Wednesday, November 6, 2024

ಅಡಿಲೇಡ್‌ನಲ್ಲಿ ಇತಿಹಾಸ ಬರೆದ ಭಾರತ

ಏಜೆನ್ಸೀಸ್ ಅಡಿಲೇಡ್

ಆಸ್ಟ್ರೇಲಿಯಾ ವಿರುದ್ಧದ ಮೊದಲ ಟೆಸ್ಟ್‌ನಲ್ಲಿ 31 ರನ್‌ಗಳ ಅಂತರದಲ್ಲಿ ಜಯ ಗಳಿಸುವ ಮೂಲಕ ಭಾರತ ತಂಡ ಕಾಂಗರೂಗಳ ನಾಡಿನಲ್ಲಿ ಮೊದಲ ಬಾರಿಗೆ ಸರಣಿಯ ಮೊದಲ ಟೆಸ್ಟ್‌ನಲ್ಲಿ ಜಯ ಗಳಿಸಿದೆ.

2008ರಲ್ಲಿ ಅನಿಲ್ ಕುಂಬ್ಳೆ ಪಂದ್ಯವೊಂದನ್ನು ಗೆದ್ದ ನಂತರ ಇದೇ ಮೊದಲ ಬಾರಿಗೆ ಕೊಹ್ಲಿ ನಾಯಕರಾಗಿ ಪಂದ್ಯವನ್ನು ಗೆದ್ದಿದ್ದಾರೆ. ಕೊಹ್ಲಿ ಆಸ್ಟ್ರೇಲಿಯಾದ ನೆಲದಲ್ಲಿ ಟೆಸ್ಟ್ ಸರಣಿಯ ಮೊದಲ ಪಂದ್ಯವನ್ನು ಗೆದ್ದ ಮೊದಲ ನಾಯಕ ಎಂಬ ಹೆಗ್ಗಳಿಕೆಗೆ ಪಾತ್ರರಾದರು.
ಇಂಗ್ಲೆಂಡ್ ಹಾಗೂ ದಕ್ಷಿಣ ಆಫ್ರಿಕಾ ವಿರುದ್ಧದ ಸರಣಿಯಲ್ಲಿ ಹೀನಾಯ ಪ್ರದರ್ಶನ ತೋರಿದ ನಂತರ ಭಾರತ ತಂಡ ಆಸ್ಟ್ರೇಲಿಯಾದ ನೆಲದಲ್ಲಿ ಆತ್ಮವಿಶ್ವಾಸದ ಹೆಜ್ಜೆಯನ್ನಿಟ್ಟಿದೆ. ಆದರೆ ವಿರಾಟ್ ಕೊಹ್ಲಿ ಬ್ಯಾಟಿಂಗ್‌ನಲ್ಲಿ ವೈಫಲ್ಯ ಕಂಡರೂ  ಚೇತೇಶ್ವರ ಪೂಜಾರ ಹಾಗೂ ಆರ್. ಅಶ್ವಿನ್ ಮಿಂಚಿದ ಪರಿಣಾಮ ಭಾರತ ಯಶಸ್ಸು ಸಾಧಿಸಿತು.
ವಿಶ್ವದಾಖಲೆ ಸರಿಗಟ್ಟಿದ ಪಂತ್
ವಿಕೆಟ್‌ಕೀಪರ್ ರಿಶಭ್ ಪಂತ್ 11 ಕ್ಯಾಚ್ ಕಬಳಿಸುವ ಮೂಲಕ ಡಾಕ್ ರಸೆಲ್ ಹಾಗೂ ಎಬಿ ಡಿವಿಲಿಯರ್ಸ್ ಅವರ ವಿಶ್ವದಾಖಲೆಯನ್ನು ಸರಿಗಟ್ಟಿದ್ದಾರೆ. ಭಾರತದ ಪರ ವೃದ್ಧಿಮಾನ್ ಸಹಾ 10 ಕ್ಯಾಚ್ ಕಬಳಿಸಿದ್ದು ಇದುವರೆಗಿನ ದಾಖಲೆಯಾಗಿತ್ತು. 21 ವರ್ಷದ ಪಂತ್ ಆಸೀಸ್‌ನ ನಥಾನ್ ಲೆಯಾನ್ ಅವರ ಕ್ಯಾಚ್ ಕೈಚೆಲ್ಲಿದ್ದು ಈ ಸಾಧನೆಯ ನಡುವೆ ನೋವಿನ ಸಂಗತಿಯಾಗಿತ್ತು. ಇದರಿಂದ ಆಸ್ಟ್ರೇಲಿಯಾ ಪಂದ್ಯ ಗೆಲ್ಲುವ ಹಂತ ತಲುಪಿತ್ತು. ಆದರೆ ಅದು ಸಾಧ್ಯವಾಗಲಿಲ್ಲ.
ಪೂಜಾರ ಪಂದ್ಯಶ್ರೇಷ್ಠ
ಮೊದಲ ಇನಿಂಗ್ಸ್‌ನಲ್ಲಿ  123 ಹಾಗೂ ದ್ವಿತೀಯ ಇನಿಂಗ್ಸ್‌ನಲ್ಲಿ 71 ರನ್ ಗಳಿಸಿ ತಂಡದ ಜಯಕ್ಕೆ ಮೂಲ ಕಾರಣರಾದ ಚೇತೇಶ್ವರ ಪೂಜಾರ ನಿರೀಕ್ಷೆಯಂತೆ ಪಂದ್ಯಶ್ರೇಷ್ಠ ಗೌರವಕ್ಕೆ ಪಾತ್ರರಾದರು. ಬೌಲರ್‌ಗಳು ಕೂಡ ಉತ್ತಮ ಪ್ರದರ್ಶನ ತೋರಿದ ಕಾರಣ ‘ಭಾರತ ಮೊದಲ ಇನಿಂಗ್ಸ್‌ನಲ್ಲಿ 15 ರನ್ ಮುನ್ನಡೆ ಕಂಡಿತ್ತು.
323ರನ್ ಜಯದ ಗುರಿ ಹೊತ್ತ ಆಸ್ಟ್ರೇಲಿಯಾ ಲಗುಬಗನೆ ವಿಕೆಟ್ ಕಳೆದುಕೊಂಡು ಸೋಲಿನ ಅಂಚಿಗೆ ತಲುಪಿತ್ತು. ಆದರೆ ಕೊನೆಯ ಹಂತದಲ್ಲಿ ಬೌಲರ್‌ಗಳಾದ ಕುಮಿನ್ಸ್, ಸ್ಟಾರ್ಕ್ ತಲಾ 28 ರನ್ ಹಾಗೂ ಲೆಯಾನ್ ಅಜೇಯ 38 ರನ್ ಗಳಿಸುವ ಮೂಲಕ ಆಸೀಸ್ ಜಯದ ಸನಿಹ ತಲುಪಿತ್ತು. ಆದರೆ ಶಮಿ, ಬುಮ್ರಾ ಹಾಗೂ ಅಶ್ವಿನ್ ತಲಾ 3 ವಿಕೆಟ್ ಗಳಿಸಿ ಐತಿಹಾಸಿಕ ಜಯ ತಂದುಕೊಟ್ಟರು.

Related Articles