Sunday, April 14, 2024

ಡೆಲ್ಲಿ ಕ್ಯಾಪಿಟಲ್ಸ್‌ ಸೇರಿದ ಕನ್ನಡಿಗ ಸುಚಿತ್‌

ನವದೆಹಲಿ: ಗಾಯಗೊಂಡಿರುವ ಡೆಲ್ಲಿ ಕ್ಯಾಪಿಟಲ್ಸ್ ತಂಡದ ಮಧ್ಯಮ ವೇಗಿ ಹರ್ಷಲ್‌ ಪಟೇಲ್ ಅವರ ಸ್ಥಾನಕ್ಕೆ ಕರ್ನಾಟಕದ ಜಗದೀಶ್‌ ಸುಚಿತ್‌ ಅವರನ್ನು 12ನೇ ಆವೃತ್ತಿಯ ಇಂಡಿಯನ್‌ ಪ್ರೀಮಿಯರ್‌ ಲೀಗ್‌ನ ಇನ್ನುಳಿದ ಪಂದ್ಯಗಳಿಗೆ ಆಯ್ಕೆ ಮಾಡಲಾಗಿದೆ.

ಕರ್ನಾಟಕದ ಎಡಗೈ ಸ್ಪಿನ್ನರ್ ಜಗದೀಶ್‌ ಸುಚಿತ್‌ ಅವರು ಕಳೆದ ಐಪಿಎಲ್‌ ಆವೃತ್ತಿಯಲ್ಲಿ ಮುಂಬೈ ಇಂಡಿಯನ್ಸ್ ಪರ ಆಡಿದ್ದರು. 13 ಪ್ರಥಮ ದರ್ಜೆ ಪಂದ್ಯಗಳಾಡಿರುವ ಸುಚಿತ್‌, ಒಟ್ಟು 45 ವಿಕೆಟ್‌ ಕಬಳಿಸಿದ್ದಾರೆ. 43 ಟಿ-20 ಪಂದ್ಯಗಳಲ್ಲಿ ಅವರು, 25.54 ಸರಾಸರಿಯಲ್ಲಿ 37 ವಿಕೆಟ್‌ ಪಡೆದಿದ್ದಾರೆ.

ಏ.1 ರಂದು ಕಿಂಗ್ಸ್ ಇಲೆವೆನ್‌ ಪಂಜಾಬ್‌ ವಿರುದ್ಧದ ಪಂದ್ಯದಲ್ಲಿ ಹರ್ಷಲ್ ಪಟೇಲ್‌ ತನ್ನ ಎಡಗೈ ಗೆ ಗಾಯ ಮಾಡಿಕೊಂಡಿದ್ದರು. ಅವರಿನ್ನೂ ಚೇತರಿಸಿಕೊಳ್ಳಲು 3 ರಿಂದ 4 ವಾರಗಳ ಅಗತ್ಯವಿದೆ. ಹಾಗಾಗಿ, ಅವರ ಸ್ಥಾನಕ್ಕೆ ಸ್ಪಿನ್ನರ್‌ ಜಗದೀಶ್‌ ಸುಚಿತ್‌ಗೆ ಅವಕಾಶ ಕಲ್ಪಿಸಲಾಗಿದೆ.

ಪ್ರಸಕ್ತ ಆವೃತ್ತಿಯಲ್ಲಿ ಡೆಲ್ಲಿ ಕ್ಯಾಪಿಟಲ್ಸ್‌ 7 ಪಂದ್ಯಗಳಾಡಿದ್ದು, 4 ರಲ್ಲಿ ಜಯಿಸಿ ಇನ್ನುಳಿದ 3 ಹಣಾಹಣಿಗಳಲ್ಲಿ ಸೋಲು ಅನುಭವಿಸಿದೆ. 8 ಅಂಕಗಳೊಂದಿಗೆ ಶ್ರೇಯಸ್‌ ಅಯ್ಯರ್‌ ತಂಡ ಅಂಕ ಪಟ್ಟಿಯಲ್ಲಿ ಈಗ ನಾಲ್ಕನೇ ಸ್ಥಾನದಲ್ಲಿದೆ. ಡೆಲ್ಲಿ ಕ್ಯಾಪಿಟಲ್ಸ್‌ ತಂಡ, ಸನ್‌ ರೈಸರ್ಸ್‌ ಹೈದರಾಬಾದ್‌ ತಂಡದ ವಿರುದ್ಧ ಇಂದು ರಾಜೀವ್‌ ಗಾಂಧಿ ಅಂತಾರಾಷ್ಟ್ರೀಯ ಕ್ರೀಡಾಂಗಣದಲ್ಲಿ ಸೆಣಸಲಿದೆ.

Related Articles