Sunday, September 8, 2024

ವಿಶ್ವಕಪ್‌ಗೆ ಜೇ ರಿಚರ್ಡ್‌ಸನ್‌ ಔಟ್‌ : ಕೇನ್‌ ಇನ್‌

ಮೆಲ್ಬೋರ್ನ್‌: ಗಾಯದಿಂದಾಗಿ ಆಸ್ಟ್ರೇಲಿಯಾದ ವೇಗಿ ಜೇ ರಿಚರ್ಡ್‌ಸನ್‌ ಅವರು ಮುಂಬರುವ ಐಸಿಸಿ ವಿಶ್ವಕಪ್‌ನಿಂದ ಹೊರಗುಳಿಯಲಿದ್ದು, ಅವರ ಸ್ಥಾನಕ್ಕೆ ಕೇನ್‌ ರಿಚರ್ಡ್‌ಸನ್‌ ಅವರಿಗೆ ಅವಕಾಶ ಕಲ್ಪಿಸಲಾಗಿದೆ.

” ಗಾಯಾಳು ಜೇ ರಿಚರ್ಡ್‌ಸನ್‌ ಇನ್ನೂ ಚೇತರಿಸಿಕೊಳ್ಳದ ಕಾರಣ ಅವರನ್ನು ಐಸಿಸಿ ವಿಶ್ವಕಪ್‌ಗೆ ಪರಿಗಣಿಸುತ್ತಿಲ್ಲ. ವಿಶ್ವಕಪ್‌ನಿಂದ ಹೊರಗುಳಿಯುತ್ತಿರುವ ಜೇ ರಿಚರ್ಡ್‌ಸನ್‌ಗೂ ತಂಡಕ್ಕೆ ತೀವ್ರ ನಿರಾಸೆಯಾಗಿದೆ” ಎಂದು ಆಸ್ಟ್ರೇಲಿಯಾ ತಂಡದ ಫಿಜಿಯಾಥೆರಪಿಸ್ಟ್‌ ಡೇವಿಡ್ ಬೀಕ್ಲಿ ತಿಳಿಸಿದ್ದಾರೆ.

“ಚೇತರಿಸಿಕೊಳ್ಳುತ್ತಿರುವ ಜೇ ರಿಚರ್ಡ್‌ಸನ್‌ ಅವರನ್ನು ಇತ್ತೀಚೆಗೆ ಬೌಲಿಂಗ್‌ ಹಾಗೂ ಫಿಟ್ನೆಸ್‌ ಮೌಲ್ಯಮಾಪನಕ್ಕೆ ಒಳಪಡಿಸಲಾಗಿತ್ತು. ಆದರೆ, ಮೊದಲಿನಂತೆ ಅವರು ವೇಗವಾಗಿ ಬೌಲಿಂಗ್‌ ಮಾಡಲು ಸಾಧ್ಯವಾಗಿಲ್ಲ. ಇದನ್ನು ಆಧರಿಸಿ ತಂಡದ ಆಯ್ಕೆದಾರರು 22ರ ಪ್ರಾಯದ ವೇಗಿಯನ್ನು ವಿಶ್ವಕಪ್‌ ತಂಡದಿಂದ ವಿಥ್‌ ಡ್ರಾ ಮಾಡಿದರು.” ಎಂದು ಬೀಕ್ಲಿ ವಿವರಿಸಿದರು.
” ಜೇ ರಿಚರ್ಡ್‌ಸನ್‌ ಪುನಶ್ಚೈತನ್ಯ ಕಾರ್ಯ ಮುಂದುವರಿಯಲಿದ್ದು, ಮುಂದಿನ ವಾರ ಅವರಿಗೆ ಮತ್ತೊಮ್ಮೆ ನೆಟ್ಸ್‌ನಲ್ಲಿ ಬೌಲಿಂಗ್‌ ಮಾಡಲು ಅವಕಾಶ ನೀಡಲಾಗುತ್ತದೆ” ಎಂದರು.

ಇಂಗ್ಲೆಂಡ್‌ ನೆಲದಲ್ಲಿ ಜೇ ರಿಚರ್ಡ್‌ಸನ್‌ ಆಡಿರುವ 12 ಏಕದಿನ ಪಂದ್ಯಗಳಲ್ಲಿ 24 ವಿಕೆಟ್‌ ಕಬಳಿಸಿದ್ದಾರೆ. ಜೇ ಅಲ್ಲಿನ ಪಿಚ್‌ಗಳಲ್ಲಿ ಸ್ವಿಂಗ್‌ ಹಾಗೂ ವೇಗದಲ್ಲಿ ತುಂಬಾ ನಿಯಂತ್ರಣ ಸಾಧಿಸಿದ್ದರು. ಜೇ ರಿಚರ್ಡ್‌ಸನ್‌ ಅವರು ಮಾರ್ಚ್‌ನಲ್ಲಿ ಪಾಕಿಸ್ತಾನದ ವಿರುದ್ಧದ ಎರಡನೇ ಏಕದಿನ ಪಂದ್ಯದಲ್ಲಿ ಭುಜದ ಗಾಯಕ್ಕೆ ಒಳಗಾಗಿದ್ದರು.

ಐಪಿಎಲ್‌ ಪ್ರಾರಂಭವಾಗುವ ಮುನ್ನ ಭಾರತ ಪ್ರವಾಸ ಕೈಗೊಂಡಿದ್ದ ಆಸ್ಟ್ರೇಲಿಯಾ ತಂಡದಲ್ಲೂ ಕೇನ್‌ ವಿಲಿಯಮ್ಸನ್‌ ಇದ್ದರು. ನಥಾನ್‌ ಕೌಲ್ಟರ್‌ ನೈಲ್‌, ಜೇಸನ್‌ ಬ್ರಹ್ರೆನ್‌ಡ್ರಾಫ್‌ ಹಾಗೂ ಮಿಚೆಲ್‌ ಸ್ಟ್ಯಾರ್ಕ್‌ ಅವರನ್ನೊಳಗೊಂಡ ಬೌಲಿಂಗ್‌ ವಿಭಾಗಕ್ಕೆ ಇದೀಗ ಕೇನ್‌ ರಿಚರ್ಡ್‌ಸನ್‌ ಸೇರ್ಪಡೆಗೊಂಡಿದ್ದಾರೆ.

ಹಾಲಿ ಚಾಂಪಿಯನ್‌ ಆಸ್ಟ್ರೇಲಿಯಾ ವಿಶ್ವಕಪ್‌ ಟೂರ್ನಿಗೂ ಮುನ್ನ ಇಂಗ್ಲೆಂಡ್‌ ಹಾಗೂ ಶ್ರೀಲಂಕಾ ವಿರುದ್ಧ ಸೌಥ್‌ಹ್ಯಾಮ್ಟನ್‌ನಲ್ಲಿ ಎರಡು ಅಭ್ಯಾಸ ಪಂದ್ಯಗಳಾಡಲಿದೆ. ಜೂನ್‌ 1 ರಂದು ಬ್ರಸ್ಟೋಲ್‌ನಲ್ಲಿ ಅಫ್ಘಾನಿಸ್ತಾನದ ವಿರುದ್ಧ ಐಸಿಸಿ ವಿಶ್ವಕಪ್‌ ಅಭಿಯಾನ ಶುರು ಮಾಡಲಿದೆ.
ವಿಶ್ವಕಪ್ ಆಸ್ಟ್ರೇಲಿಯಾ ತಂಡ: ಆ್ಯರೋನ್‌ ಫಿಂಚ್‌(ನಾಯಕ), ಜೇಸನ್‌ ಬೆಹ್ರನ್‌ಡ್ರಾಫ್‌, ಅಲೆಕ್ಸ್‌ ಕ್ಯಾರಿ(ವಿ.ಕೀ), ನಥಾನ್‌ ಕೌಲ್ಟರ್‌ ನೈಲ್‌, ಪ್ಯಾಟ್‌ ಕಮಿನ್ಸ್, ಉಸ್ಮಾನ್‌ ಖವಾಜ, ನಥಾನ್‌ ಲಿಯಾನ್‌, ಶಾನ್‌ ಮಾರ್ಷ್‌, ಗ್ಲೇನ್‌ ಮ್ಯಾಕ್ಸವೆಲ್‌, ಕೇನ್‌ ರಿಚರ್ಡ್‌ಸನ್‌, ಸ್ಟೀವ್‌ ಸ್ಮಿತ್‌, ಮಿಚೆಲ್‌ ಸ್ಟ್ಯಾರ್ಕ್‌, ಮಾರ್ಕುಸ್‌ ಸ್ಟೋಯಿನಿಸ್‌, ಡೇವಿಡ್‌ ವಾರ್ನರ್‌, ಆ್ಯಡಂ ಝಂಪಾ.

Related Articles