ಅರ್ಧ ಗಂಟೆ ಸೈಕಲ್‌ನಲ್ಲೇ ನಿಲ್ಲುತ್ತಿದ್ದ ಮಕ್ಕಳು ಈಗ ಮೂರು ಗಂಟೆಗಳ ಕಾಲ ಸೈಕಲ್‌ನಲ್ಲಿ ನಿಲ್ಲಲಾರಂಭಿಸಿದರು. ಗೂಗಲ್ ಮತ್ತು ಗೆಳೆಯರ ಮೂಲಕ ಮಕ್ಕಳಿಗೆ ಸೂಕ್ತವೆನಿಸುವುದು ಎಂಟಿಬಿ ಸೈಕ್ಲಿಂಗ್ ಎಂಬುದನ್ನು ಮನಗಂಡು ಅದರಲ್ಲೇ ತರಬೇತಿ ನೀಡಲಾರಂಭಿಸಿದರು. ಈಗ ಮಕ್ಕಳಲ್ಲಿದ್ದ ಹೈಪರ್ ಆಕ್ಟಿವ್ನೆಸ್ ಸಹಜವಾಗಿಯೇ ದೂರವಾಗಿ ಅವರು ಸೈಕ್ಲಿಂಗ್‌ನಲ್ಲಿ ಮಿಂಚಲಾರಂಭಿಸಿದರು. ರಾಜ್ಯ ಮಟ್ಟದಲ್ಲಿ ಪದಕಗಳನ್ನು ಗೆದ್ದರು.
ಮೈ ಸೂರು ಸೈಕ್ಲಿಂಗ್ ಅಕಾಡೆಮಿ ಸ್ಥಾಪನೆ:
ಸೈಕ್ಲಿಂಗ್ ಮೈಸೂರಿಲ್ಲಿ ಹೊಸ ಅಲೆಯನ್ನು ಮಾಡಬೇಕು. ಮಕ್ಕಳು ತಮ್ಮ ಆರೋಗ್ಯದ ದೃಷ್ಟಿಯಿಂದಲಾದರೂ ಸೈಕಲ್ ತುಳಿಯಬೇಕು ಎಂದು ಬಯಸಿದ ನಾಗರಾಜ್ ಅವರು ಮೈ ಸೂರು (ಸೈಕ್ಲಿಂಗ್ ನನ್ನ ಮನೆ, ನನ್ನ ದೇವಾಲಯ) ಎಂದು ಅರ್ಥ ಕೊಡುವ ಹೆಸರಿನ ಸೈಕಲ್ ಅಕಾಡೆಮಿಯನ್ನು 2014ರಲ್ಲಿ ಮೈಸೂರಿನಲ್ಲಿ ಸ್ಥಾಪಿಸಿದರು. ಪಾಳು ಬಿದ್ದಿರುವ ಪ್ರದೇಶವನ್ನೇ ಟ್ರ್ಯಾಕ್ ಮಾಡಿಕೊಂಡು ಮಕ್ಕಳಿಗೆ ತರಬೇತಿ ನೀಡಲಾರಂಭಿಸಿದರು.
Being a Champion is Always a Choice ಎಂಬ ಧ್ಯೇಯ ವಾಕ್ಯದೊಂದಿಗೆ ಅಕಾಡೆಮಿ ನಡೆಸುತ್ತಿದ್ದಾರೆ. ಮೊದಲು 25 ಮಕ್ಕಳಿಂದ ಆರಂಭಗೊಂಡ ಈ ಅಕಾಡೆಮಿ ಈಗ ಮೈಸೂರು ಮಾತ್ರವಲ್ಲ ರಾಜ್ಯದಲ್ಲಿಯೇ ಪ್ರತಿಷ್ಠಿತ ಆಕಾಡೆಮಿಯಾಗಿ ಬೆಳೆದು ನಿಂತಿದೆ. ಆರು ಮಂದಿ ಸೈಕ್ಲಿಸ್ಟ್‌ಗಳು ರಾಷ್ಟ್ರಮಟ್ಟದಲ್ಲಿ ಪದಕ ಗೆದ್ದಿರುತ್ತಾರೆ. ಹಲವು ಸೈಕ್ಲಿಸ್ಟ್‌ಗಳು ಸರಕಾರದ ನೆರವಿನಲ್ಲಿ ತರಬೇತಿ ಪಡೆಯುತ್ತಿದ್ದಾರೆ. 2017-18ರ ಅವಧಿಯಲ್ಲಿ ನಾಗರಾಜ್ ಮೈಸೂರಿನಲ್ಲಿ 30ಕ್ಕೂ ಹೆಚ್ಚು ಸೈಕಲ್ ಜಾಥಾ ಮತ್ತು ರಾಲಿ ಮತ್ತು ಸ್ಪರ್ಧೆಗಳನ್ನು ನಡೆಸಿದ್ದಾರೆ. ಉತ್ತರ ಕರ್ನಾಟಕವೇ ಪ್ರಭುತ್ವ ಪಡೆಯುತ್ತಿದ್ದ ಸೈಕ್ಲಿಂಗ್ ಚಾಂಪಿಯನ್ಷಿಪ್‌ನಲ್ಲಿ ಈಗ ಮೈಸೂರಿನ ಸೈಕ್ಲಿಸ್ಟ್‌ಗಳು ಪದಕ ಗೆದ್ದು ಪ್ರಭುತ್ವ ಸಾಧಿಸುತ್ತಿದ್ದಾರೆ.
ಪುಣೆ, ಬೆಂಗಳೂರಿನಲ್ಲಿ ಹೆಚ್ಚಿನ ತರಬೇತಿ:
ನಾಗರಾಜ್ ಅವರ ಹಿರಿಯ ಮಗ ಶಿವರಾಜ್ ಸೈಕ್ಲಿಂಗ್‌ನಲ್ಲಿ ರಾಷ್ಟ್ರೀಯ ಮಟ್ಟದಲ್ಲಿ ಪದಕ ಗೆದ್ದು ವೃತ್ತಿಪರರಾಗಿ ಮಿಂಚತೊಡಗಿದರು. ವಿಶ್ವದ ನಂ.1 ಸೈಕಲ್ ಉತ್ಪಾದನಾ ಕಂಪೆನಿ ನಾಗರಾಜ್ ಅವರ ಸ್ಫೂರ್ತಿಯ ಕೆಲಸವನ್ನು ಗಮನಿಸಿ ಮೈಸೂರಿನಲ್ಲಿ ಜಯಂಟ್ ಸೈಕಲ್ ಶೋ ರೂಮ್ ಸ್ಥಾಪಿಸುವ ಅವಕಾಶ ನೀಡಿತು. ಶಿವರಾಜ್ ಆರು ತಿಂಗಳು ಜಯಂಟ್ ಕಂಪೆನಿಯ ಪುಣೆ ಪ್ರಧಾನ ಕಚೇರಿಯಲ್ಲಿ ಮಾರಾಟದ ಬಗ್ಗೆ ಹಾಗೂ ಬೆಂಗಳೂರಿನಲ್ಲಿ ಆರು ತಿಂಗಳು ತಂತ್ರಜ್ಞಾನದ ಬಗ್ಗೆ ತರಬೇತಿ ಪಡೆದರು. ಬಳಿಕ ಮೈಸೂರಿನಲ್ಲಿ ನಾಜರಾಜ್ ತಮ್ಮದೇ ಆದ ಸೈಕಲ್ ಶೋ ರೂಮ್ ಸ್ಥಾಪಿಸಿದರು. ಇವರ ಸೈಕಲ್ ಶೋ ರೂಮ್‌ನಲ್ಲಿ ರೂ. 10,000 ದಿಂದ ರೂ. 10,00,000 ದವರೆಗಿನ ಮೌಲ್ಯದ ಸೈಕಲ್‌ಗಳು ಮಾರಾಟಗೊಳ್ಳುತ್ತಿವೆ. ಇದೆಲ್ಲದರ ನಿರ್ವಹಣೆಯನ್ನು ಶಿವರಾಜ್ ನೋಡಿಕೊಳ್ಳುತ್ತಾರೆ. ಮೈಸೂರಿನ ನಿವೇದಿತಾ ನಗರದಲ್ಲಿ ಹುಟ್ಟಿಕೊಂಡ ಜಯಂಟ್ ಸೈಕಲ್ ಶೋ ರೂಮ್ ಮೈಸೂರಿನ ಸೈಕಲ್ ಅಭಿಮಾನಿಗಳ ಮನೆ ಮಾತಾಯಿತು.
40ಕ್ಕೂ ಹೆಚ್ಚು ರಾಜ್ಯ ಮತ್ತು ರಾಷ್ಟ್ರೀಯ ಮಟ್ಟದ ಸೈಕ್ಲಿಸ್ಟ್‌ಗಳು ನಾಗರಾಜ್ ಅವರ ತರಬೇತಿಯಲ್ಲಿ ಪಳಗಿದ್ದಾರೆ. 16 ಸೈಕ್ಲಿಸ್ಟ್‌ಗಳು ರಾಜ್ಯ ಮಟ್ಟದ ವಿವಿಧ ಸ್ಪರ್ಧೆಗಳಲ್ಲಿ ಪಾಲ್ಗೊಂಡು ಪದಕ ಗೆದ್ದಿರುತ್ತಾರೆ. 6 ಮಂದಿ ಸೈಕ್ಲಿಸ್ಟ್‌ಗಳು ರಾಷ್ಟ್ರೀಯ ಮಟ್ಟದ ಎಂಟಿಬಿ ಸೈಕ್ಲಿಂಗ್ ಚಾಂಪಿಯನ್ಷಿಪ್‌ಗಳಲ್ಲಿ ಪಾಲ್ಗೊಂಡು, ಪದಕ ಗೆದ್ದು ನಾಲ್ವರು ಭಾರತ ತಂಡಕ್ಕೆ ಆಯ್ಕೆಯಾಗಿದ್ದಾರೆ.
ಮನೆ ಮಾರಿ ಸೈಕಲ್ ಶೋ ರೂಮ್:
2019ರಲ್ಲಿ ಜಯಂಟ್ ಕಂಪೆನಿ ನಾಗರಾಜ್ ಅವರ ಶ್ರಮವನ್ನು ಗಮನಿಸಿ ಬೆಂಗಳೂರಿನ ಇಂದಿರಾ ನಗರದಲ್ಲಿ ಸೈಕಲ್ ಶೋ ರೂಮ್ ಸ್ಥಾಪಿಸುವ ಅವಕಾಶ ನೀಡಿತು. ಆದರೆ ನಾಗರಾಜ್ ಅವರಲ್ಲಿ ಹಣ ಇರಲಿಲ್ಲ. ಬೇರೆ ದಾರಿ ಕಾಣದೆ ಮೈಸೂರಿನಲ್ಲಿದ್ದ ಮನೆಯನ್ನು ಮಾರಿ ಇಂದಿರಾ ನಗರದಲ್ಲಿ ಸೈಕಲ್ ಶೋ ರೂಮ್ ಸ್ಥಾಪಿಸಿದರು. “ನನಗೆ ಹಣ ಮಾಡುವುದು ಗುರಿಯಲ್ಲ, ಬದಲಾಗಿ ಸೈಕ್ಲಿಂಗ್ ಕ್ರೀಡೆ ಪ್ರತಿಯೊಬ್ಬರ ಮನೆ ತಲುಪಬೇಕು. ಅದಕ್ಕಾಗಿ ನನ್ನಿಂದಾದ ಪ್ರಯತ್ನ ಮಾಡುತ್ತಿದ್ದೇವೆ, ವ್ಯಾಪಾರ ಸಾಧಾರಣ ಇದೆ. ಮಗ ತಾಂತ್ರಿಕವಾಗಿ ಬೆಳೆದಿದ್ದಾನೆ, ಇನ್ನೊಬ್ಬ ಮಗ ಅಂತಾರಾಷ್ಟ್ರೀಯ ಸ್ಪರ್ಧೆಗಳಿಗೆ ಸಜ್ಜಾಗುತ್ತಿದ್ದಾನೆ. ಮಕ್ಕಳಲ್ಲಿರುವ ಹೈಪರ್ ಆಕ್ಟಿವ್‌ನೆಸ್ ಉಪಯೋಗಿಸಿಕೊಳ್ಳುವುದು ಹೇಗೆ ಎಂಬುದು ಶಾಲಾ ಶಿಕ್ಷಕರಿಗೆ ಅರಿವಾಗಬೇಕು. ಬದಲಾಗಿ ಅದನ್ನೇ ಒಂದು ಸಮಸ್ಯೆಯನ್ನಾಗಿ ಬೆಳೆಸುವುದಲ್ಲ,” ಎನ್ನುತ್ತಾರೆ ನಾಗರಾಜ್.
ಚಾಂಪಿಯನ್ ಅಡೋನಿಸ್:
ಮಣಿಪುರದ ಪ್ರಸಕ್ತ ರಾಷ್ಟ್ರೀಯ ಎಂಟಿಬಿ ಚಾಂಪಿಯನ್ ಅಡೋನಿಸ್ ಖಾರಿಕ್‌ಸಿಂಗ್ ತಾಂಗ್ಪು ಅವರಿಗೆ ಚಿಕ್ಕಂದಿನಿಂದಲೂ ತರಬೇತಿ ನೀಡಿದ್ದು ನಾಗರಾಜ್. ಏಷ್ಯದಲ್ಲಿ ಆರನೇ ಸ್ಥಾನವನ್ನು ಹೊಂದಿರುವ ಅಡೋನಿಸ್‌ಗೆ ಏಷ್ಯನ್ ಚಾಂಪಿಯನ್ಷಿಪ್‌ನಲ್ಲಿ ಸ್ಪರ್ಧಿಸಲು ಯಾರೂ ಪ್ರಾಯೋಜಕರು ಸಿಗಲಿಲ್ಲ. ಅವರಿಗೆ ಅಂತಾರಾಷ್ಟ್ರೀಯ ಗುಣ ಮಟ್ಟದ ತರಬೇತಿ ನೀಡಲು ಹಣ ವ್ಯಯಿಸಬೇಕಾಗಿತ್ತು. ಮೈಸೂರಿನಲ್ಲಿ ಉಪನ್ಯಾಸಕರಾಗಿದ್ದ ಅಡೋನಿಸ್ ಅವರ ತಂದೆ ಆರ್ಥಿಕ ಸಮಸ್ಯೆಯ ಕಾರಣ ಮಗನ ಸೈಕ್ಲಿಂಗ್ ಹಾದಿ ಮುಂದುವರಿಯುವುದು ಕಷ್ಟ ಎಂದರು. ಆಗ ಮಣಿಪುರ ಸರಕಾರ ಮುಂದೆ ಬಂದು ನೆರವು ನೀಡಿದೆ. ಅಡೋನಿಸ್ ಮುಂದೊಂದು ದಿನ ಏಷ್ಯನ್ ಚಾಂಪಿಯನ್ ಪಟ್ಟ ಗೆಲ್ಲಬೇಕೆಂಬುದು ಗುರು ನಾಗರಾಜ್ ಅವರ ಆಶಯ.