Thursday, October 10, 2024

ಐದು ಬಾರಿ ಅಪಘಾತ, ಎರಡು ಶಸ್ತ್ರಚಿಕಿತ್ಸೆ, ಕಾಲು ಮತ್ತು ಕೈಯಲ್ಲಿ ರಾಡ್‌: ಇದು ಪ್ರಗ್ನ್ಯಾ ಮೋಹನ್‌ ಎಂಬ ಅಚ್ಚರಿ!

ಬರ್ಮಿಂಗ್‌ಹ್ಯಾಮ್‌: ಭಾರತ ಮೊದಲ ಬಾರಿಗೆ ಕಾಮನ್‌ವೆಲ್ತ್‌ ಕ್ರೀಡಾಕೂಟದಲ್ಲಿ ಟ್ರಯಥ್ಲಾನ್‌ನಲ್ಲಿ ಸ್ಪರ್ಧಿಸುತ್ತಿದೆ. ಭಾರತ ತಂಡದಲ್ಲಿ ಗುಜರಾತ್‌ನ ಪ್ರಗ್ನ್ಯಾ ಮೋಹನ್‌ ಇದ್ದಾರೆ. ಭಾರತ ತಂಡಲ್ಲಿರುವ ಈ ಚಾರ್ಟರ್ಡ್‌ ಅಕೌಂಟೆಂಟ್‌ ಸೈಕ್ಲಿಂಗ್‌ ವೇಳೆ ಐದು ಬಾರಿ ಅಪಘಾತಕ್ಕೊಳಗಾಗಿದ್ದು, ಎರಡು ಬಾರಿ ಶಸ್ತ್ರ ಚಿಕಿತ್ಸೆಗೊಳಗಾಗಿದ್ದು, ಕೈ ಮತ್ತು ಕಾಲಿಗೆ ಲೋಹದ ಸರಳನ್ನು ಅಳವಡಿಸಲಾಗಿದ್ದು, ಹಲವಾರು ಕಷ್ಟ ಕಾರ್ಪಣ್ಯಗಳ ನಡುವೆ ಈ ಸಾಧಕಿ ಈಗ ಬರ್ಮಿಂಗ್‌ಹ್ಯಾಮ್‌ನಲ್ಲಿ ನಡೆಯುತ್ತಿರುವ ಕಾಮನ್‌ವೆಲ್ತ್‌ ಕ್ರೀಡಾಕೂಟದಲ್ಲಿ ಟ್ರಯಥ್ಲಾನ್‌ನಲ್ಲಿ ಭಾರತವನ್ನು ಪ್ರತಿನಿಧಿಸುತ್ತಿದ್ದಾರೆ.

ಅಹಮದಾಬಾದ್‌ನ ರಿಂಗ್‌ ರೋಡ್‌ನ ನಿಬಿಡ ಟ್ರಾಫಿಕ್‌ನಲ್ಲಿ ತಾಲೀಮು ನಡೆಸುತ್ತಿರುವ ಪ್ರಗ್ನ್ಯಾ ಆಸ್ಟ್ರೇಲಿಯಾ ಮತ್ತು ಸ್ಪೇನ್‌ನಲ್ಲಿ ತರಬೇತಿ ಪಡೆದು, ಮಲೀನಗೊಂಡು, ಮೊಸಳೆಗಳಿಂದ ತುಂಬಿರುವ ಗುಜರಾತಿನ ನದಿಗಳಲ್ಲಿ ಈಜಿ ಆತ್ಮವಿಶ್ವಾಸದೊಂದಿಗೆ ಸ್ಪರ್ಧಿಸಿದ್ದಾರೆ. ಕಾಮನ್‌ವೆಲ್ತ್‌ ಕ್ರೀಡಾಕೂಟದಲ್ಲಿ ಭಾರತ ಮೊದಲ ಬಾರಿಗೆ ಟ್ರಯಥ್ಲಾನ್‌ನಲ್ಲಿ ಸ್ಪರ್ಧಿಸುತ್ತಿದೆ. ಆದರ್ಶ ಎಂ.ಎಸ್‌, ಸಂಜನಾ ಜೋಶಿ ಮತ್ತು ವಿಶ್ವನಾಥ್‌ ಯಾದವ್‌ ಭಾರತ ತಂಡದ ಇತರ ಸದಸ್ಯರು. ಈಜು, ಸೈಕ್ಲಿಂಗ್‌ ಹಾಗೂ ಓಟವನ್ನು ಒಳಗೊಂಡಿರುವ ಕ್ರೀಡೆಯೇ ಟ್ರಯಥ್ಲಾನ್‌. ಟ್ರಯಥ್ಲಾನ್‌ನಲ್ಲಿ ಪ್ರಗ್ನ್ಯಾ ಪದಕ ಗೆಲ್ಲುವಲ್ಲಿ ವಿಫಲರಾದರೂ ಬರ್ಮಿಂಗ್‌ಹ್ಯಾಮ್‌ನಲ್ಲಿ ಕ್ರೀಡಾಭಿಮಾನಿಗಳ ಹೃದಯ ಗೆಲ್ಲುವಲ್ಲಿ ಸಫಲರಾಗಿದ್ದಾರೆ.

ರಾಷ್ಟ್ರೀಯ ಮತ್ತು ದಕ್ಷಿಣ ಏಷ್ಯಾ ಚಾಂಪಿಯನ್‌ಷಿಪ್‌ನಲ್ಲಿ ಪದಕ ಗೆದ್ದಿರುವ ಪ್ರಗ್ನ್ಯಾ ವಿಶ್ವಕಪ್‌ನಲ್ಲಿ ಭಾರತವನ್ನು ಪ್ರತಿನಿಧಿಸಿದ ಏಕೈಕ ಸ್ಪರ್ಧಿ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ. ಪ್ರಗ್ನ್ಯಾ ಅವರ ತಂದೆಗೆ ಆಕೆ ಟ್ರಯಥ್ಲಾನ್‌ನಲ್ಲಿ ಸ್ಪರ್ಧಿಸುತ್ತಿದ್ದಾಳೆ ಎಂಬುದರ ಅರಿವೇ ಇರಲಿಲ್ಲ. ಎಂಟನೇ ವಯಸ್ಸಿನಲ್ಲಿ ಪ್ರಗ್ನ್ಯಾ ಈಜಿನಲ್ಲಿ ಪಾಲ್ಗೊಂಡಾಗ ಈಜು ಸ್ಪರ್ಧೆಯಲ್ಲಿ ಭಾಗಹಿಸುತ್ತಿರಬಹುದು ಎಂದು ತಿಳಿದರು. ರಾಷ್ಟ್ರೀಯ ಮಟ್ಟದ ಈಜಿನಲ್ಲಿ ಪ್ರಗ್ನ್ಯಾ ನಾಲ್ಕನೇ ಸ್ಥಾನ ಗಳಿಸಿದರು. ನಂತರ ಮ್ಯಾರಥಾನ್‌ಲ್ಲಿ ಪಾಲ್ಗೊಂಡು ಹಲವಾರು ಪದಕಗಳನ್ನು ಗೆದ್ದಳು. ನಂತರ 10ಕಿಮೀ ದೂರದ ಸೈಕ್ಲಿಂಗ್‌ನಲ್ಲಿ ಪಾಲ್ಗೊಂಡಳು. ಪ್ರತಿ ದಿನವೂ 20 ಕಿಮೀ ಸೈಕ್ಲಿಂಗ್‌ನಲ್ಲಿ ಪಾಲ್ಗೊಂಡು ಅಂತಿಮವಾಗಿ ಟ್ರಯಥ್ಲಾನ್‌ನಲ್ಲಿ ತಮ್ಮನ್ನು ತೊಡಗಿಸಿಕೊಂಡು ರಾಷ್ಟ್ರೀಯ ಹಾಗೂ ಅಂತಾರಾಷ್ಟ್ರೀಯ ಮಟ್ಟದಲ್ಲಿ ಮಿಂಚಿದರು.

Related Articles