ಸ್ಪೋರ್ಟ್ಸ್ ಮೇಲ್ ವರದಿ
ಭಾರತದ ಪ್ರತಿಯೊಂದು ಕ್ರೀಡೆಯಲ್ಲೂ ತಮ್ಮನ್ನು ತೊಡಗಿಸಿಕೊಂಡಿರುವ ಬಂಟರ ಸಮುದಾಯ ಟೆನಿಸ್ ಬಾಲ್ ಕ್ರಿಕೆಟ್‌ಗೂ ಅಪಾರ ಕೊಡುಗೆ ನೀಡಿದೆ. ಆ ಮೂಲಕ ಅನೇಕ ಕ್ರೀಡಾ ಪ್ರತಿಭೆಗಳು ರಾಷ್ಟ್ರ ಮತ್ತು ಅಂತಾರಾಷ್ಟೀಯ ಮಟ್ಟದಲ್ಲಿ ಮಿಂಚಲು ಕಾರಣವಾಯಿತು. ಬೆಂಗಳೂರಿನಲ್ಲಿ ನೆಲೆಸಿರುವ ಯುವ ಸಹೋದರರಾದ ಕೋಟದ ನಿತೇಶ್ ಹಾಗೂ ನಿಕೇಶ್ ಶೆಟ್ಟಿ ಈ ಬಾರಿ ಬಂಟ್ಸ್ ಚಾಂಪಿಯನ್ಸ್ ಲೀಗ್ ಕ್ರಿಕೆಟ್ ಟೂರ್ನಿಯನ್ನು ಆಯೋಜಿಸಿದ್ದಾರೆ.
ಪಾಂಚಜನ್ಯ ಈವೆಂಟ್ಸ್ ಆಯೋಜಿಸಿರುವ ಈ ಲೀಗ್ ಗೆ ಶಂಕರನಾರಾಯಣ ಕನ್ಸ್ಟ್ರಕ್ಷನ್ ಪ್ರೈ. ಲಿ. ಕಂಪನಿ ಪ್ರಾಯೋಜಕತ್ವ ನೀಡಿದೆ.
ಫೆಬ್ರವರಿ 16 ಮತ್ತು 17ರ ಶನಿವಾರ ಮತ್ತು ಭಾನುವಾರದಂದು ಬೆಂಗಳೂರಿನ ಜೆಪಿ ಪಾರ್ಕ್ ಗ್ರೌಂಡ್‌ನಲ್ಲಿ ನಡೆಯಲಿರುವ ಈ ಚಾಂಪಿಯನ್ಸ್ ಲೀಗ್‌ನಲ್ಲಿ ಬಂಟ್ಸ್ ಸಮುದಾಯದ 8 ತಂಡಗಳು ಪ್ರತಿಷ್ಠಿತ ಪ್ರಶಸ್ತಿ ಹಾಗೂ 2,00,002 ರೂ. ನಗದು ಬಹುಮಾನಕ್ಕಾಗಿ ಹಣಾಹಣಿ ನಡೆಸಲಿವೆ. ರನ್ನರ್ ಅಪ್ ತಂಡವು 1,00,001 ರೂ. ನಗದು ಬಹುಮಾನ ಹಾಗೂ ಟ್ರೋಫಿಯನ್ನು ಗಳಿಸಲಿದೆ.
ಹೊನಲು ಬೆಳಕಿನಲ್ಲಿ ನಡೆಯಲಿರುವ ಈ ಚಾಂಪಿಯನ್ಸ್ ಲೀಗ್‌ನಲ್ಲಿ ದೇಶಾದ್ಯಂತ ಇರುವ ಬಂಟರ ಸಮುದಾಯದ ಎಂಟು ತಂಡಗಳು ಆಡಲಿವೆ. ಉಡುಪಿ, ಕುಂದಾಪುರ, ಮಂಗಳೂರು, ಮಡಿಕೇರಿ, ಗೋವಾ, ಮುಂಬೈ ಸೇರಿದಂತೆ ಪ್ರಮುಖ ನಗರಗಳಿಂದ ಆಟಗಾರರು ವಿವಿಧ ತಂಡಗಳಲ್ಲಿ ಆಡಲಿದ್ದಾರೆ. ಮೊದಲ ಬಾರಿಗೆ ಬೆಂಗಳೂರಿನಲ್ಲಿ ಪ್ರತಿಷ್ಠಿತ ಲೀಗ್ ನಡೆಯುತ್ತಿದೆ. ಎಂ-ಸ್ಪೋರ್ಟ್ಸ್‌ನಲ್ಲಿ ಪಂದ್ಯಗಳ ನೇರ ಪ್ರಸಾರವಿರುತ್ತದೆ.
ಎಂಟು ತಂಡಗಳು
1.ಎಸ್‌ಆರ್‌ಡಿ ಫ್ರಾಂಕ್
2.ಅಭಯ್ ಕ್ರಿಕೆಟ್ ಕ್ಲಬ್
3.ಉಡುಪಿ ಹಾಸ್ಪಿಟಾಲಿಟಿ ಸರ್ವಿಸಸ್
4.ಪ್ರದ್ಯುಮ್ ಕ್ರಿಕೆಟರ್ಸ್
5.ಎಸ್‌ಡಿಎಂ ಟ್ರೇಡರ್ಸ್ ಯಲಹಂಕ
6. ಗೂಗ್ಲಿ ಕ್ರಿಕೆಟರ್ಸ್
7.ಶೆಟ್ಟಿ ಎಂಪೈರ್
8. ಹೋಯ್ ಕೆನರಾ ಕ್ರಿಕೆಟರ್ಸ್
ನಾಲ್ಕು ತಂಡಗಳ ಎರಡು ಗುಂಪುಗಳನ್ನಾಗಿ ಮಾಡಲಾಗಿದ್ದು, ಗುಂಪನಲ್ಲಿ ಅಗ್ರ ಸ್ಥಾನ ಪಡೆದ ಎರಡು ತಂಡಗಳು ಕ್ವಿಕ್‌ಲೀಗ್‌ಗೆ ಅರ್ಹತೆ ಪಡೆಯುತ್ತವೆ. ಪ್ಲೇ ಆ್ ಹಂತ ತಲಪುವ ತಂಡಗಳನ್ನು ಕ್ವಿಕ್ ಲೀಗ್‌ನಲ್ಲಿ ನಿರ್ಧರಿಸಲಾಗುತ್ತದೆ. ಲೀಗ್‌ನಲ್ಲಿ ಅಗ್ರ ಸ್ಥಾನ ಪಡೆದ ತಂಡಗಳಿಗೆ ಕ್ವಿಕ್ ಲೀಗ್ ಅನ್ವಯವಾಗುವುದಿಲ್ಲ. ಆ ತಂಡಗಳು ನೇರವಾಗಿ ಪ್ಲೇ ಆಫ್ಗೆ ಅರ್ಹತೆ ಪಡೆದಿರುತ್ತವೆ.
1 ಓವರ್, 2 ಬೌಲರ್ಸ್!
ಕ್ವಿಕ್ ಲೀಗ್ ಹೆಸರಿಗೆ ತಕ್ಕಂತೆ ಕ್ವಿಕ್ ಆಗಿರುತ್ತದೆ. ಏಕೆಂದರೆ ಇಲ್ಲಿ ಓವರ್ ಕೇವಲ 1, ಇಬ್ಬರು ಬೌಲರ್‌ಗಳಿರುತ್ತಾರೆ. ಮೂವರು ಬ್ಯಾಟ್ಸ್‌ಮನ್‌ಗಳಿರುತ್ತಾರೆ.