ಚಾಂಪಿಯನ್ಸ್‌ ಲೀಗ್‌: ಬಾರ್ಸಿಲೋನಾಗೆ ಆಘಾತ, ಫೈನಲ್‌ಗೆ ಲಿವರ್ಪೂಲ್‌

0
195

ಲಂಡನ್‌: ಸ್ಟಾರ್‌ ಆಟಗಾರರಾದ ಮೊಹಮ್ಮದ್‌ ಸಲ್ಹಾ ಹಾಗೂ ರಾಬರ್ಟ್‌ ಫರ್ಮಿನೊ ಅವರ ಅನುಪಸ್ಥಿತಿಯಲ್ಲಿ ಲಿವರ್ಪೂಲ್‌ ತಂಡ, ಬಾರ್ಸಿಲೋನಾ ತಂಡದ ವಿರುದ್ಧ ಚಾಂಪಿಯನ್ಸ್‌ ಲೀಗ್‌ ಸೆಮಿಫೈನಲ್‌ ಎರಡನೇ ಲೆಗ್‌ ಪಂದ್ಯದಲ್ಲಿ 4-0 ಅಂತರದಲ್ಲಿ ಜಯ ದಾಖಲಿಸಿತು.

 

ಇದರೊಂದಿಗೆ 4-3 ಸರಾಸರಿ ಗೋಲುಗಳ ನೆರವಿನಿಂದ ಲಿವರ್ಪೂಲ್‌ ಫೈನಲ್‌ಗೆ ಪ್ರವೇಶ ಮಾಡಿತು. ಸೋಲಿನೊಂದಿಗೆ ಪ್ರಶಸ್ತಿ ಗೆಲ್ಲುವ ಲಿಯೊನೆಲ್‌ ಮೆಸ್ಸಿ ಬಳಗಕ್ಕೆ ಆಘಾತವಾಯಿತು.
ಆನ್ ಫೀಲ್ಡ್ ಕ್ರೀಡಾಂಗಣದಲ್ಲಿ ನಡೆದ ಚಾಂಪಿಯನ್ಸ್‌ ಲೀಗ್‌ ಸೆಮಿಫೈನಲ್‌ ಎರಡನೇ ಲೆಗ್‌ ಪಂದ್ಯದಲ್ಲಿ ಉತ್ತಮ ಪ್ರದರ್ಶನ ತೋರಿದ ಡಿವೊಕ್ ಒರಿಗಿ (7ನೇ ಹಾಗೂ 79ನೇ ನಿಮಿಷ) ಹಾಗೂ
ಗಿನಿ ವಿಜ್ನಾಲ್ಡಮ್ (54ನೇ ಹಾಗೂ 56ನೇ ನಿಮಿಷ) ಅವರು ಗಳಿಸಿದ ತಲಾ ಎರಡು ಗೋಲುಗಳು ಪಂದ್ಯದಲ್ಲಿನ ಲಿವರ್ಪೂಲ್‌ ಗೆಲುವಿಗೆ ಪ್ರಧಾನ ಪಾತ್ರವಹಿಸಿತು.
ಸೆಮಿಫೈನಲ್ ಮೊದಲ ಲೆಗ್‌ನಲ್ಲಿ ಪಾರಮ್ಯ ಮೆರೆದಿದ್ದ ಬಾರ್ಸಿಲೋನಾ 3-0 ಅಂತರದಲ್ಲಿ ಲಿವರ್ಪೂಲ್‌ ವಿರುದ್ಧ ಭರ್ಜರಿ ಜಯ ಸಾಧಿಸಿತ್ತು. ಆದರೆ, ಎರಡನೇ ಲೆಗ್‌ ಪಂದ್ಯದಲ್ಲಿ ಅದೇ ಲಯ ಮುಂದುವರಿಸುವಲ್ಲಿ ವಿಫಲವಾಯಿತು. ಲಿವರ್ಪೂಲ್‌ ತಂಡದ ಆಟಗಾರರ ಅದ್ಭುತ ಪ್ರದರ್ಶನ ಮುಂದೆ  ಮೆಸ್ಸಿ ಸೇರಿದಂತೆ ಬಾರ್ಸಿಲೋನಾ ಆಟಗಾರರು ಕಂಗಾಲಾದರು. ಲಿವರ್ಪೂಲ್‌ ತಂಡದ ಗೆಲುವಿನಲ್ಲಿ ಪ್ರಧಾನ ಪಾತ್ರವಹಿಸಿದ್ದು ಡಿವೊಕ್ ಒರಿಗಿ. ಇವರು ಪಂದ್ಯದ ಆರಂಭದ 7ನೇ ನಿಮಿಷದಲ್ಲೆ ತಂಡಕ್ಕೆ ಗೋಲಿನ ಖಾತೆ ತೆರೆದರು. ಮೊದಲಾರ್ಧದ ಮುಕ್ತಾಯಕ್ಕೆ ಲಿವರ್ಪೂಲ್‌ 1-0 ಮುನ್ನಡೆ ಪಡೆಯಿತು. ಎರಡನೇ ಅವಧಿಯಲ್ಲಿ ಹೆಚ್ಚುವರಿ ಆಟಗಾರನಾಗಿ ಆಡಿದ
ಗಿನಿ ವಿಜ್ನಾಲ್ಡಮ್ 54 ಮತ್ತು 56ನೇ ನಿಮಿಷಗಳಲ್ಲಿ ಎರಡು ಗೋಲು ಗಳಿಸಿ ತಂಡಕ್ಕೆ 3-0 ಮುನ್ನಡೆಗೆ ನೆರವಾದರು.
ಪಂದ್ಯದ 79ನೇ ನಿಮಿಷದಲ್ಲಿ ಡಿವೊಕ್ ಒರಿಗಿ ಮತ್ತೊಂದು ಗೋಲು ಗಳಿಸುವ ಮೂಲಕ ಲಿವರ್ಪೂಲ್‌ಗೆ 4-0 ಮುನ್ನಡೆಯಾಗುವಂತೆ ಸಹಕರಿಸಿದರು. ವಿಶ್ವ ಶ್ರೇಷ್ಠ ಆಟಗಾರ ಲಿಯೊನೆಲ್‌ ಮೆಸ್ಸಿ ಎಂದಿನಂತೆ ತಮ್ಮ ಪ್ರಾಬಲ್ಯ ಮೆರೆಯಲು ಕಳೆದ ರಾತ್ರಿಯ ಪಂದ್ಯದಲ್ಲಿ ಸಾಧ್ಯವಾಗಲಿಲ್ಲ. ಮೊದಲ ಲೆಗ್‌ನಲ್ಲಿ ಹೀನಾಯ ಸೋಲು ಹಾಗೂ ಸಲ್ಹಾ ಹಾಗೂ ಪರ್ಮಿನೊ ಅವರ ಗಾಯದ ಆಘಾತದಿಂದ ಹೊರಬಂದು ಬಾರ್ಸಿಲೋನಾ ಕಟ್ಟಿಹಾಕಲು ಚಕ್ರವ್ಯೂಹ ನಿರ್ಮಿಸಿದ ಲಿವರ್ಪೂಲ್‌ಗೆ ಅಂದುಕೊಂಡಂತೆ ಯಶಸ್ವಿ ಲಭಿಸಿತು.
ಫುಟ್ಬಾಲ್‌ ಇತಿಹಾಸದಲ್ಲೇ ಮೊದಲ ಬಾರಿ ಹೀನಾಯ ಸೋಲು ಅನುಭವಿಸಿದ ಕಳಂಕಕ್ಕೆ ಬಾರ್ಸಿಲೋನಾ ತಂಡ ಕಳೆದ ರಾತ್ರಿ ಭಾಜನವಾಯಿತು. ಅಜಾಕ್ಸ್‌ ಹಾಗೂ ಟೊಟ್ಟೆನ್ಯಾಮ್‌ ತಂಡಗಳು ಮತ್ತೊಂದು ಸೆಮಿಫೈನಲ್‌ನಲ್ಲಿ ಸೆಣಸಲಿದ್ದು, ಇದರಲ್ಲಿ ಗೆದ್ದ ತಂಡದ ವಿರುದ್ಧ ಲಿವರ್ಪೂಲ್‌ ಫೈನಲ್‌ನಲ್ಲಿ ಎದುರಿಸಲಿದೆ.