Sunday, September 8, 2024

ಸಿದ್ಧಾರ್ಥ್ ಶತಕ, ಕರ್ನಾಟಕ ಸುಭದ್ರ

ಸ್ಪೋರ್ಟ್ಸ್ ಮೇಲ್ ವರದಿ, ಬೆಳಗಾವಿ

ಕೆ.ವಿ. ಸಿದ್ಧಾರ್ಥ್ ಆಡಿದ ಎರಡನೇ ಪಂದ್ಯದಲ್ಲೇ ಅಜೇಯ 104 ರನ್ ಹಾಗೂ ಕೌನೇನ್ ಅಬ್ಬಾಸ್ (64) ಅವರ ಅರ್ಧ  ಶತಕದ ನೆರವಿನಿಂದ ಕರ್ನಾಟಕ ತಂಡ ಮುಂಬೈ ವಿರುದ್ಧದ ಎಲೈಟ್ ಎ ಗುಂಪಿನ ರಣಜಿ ಪಂದ್ಯದ ಮೊದಲ ದಿನದಲ್ಲಿ  ನಾಲ್ಕು ವಿಕೆಟ್ ನಷ್ಟಕ್ಕೆ 263 ರನ್ ಗಳಿಸಿ ಸುಸ್ಥಿತಿ ತಲುಪಿತು.

148 ಎಸೆತಗಳನ್ನೆದುರಿಸಿದ ಸಿದ್ಧಾರ್ಥ್  13 ಬೌಂಡರಿ ಹಾಗೂ 2 ಸಿಕ್ಸರ್ ನೆರವಿನಿಂದ ಅಜೇಯ 104 ರನ್ ಗಳಿಸಿ ಪ್ರಥಮ ದರ್ಜೆ ಕ್ರಿಕೆಟ್‌ನಲ್ಲಿ ಚೊಚ್ಚಲ ಶತಕ ಪೂರ್ಣಗೊಳಿಸಿದರು.
ಟೀ ವಿರಾಮದ ವೇಳೆ ಕರ್ನಾಟಕ 4 ವಿಕೆಟ್ ನಷ್ಟಕ್ಕೆ 175 ರನ್ ಗಳಿಸಿ ಸಂಕಷ್ಟಕ್ಕೆ ಸಿಲುಕಿತ್ತು. ಆದರೆ ದಿನದ ಕೊನೆಯ ಹಂತದಲ್ಲಿ ಸಿದ್ಧಾರ್ಥ್ ಹಾಗೂ ಶ್ರೇಯಸ್ ಗೋಪಾಲ್ 88 ರನ್ ಜತೆಯಾಟ ಆಡುವ ಮೂಲಕ ಕರ್ನಾಟಕ ಉತ್ತಮ ಸ್ಥಿತಿ ತಲುಪಿತು. ಶ್ರೇಯಸ್ ಗೋಪಾಲ್ 87 ಎಸೆತಗಳಲ್ಲಿ  8 ಬೌಂಡರಿ ನೆರವಿನಿಂದ ಅಜೇಯ 47 ರನ್ ಗಳಿಸಿ ನಾಯಕನ ಜವಾಬ್ದಾರಿಯುತ ಆಟ ಪ್ರದರ್ಶಿಸಿದರು. ಮುಂಬೈಯ ಶಿವಂ ದುಬೆ  32 ರನ್‌ಗೆ 4 ವಿಕೆಟ್ ಗಳಿಸಿದರು. 4ನೇ ಕ್ರಮಮಾಂಕದಲ್ಲಿ ಅಂಗಣಕ್ಕಿಳಿದ ಸಿದ್ಧಾರ್ಥ್ 90 ಓವರ್‌ಗಳ ತನಕವೂ ಆಡುವ ಆಶಯ ವ್ಯಕ್ತಪಡಿಸಿದರು.
ವಿದರ್ಭ  ವಿರುದ್ಧ ಗಳಿಸಿದ ಅಲ್ಪ ಮೊತ್ತ ಆಟದ ಮೇಲೆ ಯಾವುದೇ ರೀತಿಯ ಪರಿಣಾಮ ಬೀರಲಿಲ್ಲ. ನನ್ನ ಶಕ್ತಿಯನ್ನು ಅರಿತು ಆಟವಾಡಿದೆ. ಉತ್ತಮವಾಗಿ ಆಡಬಲ್ಲೆ ಎಂಬ ಆತ್ಮವಿಶ್ವಾಸವಿದ್ದಿತ್ತು, ಅದೇ ನನಗೆ ಸ್ಫೂರ್ತಿಯಾಯಿತು ಎಂದು ಸಿದ್ಧಾರ್ಥ್ ಹೇಳಿದ್ದಾರೆ.
ಟಾಸ್ ಗೆದ್ದ ಕರ್ನಾಟಕ ಬ್ಯಾಟಿಂಗ್ ಆಯ್ದುಕೊಂಡಿತು. ಗಾಯಗೊಂಡಿರುವ ವಿನಯ್ ಕುಮಾರ್ ಅವರ ಸ್ಥಾನದಲ್ಲಿ ಶ್ರೇಯಸ್ ಗೋಪಾಲ್ ತಂಡವನ್ನು ಮುನ್ನಡೆಸಿದರು.
ಇದಕ್ಕಿಂತ ಖುಷಿ ಬೇರೆ ಇಲ್ಲ :  ವೆಂಕಟೇಶ್
ಸಿದ್ಧಾರ್ಥ್‌ನ ನಿರಂತರ ಶ್ರಮಕ್ಕೆ ಫಲ ಸಿಕ್ಕಿದೆ. ಆತ ನೆಟ್‌ನಲ್ಲಿ ಮಾಡಿದ ಅಭ್ಯಾಸ, ಕ್ರಿಕೆಟ್‌ಗಾಗಿ ಮಾಡಿದ ತ್ಯಾಗದ ಫಲವನ್ನು ಅಂಗಣದಲ್ಲಿ ಕಂಡೆ. ಇದಕ್ಕಿಂತ ಬೇರೆ ಖುಷಿ ಇಲ್ಲ ಎಂದು ಕೆ.ವಿ. ಸಿದ್ಧಾರ್ಥ್ ಅವರ ತಂದೆ ವೆಂಕಟೇಶ್ ಹೇಳಿದ್ದಾರೆ. ಮಕ್ಕಳ ಕ್ರಿಕೆಟ್ ಬದುಕಿಗಾಗಿ ವೆಂಕಟೇಶ್ ಅವರ ಶ್ರಮ ಅಪಾರವಾದುದು. ರಾಜ್ಯ ಕ್ರಿಕೆಟ್ ಸಂಸ್ಥೆಯಲ್ಲಿ ವಿಭಿನ್ನ ಜವಾಬ್ದಾರಿಗಳನ್ನು ನಿಭಾಯಿಸುತ್ತಿದ್ದರರೂ ಎಲ್ಲಿಯೂ ತಮ್ಮ ಮಗನ ಬಗ್ಗೆ ಯಾರಲ್ಲೂ ಒತ್ತಾಯ ಮಾಡಿದವರಲ್ಲ. ಸಾಧನೆಗಳ ಗುಣಗಾನ ಮಾಡಿದವರಲ್ಲ . ಮಕ್ಕಳು ಹೂವು ಅರಳಿದಂತೆ ಅವರಾಗಿಯೇ ಕಷ್ಟಪಟ್ಟು ಮೇಲೆ ಬರಬೇಕು.ಅದು ನೈಸರ್ಗಿಕವಾಗಿರಬೇಕು. ಆಗಲೇ ನಿಜವಾದ ಖುಷಿ, ಎನ್ನುತ್ತಾರೆ ವೆಂಕಟೇಶ್.

Related Articles