Saturday, July 27, 2024

ಸನ್‌ ರೈಸರ್ಸ್ ಕಟ್ಟಿ ಹಾಕಲು ಧೋನಿ ಪ್ಲ್ಯಾನ್‌ ಏನು?

ಚೆನ್ನೈ: ಸತತ ಎರಡು ಪಂದ್ಯಗಳಲ್ಲಿ ಸೋತು ನಿರಾಸೆ ಅನುಭವಿಸಿರುವ ಚೆನ್ನೈ ಸೂಪರ್ ಕಿಂಗ್ಸ್‌, 12ನೇ ಆವೃತ್ತಿಯ ಐಪಿಎಲ್‌ನ 41ನೇ ಪಂದ್ಯದಲ್ಲಿ ಸನ್‌ ರೈಸರ್ಸ್‌ ಹೈದರಾಬಾದ್‌ ವಿರುದ್ಧ ನಾಳೆ ತವರು ಅಂಗಳ ಎಂ.ಎ ಚಿದಂಬರಂ ಕ್ರೀಡಾಂಗಣದಲ್ಲಿ ಸೆಣಸಲಿದೆ.

ಪ್ರಸಕ್ತ ಆವೃತ್ತಿಯಲ್ಲಿ ಚೆನ್ನೈ ಸೂಪರ್‌ ಕಿಂಗ್ಸ್‌ ಆಡಿರುವ 10 ಪಂದ್ಯಗಳಲ್ಲಿ 7ರಲ್ಲಿ ಜಯಿಸಿ, ಇನ್ನುಳಿದ ಮೂರು ಪಂದ್ಯಗಳಲ್ಲಿ ಸೋಲು ಅನುಭವಿಸಿದ್ದು, 14 ಪಾಯಿಂಟ್‌ಗಳೊಂದಿಗೆ ಸಿಎಸ್‌ಕೆ ಅಂಕಪಟ್ಟಿಯಲ್ಲಿ ಅಗ್ರ ಸ್ಥಾನದಲ್ಲಿದೆ. ಸನ್‌ರೈಸರ್ಸ್‌ ಹೈದರಾಬಾದ್‌ 9 ಪಂದ್ಯಗಳಲ್ಲಿ ಐದರಲ್ಲಿ ಗೆಲುವು ಪಡೆದು, ಇನ್ನುಳಿದ ನಾಲ್ಕರಲ್ಲಿ ಸೋಲು ಅನುಭವಿಸಿದೆ. 10 ಅಂಕಗಳೊಂದಿಗೆ ಗುಂಪು ಪಟ್ಟಿಯಲ್ಲಿ ನಾಲ್ಕನೇ ಸ್ಥಾನದಲ್ಲಿದೆ.

ಉಭಯ ತಂಡಗಳು 12 ಬಾರಿ ಮುಖಾಮುಖಿಯಾಗಿವೆ. ಇದರಲ್ಲಿ ಚೆನ್ನೈ 9ರಲ್ಲಿ ಜಯ ದಾಖಲಿಸಿದರೆ, ಹೈದರಾಬಾದ್‌ ಮೂರರಲ್ಲಿ ಜಯ ಸಾಧಿಸಿದೆ. ಪ್ರಸಕ್ತ ಆವೃತ್ತಿಯಲ್ಲಿ ಏ.17ರಂದು ಇವೆರಡೂ ಸೆಣಸಿದ್ದು, ಸನ್‌ ರೈಸರ್ಸ್‌ ಹೈದರಾಬಾದ್‌ 6 ವಿಕೆಟ್‌ಗಳಿಂದ ಗೆಲುವು ಸಂಪಾಧಿಸಿತ್ತು.

ಪ್ರಸಕ್ತ ಆವೃತ್ತಿಯಲ್ಲಿ ಅದ್ಭುತ ಪ್ರದರ್ಶನ ತೋರುತ್ತಿರುವ ಚೆನ್ನೈ ಸೂಪರ್ ಕಿಂಗ್ಸ್‌ ಕಳೆದ ಎರಡು ಪಂದ್ಯಗಳಲ್ಲಿ ಸತತ ಸೋಲು ಅನುಭವಿಸಿದೆ. ಏ.17 ರಂದು ರಾಜೀವ್‌ ಗಾಂಧಿ ಕ್ರೀಡಾಂಗಣದಲ್ಲಿ ಇದೇ ತಂಡದ ವಿರುದ್ಧ 6 ವಿಕೆಟ್‌ಗಳಿಂದ ಧೋನಿ ಅನುಪಸ್ಥಿಯಲ್ಲಿ ಸಿಎಸ್‌ಕೆ ಸೋಲು ಅನುಭವಿಸಿತ್ತು. ಭಾನುವಾರ ಧೋನಿಯ ಅಮೋಘ ಬ್ಯಾಟಿಂಗ್‌ ಹೊರತಾಗಿಯೂ ಕೇವಲ ಒಂದು ರನ್‌ನಿಂದ ಚೆನ್ನೈ, ರಾಯಲ್ ಚಾಲೆಂಜರ್ಸ್‌ ಬೆಂಗಳೂರು ವಿರುದ್ಧ ಕೊನೆಯ ಎಸೆತದಲ್ಲಿ ಸೋತು ನಿರಾಸೆ ಅನುಭವಿಸಿತ್ತು.

ಭಾನುವಾರ ಆರ್‌ಸಿಬಿ ವಿರುದ್ಧದ ಪಂದ್ಯದಲ್ಲಿ 48 ಎಸೆತಗಳಲ್ಲಿ ಅಜೇಯ 84 ರನ್‌ ಸಿಡಿಸಿದ ಧೋನಿ, ಇನ್ನೇನು ಚೆನ್ನೈಗೆ ಗೆಲುವು ತಂದುಕೊಡುತ್ತಾರೆಂದೆ ಎಲ್ಲರೂ ಭಾವಿಸಿದ್ದರು. ಆದರೆ, ಕೊನೆಯ ಎಸೆತವನ್ನು ಹೊಡೆಯುವಲ್ಲಿ ವಿಫಲರಾದರು. ಹಾಗಾಗಿ, ಕೇವಲ ಒಂದು ರನ್‌ನಿಂದ ಸೋಲು ಅನುಭವಿಸಿತು. ಬ್ಯಾಟಿಂಗ್‌ ವಿಭಾಗದಲ್ಲಿ ಧೋನಿ ಅದ್ಭುತ ಲಯದಲ್ಲಿದ್ದಾರೆ.
ಆರಂಭಿಕ ಶೇನ್ ವ್ಯಾಟ್ಸನ್ ಹಾಗೂ ಫಾಫ್ ಡುಪ್ಲೇಸಿಸ್ ತಂಡಕ್ಕೆ ಉತ್ತಮ ಆರಂಭ ನೀಡುವ ಅಗತ್ಯತೆ ಇದೆ. ಕಳೆದ ಪಂದ್ಯಗಳಲ್ಲಿ ಈ ಜೋಡಿ ಆರ್ಭಟ ನಡೆಸುವಲ್ಲಿ ವಿಫಲರಾಗಿತ್ತು. ಇನ್ನುಳಿದಂತೆ ಸುರೇಶ್‌ ರೈನಾ, ರಾಯುಡು, ಕೇದಾರ್‌ ಜಾಧವ್‌ ಸ್ಥಿರ ಪ್ರದರ್ಶನ ತೂರುವಲ್ಲಿ ವಿಫಲರಾಗುತ್ತಿದ್ದಾರೆ. ನಾಳಿನ ಪಂದ್ಯದಲ್ಲಿ ಲಯಕ್ಕೆ ಮರಳುವ ಅಗತ್ಯತೆ ಇದೆ.

ಬೌಲಿಂಗ್‌ ವಿಭಾಗದಲ್ಲಿ  ದೀಪಕ್‌ ಚಾಹರ್‌ ಪ್ರಮುಖ ಶಕ್ತಿಯಾಗಿದ್ದಾರೆ. ಇವರು ಕಳೆದ ಪಂದ್ಯದಲ್ಲಿ ನಾಲ್ಕು ಓವರ್‌ ಬೌಲಿಂಗ್‌ ಮಾಡಿ 25 ರನ್‌ ನೀಡಿ ಎರಡು ವಿಕೆಟ್‌ ಪಡೆದಿದ್ದಾರೆ. ಇವರ ಜತೆ ರವೀಂದ್ರ ಜಡೇಜಾ 29 ರನ್‌ ನೀಡಿ ಎರಡು ವಿಕೆಟ್‌ ಕಬಳಿಸಿದ್ದರು. ಅಲ್ಲದೇ ಇಮ್ರಾನ್‌ ತಾಹೀರ್‌ ಕೂಡ ಅಗತ್ಯಕ್ಕೆ ತಕ್ಕಂತೆ ಬೌಲಿಂಗ್‌ ಮಾಡುತ್ತಿರುವುದು ತಂಡದ ಬೌಲಿಂಗ್‌ ಶಕ್ತಿ ಹೆಚ್ಚಿಸಿದೆ.

ಇನ್ನೂ ಸಿಎಸ್‌ಕೆ ಹಾಗೂ ಕೆಕೆರ್‌ ವಿರುದ್ಧ ಸತತ ಎರಡು ಪಂದ್ಯಗಳಲ್ಲಿ ಗೆದ್ದು ಹುಮ್ಮಸ್ಸಿನಲ್ಲಿರು ಸನ್‌ ರೈಸರ್ಸ್‌ ಹೈದರಾಬಾದ್‌ಗೆ ಮತ್ತೊಂದು ಗೆಲುವಿನ ತೋರಣ ಕಟ್ಟಲು ಪ್ಲಾನ್ ಮಾಡಿಕೊಂಡಿದೆ. ಹೈದರಾಬಾದ್‌ ಬ್ಯಾಟಿಂಗ್‌ ವಿಭಾಗದಲ್ಲಿ ಆರಂಭಿಕರಾದ ಡೇವಿಡ್‌ ವಾರ್ನರ್‌ ಹಾಗೂ ಜಾನಿ ಬೈರ್‌ ಸ್ಟೋ ಅವರೇ ಪ್ರಮುಖ ಶಕ್ತಿಯಾಗಿದ್ದಾರೆ. ಭಾನುವಾರ ಕೆಕೆಆರ್‌ ವಿರುದ್ಧ ಡೇವಿಡ್‌ ವಾರ್ನರ್‌ 38 ಎಸೆತಗಳಲ್ಲಿ 67 ರನ್‌ ಹಾಗೂ ಜಾನಿ ಬೈರ್‌ ಸ್ಟೋ ಅಜೇಯ 80 ರನ್‌ ಗಳಿಸಿದ್ದರು. ಇವರಿಬ್ಬರ ಅಮೊಘ ಬ್ಯಾಟಿಂಗ್‌ ನೆರವಿನಿಂದ ಹೈದರಾಬಾದ್‌ ತಂಡ ಕೆಕೆಆರ್‌ ನೀಡಿದ್ದ 160 ರನ್‌ ಗುರಿಯನ್ನು ಇನ್ನೂ ಐದು ಓವರ್‌ಗಳು ಬಾಕಿ ಇರುವಂತೆ ಮುಟ್ಟಿತ್ತು.

ಟೂರ್ನಿಯ ಆರಂಭದಿಂದಲೂ ಸ್ಥಿರ ಪ್ರದರ್ಶನ ತೋರುತ್ತಿರುವ ರಶೀದ್‌ ಖಾನ್‌ ತಂಡದ ಸ್ಪಿನ್‌ ವಿಭಾಗದ ಪ್ರಮುಖ ಅಸ್ತ್ರವಾಗಿದೆ. ಇವರು ಕಳೆದ ಪಂದ್ಯದಲ್ಲಿ ನಾಲ್ಕು ಓವರ್‌ಗಳಲ್ಲಿ 23 ರನ್‌ ನೀಡಿ ಒಂದು ವಿಕೆಟ್‌ ಪಡೆದಿದ್ದರು. ಅಲ್ಲದೇ, ಚೆನ್ನೈ ವಿರುದ್ಧದ ಪಂದ್ಯದಲ್ಲಿ ನಾಲ್ಕು ಓವರ್‌ ಬೌಲಿಂಗ್‌ ಮಾಡಿದ್ದ ಅವರು 17 ರನ್‌ ನೀಡಿ ಎರಡು ವಿಕೆಟ್‌ ಪಡೆದುಕೊಂಡಿದ್ದರು. ಹಾಗಾಗಿ, ಇವರ ಮೇಲೆ ನಾಳಿನ ಪಂದ್ಯದಲ್ಲಿ ಸಾಕಷ್ಟು ನಿರೀಕ್ಷೆ ಇಡಲಾಗಿದೆ. ವೇಗದ ವಿಭಾಗದಲ್ಲಿ ಭುವನೇಶ್ವರ್‌ ಕುಮಾರ್‌ಗೆ ಶಹಬಾಜ್‌ ನದೀಮ್‌ ಹಾಗೂ ಖಲೀಲ್‌ ಅಹಮದ್‌ಗೆ ಸಾಥ್‌ ನೀಡಲಿದ್ದಾರೆ. ಖಲೀಲ್‌ ಅಹಮದ್‌ ಭಾನುವಾರ ಕೆಕೆಆರ್‌ ವಿರುದ್ಧ 33 ರನ್‌ ನೀಡಿ 3 ವಿಕೆಟ್‌ ಕಬಳಿಸಿದ್ದರು.

Related Articles