Thursday, March 28, 2024

ಟಿ20 ಕ್ರಿಕೆಟ್‌ನಲ್ಲಿ ವಿಶ್ವ ದಾಖಲೆ ಬರೆದ ಅಘಾನಿಸ್ತಾನ

ಏಜೆನ್ಸೀಸ್ ಡೆಹ್ರಾಡೂನ್

ಅತಿ ಹೆಚ್ಚು ರನ್, ಅತಿ ಹೆಚ್ಚು ಸಿಕ್ಸರ್‌ಗಳು, ಜತೆಯಾಟದಲ್ಲಿ ಅತಿ ಹೆಚ್ಚು ರನ್, ವೈಯಕ್ತಿಕ ಮೊತ್ತದಲ್ಲಿ ಎರಡನೇ ಗರಿಷ್ಠ ಹೀಗೆ ಅಘಾನಿಸ್ತಾನ ತಂಡ ಒಂದೇ ಟಿ20 ಪಂದ್ಯದಲ್ಲಿ ಹಲವಾರು ದಾಖಲೆ ಬರೆದು ಇತಿಹಾಸ ನಿರ್ಮಿಸಿದೆ.

ಐರ್ಲೆಂಡ್ ವಿರುದ್ಧ ನಡೆದ  ಅಂತಾರಾಷ್ಟ್ರೀಯ ಟಿ20 ಸರಣಿಯ ಎರಡನೇ ಪಂದ್ಯದಲ್ಲಿ  ಅಘಾನಿಸ್ತಾನ ತಂಡ  278 ರನ್ ಗಳಿಸಿ ಪಂದ್ಯವೊಂದರಲ್ಲಿ ಅತಿ ಹೆಚ್ಚು ರನ್ ಗಳಿಸಿ ವಿಶ್ವದಾಖಲೆ ಬರೆಯಿತು. ಇದುವರೆಗೂ ಆಸ್ಟ್ರೇಲಿಯಾ ತಂಡದ ಹೆಸರಿನಲ್ಲಿ ಈ ದಾಖಲೆ ಇದ್ದಿತ್ತು. ಆಸ್ಟ್ರೇಲಿಯಾ ತಂಡ ಶ್ರೀಲಂಕಾ ವಿರುದ್ಧ 260 ರನ್ ಗಳಿಸಿದ್ದು ಈ ಹಿಂದಿನ ಗರಿಷ್ಠ ಮೊತ್ತವಾಗಿತ್ತು.
ಹಜ್ರತ್‌ಉಲ್ಲಾ ಜಜಾಯ್ 62 ಎಸೆತಗಳಲ್ಲಿ  11 ಬೌಂಡರಿ ಹಾಗೂ 16 ಸಿಕ್ಸರ್ ನೆರವಿನಿಂದ ಅಜೇಯ 162 ರನ್ ಸಿಡಿಸಿ, ಈ ದಾಖಲೆಯಲ್ಲಿ ಪ್ರಮುಖ ಪಾತ್ರವಹಿಸಿದರು. 16 ಸಿಕ್ಸರ್ ಸಿಡಿಸುವ ಮೂಲಕ ಜಜಾಯ್ ಅಂತಾರಾಷ್ಟ್ರೀಯ ಟಿ20 ಪಂದ್ಯವೊಂದರಲ್ಲಿ ಅತಿ ಹೆಚ್ಚು ಸಿಕ್ಸರ್ ಸಿಡಿಸಿದ ದಾಖಲೆ ಬರೆದರು. ಇದುವರೆಗೂ ಈ ದಾಖಲೆ ಆಸ್ಟ್ರೇಲಿಯಾದ ಆರೋನ್ ಫಿಂಚ್ (14 ಸಿಕ್ಸರ್) ಅವರ ಹೆಸರಿನಲ್ಲಿ ಇದ್ದಿತ್ತು. ಬೃಹತ್ ಮೊತ್ತವನ್ನು ಬೆಂಬತ್ತಿದ ಐರ್ಲೆಂಡ್ 20 ಓವರ್‌ಗಳಲ್ಲಿ 6 ವಿಕೆಟ್ ನಷ್ಟಕ್ಕೆ 194 ರನ್ ಗಳಿಸಿ ಸೋಲೊಪ್ಪಿಕೊಂಡಿತು.
ಟಾಸ್ ಗೆದ್ದು ಬ್ಯಾಟಿಂಗ್ ಆಯ್ದುಕೊಂಡ ಅಘಾನಿಸ್ತಾನದ ಪರ ಹಜ್ರತ್‌ಉಲ್ಲಾ ಜಜಾಯ್ ಸಿಡಿಸಿದ ಅಜೇಯ 162 ರನ್ ಟಿ20 ಕ್ರಿಕೆಟ್‌ನಲ್ಲಿ ಇನಿಂಗ್ಸ್‌ವೊಂದರಲ್ಲಿ ಅತಿ ಹೆಚ್ಚು ರನ್ ಗಳಿಸಿದ ಎರಡನೇ ಆಟಗಾರರೆನಿಸಿದರು. ಅಂತಾರಾಷ್ಟ್ರೀಯ ಪಂದ್ಯದಲ್ಲಿ ಮಿಂಚುವುದಕ್ಕೆ ಮುನ್ನ ಜಜಾಯ್ 44 ಎಸೆತಗಳಲ್ಲಿ ಶತಕ, ಆರು ಎಸೆತಗಳಲ್ಲಿ ಆರು ಸಿಕ್ಸರ್ ಸಿಡಿಸಿ ಟಿ20 ಕ್ರಿಕೆಟ್‌ನ ಹೊಸ ತಾರೆ ಎನಿಸಿದ್ದರು. ಮೊದಲ ವಿಕೆಟ್ ಜತೆಯಾಟದಲ್ಲಿ ದಾಖಲಾದ 236 ರನ್ ಕೂಡ ವಿಶ್ವದಾಖಲೆಯ ಮೊತ್ತವಾಗಿದೆ. ಉಸ್ಮಾನ್ ಘನಿ 73 ರನ್ ಸಿಡಿಸಿ  ಈ ಐತಿಹಾಸಿಕ ಜತೆಯಾಟದಲ್ಲಿ ಭಾಗಿಯಾದರು.

Related Articles