Saturday, July 20, 2024

ವಿಶ್ವಕಪ್‌ಗೆ ಭಾರತ ತಂಡ ಪ್ರಕಟ: ರಾಹುಲ್‌, ಕಾರ್ತಿಕ್‌ ಇನ್‌

ಮುಂಬೈ: ಮುಂಬರುವ ಐಸಿಸಿ ವಿಶ್ವಕಪ್‌ಗೆ 15 ಆಟಗಾರರ ಭಾರತ ತಂಡವನ್ನು ಭಾರತೀಯ ಕ್ರಿಕೆಟ್‌ ನಿಯಂತ್ರಣ ಮಂಡಳಿ(ಬಿಸಿಸಿಐ) ಇಂದು ಬಿಡುಗಡೆ ಮಾಡಿದೆ, ಎಂದಿನಂತೆ ವಿರಾಟ್‌ ಕೊಹ್ಲಿ ತಂಡವನ್ನು ಮುನ್ನಡೆಸಲಿದ್ದು, ರೋಹಿತ್‌ ಶರ್ಮಾ ಉಪ ನಾಯಕನ ಜವಾಬ್ದಾರಿ ನಿರ್ವಹಿಸಲಿದ್ದಾರೆ, ನಿರೀಕ್ಷೆಯಂತೆ ಕರ್ನಾಟಕದ ಕೆ ಎಲ್‌ ರಾಹುಲ್‌ ಅವರು ತಂಡದಲ್ಲಿ ಸ್ಥಾನ ಪಡೆದಿದ್ದಾರೆ.

ಬಿಸಿಸಿಐ ಆಯ್ಕೆ ಸಮಿತಿ ಅಧ್ಯಕ್ಷ ಎಂ.ಎಸ್‌. ಕೆ ಪ್ರಸಾದ್‌ ನೇತೃತ್ವದಲ್ಲಿ ಟೀಂ ಇಂಡಿಯಾ ನಾಯಕ ವಿರಾಟ್‌ ಕೊಹ್ಲಿ, ಮುಖ್ಯ ತರಬೇತುದಾರ ರವಿಶಾಸ್ತ್ರಿ ಅವರನ್ನೊಳಗೊಂಡ ಸಭೆಯಲ್ಲಿ 15 ಆಟಗಾರರ ಭಾರತ ತಂಡವನ್ನು ಆಯ್ಕೆ ಮಾಡಲಾಗಿದೆ.
ರಿಷಭ್‌ ಪಂತ್‌ ಹಾಗೂ ಅಂಬಾಟಿ ರಾಯುಡು ಅವರ ಬದಲಿಗೆ ಕೆ.ಎಲ್‌. ರಾಹುಲ್‌ ಹಾಗೂ ದಿನೇಶ್‌ ಕಾರ್ತಿಕ್‌ ಅವರಿಗೆ ಸ್ಥಾನ ಕಲ್ಪಿಸಲಾಗಿದೆ. ಜತೆಗೆ ಆಲ್‌ರೌಂಡರ್‌ ವಿಜಯ್‌ ಶಂಕರ್‌ ಹಾಗೂ ರವೀಂದ್ರ ಜಡೇಜಾಗೆ ಅವಕಾಶ ನೀಡಲಾಗಿದೆ.

ಅಂಬಾಟಿ ರಾಯುಡು ಹಾಗೂ ರಿಷಭ್‌ ಪಂತ್‌ ಅವರು ವಿಶ್ವಕಪ್‌ ಭಾರತ ತಂಡದ ಪ್ರಮುಖ ಸಂಭವನೀಯ ಆಟಗಾರರಾಗಿದ್ದರು. ಆದರೆ, ಯುವ ವಿಕೆಟ್‌ ಕೀಪರ್‌ ಪಂತ್‌ ಬದಲು ಅನುಭವಿ ದಿನೇಶ್‌ ಕಾರ್ತಿಕ್ ಅವರಿಗೆ ಅವಕಾಶ ನೀಡಲಾಗಿದೆ. ಮೀಸಲು ಆರಂಭಿಕ ಹಾಗೂ ನಾಲ್ಕನೇ ಕ್ರಮಾಂಕಕ್ಕೆ ಅಂಬಾಟಿ ರಾಯುಡು ಬದಲು ಕನ್ನಡಿಗ ರಾಹುಲ್‌ ಅವರನ್ನು ಪರಿಗಣಿಸಲಾಗಿದೆ.
ಭಾರತ(ವಿಶ್ವಕಪ್‌ ತಂಡ): ವಿರಾಟ್‌ ಕೊಹ್ಲಿ(ನಾಯಕ), ರೋಹಿತ್‌ ಶರ್ಮಾ(ಉಪ ನಾಯಕ), ಶಿಖರ್‌ ಧವನ್‌, ಕೆ.ಎಲ್‌. ರಾಹುಲ್‌, ವಿಜಯ್‌ ಶಂಕರ್‌, ಎಂ.ಎಸ್‌ ಧೋನಿ (ವಿ.ಕೀ), ಕೇದಾರ್‌ ಜಾದವ್‌, ದಿನೇಶ್‌ ಕಾರ್ತಿಕ್‌, ಯಜುವೇಂದ್ರ ಚಾಹಲ್‌, ಕುಲ್ದೀಪ್‌ ಯಾದವ್‌, ಭುವನೇಶ್ವರ್‌ ಕುಮಾರ್‌, ಜಸ್ಪ್ರೀತ್‌ ಬೂಮ್ರಾ, ಹಾರ್ದಿಕ್‌ ಪಾಂಡ್ಯ, ರವೀಂದ್ರ ಜಡೇಜಾ, ಮೊಹಮ್ಮದ್‌ ಶಮಿ.

Related Articles