Contact Information

1st floor, Murali Krishna Mansion, Near Krashi Kendra , Brahmavara - 576213 ,Udupi,Karnataka,India

We Are Available 24/ 7. Call Now.

ಆಧುನಿಕತೆಯಲ್ಲಿ ಗತಕಾಲದ ವೈಭವ ನೆನಪಿಸಿದ ಕಾಮನ್‌ವೆಲ್ತ್‌ ಕ್ರೀಡಾಕೂಟ ಉದ್ಘಾಟನಾ ಸಮಾರಂಭ

ಬರ್ಮಿಂಗ್‌ಹ್ಯಾಮ್‌: ಆಧನಿಕ ತಂತ್ರಜ್ಞಾನದೊಂದಿಗೆ ಮೈದಳೆದು ನಿಂತಿರುವ ಇಂಗ್ಲೆಂಡ್‌ ತಾನು ಬೆಳೆದು ಬಂದ ಸಂಸ್ಕೃತಿಯನ್ನು ಮರೆಯದೆ ಬರ್ಮಿಂಗ್‌ಹ್ಯಾಮ್‌ನಲ್ಲಿ ಗುರುವಾರ ಆರಂಭಗೊಂಡ 22ನೇ ಕಾಮನ್‌ವೆಲ್ತ್‌ ಕ್ರೀಡಾಕೂಟದ ಉದ್ಘಾಟನಾ ಸಮಾರಂಭದಲ್ಲಿ ಗತಿಸಿದ ಸಾಂಸ್ಕೃತಿಕ ಜಗತ್ತನ್ನು ಕಾಮನ್‌ವೆಲ್ತ್‌ ರಾಷ್ಟ್ರಗಳಿಗೆ ಮತ್ತೊಮ್ಮೆ ಪರಿಚಯಿಸಿತು. 72 ರಾಷ್ಟ್ರಗಳಿಂದ ಆಗಮಿಸಿದ 6500ಕ್ಕೂ ಹೆಚ್ಚು ಕ್ರೀಡಾಪಟುಗಳು ಮಂತ್ರಮುಗ್ಧಗೊಂಡರು.

ಎಡರು ಗಂಟೆಗಳ ಕಾಲ ನಡೆದ ಉದ್ಘಾಟನಾ ಸಮಾರಂಭದಲ್ಲಿ ಬಿರ್ಮಿಂಗ್‌ಹ್ಯಾಮ್‌ನ ಆವಿಷ್ಕಾರಗಳು ಅನಾವರಣಗೊಂಡವು. ಬಟನ್‌, ಕಾರ್‌ ಹಾರ್ನ್‌, ಸೆಲ್ಯುಲೈಡ್‌ ಫಿಲ್ಮ್‌ ಮತ್ತು ಪ್ರಿಂಟಿಂಗ್‌ ಪ್ರೆಸ್‌ ಆವಿಷ್ಕಾರಗಳನ್ನು ನೆನಪಿಸುವುದರ ಜೊತೆಗೆ ದುಡಿವ ವರ್ಗದ ಜನರಿಗೆ ಗೌರವ ಸಲ್ಲಿಸಲಾಯಿತು. ಅಲೆಕ್ಸಾಂಡರ್‌ ಕ್ರೀಡಾಂಗಣದಲ್ಲಿ ಕಳೆದ ಐದು ತಿಂಗಳಿಂದ ನಿರ್ಮಾಣಗೊಳ್ಳುತ್ತಿದ್ದ 10ಮೀ. ಎತ್ತರದ ಗೂಳಿಯ ನಿರ್ಮಿತಿಯನ್ನು ಸಾಮಾನ್ಯ ಮಹಿಳೆಯೊಬ್ಬರು ಚಾಲನೆ ನೀಡುವ ಮೂಲಕ 19ನೇ ಶತಮಾನದಲ್ಲಿ ಚಿಕ್ಕ ಚೈನ್‌ಗಳನ್ನು ನಿರ್ಮಿಸುತ್ತಿದ್ದ ಕಾರ್ಮಿಕರ ಬದುಕುನ್ನು ನೆನಪಿಸಿಕೊಳ್ಳುವಂತಿತ್ತು.

1910 ರಲ್ಲಿ ಮಹಿಳಾ ಚೈನ್‌ ತಯಾರಕರು ಕೆಲಸ ಮಾಡಲು ಉತ್ತಮ ವಾತಾವರಣವನ್ನು ಕಲ್ಪಿಸುವಂತೆ, ಕನಿಷ್ಠ ವೇತನವನ್ನು ನೀಡುವಂತೆ ನಡೆಸಿದ 10 ವಾರಗಳ ಕಾಲ ನಡೆದ ಮುಷ್ಕರ ಮತ್ತು ಅದರಲ್ಲಿ ಯಶಸ್ಸು ಕಂಡಿರುವುದನ್ನು ನೆನಪಿಸುವಂತೆ ಗೂಳಿ ತನ್ನ ರಕ್ಷಾ ಕವಚವನ್ನು ಚೆಲ್ಲಿತು. ಗೂಳಿ ಕುಸಿದು ಬೀಳುವ ಮೂಲಕ ಕಾರ್ಮಿಕರಿಗೆ ಸಿಕ್ಕ ಯಶಸ್ಸನ್ನು ಸಾಂಕೇತಿಕವಾಗಿ ಬಿಂಬಿಸುವಂತಿತ್ತು.

ಸಿಂಧೂ, ಮನ್‌ಪ್ರೀತ್‌ ಪಂಥ ಸಂಚಲನ: ಒಲಂಪಿಯನ್‌ ಬ್ಯಾಂಡ್ಮಿಂಟನ್‌ ತಾರೆ ಪಿ.ವಿ, ಸಿಂಧೂ ಹಾಗೂ ಹಾಕಿ ತಂಡದ ನಾಯಕ ಮನ್‌ಪ್ರೀತ್‌ ಸಿಂಗ್‌ ಭಾರತದ ಪಥ ಸಂಚಲನವನ್ನು ಮುನ್ನಡೆಸಿದರು. ಪ್ರಿನ್ಸ್‌ ಆಫ್‌ ವೇಲ್ಸ್‌ ಮತ್ತು ಕಾರ್ನವಾಲ್‌ ಡಚಸ್‌ ಅವರು 1970ರಲ್ಲಿ ರಾಣಿ ಹೊಂದಿದ್ದ ಆಸ್ಟನ್‌ ಮಾರ್ಟಿನ್‌ನಲ್ಲಿ ಅಗಮಿಸಿದರು. ಮಕ್ಕಳ ಹಕ್ಕುಗಳಿಗಾಗಿ 2014ರಲ್ಲಿ ನೋಬೆಲ್‌ ಶಾಂತಿ ಪ್ರಶಸ್ತಿ ವಿಜೇತರಾದ ಮಲಲಾ ಯುಸಾಫ್ಜಾಯ್‌ ಸ್ಪೂರ್ತಿದಾಯಕ ಭಾಷಣ ನೆರೆದ ಪ್ರೇಕ್ಷಕರನ್ನು ಮಂತ್ರಮುಗ್ಧಗೊಳಿಸಿತು. ವಿಲಿಯಂ ಶೆಕ್ಸ್‌ಪಿಯರ್‌, ಎಡ್ವರ್ಡ್‌ ಎಲ್ಗರ್‌, ಸಾಮ್ಯುವೆಲ್‌ ಜಾನ್ಸನ್‌, ಆಧುನಿಕ ಬಿರ್ಮಿಂಗ್‌ಹ್ಯಾಮ್‌ನ ಪೂರ್ವಜರು 18ನೇ ಶತಮಾನದ ಲುನಾರ್‌ ಸೊಸೈಟಿಯ ಸಂದೇಶವನ್ನು ಸಾರುವ ಕಾರ್ಯಕ್ರಮಗಳು ಪ್ರದರ್ಶನಗೊಂಡಿತು. ನಂತರ ಪ್ರಾಚೀನ ಹಾಗೂ ಆಧುನಿಕ ಕಲಾ ಸಂಸ್ಕೃತಿಯನ್ನು ಮೇಳೈಸುವ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆದವು.


ಸೋಮಶೇಖರ್‌ ಪಡುಕರೆ, ಕರ್ನಾಟಕದ ಹಿರಿಯ ಕ್ರೀಡಾ ಪತ್ರಕರ್ತರು, ಕಳೆದ 32 ವರ್ಷಗಳಿಂದ ಕ್ರೀಡಾಪತ್ರಿಕೋದ್ಯಮದಲ್ಲಿ ಕಾರ್ಯನಿರ್ವಹಿಸುತಿದ್ದಾರೆ. ಕರ್ನಾಟಕದಲ್ಲಿರುವ ಕ್ರೀಡಾಪ್ರತಿಭೆಗಳನ್ನು ಪ್ರೋತ್ಸಾಹಿಸುವುದು ಮಾತ್ರವಲ್ಲದೆ ರಾಷ್ಟ್ರೀಯ ಹಾಗೂ ಅಂತಾರಾಷ್ಟ್ರೀಯ ಮಟ್ಟದ ಕ್ರೀಡಾಪಟುಗಳ ಸಾಧನೆಯನ್ನು ಕರ್ನಾಟಕದ ಓದುಗರಿಗೆ ಪರಿಚಯಿಸಿದ್ದಾರೆ. ಹಲವಾರು ದಿವ್ಯಾಂಗ ಕ್ರೀಡಾಪಟುಗಳನ್ನು ಗುರುತಿಸಿ ಅವರಿಗೆ ಸರಕಾರದ ನೆರವು ಸಿಗುವಂತೆ ಮಾಡಿದ್ದಾರೆ. ಕರ್ನಾಟಕದಲ್ಲಿರುವ ಕ್ರೀಡಾ ಸಾಧಕರಿಗೆ ನಗದು ಬಹುಮಾನ ಸಿಗುವಲ್ಲಿ ಇವರು ಬರೆದ ಲೇಖನಗಳು ಪ್ರಮುಖ ಪಾತ್ರವಹಿಸಿವೆ.