Saturday, July 27, 2024

ಭಾರತ 283 ರನ್‌ಗಳಿಗೆ ಆಲ್ಔಟ್‌: ಆಸ್ಟ್ರೇಲಿಯಾಗೆ 175 ರನ್‌ ಮುನ್ನಡೆ

ಪರ್ತ್  :

ಭಾರತದ ಬೌಲರ್ ಗಳ ಶಿಸ್ತುಬದ್ಧ ಬೌಲಿಂಗ್ ದಾಳಿಗೆ ನಲುಗಿದ ಆಸ್ಟ್ರೇಲಿಯಾ ಬಾರ್ಡರ್ ಗವಾಸ್ಕರ್ ಟ್ರೋಫಿಯ ಎರಡನೇ ಟೆಸ್ಟ್ ಪಂದ್ಯದ ದ್ವಿತೀಯ ಇನಿಂಗ್ಸ್  ನಲ್ಲಿ 132 ರನ್ ಗಳಿಗೆ 4 ವಿಕೆಟ್ ಕಳೆದುಕೊಂಡು ಸಂಕಷ್ಟದಲ್ಲಿ ಸಿಲುಕಿದೆ.

ಇದಕ್ಕೂ ಮುನ್ನ ಇಲ್ಲಿನ ಪರ್ತ್‌ ಕ್ರೀಡಾಂಗಣದಲ್ಲಿ 3 ವಿಕೆಟ್‌ ಕಳೆದುಕೊಂಡು 172 ರನ್ ಗಳಿಂದ ಮೂರನೇ ದಿನ ಪ್ರಥಮ ಇನಿಂಗ್ಸ್‌ ಮುಂದುವರಿಸಿದ ಭಾರತ ಮಧ್ಯಾಹ್ನದ ಉಪಹಾರದ ವೇಳೆಗೆ 105.5 ಓವರ್‌ಗಳಿಗೆ ತನ್ನೆಲ್ಲ ವಿಕೆಟ್‌ ಕಳೆದುಕೊಂಡು 283 ರನ್‌ಗಳಿಗೆ ಸೀಮಿತವಾಯಿತು.
ಅಜೇಯ 51 ರನ್‌ ಗಳಿಂದ ಬ್ಯಾಟಿಂಗ್‌ ಮುಂದುವರಿಸಿದ ಉಪ ನಾಯಕ ಅಜಿಂಕ್ಯಾ ರಹಾನೆ ಮೂರನೇ ದಿನದ ಆರಂಭದಲ್ಲೆ ಸ್ಪಿನ್ನರ್‌ ನಥಾನ್ ಲಿಯಾನ್‌ ಎಸೆತದಲ್ಲಿ ಟಿಮ್ ಪೈನೆಗೆ ಕ್ಯಾಚ್‌ ನೀಡಿ ನಿರ್ಗಮಿಸಿದರು.
ನಂತರ, ಕ್ರೀಸ್‌ಗೆ ಬಂದ ಹನುಮ ವಿಹಾರಿ ಅಲ್ಪ ವೇಳೆ ನಾಯಕ ವಿರಾಟ್‌ ಕೊಹ್ಲಿಗೆ ಸಾಥ್‌ ನೀಡಿದರು. 46 ಎಸೆತಗಳನ್ನು ಎದುರಿಸಿದ ವಿಹಾರಿ 2 ಬೌಂಡರಿಯೊಂದಿಗೆ ಒಟ್ಟು 20 ರನ್‌ ಗಳಿಸಿ ಹ್ಯಾಜಲ್‌ವುಡ್‌ ಎಸೆತದಲ್ಲಿ ಕೀಪರ್‌ಗೆ ಕ್ಯಾಚ್‌ ನೀಡಿ ವಿಕೆಟ್‌ ಒಪ್ಪಿಸಿದರು.
ವಿರಾಟ್ ಕೊಹ್ಲಿ ದಾಖಲೆಯ ಶತಕ:
ಎರಡನೇ ದಿನ ಅಮೋಘ 82 ರನ್‌ ಗಳಿಸಿ ಅಜೇಯರಾಗಿ ಉಳಿದಿದ್ದ ಟೀಂ ಇಂಡಿಯಾ ನಾಯಕ ವಿರಾಟ್‌ ಕೊಹ್ಲಿ ಮೂರನೇ ದಿನವೂ ಭರ್ಜರಿ ಬ್ಯಾಟಿಂಗ್‌ ಮಾಡಿದರು. ಆಸ್ಟ್ರೇಲಿಯಾ ಬೌಲರ್‌ಗಳನ್ನು ಸಮರ್ಥವಾಗಿ ಎದುರಿಸಿದ ಕೊಹ್ಲಿ, ವೃತ್ತಿ ಜೀವನದ 25ನೇ ಶತಕ ಸಿಡಿಸಿದರು. ಅಲ್ಲದೆ, ಕಾಂಗೂರು ನೆಲದಲ್ಲಿ 6ನೇ ಶತಕ ಇದಾಯಿತು. 257 ಎಸೆತಗಳನ್ನು ಎದುರಿಸಿದ ಕೊಹ್ಲಿ, ಒಂದು ಸಿಕ್ಸ್ ಹಾಗೂ 13 ಬೌಂಡರಿಯೊಂದಿಗೆ ಒಟ್ಟು 123 ರನ್‌ ಗಳಿಸಿದರು.
ಮೊದಲ ಪಂದ್ಯದಲ್ಲಿ ಎರಡೂ ಇನಿಂಗ್ಸ್‌ ಗಳಲ್ಲಿ ವೈಫಲ್ಯ ಅನುಭವಿಸಿದ್ದ ಇವರು, ಎರಡನೇ ಪಂದ್ಯದಲ್ಲಿ ಶತಕ ಸಿಡಿಸುವ ಮೂಲಕ ಕ್ರಿಕೆಟ್‌ ದಿಗ್ಗಜರು ಇಟ್ಟಿದ್ದ ಭರವಸೆ ಉಳಿಸಿಕೊಂಡರು. ಶತಕ ಸಿಡಿಸುವ ಮೂಲಕ ಅತಿ ಕಡಿಮೆ ಇನಿಂಗ್ಸ್‌ನಲ್ಲಿ 25ನೇ ಶತಕ ಸಿಡಿಸಿದ ವಿಶ್ವದ ಎರಡನೇ ಹಾಗೂ ಭಾರತದ ಮೊದಲ ಆಟಗಾರ ಎಂಬ ಹೆಗ್ಗಳಿಕೆಗೆ ಕೊಹ್ಲಿ ಭಾಜನರಾದರು. ಆಸ್ಟ್ರೇಲಿಯಾದ ಡಾನ್‌ ಬ್ರಾಡ್‌ಮನ್‌ ವಿಶ್ವದಲ್ಲೆ ಮೊದಲಿಗರು. ಅವರು ಈ ಸಾಧನೆ ಮಾಡಲು 68 ಇನಿಂಗ್ಸ್ ಗಳನ್ನು ತೆಗೆದುಕೊಂಡಿದ್ದರು. ಭಾರತದ ಮಾಜಿ ಆಟಗಾರ ಸಚಿನ್‌ ತೆಂಡೂಲ್ಕರ್‌ ಅವರು 25ನೇ ಶತಕ ಪೂರೈಸಲು 130 ಇನಿಂಗ್ಸ್ ಗಳನ್ನು ತೆಗೆದುಕೊಂಡಿದ್ದಾರೆ.
ಶತಕ ಪೂರೈಸಿ ಉತ್ತಮ ಬ್ಯಾಟಿಂಗ್‌ ಮಾಡುತ್ತಿದ್ದ ನಾಯಕ ಪ್ಯಾಟ್‌ ಕಮ್ಮಿನ್ಸ್‌ ಎಸೆತದಲ್ಲಿ ಹ್ಯಾಂಡ್ಸ್ ಕೊಂಬ್‌ಗೆ ಕ್ಯಾಚ್ ನೀಡಿ ನಿರ್ಗಮಿಸಿದರು.
ಮೊದಲ ಎಸೆತದಲ್ಲೇ ಮೊಹಮ್ಮದ್ ಶಮಿ ಹೊರ ನಡೆದರು. ಕ್ರೀಸ್‌ನಲ್ಲಿರುವ ರಿಷಭ್‌ ಪಂತ್‌ ಅಲ್ಪ ಹೊತ್ತು ಏಕಾಂಗಿಯಾಗಿ ಬ್ಯಾಟಿಂಗ್‌ ಮಾಡಿದರು. ಅವರು ಎದುರಿಸಿದ 50 ಎಸೆತಗಳಲ್ಲಿ ಒಂದು ಸಿಕ್ಸ್‌ ಹಾಗೂ 2 ಬೌಂಡರಿಯೊಂದಿಗೆ 36 ರನ್‌ ಗಳಿಸಿದರು. ಬಳಿಕ, ಲಿಯಾನ್‌ ಎಸೆತದಲ್ಲಿ ಸ್ಟಾರ್ಕ್ ಗೆ ಕ್ಯಾಚ್‌ ನೀಡಿದರು. ಆಸ್ಟ್ರೇಲಿಯಾ ಪರ ಉತ್ತಮ ಬೌಲಿಂಗ್‌ ಮಾಡಿದ ನಥಾನ್‌ ಲಿಯಾನ್‌ 5 ವಿಕೆಟ್‌ ಕಬಳಿಸಿ ಭಾರತ ತಂಡದ ಕುಸಿತಕ್ಕೆ ಕಾರಣರಾದರು. ಮಿಚೆಲ್‌ ಸ್ಟಾರ್ಕ್‌, ಹ್ಯಾಜಲ್‌ವುಡ್‌ ತಲಾ ಎರಡು ವಿಕೆಟ್ ಪಡೆದರು.
ನಂತರ  43 ರನ್ ಮುನ್ನಡೆಯೊಂದಿಗೆ ದ್ವಿತೀಯ ಇನಿಂಗ್ಸ್ ಆರಂಭಿಸಿದ ಆಸ್ಟ್ರೇಲಿಯಾಗೆ ಆರಂಭಿಕರಾದ ಮರ್ಕುಸ್  ಹ್ಯಾರಿಸ್ ಹಾಗೂ ಆರೊನ್ ಪಿಂಚ್ ಜೋಡಿ ಉತ್ತಮ ಬ್ಯಾಟಿಂಗ್ ಮಾಡಿತು. ಈ ಜೋಡಿ 59 ರನ್‍ಗಳ ಜತೆಯಾಟವಾಡುವ ಮೂಲಕ ತಂಡಕ್ಕೆ ಉತ್ತಮ ಅಡಿಪಾಯ ಹಾಕಿತು. ಮೊದಲ ಇನಿಂಗ್ಸ್‍ನಲ್ಲಿ ಚೊಚ್ಚಲ ಅರ್ಧಶತಕ ಸಿಡಿಸಿದ್ದ ಮಾರ್ಕೂಸ್ ಹ್ಯಾರಿಸ್ ಈ ಇನಿಂಗ್ಸ್ ನಲ್ಲೂ ಉತ್ತಮ ಬ್ಯಾಟಿಂಗ್ ಮಾಡುವ ನಿರೀಕ್ಷೆ ಹುಟ್ಟಿಸಿದರು. ಆದರೆ, ಅವರು 20 ರನ್ ಗಳಿಸಿ ಆಡುತ್ತಿದ್ದಾಗ ಜಸ್ಪ್ರಿತ್ ಬುಮ್ರಾ ಎಸೆತದಲ್ಲಿ ಕ್ಲೀನ್ ಬೌಲ್ಡ್ ಆದರು.
ನಂತರ ಆರೊನ್ ಪಿಂಚ್ ಅವರು 25 ರನ್ ಗಳಿಸಿದ್ದಾಗ ಗಾಯಕ್ಕೊಳಗಾಗಿ ನಿವೃತ್ತಿ ಹೊಂದಿದರು.
ನಂತರ ಶಾನ್ ಮಾರ್ಷ್(5) ಮೊಹಮ್ಮದ್ ಶಮಿ ಎಸೆತದಲ್ಲಿ ಪಂತ್‍ಗೆ ಕ್ಯಾಚ್ ನೀಡಿ ಹಿಂತಿರುಗಿದರು. ಪೀಟರ್ ಹ್ಯಾಂಡ್ಸ್ ಕೊಂಬ್ ಕೂಡ ಹೆಚ್ಚು ಹೊತ್ತು ಕ್ರೀಸ್‍ನಲ್ಲಿ ಉಳಿಯಲಿಲ್ಲ. ಅವರು 13 ರನ್ ಗಳಿಸಿ ಇಶಾಂತ್ ಶರ್ಮಾಗೆ ವಿಕೆಟ್ ಒಪ್ಪಿಸಿದರು. ಟ್ರಾವಿಸ್ ಹೆಡ್ 19 ರನ್ ಗಳಿಸಿ ಮೊಹಮ್ಮದ್ ಶಮಿ ಎಸೆತದಲ್ಲಿ ಇಶಾಂತ್ ಶರ್ಮಾಗೆ ಕ್ಯಾಚ್ ಕೊಟ್ಟು ನಿರ್ಗಮಿಸಿದರು.
ಒಂದು ತುದಿಯಲ್ಲಿ ಹಟ್ಟಿಯಾಗಿ ಗಟ್ಟಿಯಾಗಿ ನಿಂತ ಉಸ್ಮಾನ್ ಖವಾಜ ಭಾರತದ ಬೌಲರ್‍ಗಳಿಗೆ ತಲೆ ನೋವುಂಟು ಮಾಡಿದರು. ಆಡಿದ 102 ಎಸೆತಗಳಲ್ಲಿ 41 ರನ್ ಗಳಿಸಿ ಅಜೇಯರಾಗಿ ಉಳಿದಿದ್ದಾರೆ. ಮತ್ತೊಂದು ತುದಿಯಲ್ಲಿ ನಾಯಕ ಟಿಮ್ ಪೈನೆ 8 ರನ್ ಗಳಿಸಿ ಅಜೇಯರಾಗಿ ಉಳಿದಿದ್ದಾರೆ.
ಭಾರತದ ಪರ ಉತ್ತಮ ಬೌಲಿಂಗ್ ಮಾಡಿದ ಮೊಹಮ್ಮದ್ ಶಮಿ ಎರಡು ವಿಕೆಟ್ ಪಡದರೆ, ಬುಮ್ರಾ ಹಾಗೂ ಇಶಾಂತ್ ಶರ್ಮಾ ತಲಾ ಒಂದು ವಿಕೆಟ್ ಪಡೆದರು.
ಮೂರನೇ ದಿನದಾಟ ಮುಕ್ತಾಯಕ್ಕೆ ಆಸ್ಟ್ರೇಲಿಯಾ 48 ಓವರ್ ಗಳಿಗೆ 4 ವಿಕೆಟ್ ಕಳೆದುಕೊಂಡು 132 ರನ್ ಗಳಿಸಿದೆ. 175 ರನ್ ಮುನ್ನಡೆ ಸಾಧಿಸಿದೆ.

Related Articles